ಹೋಳಿ ಹಬ್ಬವೋ ಕರಡಿ ಹಬ್ಬವೋ

ಮಂಗಳವಾರ, ಏಪ್ರಿಲ್ 23, 2019
31 °C

ಹೋಳಿ ಹಬ್ಬವೋ ಕರಡಿ ಹಬ್ಬವೋ

Published:
Updated:
Prajavani

ಹೋಳಿ ಹುಣ್ಣಿಮೆ ಎಂದರೆ, ಬಣ್ಣ ಎರಚಾಡುವುದು. ಕುಣಿದು ಕುಪ್ಪಳಿಸುವುದು. ಸೌದೆ ಕದ್ದು ತಂದು, ಸಂಜೆ ಹೊತ್ತಿಗೆ ಕಾಮದಹನ ಮಾಡುವುದು. ಇದು ಸಾಮಾನ್ಯ ಚಟುವಟಿಕೆ.

ಆದರೆ, ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಹೋಳಿ ಹಬ್ಬದಂದು ದೊಡ್ಡ ದೊಡ್ಡ ಕರಡಿವೇಷ ತೊಟ್ಟವರು ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದಕ್ಕೆ ಅಂಕೋಲದಲ್ಲಿ ಹೋಳಿ ಹಬ್ಬ ಎನ್ನುವುದಕ್ಕಿಂತ ಇದನ್ನು ಕರಡಿ ಹಬ್ಬ ಎನ್ನುವುದು ವಾಡಿಕೆ. ಇದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ.

ಹೋಳಿ ಹುಣ್ಣಿಮೆಯಂದು ಅಂಕೋಲಾದ ಸಣ್ಣ ಸಣ್ಣ ಅಂಗಡಿಗಳ ಎದುರಲ್ಲಿ ಕರಡಿ ವೇಷ ಧರಿಸುವವರಿಗಾಗಿಯೇ ರಟ್ಟು, ಕಟ್ಟಿಗೆಯಿಂದ ಕರಡಿಯ ಮುಖವಾಡಗಳನ್ನು ತಯಾರಿಸಿ, ಮಾರಾಟಕ್ಕಿಟ್ಟಿರುತ್ತಾರೆ. ಕರಡಿ ಮುಖವಾಡಗಳು ಅಂಗಡಿ ಮಳಿಗೆಗಳ ಮುಂಭಾಗದಲ್ಲಿ ತೂಗು ಹಾಕಿದ್ದಾರೆ ಎಂದರೆ, ಹೋಳಿ ಹಬ್ಬ ಸಮೀಪಿಸುತ್ತಿದೆ ಎಂದು ಜನರ ಅರಿವಿಗೆ ಬರುತ್ತದೆ.

ಪ್ರತಿ ವರುಷ ಈ ಹೋಳಿ ಹಬ್ಬ ಮತ್ತು ಶಾಲಾ ಪರೀಕ್ಷೆ ಎರಡೂ ಜತೆ ಜತೆಯಲ್ಲೇ ಬರುವುದರಿಂದ ಕರಡಿ ವೇಷ ಧರಿಸಲು ಆಸಕ್ತಿ ಇರುವ ಮಕ್ಕಳು ಇತ್ತ ಪರೀಕ್ಷೆಯ ತಯಾರಿ ನಡೆಸುತ್ತ ಅತ್ತ ಹಳೆಯ ನೋಟ್ ಬುಕ್, ರದ್ದಿ ಪೇಪರ್ ಕತ್ತರಿಸಿ ಹಳೆಯ ಅಂಗಿ, ಪ್ಯಾಂಟುಗಳಿಗೆ ಗೋಂದಿನಿಂದ ಅಂಟಿಸುತ್ತ ಕರಡಿ ವೇಷ ತಯಾರಿಸುವಲ್ಲಿ ನಿರತರಾಗುತ್ತಾರೆ.

ಸೆಣಬು, ತೆಂಗಿನ ನಾರು, ಪ್ಲಾಸ್ಟಿಕ್‍, ನೈಲಾನ್‍ ಹೀಗೆ ತರಹೇವಾರಿ ವಸ್ತು ಬಳಸಿ, ಅವುಗಳಿಗೆ ಬೇರೆ ಬೇರೆ ಬಣ್ಣ ಹಾಕಿ ಕರಡಿಯ ವೇಷ ಸಿದ್ಧಪಡಿಸಿಕೊಳ್ಳುತ್ತಾರೆ. ಕರಡಿ ವೇಷಕ್ಕೆ ಬೇಕಾದ ಮುಖವಾಡವನ್ನು ಅಂಗಡಿಯಿಂದಲೂ ಖರೀದಿಸುತ್ತಾರೆ.

ಕರಡಿ ವೇಷ ಧರಿಸಿದವ ಮನುಷ್ಯನೇ ಎಂದು ಗೊತ್ತಿದ್ದರೂ, ಆ ಆಕಾರ ನೋಡಿ ಎಂಥವರೂ ಭಯ ಬೀಳುತ್ತಾರೆ. ವೇಷ ತೊಟ್ಟ ಕೆಲವರು ಬೀದಿಯಲ್ಲಿ ನರ್ತಿಸುತ್ತ ಜನರನ್ನು ರಂಜಿಸುತ್ತ ಅಲೆಯುತ್ತಿರುತ್ತಾರೆ. ಒಂದೊಂದು ಕರಡಿಯ ಗಾತ್ರ ಎಷ್ಟಿರುತ್ತವೆಂದರೆ ಕರಡಿ ವೇಷಧಾರಿಯೊಬ್ಬ ರಸ್ತೆಯಲ್ಲಿ ಸಾಗುತ್ತಿದ್ದರೆ ರಸ್ತೆ ಭರ್ತಿಯಾಗಿರುತ್ತದೆ!

ಮನರಂಜನೆಗಾಗಿ ಕರಡಿಯ ವೇಷ ಧರಿಸುವ ಕಾಲವಿತ್ತು. ಆದರೆ, ಕೆಲವರು ಹಣ ಮಾಡಲೆಂದೇ ವೇಷ ಧರಿಸಿ ಮನೆ ಮನೆಗೂ ದಾಳಿ ಇಡುತ್ತ ದಾರಿಯಲ್ಲಿ ಸಿಕ್ಕವರಿಂದ ಹಣ ಗಳಿಸುವವರೂ ಇದ್ದಾರೆ. ಇಂಥ ಬೃಹತ್ ಕರಡಿ ವೇಷಧಾರಿಗಳನ್ನು ನೋಡಬೇಕೆಂದರೆ, ಈ ಬಾರಿ ನಡೆಯುವ ಹೋಳಿ ಹಬ್ಬಕ್ಕೆ ಅಂಕೋಲಕ್ಕೆ ಬನ್ನಿ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !