ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕು ಪ್ರಾಣಿಗಳಿಗೆ ಕೊರೊನಾ: ಸ್ವಚ್ಛತೆಯೇ ಮದ್ದು

Last Updated 10 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಕೋವಿಡ್-19 ಎಂಬ ಜಾಗತಿಕ ಪಿಡುಗಿಗೆ ಬಲಿಯಾಗುತ್ತಿರುವವರ ಸಂಖ್ಯೆ ಒಂದೇ ಸಮನೆ ಏರುತ್ತಿರುವ ಈ ಹೊತ್ತಿನಲ್ಲಿ ಪ್ರಾಣಿಗಳಲ್ಲೂ ಸೋಂಕಿನ ಕುರಿತಾಗಿ ಹೊರ ಬರುತ್ತಿರುವ ವಿಷಯಗಳು ಮತ್ತಷ್ಟು ಭೀತಿ ಹುಟ್ಟಿಸುತ್ತಿವೆ. ಭೇದಿ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬೆಲ್ಜಿಯಂನ ಬೆಕ್ಕೊಂದರಲ್ಲಿ ಕೊರೊನಾ–2 (ಸಾರ್ಸ್‌–ಕೋವ್‌–2) ರೋಗಾಣುಗಳು ಪತ್ತೆಯಾದ ವರದಿಯಾಗಿದೆ. ಹಾಂಗ್‌ಕಾಂಗ್‌ನಲ್ಲಿ ಪೊಮೇರಿಯನ್ ತಳಿಯ ಶ್ವಾನದಲ್ಲಿ ದುರ್ಬಲ ಕೊರೊನಾ ವೈರಾಣು ಕಂಡುಬಂದಿದೆ. ಕಾಯಿಲೆಯಿಂದ ಬಳಲುತ್ತಿದ್ದ ಮಾಲೀಕರಿಂದ ಈ ಮುದ್ದು ಪ್ರಾಣಿಗಳಿಗೆ ವೈರಾಣುಗಳು ಅಂಟಿವೆ ಎಂದು ಹೇಳಲಾಗಿದೆ.

ಈ ಮಧ್ಯೆ ನ್ಯೂಯಾರ್ಕ್‌ ಮೃಗಾಲಯದ ಹುಲಿಯೊಂದಕ್ಕೆ ಮಾನವ ಕೊರೊನಾ ಸೋಂಕು ತಗುಲಿರುವುದು ಬಹಿರಂಗವಾಗುತ್ತಿದ್ದಂತೆ ಆತಂಕ ಇನ್ನಷ್ಟು ಹೆಚ್ಚಿದೆ. ಕೆಮ್ಮು, ಉಸಿರಾಟದ ಸಮಸ್ಯೆ, ಮಂದ ಹಸಿವಿನಿಂದ ಬಳಲುತ್ತಿದ್ದ ಈ ಹುಲಿಯನ್ನು ಪರೀಕ್ಷೆಗೊಳಪಡಿಸಿದಾಗ ವೈರಾಣುಗಳು ಪತ್ತೆಯಾಗಿವೆ. ಮೃಗಾಲಯದ ಸೋಂಕಿತ ಸಿಬ್ಬಂದಿಯಿಂದ ಈ ವನ್ಯಜೀವಿಗೆ ಹರಡಿರಬಹುದೆಂದು ಶಂಕಿಸಲಾಗಿದೆ. ಇಂತಹ ಸುದ್ದಿಗಳ ನಡುವೆಯೆ ಸಾಕು ಪ್ರಾಣಿಗಳಿಂದ ಕೊರೊನಾ ಸೋಂಕು ಹರಡುತ್ತದೆಯೇ ಎಂಬ ಆತಂಕದ ಪ್ರಶ್ನೆ ಕೇಳಿ ಬರುತ್ತಿದೆ. ಬೆದರಿದ ಕೆಲವರು ತಾವು ಸಾಕಿದ ಮುದ್ದು ಪ್ರಾಣಿಗಳನ್ನು ದೂರ ಅಟ್ಟುತ್ತಿದ್ದಾರೆಂಬ ವರದಿಗಳಿವೆ.

ಕೊರೊನಾ ಎಂಬುದು ತುಂಬಾ ಹಿಂದೆಯೆ ಗುರುತಿಸಲಾದ ವೈರಾಣುಗಳ ಒಂದು ದೊಡ್ಡ ಗುಂಪು. ಕೆಲವು ವಿಧಗಳು ಮನುಷ್ಯರಲ್ಲಿ ಮತ್ತೆ ಕೆಲವು ಪಶು– ಪಕ್ಷಿಗಳಲ್ಲಿ ಸೋಂಕು ತರುತ್ತವೆ. ಮೂಲತಃ ಸೌಮ್ಯ ಸ್ವರೂಪದ ವ್ಯಾಧಿ ತರುವ ಈ ರೋಗಾಣುಗಳು ವಂಶವಾಹಿಯಲ್ಲಿ ಪರಿವರ್ತನೆಗೊಂಡು(ಮ್ಯುಟೇಶನ್) ತೀವ್ರ ಸೋಂಕು ಉಂಟು ಮಾಡುವ ರೂಪಕ್ಕೆ ಬದಲಾಗಿರುವುದೇ ಈಗಿನ ಪರಿಸ್ಥಿತಿಗೆ ಕಾರಣ.

*ಕೊರೊನಾ –2 ವೈರಾಣುಗಳು ಕಾಡು ಬಾವಲಿಗಳು, ಪೆಂಗೋಲಿನ್(ಇರುವೆಬಾಕ)ಗಳಿಂದ ಮಾನವನಿಗೆ ಹರಡಿರುವುದು ಇತ್ತೀಚಿನ ಅಧ್ಯಯನಗಳಿಂದ ಸಾಬೀತಾಗಿದೆ. ಆದರೆ ಈ ಪ್ರಾಣಿಜನ್ಯ ರೋಗ ಸಾಕುಪ್ರಾಣಿಗಳು, ಮುದ್ದು ಪ್ರಾಣಿಗಳಿಂದ ಬರಬಹುದು ಎಂಬುದಕ್ಕೆ ಯಾವುದೇ ಆಧಾರವಿಲ್ಲ.

*ನಾಯಿ, ಬೆಕ್ಕುಗಳಲ್ಲಿ ಸೌಮ್ಯ ಲಕ್ಷಣಗಳ ಕೊರೊನಾ ವೈರಾಣುಗಳು ಸ್ವಾಭಾವಿಕವಾಗಿ ಕಂಡು ಬಂದರೂ ಅವು ರಚನೆಯಲ್ಲಿ ಕೊರೊನಾ–2 ರೋಗಾಣುಗಳಿಗಿಂತ ವಿಭಿನ್ನವಾಗಿರುವುದರಿಂದ ಮಾನವರಿಗೆ ಸೋಂಕು ತರಲಾರವು.

*ಮಾನವ ಮತ್ತು ಪ್ರಾಣಿಗಳ ಜೀವಕೋಶಗಳ ರಚನೆಯಲ್ಲಿ ವ್ಯತ್ಯಾಸಗಳಿರುವುದರಿಂದ ನೋವೆಲ್ ಕೊರೊನಾ ವೈರಾಣುಗಳು ಮಾನವನ ದೇಹದಲ್ಲಿ ವೇಗವಾಗಿ ಬೆಳವಣಿಗೆಯಾಗುವಂತೆ ಪ್ರಾಣಿಗಳಲ್ಲಿ ವೃದ್ಧಿಯಾಗುವ ಸಾಧ್ಯತೆಗಳು ಕಡಿಮೆ. ಹಾಗಾಗಿ ಇವು ಸೋಂಕು ಹರಡುವ ಅಪಾಯವೂ ಕಮ್ಮಿ.

*ಸೋಂಕಿತ ವ್ಯಕ್ತಿಗಳ ಸಂಪರ್ಕದಲ್ಲಿರುವ ಬೆಕ್ಕು, ನಾಯಿಗಳ ಶರೀರದಲ್ಲಿ ಈ ರೋಗಾಣುಗಳು ಕಂಡು ಬಂದಿರುವ ವರದಿಗಳಿದ್ದರೂ ವೈರಾಣುಗಳ ಹೊರಮೈ ಪ್ರೊಟೀನ್ ರಚನೆ ಪ್ರಾಣಿ ಜೀವಕೋಶಕ್ಕೆ ಬೆಸೆದುಕೊಳ್ಳುವಂತೆ ಮಾರ್ಪಾಡಾಗದ ಹೊರತು ಸೋಂಕು ಹಬ್ಬಿಸುವ ಸಾಧ್ಯತೆಗಳಿಲ್ಲ. ಹಾಗಾಗಿ ಕೋವಿಡ್-19ಗೆ ಕಾರಣವಾಗುವ ವೈರಾಣುಗಳು ಮುದ್ದು ಪ್ರಾಣಿಗಳಿಂದ ಮಾನವನಿಗೆ ಹರಡುವ ಸಂಭವನೀಯತೆ ತುಂಬಾ ಕಡಿಮೆ. ಆದರೂ ಪ್ರಾಣಿಜನ್ಯ ರೋಗಗಳಿಂದ ದೂರವಿರಲು ಶುಚಿತ್ವದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು ಒಳಿತು.

ಕೋವಿಡ್-19 ಇತ್ತೀಚೆಗಷ್ಟೇ ಮಾನವರಲ್ಲಿ ಕಾಣಿಸಿಕೊಂಡ ಕಾಯಿಲೆ. ಹೀಗಾಗಿ ಈ ವೈರಾಣುಗಳು ಪ್ರಾಣಿಗಳಲ್ಲಿ ತಂದೊಡ್ಡಬಹುದಾದ ಸಮಸ್ಯೆಗಳ ಬಗ್ಗೆ ಇನ್ನಷ್ಟೇ ವ್ಯಾಪಕ ಅಧ್ಯಯನಗಳು ಆಗಬೇಕಿವೆ. ಸ್ವಚ್ಛತೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಸಂಭವನೀಯ ಅಪಾಯಗಳಿಂದ ದೂರವಿರುವ ಉತ್ತಮ ಮಾರ್ಗ.

(ಲೇಖಕರು, ಮುಖ್ಯ ಪಶುವೈದ್ಯಾಧಿಕಾರಿ, ತೀರ್ಥಹಳ್ಳಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT