ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲಿ ಜಾಹೀರಾತು ಡಬ್ಬಿಂಗ್‌- ಇಲ್ಲಿ ಏನಾಗುತ್ತಿದೆ? 

Last Updated 1 ನವೆಂಬರ್ 2019, 7:22 IST
ಅಕ್ಷರ ಗಾತ್ರ

ನೀವು ಟಿ.ವಿಯಲ್ಲಿ ಕನ್ನಡ ಚಾನೆಲ್‌ಗಳನ್ನು ನೋಡುತ್ತೀರಾದರೆಜಾಹೀರಾತುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ನಿಮ್ಮ ಮೆಚ್ಚಿನ ಸೀರಿಯಲ್ ನಡೆಯುತ್ತಿರುತ್ತದೆ,ಅದ್ಯಾವ್ದೋ ಕುತೂಹಲಕರ ತಿರುವು ಬರುತ್ತಿದೆ, ಮುಂದೇನಾಗಬಹುದು ಎಂದು ನೀವು ಉಗುರು ಕಚ್ಚಿಕೊಳ್ಳುತ್ತಿದ್ದೀರಿ,ಅಷ್ಟರಲ್ಲಿ ಜಾಹೀರಾತೊಂದು ಧುತ್ತೆಂದು ಬಂದುಬಿಡುತ್ತದೆ. ಕೆಲವರು ರಿಮೋಟ್ ಕಂಟ್ರೋಲ್ ಎತ್ತಿ ಟಿವಿ ಮ್ಯೂಟ್ ಮಾಡಿದರೆ ಹಲವರು ಜಾಹೀರಾತುಗಳನ್ನು ಆಸಕ್ತಿಯಿಂದ ನೋಡುತ್ತಾರೆ ಕೂಡ.

ನೀವುಆಸಕ್ತಿಯಿಂದ ಜಾಹೀರಾತುಗಳನ್ನು ನೋಡುವವರಾಗಿದ್ದಲ್ಲಿ ಬಹುತೇಕ ಅವೆಲ್ಲವೂ ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ ಆಗಿದ್ದು ನಿಮಗೆ ತಿಳಿದೇ ಇರುತ್ತದೆ. ಜಾಹೀರಾತುಗಳ ಡಬ್ಬಿಂಗ್ ಹೇಗೆ ನಡೆಯುತ್ತದೆ, ಎಲ್ಲಿ ನಡೆಯುತ್ತದೆ, ಯಾರು ಮಾಡುತ್ತಾರೆ, ಯಾರು ಮಾಡಿಸುತ್ತಾರೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಈ ಜಾಹೀರಾತುಗಳದ್ದು ಒಂದು ವಿಲಕ್ಷಣ ಪ್ರಪಂಚ. ಭಾರತದಲ್ಲಿ ಜಾಹೀರಾತುಗಳದ್ದೇ ಸುಮಾರು ₹ 62000 ಕೋಟಿ ರೂಪಾಯಿಗಳ ಬೃಹತ್ ಉದ್ಯಮ. ಲಕ್ಷಾಂತರ ಜನರು ಈ ಉದ್ಯಮದಲ್ಲಿ ದುಡಿಯುತ್ತಿದ್ದಾರೆ. ಆದರೆ ಇದೊಂದು ಸಂಘಟಿತ ಉದ್ಯಮವಲ್ಲ. ಇಲ್ಲಿನ ತಾರತಮ್ಯಗಳೂ ಕಣ್ಣಿಗೆ ರಾಚುವಂಥವು. ಬನ್ನಿ, ಒಂದು ಜಾಹೀರಾತು ಸಿದ್ಧವಾಗಿ ನಿಮ್ಮ ಟಿವಿ ಪರದೆಯ ಮೇಲೆ ಮೂಡಿ ಬರುವವರೆಗಿನ ಪ್ರಯಾಣ ಹೀಗಿರುತ್ತದೆ.

ನೀವೊಂದು ಹೊಸ ಕಂಪನಿ ಪ್ರಾರಂಭಿಸಿದ್ದೀರಿ ಎಂದುಕೊಳ್ಳಿ. ನೀವು ನಿಮ್ಮ ಕಂಪನಿಯಲ್ಲಿ ಸ್ಕೂಟರ್ ತಯಾರಿಸುತ್ತೀರಿ. ಮಾರುಕಟ್ಟೆಯಲ್ಲಿ ಹಲವಾರು ಸ್ಕೂಟರ್ ಕಂಪನಿಗಳಿವೆ. ಅವುಗಳ ಮಾರಾಟಕ್ಕೆ ಸೆಡ್ಡು ಹೊಡೆಯಬೇಕಾದರೆ ನೀವು ಭಾರತದಾದ್ಯಂತ ನಿಮ್ಮ ಸ್ಕೂಟರ್ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಅದಕ್ಕಾಗಿ ನಿಮ್ಮ ಸ್ಕೂಟರಿನ ಜಾಹೀರಾತುಗಳನ್ನು ಹೊರತರಬೇಕು. ಈ ಜಾಹೀರಾತುಗಳು ಟಿವಿ, ಸುದ್ದಿಪತ್ರಿಕೆ, ಜಾಲತಾಣಗಳು, ಹೊರಾಂಗಣದ ಬೋರ್ಡುಗಳು ಮುಂತಾದ ಕಡೆಗಳಲ್ಲೆಲ್ಲ ಕಾಣಿಸಿಕೊಂಡು ಜನರನ್ನು ಆಕರ್ಷಿಸುವಂತಿರಬೇಕು. ಅದಕ್ಕಾಗಿ ನೀವೇನು ಮಾಡುತ್ತೀರಿ? ಒಂದು ಅಡ್ವರ್ಟೈಸಿಂಗ್ ಏಜೆನ್ಸಿಗೆ ಜಾಹೀರಾತು ನಿರ್ಮಾಣದ ಕೆಲಸವನ್ನು ವಹಿಸುತ್ತೀರಿ.

ಭಾರತದಲ್ಲಿಂದು ನೂರಾರು ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಜಾಹೀರಾತು ಏಜೆನ್ಸಿಗಳಿವೆ. ಮುದ್ರಾ, ಲಿಯೋ ಬರ್ನೆಟ್, ಬೇಟ್ಸ್, ಓಗಿಲ್ವಿ & ಮಾಥರ್, ರಿಡಿಫ್ಯೂಶನ್, ಗ್ರೇ, ಮೆಕ್‍ಕ್ಯಾನ್-ಎರಿಕ್‍ಸನ್ ಮತ್ತು ಡೆಂಟ್ಸುನಂತಹ ಅಂತಾರಾಷ್ಟ್ರೀಯ ಜಾಹೀರಾತು ಏಜೆನ್ಸಿಗಳು ನಿಮಗಾಗಿ ಜಾಹೀರಾತುಗಳನ್ನು ನಿರ್ಮಿಸಿಕೊಡಲು ತುದಿಗಾಲಲ್ಲಿ ನಿಂತಿರುತ್ತವೆ. ನೀವು ಒಂದು ಏಜೆನ್ಸಿಯನ್ನು ನೇಮಿಸುತ್ತೀರಿ. ಒಂದು ಜಾಹೀರಾತು ತಯಾರು ಮಾಡುವುದೆಂದರೆ ಕೋಟ್ಯಂತರ ರೂಪಾಯಿಗಳ ವಹಿವಾಟು. ನೀವು ನೇಮಿಸಿದ ಏಜೆನ್ಸಿಯು ನಿಮ್ಮಲ್ಲಿ ತಯಾರಾಗುವ ಸ್ಕೂಟರ್‌ನಲ್ಲಿ ಏನೆಲ್ಲ ವಿಶೇಷತೆಗಳಿವೆ ಎಂಬುದನ್ನು ಪಟ್ಟಿ ಮಾಡುತ್ತಾರೆ. ಈ ಏಜೆನ್ಸಿಗಳು ಸಾವಿರಾರು ಬಳಕೆದಾರರ ಬಳಿ ಹೋಗಿ, ಒಂದು ಸ್ಕೂಟರ್‌ನಲ್ಲಿ ಅವರು ಏನೆಲ್ಲ ಬಯಸುತ್ತಾರೆ ಎಂದೂ ಸಮೀಕ್ಷೆ ಮಾಡುತ್ತಾರೆ. ಮಾರುಕಟ್ಟೆಯಲ್ಲಿನ ಅನ್ಯ ಸ್ಕೂಟರ್‌ಗಳತುಲನೆಯಲ್ಲಿ ನಿಮ್ಮ ಕಂಪನಿಯ ಸ್ಕೂಟರ್ ಹೇಗೆ ಭಿನ್ನ ಎಂಬುದನ್ನು ಗುರುತಿಸಿ, ಆ ಅಂಶವನ್ನೇ ಹೈಲೈಟ್ ಮಾಡುವ ಒಂದು ಜಾಹೀರಾತು ತಯಾರಿಸುವ ಯೋಜನೆ ಮಾಡಿ, ಆ ಯೋಜನೆಯನ್ನು ನಿಮ್ಮ ಮುಂದಿರಿಸುತ್ತಾರೆ. ಈ ಯೋಜನೆ ಮಾಡುವವರು ಅಥವಾ ಆ ಜಾಹೀರಾತಿನ ಕತೆ ಕಟ್ಟುವವರು ಏಜೆನ್ಸಿಯಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದು ತಿಂಗಳಿಗೆ ಲಕ್ಷಗಟ್ಟಲೆ ಸಂಬಳ ಪಡೆಯುತ್ತಾರೆ ಎಂಬುದೂ ಗೊತ್ತಿರಲಿ. ಆ ಕತೆಯೂ ಹೇಗಿರುತ್ತದೆ ಎಂದರೆ, ಹೆಚ್ಚೆಂದರೆ ಎರಡು ನಿಮಿಷಗಳ ಅವಧಿಯಲ್ಲಿ, ವೀಕ್ಷಕರ ಮೇಲೆ ಪ್ರಭಾವ ಬೀರುವಂಥ, ಅವರು ನಿಮ್ಮ ಸ್ಕೂಟರನ್ನು ಖರೀದಿಸಲು ಮನಸ್ಸು ಮಾಡಲು ಪ್ರೇರೇಪಿಸುವಂಥ ಕತೆ ಆಗಿರುತ್ತದೆ.

ಆ ಜಾಹೀರಾತಿನ ಕತೆಗೆ ನಿಮ್ಮ ಒಪ್ಪಿಗೆ ಸಿಕ್ಕು, ನೀವು ಏಜೆನ್ಸಿಯು ನೀಡಿದ ಬಜೆಟ್‍ನ್ನು ಬಿಡುಗಡೆ ಮಾಡಿದಿರೋ, ಆ ಏಜೆನ್ಸಿಯು ತನ್ನ ಮುಂದಿನ ಹೆಜ್ಜೆ ಇರಿಸುತ್ತದೆ. ನಿಮ್ಮ ಸ್ಕೂಟರ್ ಪ್ರಚಾರ ಮಾಡಲು ನಿಮಗೆ ಅಕ್ಷಯ್ ಕುಮಾರ್ ಬೇಕೋ, ಶಾರೂಕ್ ಖಾನ್ ಬೇಕೋ, ವಿರಾಟ್ ಕೊಹ್ಲಿ ಬೇಕೋ ಅಥವಾ ಕಿಚ್ಚ ಸುದೀಪ್ ಬೇಕೋ ಎಂಬೆಲ್ಲ ಲೆಕ್ಕಾಚಾರಗಳು ನಡೆದು, ಅಂತೂ ಒಬ್ಬ ತಾರೆಯನ್ನು ಆಯ್ದುಕೊಳ್ಳುತ್ತೀರಿ. ಅವರು ಹೇಳಿದ ಬೆಲೆ ತೆರಲು ಸಿದ್ಧರಾಗ್ತೀರಿ. ಅವರೂ ಕೋಟಿಗಟ್ಟಲೆ ಕೇಳುತ್ತಾರೆ.

ಏಜೆನ್ಸಿ ಮೂಲಕ ಸಿದ್ಧವಾದ ಜಾಹೀರಾತಿನ ಕತೆಯ ಫಿಲ್ಮ್ ಮಾಡಲು ಒಂದು ಪ್ರೊಡಕ್ಷನ್ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ನೀವು ಈಗಾಗಲೇ ನೀಡಲು ಒಪ್ಪಿದ ಹಣದ ದೊಡ್ಡ ಅಂಶವನ್ನು ಆ ಫಿಲ್ಮ್ ನಿರ್ಮಾಣಕ್ಕೆ ವ್ಯಯಿಸಲಾಗುತ್ತದೆ. ಜಾಹೀರಾತು ಫಿಲ್ಮಿನ ಚಿತ್ರೀಕರಣವೂ ಕೂಡ ಸಿನೆಮಾದ ಚಿತ್ರೀಕರಣದಷ್ಟೇ ಅದ್ದೂರಿಯಾಗಿ ಮಾಡಲಾಗುತ್ತದೆ. ನೂರಾರು ತಂತ್ರಜ್ಞರು, ಕಲಾವಿದರು, ಛಾಯಾಗ್ರಾಹಕರು, ಧ್ವನಿ ಮುದ್ರಕರು ಮುಂತಾದವರೆಲ್ಲ ಸೇರಿ ಒಂದು ಜಾಹೀರಾತನ್ನು ಚಿತ್ರೀಕರಿಸುತ್ತಾರೆ. ಇದಾದ ನಂತರ ಪೋಸ್ಟ್-ಪ್ರೊಡಕ್ಷನ್ ಕೆಲಸ ಶುರುವಾಗುತ್ತದೆ.

ಲಂಡನ್‌ನಲ್ಲಿರುವ ವೈಟ್‌ ಮಾರ್ಕ್‌ ಸ್ಟುಡಿಯೊ
ಲಂಡನ್‌ನಲ್ಲಿರುವ ವೈಟ್‌ ಮಾರ್ಕ್‌ ಸ್ಟುಡಿಯೊ

ಪೋಸ್ಟ್ ಪ್ರೊಡಕ್ಷನ್
ಪೋಸ್ಟ್ ಪ್ರೊಡಕ್ಷನ್‍ನ ಬಹುಮುಖ್ಯ ಅಂಗವೆಂದರೆ ವಿವಿಧ ಭಾಷೆಗಳಲ್ಲಿ ಆ ಜಾಹೀರಾತನ್ನು ಡಬ್ ಮಾಡುವುದು. ಜಾಹೀರಾತನ್ನು ಡಬ್ ಮಾಡುವುದೇಕೆ? ಆಯಾ ಭಾಷೆಗಳಲ್ಲೇ ಚಿತ್ರೀಕರಿಸಬಹುದಲ್ಲ ಎಂದು ನಿಮಗನಿಸಿದರೆ ನೆನಪಿಡಿ, ಅದಕ್ಕಾಗಿ ಹತ್ತು ಪಟ್ಟು ಹೆಚ್ಚು ಹಣ ಖರ್ಚಾಗುತ್ತದೆ. ಒಂದು ಸ್ಕೂಟರ್ ಪ್ರಚಾರ ಮಾಡಲು ಹಿಂದಿಯಿಂದ ಶಾರೂಖ್‌, ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಅಜಿತ್, ತೆಲುಗಿನಲ್ಲಿಮಹೇಶ್ ಬಾಬು ಅಂತ ಕೂತರೇ ಅವರಿಗೆಲ್ಲ ಹಣ ಕೊಡೋದು ಬೇಡವೇ? ನಿಮ್ಮ ಬಜೆಟ್ ಹಳ್ಳ ಹಿಡಿಯುವುದಿಲ್ಲವೇ? ಅದಕ್ಕೆಂದೇ ಒಂದೇ ಭಾಷೆಯಲ್ಲಿ ಜಾಹೀರಾತು ಚಿತ್ರದ ನಿರ್ಮಾಣ ಮಾಡಿ ಅದನ್ನು ಬೇರೆ ಬೇರೆ ಭಾಷೆಗಳಲ್ಲಿ ಡಬ್ ಮಾಡುವುದರಲ್ಲಿ ಸಾಕಷ್ಟು ಹಣದ ಉಳಿತಾಯವಾಗುತ್ತದೆ. ಭಾರತದಲ್ಲಿ ಬಹುತೇಕ ಜಾಹೀರಾತುಗಳ ನಿರ್ಮಾಣ ಮತ್ತು ಡಬ್ಬಿಂಗ್ ಆಗುವುದು ಮುಂಬಯಿ ಎಂಬ ಮಹಾನಗರಿಯಲ್ಲಿ.

ಸರಿ, ಚಿತ್ರೀಕರಣವಾಯಿತಲ್ಲ ಇದರ ಸ್ಕ್ರಿಪ್ಟ್ ಅನ್ನು ಏಜೆನ್ಸಿ ಸಿದ್ಧಗೊಳಿಸಿರುತ್ತದೆ. ಶೂಟಿಂಗ್‍ನ ವೇಳೆಯಲ್ಲಿ ಆ ಸ್ಕ್ರಿಪ್ಟ್‌ನಲ್ಲಿ ಕೆಲವು ಬದಲಾವಣೆಗಳೂ ಆಗಿರಬಹುದು. ಹಾಗೆ ಬದಲಾವಣೆ ಮಾಡಲಾದ ಸ್ಕ್ರಿಪ್ಟ್ ಅನುವಾದಕರ ಕೈ ಸೇರುತ್ತದೆ. ಬಹುತೇಕ ಪ್ರತಿಯೊಂದು ಜಾಹೀರಾತು ಏಜೆನ್ಸಿಯಲ್ಲೂ ಪ್ರಾದೇಶಿಕ ಭಾಷೆಗಳ ವಿಭಾಗವಿದ್ದು, ಅಲ್ಲಿ ಅನುವಾದಕರು ಕೆಲಸ ಮಾಡುತ್ತಾರೆ. ಭಾರತದ ಬಹುತೇಕ ಎಲ್ಲ ಭಾಷೆಯ ಅನುವಾದಕರೂ/ಲೇಖಕರೂ ಏಜೆನ್ಸಿಗಳಲ್ಲಿರುತ್ತಾರೆ. ಕೆಲವೊಮ್ಮೆ ಅಂತಹ ಅನುವಾದ ವಿಭಾಗವನ್ನು ಹೊಂದಿರದ ಏಜೆನ್ಸಿಗಳು ಮಾರುಕಟ್ಟೆಯಲ್ಲಿರುವ ಸಬ್-ಏಜೆನ್ಸಿಗಳಿಗೂ ಅನುವಾದದ ಕೆಲಸ ಒಪ್ಪಿಸುವುದುಂಟು. ಇಲ್ಲಿ ಅನುವಾದವಾಗಿ ಬಂದ ಸ್ಕ್ರಿಪ್ಟ್‌‌ಗಳನ್ನು ನಿಮ್ಮ ಕಂಪನಿಗೆ ಕಳಿಸಲಾಗುತ್ತದೆ, . ನೀವದನ್ನು ಅಪ್ರೂವ್ ಮಾಡಿದ ಮೇಲೆ ಪ್ರೊಡಕ್ಷನ್ ಸಂಸ್ಥೆಯೇ ಒಂದು ಧ್ವನಿ ಮುದ್ರಣದ ಸ್ಟುಡಿಯೊವನ್ನು ಬಾಡಿಗೆಗೆ ಪಡೆಯುತ್ತದೆ.

ಮುಂಬಯಿಯಲ್ಲಿ ಹಲವು ಖ್ಯಾತನಾಮ ಸಾಹಿತಿಗಳು ಈ ಏಜೆನ್ಸಿಗಳಲ್ಲಿ ಅನುವಾದಕರಾಗಿ ದುಡಿದಿದ್ದಾರೆ. ಖ್ಯಾತ ಸಾಹಿತಿ ಡಾ. ವ್ಯಾಸರಾವ್ ನಿಂಜೂರು, ಇತ್ತೀಚಿಗೆ ತೀರಿಕೊಂಡ ಕವಿ ಬಿ ಎ ಸನದಿ, ಹಿರಿಯ ಅನುವಾದಕ ಪ್ರಶಾಂತ್ ನಾಯಕ್, ಸುಮತಿ ಸುವರ್ಣ ಇವರೆಲ್ಲ ಘಟಾನುಘಟಿ ಅನುವಾದಕರಾಗಿದ್ದವರು. ಮಳೆಕವಿ ಜಯಂತ್ ಕಾಯ್ಕಿಣಿಯವರೂ ಕೂಡ ಕೆಲವು ವರ್ಷಗಳ ಕಾಲ ಜಾಹೀರಾತುಗಳ ಅನುವಾದ ಮಾಡುತ್ತಿದ್ದರು ಎಂಬುದು ನಿಮಗೆ ಗೊತ್ತೆ? ಇಂದಿಗೂ ಕೂಡ ಜಾಹೀರಾತುಗಳಲ್ಲಿನ ಹಾಡುಗಳನ್ನು (ಜಿಂಗಲ್) ಅನುವಾದಿಸುತ್ತಾರೆ ಜಯಂತರು. ನಿಮಗೆ ಸಲ್ಮಾನ್ ಖಾನ್ ಅಭಿನಯದ ಥಮ್ಸ್ಅಪ್ ಪೇಯದ ಜಾಹೀರಾತು ನೆನಪಿರಬೇಕಲ್ಲ? ಅದರಲ್ಲಿ ‘ಆಜ್ ಕುಛ್ ತೂಫಾನಿ ಕರ್ತೇ ಹೈಂ’ ಎಂಬ ಹಾಡನ್ನು ‘ಇಂದೇನೋ ಸಾಹಸ ಮಾಡೋಣ’ ಎಂದು ಸರಳವಾಗಿ ಮನಮುಟ್ಟುವಂತೆ ಅನುವಾದಿಸಿದ್ದು ಜಯಂತ್ ಅವರೇ.

ಮುಂಬಯಿಯಲ್ಲಿ ಸುಮಾರು ಎರಡೂವರೆ ಸಾವಿರ ಸ್ಟುಡಿಯೊಗಳಿವೆ. ಪ್ರತಿಯೊಂದು ಸ್ಟುಡಿಯೊದಲ್ಲೂ ಏನಾದರೊಂದು ಧ್ವನಿಮುದ್ರಣದ ಕೆಲಸ ಸತತವಾಗಿ ನಡೆಯುತ್ತಲೇ ಇರುತ್ತದೆ. ಸಾಮಾನ್ಯವಾಗಿ ಧ್ವನಿಮುದ್ರಣದ ಮೊದಲ ದಿನ ಆ ಜಾಹೀರಾತಿನಲ್ಲಿ ಅಭಿನಯಿಸಿದ ತಾರೆಗಳು ಮತ್ತು ಇತರ ನಟರು ಬಂದು ಕಂಠದಾನ ಮಾಡುತ್ತಾರೆ. ಇನ್ನು ಅಮಿತಾಬ್‌, ಸಲ್ಮಾನ್ ಖಾನ್ ಮುಂತಾದ ಸೂಪರ್ ಸ್ಟಾರ್ ನಟರೆಲ್ಲ ನಿಮ್ಮ ಸ್ಟುಡಿಯೊಗೆ ಬರುವುದಿಲ್ಲ. ಅವರೇ ಹೇಳಿದ ಸ್ಟುಡಿಯೊಗೆ ನೀವು ಹೋಗಿ ಡಬ್ಬಿಂಗ್ ಮಾಡಿಸಿಕೊಂಡು ಬರಬೇಕು.

ಮರುದಿನವೇ ಉಳಿದ ಭಾಷೆಗಳಲ್ಲಿ ಡಬ್ಬಿಂಗ್ ಮಾಡುವ ಬೃಹತ್ ಕಾರ್ಯ ಇರುತ್ತದೆ. ಮುಂಬಯಿಯಲ್ಲಿ ಭಾರತದ ಎಲ್ಲ ಭಾಷೆಗಳ ಡಬ್ಬಿಂಗ್ ಕಲಾವಿದರಿದ್ದಾರೆ. ಕನ್ನಡ ಡಬ್ಬಿಂಗ್ ಕಲಾವಿದರದ್ದಂತೂ ಒಂದು ದೊಡ್ಡ ಇತಿಹಾಸವೇ ಇದೆ. ಅನಂತ್ ನಾಗ್-ಶಂಕರ್ ನಾಗ್‍ರಂಥ ನಟರನ್ನು ರಂಗಭೂಮಿಗೆ ಕರೆತಂದ ದಿವಂಗತ ಕೆ ಕೆ ಸುವರ್ಣರು ಎಪ್ಪತ್ತು ಮತ್ತು ಎಂಬತ್ತರದಶಕದ ಅತ್ಯಂತ ಜನಪ್ರಿಯ ಕನ್ನಡ ಕಂಠದಾನ ಕಲಾವಿದರಾಗಿದ್ದವರು. ಆನಂತರ ಶಿವರಾಜ್ ಸುವರ್ಣ, ಜಯಶೀಲ್ ಸುವರ್ಣ, ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ರಂಗ ನಟ ಮೋಹನ್ ಮಾರ್ನಾಡ್, ಇಂದು ಜಗತ್ತಿನಾದ್ಯಂತ ತಮ್ಮ ಕಂಚಿನ ಕಂಠದಿಂದಾಗಿ ಜನಜನಿತರಾಗಿರುವ ಗಾಯಕ ವಿಜಯ್ ಪ್ರಕಾಶ್, ರಂಗ ನಟಿ ಅಹಲ್ಯಾ ಬಲ್ಲಾಳ್, ಖ್ಯಾತ ಗಾಯಕಿ ಚಂದನಾ ಬಾಲಾ, ರಾಧಿಕಾ ರಾವ್, ಮಹತಿ ವಿಜಯ್ ಪ್ರಕಾಶ್, ರೂಪಾ ಭಟ್, ರಂಗ ನಟ ಸುರೇಂದ್ರ ಕುಮಾರ್ ಮಾರ್ನಾಡ್, ಲತೇಶ್ ಪೂಜಾರಿ ಮುಂತಾದ ಅತ್ಯಂತ ಪ್ರತಿಭಾವಂತ ಕಲಾವಿದರು ಕನ್ನಡ ಜಾಹೀರಾತುಗಳಲ್ಲಿ ಕಂಠದಾನ ಮಾಡುತ್ತ ಬಂದಿದ್ದಾರೆ. ಇದಲ್ಲದೇ ದೊಡ್ಡ ದೊಡ್ಡ ತಾರೆಗಳು ಲಭ್ಯವಿಲ್ಲದಿದ್ದಾಗ ಅವರ ಬದಲಿಗೆ ಅವರದೇ ಧ್ವನಿಯನ್ನು ಯಥಾವತ್ತಾಗಿ ನಕಲು ಮಾಡಿ ಹಿಂದಿ-ಇಂಗ್ಲಿಷ್‌ನಲ್ಲಿಡಬ್ಬಿಂಗ್ ಮಾಡುವ ಅದ್ಭುತ ಕಲಾವಿದರಲ್ಲೂ ಅಚ್ಚ ಕನ್ನಡಿಗರಿದ್ದಾರೆ. ಚೇತನ್ ಸಸಿತಲ್ ಮತ್ತು ನಿನಾದ್ ಕಾಮತ್ ಎಂಬವರು ಈ ಪಟ್ಟಿಗೆ ಸೇರಿದ ಕನ್ನಡಿಗರು. ನಿನಾದ್ ಕಾಮತ್ ಅಂತೂ ಅಮಿತಾಭ್‍ರಿಂದ ಹಿಡಿದು ಪ್ರಧಾನಿ ಮೋದಿಯವರವರೆಗೆ ಎಲ್ಲರ ಧ್ವನಿಯನ್ನು ಹೂಬಹೂ ನಕಲು ಮಾಡುವ ಪ್ರತಿಭೆಯುಳ್ಳವರು.

ಅವಿನಾಶ್ ಕಾಮತ್
ಅವಿನಾಶ್ ಕಾಮತ್

ಒಂದು ಜಾಹೀರಾತಿನಲ್ಲಿ ಅಭಿನಯಿಸಿದ ಯಾವ ನಟನಿಗೆ, ಯಾವ ಕಂಠದಾನ ಕಲಾವಿದರ ಧ್ವನಿ ಸರಿ ಹೊಂದುತ್ತದೆ ಎಂದು ನಿರ್ಧರಿಸಿ ಆ ಕಲಾವಿದರಿಗೆ ಡಬ್ಬಿಂಗ್‍ಗೆ ಕರೆಯುವ ಕೆಲವು ಕೋ-ಆರ್ಡಿನೇಶನ್ ಸಂಸ್ಥೆಗಳೂ ಮುಂಬಯಿಯಲ್ಲಿವೆ. ಇವುಗಳಲ್ಲಿ ಮುಖ್ಯವಾದವು ಎಂದರೆ ಲಿಂಗೋ ಇಂಡಿಯಾ, ಸೌಂಡ್ ಆ್ಯಂಡ್ ವಿಶನ್ ಇಂಡಿಯಾ, ವೋಕಲ್ ಇಂಡಿಯಾ, ದ ವಾಯ್ಸ್ ಬ್ಯಾಂಕ್, ಮತ್ತು ವಿಜಿಸ್ ಮೀಡಿಯಾ ಇತ್ಯಾದಿ. ಅದರಲ್ಲೂ ಲಿಂಗೋ ಇಂಡಿಯಾ ಅನ್ನೋ ಕಂಪನಿ ಇದೆಯಲ್ಲ ಅದನ್ನು ಕಟ್ಟಿ ಅದನ್ನು ಜಾಗತಿಕ ಮಟ್ಟಕ್ಕೆ ಏರಿಸಿದವರು ಉಡುಪಿಯ ಮನೋಹರ್ ನಾಯಕ್ ಎಂಬವರು. ಜೊತೆಗೆ ಶಂಖ್ ಎಂಬ ಅತ್ಯಂತ ಸುಂದರ ಮತ್ತು ಅತ್ಯಾಧುನಿಕ ಧ್ವನಿ ಮುದ್ರಣ ಸ್ಟುಡಿಯೊ ಕಟ್ಟಿಸಿದ್ದಾರೆ. ಇಂದಿಗೂ ಅಮಿತಾಭ್ ಬಚ್ಚನ್, ಜಾನ್ ಅಬ್ರಹಾಂ, ಅಮೀರ್ ಖಾನ್, ವಿದ್ಯಾ ಬಾಲನ್ ಮುಂತಾದ ತಾರೆಯರು ಜಾಹೀರಾತುಗಳಲ್ಲಿ ಕಂಠದಾನ ಮಾಡಲು ಶಂಖ್ ಸ್ಟುಡಿಯೊವನ್ನೇ ಆಯ್ದುಕೊಳ್ಳುತ್ತಾರೆ.

ಇಂಥ ಸಮನ್ವಯ ಸಂಸ್ಥೆಗಳಿಂದ ಆಯ್ಕೆಯಾದ ಕಲಾವಿದರು ನಿರ್ಧಾರಿತ ಸಮಯಕ್ಕೆ ಸ್ಟುಡಿಯೊಗೆ ತಲುಪಿ ಅಲ್ಲಿ ಆ ಜಾಹೀರಾತಿಗೆ ತಮ್ಮ ಧ್ವನಿ ನೀಡುತ್ತಾರೆ. ಒಂದು ದಿನದಲ್ಲಿ ಸುಮಾರು ಹನ್ನೆರಡು ಭಾರತೀಯ ಭಾಷೆಗಳಲ್ಲಿ ಡಬ್ಬಿಂಗ್ ಕೆಲಸ ಮಾಡಲಾಗುತ್ತದೆ. ಧ್ವನಿ ಮುದ್ರಣ ಮಾಡುವ ಎಂಜಿನಿಯರ್‌ಗಳು ಆನಂತರ ಮಿಕ್ಸಿಂಗ್ ಎಂಬ ಬಹುಮುಖ್ಯ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಅನುಪೂಜಾರಿ, ತೇಜಸ್ವಿ ರಾವ್, ರಾಹುಲ್ ರಾವ್, ರಾಹುಲ್ ಕಾಮತ್, ರಸೆಲ್ ಸ್ಟೀಫನ್, ಮಹೇಶ್ ಹಿರೇಮಠ್, ಮಹಾಂತೇಶ್ ಗುಗ್ಗಲಶೆಟ್ಟಿ ಮುಂತಾದ ಅಪ್ಪಟ ಕನ್ನಡಿಗರು ಸದ್ಯಕ್ಕೆಕೆಲಸ ಮಾಡುತ್ತಿರುವ ಖ್ಯಾತ ಧ್ವನಿಮುದ್ರಣ ಎಂಜಿನಿಯರ್‌ಗಳಾಗಿದ್ದಾರೆ.

ಕೆಲವೊಮ್ಮೆ ಕೆಲವು ಕಂಪನಿಗಳು ಹಿಂದಿ-ಇಂಗ್ಲಿಷ್‌ಭಾಷೆಯ ಕಲಾವಿದರಿಂದಲೇ ಎಲ್ಲ ಭಾಷೆಗಳಲ್ಲಿ ಡಬ್ಬಿಂಗ್ ಮಾಡಿಸಲು ಒತ್ತಾಯಿಸುತ್ತಾರೆ. ಆಗ ಆ ಕಲಾವಿದರಿಗೆ ಭಾಷೆಯ ಮೇಲ್ವಿಚಾರಕರ ಅಗತ್ಯವಿರುತ್ತದೆ. ಡಬ್ಬಿಂಗ್‍ನ ಸಮಯ ಆ ಕಲಾವಿದರು ಕನ್ನಡದ ಪ್ರತಿಯೊಂದು ಶಬ್ದವನ್ನು ಸರಿಯಾಗಿ ಉಚ್ಚರಿಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸುವುದು ಇವರ ಜವಾಬ್ದಾರಿ.

ಹೀಗೆ ಡಬ್ಬಿಂಗ್ ಆದ ಬಂದ ಜಾಹೀರಾತನ್ನು ಬೇರೆ ಬೇರೆ ಭಾಷೆಗಳ ಟಿವಿ ಚಾನಲ್‌ಗಳಿಗೆ ಕಳಿಸಲಾಗುತ್ತದೆ. ಪ್ರತಿಯೊಂದು ಚಾನೆಲ್ಲಿನಲ್ಲೂ ಐದರಿಂದ ಆರವತ್ತುಸೆಕೆಂಡುಗಳವರೆಗಿನ ಜಾಹೀರಾತಿನ ಪ್ರಸಾರಕ್ಕಾಗಿ ಲಕ್ಷಾಂತರ ರೂಪಾಯಿಗಳ ಶುಲ್ಕ ನೀಡಬೇಕಾಗುತ್ತದೆ. ಉತ್ತಮ ಜಾಹೀರಾತು ಆಗಿದ್ದರೆ ಅದು ವೀಕ್ಷಕರ ಮನ ಸೆಳೆಯುತ್ತದೆ, ತನ್ನ ಬ್ರಾಂಡ್‍ಗಾಗಿ ಗ್ರಾಹಕರನ್ನು ನಿರ್ಮಿಸುತ್ತದೆ. ಕಂಪನಿಗೆ ಲಾಭ ಮಾಡಿಕೊಡುತ್ತದೆ. ಒಂದೊಳ್ಳೆ ಜನಪ್ರಿಯ ಜಾಹೀರಾತು ನಿಮ್ಮ ಕಂಪನಿಯ ಉತ್ಪನ್ನದ ಮಾರಾಟವನ್ನು ಎಷ್ಟೋ ಪಟ್ಟು ಹೆಚ್ಚಿಸಬಲ್ಲುದು. ಅಂದ ಹಾಗೆ, ಇದು ಎಂದಿಗೂ ನಿಂತು ಹೋಗದ ಮತ್ತು ಸ್ಥಗಿತವಾಗದ ಕ್ಷೇತ್ರ. ವ್ಯಾಪಾರ ಅನ್ನೋದು ಇರುವವರೆಗೆ ಜಾಹೀರಾತು ಇರಲೇಬೇಕಲ್ಲ!

-ಅವಿನಾಶ್ ಕಾಮತ್
ರಂಗಕರ್ಮಿ, ಡಬ್ಬಿಂಗ್‌ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT