ಬುಧವಾರ, ಆಗಸ್ಟ್ 10, 2022
23 °C

ಕ್ರಿಸ್‌ಮಸ್‌ ಸಂಭ್ರಮಕ್ಕೆ ಸರಳ ಅಲಂಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಈ ವರ್ಷ ಕೋವಿಡ್‌–19 ಆತಂಕದ ಮಧ್ಯೆ ವರ್ಷ ಉರುಳಿದ್ದೇ ಗೊತ್ತಾಗಲಿಲ್ಲ; ಹಬ್ಬಗಳು ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಾಸ, ಇತರ ಮನರಂಜನೆ.. ಎಲ್ಲವನ್ನೂ ಕೊರೊನಾ ನುಂಗಿ ಹಾಕಿಬಿಟ್ಟಿತು. ವರ್ಷವಿಡೀ ಕೋವಿಡ್‌ ಸುದ್ದಿ ಕೇಳಿ ಕೇಳಿ ಇತ್ತೀಚೆಗೆ ಸ್ವಲ್ಪ ನಿರಾಳರಾಗಿದ್ದೇವೆ. ಇದಕ್ಕೆ ಕಾರಣ ಲಸಿಕೆ. ಈ ಕೊಂಚ ಸಮಾಧಾನದ ಜೊತೆಗೆ ಕ್ರಿಸ್‌ಮಸ್ ಸಂದರ್ಭವೂ ಜೊತೆಗೂಡಿದೆ. ‍‍‍

ಈ ಬಾರಿ ಹಬ್ಬವನ್ನು ಮೊದಲಿನಷ್ಟು ವಿಜೃಂಭಣೆಯಿಂದ ಮಾಡುವ ಮನಸ್ಸಾಗಲಿ, ಪರಿಸ್ಥಿತಿಯಾಗಲಿ ಇಲ್ಲ. ಸರಳವಾಗಿ, ಆದರೆ ಸಂಪ್ರದಾಯಕ್ಕೆ ಚ್ಯುತಿ ಬರದಂತೆ ಆಚರಿಸಲು ಮನಸ್ಸು ಮಾಡುತ್ತಿರುವವರೇ ಹೆಚ್ಚು. ಪ್ರಸ್ತುತ ಪರಿಸ್ಥಿತಿಯಲ್ಲಿ ಮರುಬಳಕೆ ವಸ್ತುಗಳನ್ನು ಬಳಸಿ, ಕಡಿಮೆ ಖರ್ಚಿನಲ್ಲಿ ಹಬ್ಬವನ್ನು ಆಚರಿಸುವುದು ಅನಿವಾರ್ಯ ಕೂಡ. ಹಾಗಂತ ಹಬ್ಬದ ಸಂಭ್ರಮಕ್ಕೆ ಕೊರತೆ ಮಾಡಿಕೊಳ್ಳುವುದು ಬೇಡ. ಈ ಮರುಬಳಕೆಯ ವಸ್ತುಗಳಿಂದಲೇ ಕ್ರಿಯಾತ್ಮಕವಾಗಿ, ಸರಳ ಅಲಂಕಾರದ ಮೂಲಕ ಹಬ್ಬದ ಹುಮ್ಮಸ್ಸನ್ನು ಹೆಚ್ಚಿಸಿಕೊಳ್ಳಬಹುದು.

ಪೈನ್ ಮರದ ಹೂವು ಅಥವಾ ನಿಮ್ಮ ಆಯ್ಕೆಯ ಹಣ್ಣುಗಳಿಂದ ವಿಭಿನ್ನವಾಗಿ ಅಲಂಕಾರ ಮಾಡುವ ಬಗ್ಗೆ ಯೋಚಿಸಬಹುದು. ಅವುಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಗಾಳಿಯಲ್ಲಿ ಆರಲು ಬಿಟ್ಟು ನಂತರ ಅದನ್ನು ದಾರಕ್ಕೆ ಸಿಕ್ಕಿಸಿ ನೇತು ಹಾಕಬಹುದು. ದಾಲ್ಚಿನ್ನಿ ತುಂಡುಗಳು ಕ್ರಿಸ್‌ಮಸ್ ಅಲಂಕಾರಕ್ಕೆ ಹೇಳಿಮಾಡಿಸಿದಂತಹವು. ಒಂದು ದಾರಕ್ಕೆ ದಾಲ್ಚಿನ್ನಿ ತುಂಡು ಹಾಗೂ ಬಣ್ಣದ ಮೇಣದ ಬತ್ತಿಗಳನ್ನು ಕಟ್ಟಿ ವಿವಿಧ ರೀತಿಯಲ್ಲಿ ತೂಗು ಹಾಕಬಹುದು.

ಮನೆಯ ಮೂಲೆಯಲ್ಲಿ ಬಿದ್ದಿರುವ ಮರದ ತುಂಡುಗಳಿಂದ ತುಂಬಾ ಸುಂದರವಾಗಿ ಅಲಂಕಾರ ಮಾಡಬಹುದು. ಮರದ ತುಂಡುಗಳಿಗೆ ಬಣ್ಣ ಬಳಿದು ಬಿಸಿಲಿನಲ್ಲಿ ಒಣಗಿಸಿ. ನಂತರ ಅದನ್ನು ಏಣಿಯಂತೆ ಜೋಡಿಸಿ. ಅದರ ಎರಡೂ ಭಾಗಕ್ಕೆ ನೀಲಗಿರಿ ಎಲೆಯಿಂದ ಸುಂದರವಾಗಿ ಅಲಂಕರಿಸಬಹುದು. ಜೊತೆಗೆ ಎಲೆ ಒಣಗಿದಷ್ಟೂ ಅಲಂಕಾರ ಸುಂದರವಾಗಿ ಕಾಣುತ್ತದೆ.

ಹಲವರು ಇನ್ನೂ ಕೊರೊನಾ ಭಯದಿಂದ ಮನೆಯೊಳಗೆ ಇರಲು ಬಯಸುತ್ತಾರೆ. ಅಂತಹವರಿಗೆ ತಮ್ಮ ಕೌಶಲದಿಂದ ಈ ಬಾರಿ ಕ್ರಿಸ್ಮಸ್‌ ಅನ್ನು ಇನ್ನೂ ಅಲಂಕಾರಿಕವಾಗಿ ಮಾಡಲು ಸಾಧ್ಯ. ಒಂದು ಗಾಜಿನ ಜಾರ್ ತೆಗೆದುಕೊಳ್ಳಿ. ಅದರೊಳಗೆ ಬಣ್ಣ ದೀಪಗಳನ್ನು ಇರಿಸಿ. ಹೊರಗಡೆ ಸ್ವಲ್ಪ ಸ್ವಲ್ಪ ಜಾಗ ಬಿಟ್ಟು ಕೆಂಪು ಹಾಗೂ ಹಸಿರು ರಿಬ್ಬನ್ ಕಟ್ಟಿ. ಈ ರೀತಿ ಕೆಲವು ಜಾರ್‌ಗಳಿಗೆ ಮಾಡಿ ಮನೆಯೊಳಗೆ ಇರಿಸಿ. ಇವು ನಿಮ್ಮ ಕ್ರಿಯಾಶೀಲತೆಯನ್ನು ಎತ್ತಿ ಹಿಡಿಯುವುದಲ್ಲದೇ ಮನೆಯ ಅಂದವನ್ನು ಹೆಚ್ಚಿಸುತ್ತವೆ.

ಕ್ರಿಸ್‌ಮಸ್ ಗಿಡಕ್ಕೆ ನೀವೇ ಕುಳಿತು ಅಲಂಕಾರ ಮಾಡಬಹುದು. ಈಗ ಅನ್‌ಲೈನ್‌ನಲ್ಲಿ ಸುಲಭವಾಗಿ ಸಿಗುವ ದೀಪಗಳು, ಜಿಂಗಲ್‌ಬೆಲ್‌ಗಳು, ಪ್ಲಾಸ್ಟಿಕ್‌ ಹೂಗಳು ಇವುಗಳಿಂದ ತುಂಬಾ ಸುಂದರವಾಗಿ ನಿಮ್ಮ ಕೌಶಲ ಹಾಗೂ ಆಲೋಚನೆಗೆ ತಕ್ಕಂತೆ ಗಿಡವನ್ನು ಸಿಂಗರಿಸಬಹುದು. ಅಕ್ಕಿಯಲ್ಲಿ ವಿಭಿನ್ನ ರಂಗೋಲಿ ರಚಿಸಬಹುದು. ಅಕ್ಕಿಯನ್ನು ಬೇರೆ ಬೇರೆ ಬಣ್ಣದಲ್ಲಿ ಅದ್ದಿ ಅದರಲ್ಲಿ ರಂಗೋಲಿ ಬಿಡಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು