ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾಣಗಳಲ್ಲಿ ಗೌರೀಪುತ್ರ

Last Updated 30 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಪ್ರಾಚೀನ ಕಾಲದಿಂದಲೂ ವಿಘ್ನನಿವಾರಣೆಗಾಗಿ ಗಣೇಶನ ಆರಾಧನೆ ನಡೆಯುತ್ತಾ ಬಂದಿದೆ. ಪುರಾಣಗಳಲ್ಲಿ ಗಣೇಶನ ಜನ್ಮ, ಮಹಿಮೆ, ಆರಾಧನೆಗಳನ್ನು ವೈವಿಧ್ಯಮಯವಾಗಿ ನಿರೂಪಿಸುವ ಅಧ್ಯಾಯಗಳಿವೆ. ಭವಿಷ್ಯ ಮಹಾಪುರಾಣದಲ್ಲಿ ಕೃಷ್ಣನು ಯುಧಿಷ್ಠಿರನಿಗೆ ‘ಮಾನವನು ಆರಂಭಿಸಿದ ಕಾರ್ಯಗಳು ನಿರ್ವಿಘ್ನವಾಗಿ ಸಿದ್ಧಿಸಲು ಸಮಸ್ತ ಸಂಕಷ್ಟಗಳಿಂದ ಪಾರಾಗಲು ವಿನಾಯಕನನ್ನು ಆರಾಧನೆಯಿಂದಷ್ಟೇ ಸಾಧ್ಯ. ಯಾವ ಕಾರ್ಯಾರಂಭ ಮಾಡಿದರೂ ಫಲ ಲಭಿಸದೆ ಇರುವುದು, ದುಃಸ್ವಪ್ನಗಳಿಂದ ಮನಸ್ಸು ಕ್ಲೇಶಕ್ಕೊಳಗಾಗುವುದು, ವಿದ್ಯಾರ್ಥಿಗೆ ಅಧ್ಯಯನ ಫಲ ದೊರಕದಿರುವುದು, ವ್ಯಾಪಾರಿಗೆ ಲಾಭವುಂಟಾಗದಿರುವುದು, ವ್ಯವಸಾಯಗಾರನಿಗೆ ಕೃಷಿಯಲ್ಲಿ ನಷ್ಟವನ್ನು ಉಂಟುಮಾಡುವುದು – ಇವೆಲ್ಲಾ ವಿಘ್ನದೇವತೆಗಳ ಕೋಪದ ಲಕ್ಷಣಗಳು. ಇಂತಹ ಸಮಯದಲ್ಲಿ ಕಾರ್ಯಸಿದ್ಧಿಗೆ ಪ್ರತಿಬಂಧವನ್ನುಂಟು ಮಾಡುವ ವಿಘ್ನದೇವತೆಗಳನ್ನು ಶಾಂತಗೊಳಿಸಲು ವಿನಾಯಕನಿಗೆ ಮಂಗಳಸ್ನಾನ, ಸ್ವಸ್ತಿವಾಚನ, ನೈವೇದ್ಯಗಳಿಂದ ಸಂತುಷ್ಟಗೊಳಿಸಬೇಕು’ ಎಂದು ಉಪದೇಶಿಸುತ್ತಾನೆ. ಅಷ್ಟೇ ಅಲ್ಲದೆ, ವಿನಾಯಕನ ಜೊತೆಗೆ ಅವನ ತಾಯಿಯಾದ ಗೌರಿಯನ್ನೂ ಪೂಜಿಸಿ ಪೂರ್ಣಫಲವನ್ನು ಪಡೆಯಬೇಕೆನ್ನುತ್ತಾನೆ.

ಪಾರ್ವತಿಯು ಮೈಯ ಕೊಳೆಯಿಂದ ಸೃಷ್ಟಿಯಾದ ಕುಮಾರ ಆಕೆಯ ಸ್ನಾನಗೃಹವನ್ನು ಕಾಯುತ್ತಿರುವಾಗ ಶಿವನ ಕೋಪಕ್ಕೆ ಗುರಿಯಾಗಿ ತಲೆಯನ್ನು ಕಳೆದುಕೊಂಡು ಅದರ ಬದಲಿಗೆ ಆನೆಯ ತಲೆಯನ್ನು ಪಡೆಯುವ ಪ್ರಸಿದ್ದ ಕಥೆ ಶಿವಪುರಾಣದ ರುದ್ರಸಂಹಿತೆಯ ಕುಮಾರಖಂಡದಲ್ಲಿ ಬರುತ್ತದೆ. ಆದರೆ ಇತರ ಪುರಾಣಗಳಲ್ಲಿ ಗಣೇಶನ ಜನನವನ್ನು ನಿರೂಪಿಸುವ ಕತೆಗಳು ಭಿನ್ನತೆಯಿಂದ ಕೂಡಿದ್ದು, ಬೇರೆ ಬೇರೆ ಕಲ್ಪಗಳಲ್ಲಿ ಗಣೇಶನ ಉತ್ಪತ್ತಿಯು ಬೇರೆ ಬೇರೆಯಾಗಿರುತ್ತದೆ ಎಂಬ ಸಮಾಧಾನದ ಮಾತು ಶಿವಪುರಾಣದಲ್ಲಿಯೇ ಬರುತ್ತದೆ.

ಬಹುತೇಕ ಕಥೆಗಳಲ್ಲಿ ಪಾರ್ವತಿಯು ತನ್ನ ಮೈಯ ಕೊಳೆಯಿಂದ, ಸ್ನಾನಚೂರ್ಣದಿಂದ ವಿನೋದಕ್ಕಾಗಿ ಗಂಗೆಯ ಮಣ್ಣಿನಿಂದ ಬಾಲಕನ ಗೊಂಬೆಯನ್ನು ನಿರ್ಮಿಸಿ ಜೀವ ತುಂಬಿ ಗಣೇಶನ ಜನ್ಮಕ್ಕೆ ಕಾರಣಳಾಗುತ್ತಾಳೆ. ವರಾಹಪುರಾಣದಲ್ಲಿ ಬರುವ ಪ್ರಸಂಗ ಇದಕ್ಕಿಂತ ಭಿನ್ನವಾಗಿದೆ. ಒಮ್ಮೆ ದೇವತೆಗಳೆಲ್ಲಾ ಕೈಲಾಸಕ್ಕೆ ತೆರಳಿ ‘ದುಷ್ಕಾಮನೆಗಳಿಂದ ಕೂಡಿದ ತಪಸ್ಸನ್ನು ಆಚರಿಸಿ ವರವನ್ನು ಪಡೆದು ಲೋಕಕಂಟಕರಾಗಿ ಧರ್ಮಾಚರಣೆಗೆ ಅಡ್ಡಿಯನ್ನು ಉಂಟುಮಾಡುವ ರಾಕ್ಷಸರ ತಪಸ್ಸು ಯಜ್ಞಯಾಗಾದಿಗಳಿಗೆ ವಿಘ್ನವನ್ನುಂಟು ಮಾಡು’ ಎಂದು ಶಿವನನ್ನು ಪ್ರಾರ್ಥಿಸುತ್ತಾರೆ. ಪ್ರಾರ್ಥನೆಯಿಂದ ಸಂತುಷ್ಟನಾದ ಶಿವನು ಪಾರ್ವತಿಯ ಮುಖವನ್ನು ನೋಡುತ್ತಾ ನಗಲು ಆ ತೇಜಸ್ಸಿನಿಂದ ವಿಘ್ನಕರ್ತನಾದ ವಿನಾಯಕನು ಜನಿಸಿದನೆಂದು ವರಾಹಪುರಾಣವು ಹೇಳುತ್ತದೆ; ಲಲಿತೋಪಾಖ್ಯಾನ ಹಾಗೂ ತ್ರಿಪುರಾರಹಸ್ಯಗಳಲ್ಲಿ ದೇವಿಯ ನಗುವಿನಿಂದ ವಿನಾಯಕನ ಜನನವಾಗುತ್ತದೆ!

ಭಂಡಾಸುರನ ಸೈನ್ಯದೊಡನೆ ಸೆಣಸಿ ಬಳಲಿದ ಶಕ್ತಿದೇವಿಯರು ಜ್ವಾಲಾಮಾಲಿನಿಯು ನಿರ್ಮಿಸಿದ ಅಗ್ನಿಯ ಕೋಟೆಯೊಳಗೆ ನಿದ್ರಿಸುತ್ತಾ ಇರುತ್ತಾರೆ. ಆಗ ವಿಶಕ್ರನೆಂಬ ದೈತ್ಯನು ಆಲಸ್ಯ, ನಿದ್ರಾ, ಕೃಪಣಾ, ದೀನಾ ಮೊದಲಾದ ದುರ್ದೇವತೆಗಳು ಕೂಡಿರುವ ವಿಘ್ನಯಂತ್ರವನ್ನು ಶಿಲಾಪಟ್ಟದ ಮೇಲೆ ನಿರ್ಮಿಸುತ್ತಾನೆ. ವಿಶುಕ್ರನ ತಮ್ಮ ವಿಷಂಗನು ಆ ಯಂತ್ರವನ್ನು ದೇವಿಯರಿರುವ ಪಾಳಯದೊಳಗೆ ಎಸೆದು ಬರುತ್ತಾನೆ. ಮುಂಜಾನೆ ನಿದ್ದೆಯಿಂದೆದ್ದ ಶಕ್ತಿಯರು ವಿಘ್ನಯಂತ್ರದ ಪ್ರಭಾವದಿಂದ ಕುಗ್ಗಿದ ಮನಸ್ಸುಳ್ಳವರಾಗಿ ನಿರುತ್ಸಾಹದಿಂದ ಶಸ್ತ್ರಗಳನ್ನು ಎಸೆಯುತ್ತಾರೆ. ಇವರ ಸ್ಥಿತಿಯನ್ನು ತಿಳಿದ ಲಲಿತೆಯು ತನ್ನ ನಲ್ಲನಾದ ಕಾಮೇಶ್ವರನ ಮುಖವನ್ನು ನೋಡುತ್ತಾ ಕೋಟಿಚಂದ್ರರಿಗೆ ಸಮನಾದ ಕಾಂತಿಯನ್ನು ಬೀರುವ ನಗೆಯನ್ನು ಚೆಲ್ಲಲು ಆ ಪ್ರಭಾಪುಂಜದಿಂದ ಗಜಮುಖನೂ, ದಶಭುಜಗಳಲ್ಲಿ ನಾನಾ ಆಯುಧಗಳನ್ನು ಧರಿಸಿದವನೂ ಆದ ಗಣೇಶನು ಹುಟ್ಟಿ ದೇವಿಯ ಆಜ್ಞೆಯಂತೆ ರಕ್ಕಸ ನಿರ್ಮಿತ ವಿಘ್ನಯಂತ್ರವನ್ನು ನಾಶಮಾಡುತ್ತಾನೆ.

ಗಣೇಶ ತನ್ನ ತಂದೆಯಾದ ಶಿವನಿಂದ ಮೊದಲ ಪೂಜೆಯನ್ನೂ ಪ್ರಮಥಗಣಗಳ ನಾಯಕತ್ವವನ್ನೂ ಪಡೆದರೆ, ತಾಯಿಯಿಂದ ಸರ್ವಶಾಸ್ತ್ರಗಳಿಗೂ ವಿದ್ಯೆಗಳಿಗೂ ಸಿದ್ಧಿಗಳಿಗೂ ಒಡೆತನವನ್ನು ಪಡೆದ ಸ್ವಾರಸ್ಯಕರ ಘಟನೆ ಪದ್ಮಪುರಾಣದಲ್ಲಿ ಬರುತ್ತದೆ. ದೇವತೆಗಳು ಒಮ್ಮೆ ಅಮೃತದಿಂದ ಮಾಡಿದ ಮೋದಕವನ್ನು ಪಾರ್ವತಿಗೆ ಅರ್ಪಿಸುತ್ತಾರೆ. ಮಕ್ಕಳಾದ ಗಣೇಶ–ಸ್ಕಂದರಿಬ್ಬರೂ ಅದನ್ನು ತಮಗೆ ಕೊಡುವಂತೆ ಕೇಳುತ್ತಾರೆ. ನಿಮ್ಮಿಬ್ಬರಲ್ಲಿ ಯಾರು ಶ್ರೇಷ್ಠರೋ ಅವರಿಗೆ ಕೊಡುವುದಾಗಿ ಪಾರ್ವತಿ ಹೇಳುತ್ತಾಳೆ. ತಕ್ಷಣವೇ ಸ್ಕಂದನು ನವಿಲನ್ನೇರಿ ಭೂಮಂಡಲವನ್ನು ತಿರುಗಿ ಎಲ್ಲ ತೀರ್ಥಗಳಲ್ಲಿ ಸ್ನಾನ ಮಾಡಿಕೊಂಡು ಬರುತ್ತಾನೆ. ಆದರೆ ಗಣೇಶನು ತಂದೆತಾಯಿಯರಿಗೆ ಪ್ರದಕ್ಷಿಣೆ ಮಾಡಿ ನಮಸ್ಕರಿಸುತ್ತಾನೆ. ಸರ್ವ ದೇವತೆಗಳನ್ನು ಪೂಜಿಸಿ ಸರ್ವತೀರ್ಥಗಳಲ್ಲಿ ಸ್ನಾನ ಮಾಡಿದವನ ಪುಣ್ಯವು ತಂದೆತಾಯಿಯರನ್ನು ಪೂಜಿಸಿದವನ ಪೂಜಿಸಿದವನ ಹದಿನಾರನೆಯ ಒಂದಂಶಕ್ಕೂ ಸಾಟಿಯಾಗದು ಎಂದು ಅಮೃತದಿಂದ ಮಾಡಿದ ಮೋದಕವನ್ನೂ ಸಕಲ ವಿದ್ಯೆಗಳಿಗೆ ಒಡೆತನವನ್ನೂ ಕೊಡುತ್ತಾಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT