ಚಿಕ್ಕಮಂಗಳೂರು ಅಲ್ರೀ...

7

ಚಿಕ್ಕಮಂಗಳೂರು ಅಲ್ರೀ...

Published:
Updated:
Deccan Herald

ಬೆಂಗಳೂರಿನ ವೀಕೆಂಡ್ – ಶುಕ್ರವಾರದ ಟ್ರಾಫಿಕ್‌ನಲ್ಲಿ ಸಿಕ್ಕು ರಾತ್ರಿ 11:45 ಕ್ಕೆ ಅಂತೂ ಇಂತು ಊರಿನ ಬಸ್ ಹುಡುಕಿ ಒಂದು ಸೀಟು ಹಿಡಿದು ಕೂತು ಬಿಟ್ಟೆ.

ಬಸ್ ಇಂಜಿನ್ ಆನ್ ಆಯಿತು..... ಐದು ನಿಮಿಷವಾದರೂ ಒಂದಿಂಚೂ ಕದಲುವ ಸೂಚನೆಯೇ ಇಲ್ಲ...
ಪಕ್ಕದ ಬಸ್ ಡ್ರೈವರ್ ಗೂ ನಮ್ಮ ಬಸ್ ಕಂಡಕ್ಟರ್ ಗೂ ಜಗಳ.... ತುದಿ ಬುಡ ಅರಿಯದೆ ಜಗಳ ಬಿಡಿಸಲು ಬಂದ ಬಸ್ ನಿಲ್ದಾಣದ ಜನ ಜಂಗುಳಿಯಿಂದ ಮತ್ತಷ್ಟು ಗದ್ದಲ ಗಲಾಟೆ....ತೀರ್ಮಾನವಾಗದ ಜಗಳದಿಂದ ದೊಡ್ಡ ಮನಸು ಮಾಡಿ ಬಂದ ಬಸ್ ಕಂಡಕ್ಟರ್

... ಎಲ್ಲಿಗ್ರಿ ಟಿಕೇಟು?

ಚಿಕ್ಕಮಂಗಳೂರಿಗಾ?
 'ಬೇಗ ಚಿಲ್ಲರೆ ಕೊಡಿ ಸರ್... ಟಿಕೆಟ್ ಟಿಕೆಟ್.... ಸರಿಯಾಗಿ ಚಿಲ್ಲರೆ ರೆಡಿ ಇಟ್ಕೊಳ್ರಿ' ಅಂತ ಅವಸರ ಮಾಡಲು ಶುರುಮಾಡಿದ... 

ಇರುವೆ ನುಸುಳಲೂ ಸಾಧ್ಯವಾಗದ ಬಸ್ ಒಳಗೆ  ಸೊಳ್ಳೆ ಯಂತೆ ಕಿರಿ ಕಿರಿ ಕೀರಾಡುತ್ತಾ ಬಂದ ಕಂಡಕ್ಟರ್ ಮೇಲೆ ಕೋಪ ಕುದಿಯುತ್ತಿತ್ತು

ಕಂಡಕ್ಟರ್: ನಿಮಗೆಲ್ಲಿಗ್ರಿ ಟಿಕೆಟು ಚಿಕ್ಕಮಂಗಳೂರಿಗಾ?

ಅಲ್ಲ ಚಿಕ್ಕಮಗಳೂರಿಗೆ ..‌‌‌ ಎಂದೆ

ಗಾಯದ ಮೇಲೆ ಮೆಣಸಿ ಪುಡಿ ಎರಚಿದ ಹಾಗಾಯಿತು ಕಂಡಕ್ಟರ್‌ಗೆ..
ಅದೇ..... ಕಣಮ್ಮಾ ನಾ...ನು ಕೇಳ್ತಿರದು‌‌‌‌.....
ಚಿಕ್ಕಮಂಗಳೂರಿಗಾ?
ಅಲ್ಲಾ..... ಸರ್ ಚಿಕ್ಕಮಗಳೂರಿಗೆ.....

ಕತ್ತೆತ್ತಿ ದುರು ದುರು ನೋಡಿದ ಕಂಡಕ್ಟರ್ ಗೆ ನನ್ನ ಕೊಂಕು ಅರ್ಥವಾಯಿತು. ಆದರೆ ತಿದ್ದುಕೊಳ್ಳುವ ಮನಸ್ಥಿತಿಯಲ್ಲಿರಲಿಲ್ಲ

ಇದೇ ಸಿಟ್ಟಿಗೋ ಏನೋ ಕೈಗೆ ಚಿಲ್ಲರೆ ಕೊಡದೆ ಟಿಕೆಟಿನ ಹಿಂದೆ 237 ಎಂದು ಬರೆದು ಕೈಗಿಟ್ಟ.

ಊರಿನ ಹೆಸರನ್ನು ಹೇಗ್ಹೇಗೋ ಹೇಳಿದ ಅನ್ನೋ ಕೋಪಕ್ಕೆ‌ ಐನೂರು ನೋಟನ್ನು ಕಂಡಕ್ಟರ್ ಮುಂದೆ ಹಿಡಿದಿದ್ದೆ....

ಆಮೇಲೆ ಚಿಲ್ಲರೆ ಪರಿಸ್ಥಿತಿ ನೆನಸಿಕೊಂಡು....ಸರಿಯಾದ ಚಿಲ್ಲರೆ ಕೊಟ್ಟು ನನಗೆ ನಾನೆ ಸಹಕರಿಸಿಕೊಂಡೆ.

ಕಂಡಕ್ಟರ್ ವ್ಯಂಗವಾಗಿ ನಕ್ಕ. 

ಅವಮಾನ ಕೋಪ ಎರಡೂ ಒಟ್ಟಾಗಿ,

ಜೋರಾಗಿ " ಸರ್ ಅದು ಚಿಕ್ಕಮಂಗಳೂರು ಅಲ್ಲ ಚಿಕ್ಕಮಗಳೂರು, ಊರಿನ ಹೆಸರು ಸರಿಯಾಗಿ ಹೇಳಿ"
ಅಂತ ರೇಗಿದೆ. ಎಲ್ಲರೂ ತಿರುಗಿ ನೋಡಿದರು.

ಕಂಡಕ್ಟರ್ ಗೆ ತನ್ನ ತಪ್ಪಿನ ಅರಿವಾದರೂ ತೋರಿಸಿಕೊಳ್ಳದಂತೆ ಹಣೆಗೆ ಕೈ ಚಚ್ಚಿಕೊಂಡು ಮುಂದಿನ ಟಿಕೇಟು ಹರಿದ.....

‘ಯಾಕೇ ಬೇಕು ನಿಂಗೆ ಹಿದೆಲ್ಲಾ?’

ಮುಂದೆ ಕೂತಿದ್ದ ಶಿಲ್ಪಾ....ಮೆಸೇಜು...

‘ನನ್ನದು ಬಿಡು, ಅದು ‘ಹಿದೆಲ್ಲಾ ಅಲ್ಲ ತಾಯಿ ಇದೆಲ್ಲಾ’ ಅಂತ ಕಳಿಸಿದೆ.

ಆ.. ಆ ಹದೆ ಅಂತ ಪುನಃ ಮೆಸೇಜು ಮಾಡಿದ್ಲು.

ಬಸ್ ಹೊರಟಿತು. ನನ್ನ ಪಕ್ಕ ಕೂತಿದ್ದ ಒಬ್ಬ ಹುಡುಗಿ ಹುಬ್ಬಳ್ಳಿ ಕನ್ನಡದಲ್ಲಿ 

‘ಹಾಯ್ ಅಕ್ಕ ಚಿಕ್ಕಮಂಗ್ಳೂರು ಎಷ್ಟ ತಾಸ್ರೀ ಇಲ್ಲಿಂದ? ಎಷ್ಟು ಹೊತ್ತಗ ಮುಟ್ತೀವಿ? ನಾವೆಲ್ರೂ ಫ್ರೆಂಡ್ಸ್ ಕೂಡಿ ಮುಳ್ಳಯ್ಯನ ಗಿರಿಗೆ ಹೊಂಟೀವಿ ’ ಅಂತ ಶುರುಮಾಡಿದ್ಲು.

5 ಗಂಟೆ ಪ್ರಯಾಣ ಇಲ್ಲಿಂದ, ಬೆಳಿಗ್ಗೆ ಸುಮಾರು 5.30 ಕ್ಕೆ ಊರು ತಲುಪ್ತೀವೆ ಅಂದೆ. ಹಳ್ಳಿ ಆಗ್ಲಿ ಡೆಲ್ಲಿ ಆಗ್ಲಿ ಅವರವರ ಊರಿನ ಮೇಲೆ ಅವರವರಿಗೆ ಅಭಿಮಾನ ಸಹಜನೇ ಅಲ್ವಾ!!

ಹುಡುಗಿ: ‘ಮಂಗಳೂರು , ಚಿಕ್ಕಮಂಗಳೂರು ಬಹಳ ಹತ್ತತ್ರ ಐತೇನ್ರೀ’?
ನಾನು: ಇಲ್ಲ. 4.30 ಗಂಟೆ ಪ್ರಯಾಣ.
ಮಂಗಳೂರು ಸಮುದ್ರ ಪ್ರದೇಶ. ಚಿಕ್ಕಮಗಳೂರು ಮಲೆನಾಡು.
ಹುಡುಗಿ: ಅದ್ಯಾಕ್ರಿ ಅಕ್ಕ ಅಷ್ಟು ಸಿಟ್ಟಾದ್ರಿ ಕಂಡಕ್ಟರ್ ಮ್ಯಾಲೆ?

ನಾನು: ಮತ್ತೆ ಊರಿನ ಹೆಸರು‌ ಸರಿಯಾಗಿ ಹೇಳಬೇಕು‌ ಅಲ್ವ?

ಅದು ‘ಚಿಕ್ಕಮಗಳೂರು’, ‘ಚಿಕ್ಕಮಂಗ್ಳೂರು ಅಲ್ಲ’. ಮಂಗಳಾದೇವಿ ಯಿಂದ ಆ ಊರಿಗೆ, ಮಂಗಳೂರು ಅಂತ ಹೆಸರು ಬಂದಿದೆ.
ಇನ್ನು ನಮ್ಮೂರಿನ ಬಗ್ಗೆ : ಸಖರಾಯ ಮಹಾರಾಜರು ತಮ್ಮ ಹೆಣ್ಣು ಮಕ್ಕಳ ಮದುವೆಯ ವೇಳೆ ವರದಕ್ಷಿಣೆಯಾಗಿ ನೀಡಿದ ಎರಡು ಹಳ್ಳಿಗಳಲ್ಲಿ ಚಿಕ್ಕಮಗಳೂರು ಒಂದು. ಹಿರೇಮಗಳೂರು ಶಬ್ದವು ಹಿರೇ-ಹಿರಿಯ ಹಾಗೂ ಮಗಳು (ಹಿರೇ+ಮಗಳೂರು) ಪದಗಳಿಂದ ಬಂದಿದೆ. ವರದಕ್ಷಿಣೆಯಾಗಿ ನೀಡಿದ ಇನ್ನೊಂದು ಊರು ಚಿಕ್ಕಮಗಳೂರು (ಚಿಕ್ಕ+ಮಗಳೂರು). ಹಾಗಾಗಿ ಅದು ಚಿಕ್ಕಮಗಳೂರು ಅಂದೆ. ಸ್ವಾರಸ್ಯಕರ ಸಂಗತಿ ಕೇಳಿದ ಆ ಹುಡುಗಿಯ ಮೊಗದಲ್ಲಿ ಮಂದಹಾಸ.

***

ಬಸ್ಸು ಬೆಳಗಿನ ಜಾವ ಚಿಕ್ಕಮಗಳೂರಿನಲ್ಲಿ ನಿಲ್ಲುತ್ತೆ.

ಮಕ್ಕಳು ಬರ್ತಾರೆ ಅಂತ ಖುಷಿಗೆ ಚಳಿ ಮಳೆಗಾಲ ಅಂತ ನೋಡದೆ, ಬಸ್ ಸ್ಟ್ಯಾಂಡ್ ಗೆ ಬೆಳ್ಳಂಬೆಳಿಗ್ಗೆ ಅಪ್ಪಂದಿರು ಮನೆಯವರು ಬಂದಿರುತ್ತಾರೆ.

ಯಾಕೋ ಬಸ್ 5 ನಿಮಿಷ ಲೇಟಾಯಿತು ಇವತ್ತು ಅಲ್ವ....? ಎಷ್ಟು ಹೊತ್ತಿಗೆ ಹೊರಟೆ ರಾತ್ರಿ?

ಕೆಲಸ ಹೇಗಿದೆ?, ಎಕ್ಸಾಮ್ಸ್ ಚೆನ್ನಾಗಿ ಬರೆದಿದ್ಯ? – ಹೀಗೆ ಪ್ರಶ್ನೆಗಳು ಎದುರಾಗುತ್ತದೆ. 

ಸಣ್ಣ ಊರು. ಯಾವುದೇ ಜಾಗಕ್ಕೂ ಬಹಳ ಅಂದರೆ ಇಪ್ಪತ್ತು ನಿಮಿಷಗಳ ಪಯಣ.

ಅದೊಂಥರಾ ವಾರಾ ವಾರಾ ಖುಷಿ ರೀಚಾರ್ಜ್‌ ಮಾಡೋ ಸಮಯ. ಎಲ್ಲರೂ ಒಟ್ಟಿಗೆ ಕೂತು ಕಾಫಿ ತಿಂಡಿ ಊಟ ಪಾಠದ ಹಾಡು ಹಸೆಯ ಸಮಯ.

ಮಕ್ಕಳು ಮನೆಗೆ ಬರ್ತಾರೆ ಅಂತ ಅಪ್ಪ–ಅಮ್ಮಂದಿರಿಗೆ ಖುಷಿ. ಏನಿಲ್ಲಾ ಅಂದರೂ ಮೂರು ನಾಲ್ಕು ಜನಕ್ಕೆ ಹೇಳ್ಕೊಂಡು ಬಂದಿರ್ತಾರೆ.
ಅಮ್ಮಂದಿರು ಅಡಿಗೆ ಮನೆಯಲ್ಲಿ ಬಿಝಿ.

ಹಾಸ್ಟೆಲ್‌, ಪಿಜಿಗಳಲ್ಲಿ ಊಟ ಚೆನ್ನಾಗಿರತ್ತೆ ಅಮ್ಮಾ ಅಂತ ಹೇಳಿದರೂ ....ಏನ್ ಚೆನ್ನಾಗಿರತ್ತೋ ಏನೋ ಹೇಗಾಗಿದೀಯ ನೋಡು
ಮಾತೂ ಮಾತೂ.....

ಸಾಮಾನ್ಯವಾಗಿ ಕಾಲೇಜು ಹುಡುಗರು ಇಡೀ ವಾರದ ಬಟ್ಟೆಗಳನ್ನು ತಂದು ಒಗೆಸಿಕೊಂಡು ಅಪ್ಪನ ಬೈಕು ಕಾರುನ್ನು ಸರ್ವಿಸ್‌ ಗೆ ತೆಗೆದುಕೊಂಡು ಹೋಗುವ, ಅಮ್ಮನ ಜೊತೆ ಮಿಕ್ಸಿ ಸರಿಮಾಡಿಸಲು ಹೋಗುವ ಕಾರ್ಯಕ್ರಮಗಳು. ಮೊದೆಲೇ ನಿರ್ಧಾರ ವಾಗಿರುತ್ತವೆ.

ಅರ್ಧ ಗಂಟೆಯ‌ ಹಿಂದೆ ಫಿಲ್ಮ್ ಪ್ಲಾನ್ ಮಾಡಿ ಮನೆಮಂದಿಯೆಲ್ಲಾ ನಕ್ಕು ನಲಿದು, ಸೌಂದರ್ಯ ಡಿಲಕ್ಸ್, ಮಯೂರ ಡಿಲಕ್ಸ್ ಗೆ ಹೋಗಿ ಬಂದರೆ ಶನಿವಾರ ಮುಗಿಯಿತು.

ರತ್ನ ಗಿರಿ ಬೋರೆ ಹಾಗೂ ಟೌನ್ ಕ್ಯಾಂಟೀನು ದೋಸೆಯ ಗಮ್ಮತ್ತೇ ಬೇರೆ. ಇನ್ನು ಭಾನುವಾರ ಬೆಳಿಗ್ಗೆ ಹರಳೆಣ್ಣೆ ಒನಪು ಮುಗಿಸಿಕೊಂಡು, ನಿದ್ರೆಗೆ ಜಾರಿದರೆ ಆಹಾ... ಸ್ವರ್ಗ.

ಮದುವೆ ,ಮುಂಜಿ ಅಂತ ಹೋದರೆ ಬೇಗ ಬೇಗ ವಾಪಸ್ ಬರುವ ತವಕ.  ಮತ್ತೆ ಎಲ್ಲಾ ಪ್ಯಾಕಿಂಗ್ ಮಾಡಿಕೊಳ್ಳುವ ಆತುರ.

ರಿಸರ್ವೇಷನ್ ಇಲ್ಲದೇ ಯಾರೂ ಬರುವುದಿಲ್ಲ. ಬೆಂಗಳೂರಲ್ಲೂ ಸೇರಲಿಕ್ಕೆ ಆಗದ ಫ್ರೆಂಡ್ಸ್‌ ಅರ್ಧ ಗಂಟೆ ಮೊದಲು ಬಸ್ ಸ್ಟ್ಯಾಂಡ್ ಅಲ್ಲಿ ಸೇರಿ ಹರಟುತ್ತಿರುತ್ತಾರೆ. ಬೇರೆ ಊರಲ್ಲಿ ಓದುವ , ಕೆಲಸ ಮಾಡುವ, ಬಸ್ಸಲ್ಲೂ ಸಿಗದ ಫ್ರೆಂಡ್ಸ್‌ ಸಿಗುವ ಸಮಯ.

ಅನೇಕ ಪ್ರೇಮ ಕಥೆಗಳ ತಾಣ ಬಸ್ ನಿಲ್ದಾಣ. ಸಾಮಾನ್ಯವಾಗಿ ಪ್ರತಿ ಬಾರಿ ಅದೇ ಅದೇ ಕಂಡಕ್ಟರ್ ಹಾಗೂ ಡ್ರೈವರ್ ಇರ್ತಾರೆ. ಅಪ್ಪಂದಿರು ಅವರನ್ನ ಪರಿಚಯ ಮಾಡಿಕೊಂಡು, ಅದರಲ್ಲೂ ಹೆಣ್ಣು ಮಕ್ಕಳ ತಂದೆಯರು....ತಮ್ಮ ಮಗ, ಮಗಳ ಬಗ್ಗೆ ವಿಚಾರ ತಿಳಿಸಿ, ಸ್ವಲ್ಪ ನೋಡ್ತಿರಿ ಸರ್... ನಿದ್ದೆ ಗಿದ್ದೆ ಮಾಡಿದ್ರೆ ಎಬ್ಬಿಸಿ ಅಂತ ಹೇಳಿದ್ರೆ ಅವರುಗಳಿಗೇನೋ ಸಮಾಧಾನ.

***

ಅಪ್ಪ ಅಮ್ಮನಿಗೆ ಟಾ ಟಾ ಹೇಳಿ, ಅಮ್ಮಕೊಟ್ಟ ಹತ್ತಿಯನ್ನು ಕಿವಿಗಿಟ್ಟುಕೊಂಡು. ಯಾವುದೇ ಕಾಲದಲ್ಲೂ ಬೆಳಗಿನ ಜಾವಕ್ಕೆ ಚಳಿಯಾಗುತ್ತದೆ ಇಟ್ಟುಕೋ ಅಂತ ಬಲವಂತವಾಗಿ ಕೊಟ್ಟ ಶಾಲನ್ನೂ ಕೈಲಿಟ್ಟುಕೊಂಡು, ಕಿಟಕಿಯ ಗ್ಲಾಸ್ ಪಕ್ಕಕ್ಕೆ ಸರಿಸಿದೆ.

ಬಸ್ ಹೊರಟಿತು. ಲೈಟ್ ಆಫ್ ಆಯಿತು. ಮತ್ತೆ ರಾಜಧಾನಿಯತ್ತ ಪಯಣ ಶುರುವಾಯಿತು. ಮತ್ತೊಂದು ಹೊಸ ವಾರ. ಹೊಸ ದಿನ.

ಸೋಮವಾರ ಬೆಳಿಗ್ಗೆ ಆಫೀಸ್‌ ಲಿಫ್ಟ್‌ನಲ್ಲಿ ಅಲ್ಲಿ ಯಾರೋ 'How was your weekend yaar?'
Haaa u went to Chikmangluru right?!!!

ಅಂದಾಗ ನಾನು

That is not "Chikmangluru"

It is "ಚಿಕ್ಕಮಗಳೂರು"...
ಅದೊಂದು ಚಿಕ್ಕ ಚೊಕ್ಕ ಊರು.... 

ಬರಹ ಇಷ್ಟವಾಯಿತೆ?

 • 12

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !