ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪನ ಮೂರ್ತಿ ಮಾರಾಟ ಮಂದ

Last Updated 30 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಆರ್ಥಿಕ ಹಿಂಜರಿತದ ಬಿಸಿ ಈ ಬಾರಿಯ ಗಣೇಶ ಉತ್ಸವಕ್ಕೂ ತಟ್ಟಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಠಿಣ ನಿಯಮಾವಳಿಗಳು ಕೂಡ ಅಂಕುಶ ಹಾಕಿವೆ. ಇದರ ನೇರ ಪರಿಣಾಮ ಗಣೇಶ ಮೂರ್ತಿಗಳ ಮಾರಾಟಗಾರರು ಮತ್ತು ಸಾರ್ವಜನಿಕ ಗಣೇಶ ಉತ್ಸವ ಸಮಿತಿಗಳ ಮೇಲಾಗಿದೆ.

ಗಣೇಶ ಚತುರ್ಥಿಗೆ ಕೇವಲ ಮೂರು ದಿನ ಬಾಕಿ ಉಳಿದಿದ್ದರೂ ಮಾರುಕಟ್ಟೆಯಲ್ಲಿ ಮೊದಲಿನ ಸಡಗರ, ಸಂಭ್ರಮ ಕಾಣುತ್ತಿಲ್ಲ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಮಹಾರಾಷ್ಟ್ರ ಮತ್ತು ತಮಿಳುನಾಡಿನಿಂದತಂದಿರುವ ನೂರಾರು ಗಣಪತಿ ಮೂರ್ತಿಗಳು ಮಾರಾಟವಾಗದೆ ಉಳಿದಿವೆ. ಇದರಿಂದ ಮಾರಾಟಗಾರರ ಮುಖಗಳು ಕಳೆಗುಂದಿವೆ.

ಅಂಗೈಯಲ್ಲಿ ಹಿಡಿದುಕೊಳ್ಳಬಹುದಾದ ಚಿಕ್ಕ ಮೂರ್ತಿಯಿಂದ ಹಿಡಿದು ಐದು ಅಡಿ ಎತ್ತರದ ವಿಗ್ರಹಗಳು ಮಾರುಕಟ್ಟೆಗೆ ಬಂದು ತಿಂಗಳು ಕಳೆದರೂ ಮಾರಾಟವಾಗಿಲ್ಲ. ಮಾವಳ್ಳಿ, ವಿ.ವಿ. ಪುರಂ, ಜಯನಗರ, ಎನ್‌.ಆರ್. ಕಾಲೊನಿ, ಮಲ್ಲೇಶ್ವರ, ರಾಜಾಜಿನಗರ, ಬಸವನಗುಡಿ, ಯಶವಂತಪುರದಲ್ಲಿ ಗ್ರಾಹಕರು ಅಂಗಡಿಗಳತ್ತ ಸುಳಿಯುತ್ತಿಲ್ಲ.

ತುಂಬಾ ಡಲ್‌

ಗ್ರಾಹಕರಿಗಾಗಿ ಕಾಯ್ದು ಕುಳಿತ ವರ್ತಕರನ್ನು ಮಾತಿಗೆಳೆದಾಗ ‘ಅಯ್ಯೋ...ಈ ಬಾರಿ ವ್ಯಾಪಾರ ತುಂಬಾ ಡಲ್‌’ ಎಂದು ನಿರಾಸೆ ವ್ಯಕ್ತಪಡಿಸುತ್ತಾರೆ.

‘ಬಿಬಿಎಂಪಿ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಪ್ಲಾಸ್ಟರ್ ಆಫ್ ಪ್ಯಾರಿಸ್‌ (ಪಿಒಪಿ) ಮೂರ್ತಿಗಳನ್ನು ಮಾರಾಟ ಮಾಡದಂತೆ ಹೇಳಿದ್ದಾರೆ. ಆದರೆ, ಅಂಗಡಿಗೆ ಬರುವ ಹೆಚ್ಚಿನ ಗ್ರಾಹಕರು ‘ಪಿಒಪಿ’ ಮೂರ್ತಿಗಳನ್ನೇ ಕೇಳುತ್ತಿದ್ದಾರೆ. ಮಣ್ಣಿನ ಮೂರ್ತಿ ಖರೀದಿಸಲು ಗ್ರಾಹಕರು ಆಸಕ್ತಿ ತೋರಿಸುತ್ತಿಲ್ಲ’ ಎಂದು ಮಲ್ಲೇಶ್ವರದ 10ನೇ ಕ್ರಾಸ್‌ನಲ್ಲಿ ಮೂರ್ತಿ ಮಾರಾಟ ಮಾಡುತ್ತಿರುವ ಧನರಾಜ್‌ ಹೇಳುತ್ತಾರೆ.

‘ಮೂರು ತಲೆಮಾರುಗಳಿಂದ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದೇವೆ. ಈ ಮೊದಲು ಮಲ್ಲೇಶ್ವರದಲ್ಲಿದ್ದ ಐದು ಅಂಗಡಿಗಳಲ್ಲಿ ಮಾತ್ರ ಮೂರ್ತಿಗಳು ದೊರೆಯುತ್ತಿದ್ದವು. ಈಗ ಆ ಸಂಖ್ಯೆ 18ಕ್ಕೆ ಏರಿದೆ. ಇದರಿಂದ ವ್ಯಾಪಾರದಲ್ಲಿ ಪೈಪೋಟಿಯೂ ಹೆಚ್ಚಾಗಿದೆ. ಈ ಬಾರಿ ಆನ್‌ಲೈನ್‌ನಲ್ಲಿ ಬೇರೆ ಮೂರ್ತಿಗಳು ಮತ್ತು ಜೇಡಿ ಮಣ್ಣು ಮಾರಾಟ ಮಾಡುತ್ತಿದ್ದಾರೆ. ಇದರಿಂದಲೂ ವ್ಯಾಪಾರಕ್ಕೆ ಪೆಟ್ಟು ಬಿದ್ದಿದೆ’ ಎಂದು ಗೋಳು ತೋಡಿಕೊಂಡರು.

ಅಧಿಕಾರಿಗಳ ಅಂಕುಶ

ಪ್ರತಿ ದಿನ ಪೊಲೀಸರು, ಬಿಬಿಎಂಪಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಗಣೇಶ ಮೂರ್ತಿಯನ್ನು ನೀರಿನಲ್ಲಿ ಕರಗಿಸಿ ತೋರಿಸಿದ ನಂತರ ಮಾರಾಟಕ್ಕೆ ಅನುಮತಿ ನೀಡಿದ್ದಾರೆ. ಇದೇ ರೀತಿ ಮುಂದುವರಿದರೆ ಮುಂದಿನ ವರ್ಷಗಳಲ್ಲಿ ಮಾರಾಟವನ್ನೇ ಕೈ ಬಿಡಬೇಕು ಎನಿಸುತ್ತಿದೆ ಎಂದು ಬೇಸರ ತೋಡಿಕೊಂಡರು.

ಜೇಡಿಮಣ್ಣಿನ ಮೂರ್ತಿಗಳು ತುಂಬಾ ಭಾರ ಮತ್ತು ದುಬಾರಿ. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಮೂರ್ತಿಗಳು ಅಗ್ಗ, ಹಗುರ ಮತ್ತು ಆಕರ್ಷಕವಾಗಿರುತ್ತವೆ. ಆದರೆ, ನೀರಿನಲ್ಲಿ ಬೇಗ ಕರಗುವುದಿಲ್ಲ. ಜೇಡಿಮಣ್ಣಿನ ಮೂರ್ತಿಗಳು 20 ನಿಮಿಷದಲ್ಲಿ ಕರಗುತ್ತವೆ ಎಂದು ವಿವರಿಸಿದರು.

ಮಣ್ಣಿನ ಮೂರ್ತಿ ದುಬಾರಿ

ತಮಿಳುನಾಡಿನ ಕೃಷ್ಣಗಿರಿ ಮತ್ತು ಮಹಾರಾಷ್ಟ್ರದ ಶಿರಡಿ ಬಳಿಯ ‘ನಗರ’ ಎಂಬ ಊರಿನಿಂದ ಮಣ್ಣಿನ ಮೂರ್ತಿಗಳನ್ನು ತರಿಸಲಾಗಿದೆ. ಲಾರಿ ಬಾಡಿಗೆ, ಸಾಗಾಣಿಕೆ ವೆಚ್ಚವೇ ₹40 ಸಾವಿರ. ಇದರಿಂದ ಸಹಜವಾಗಿ ಮಣ್ಣಿನ ಗಣಪತಿ ದುಬಾರಿ’ ಎನ್ನುವುದು ವರ್ತಕ ಚಿಟ್ಟಿಬಾಬು ಅವರ ಅನಿಸಿಕೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ20 ರಿಂದ ಶೇ30ರಷ್ಟು ವಹಿವಾಟು ಇಳಿಮುಖವಾಗಿದೆ. ದೊಡ್ಡ ಮೂರ್ತಿಗಳಿಗೆ ಮೊದಲೇ ಆರ್ಡರ್‌ ನೀಡಲಾಗುತ್ತಿತ್ತು. ಈ ಬಾರಿ ಇದೂವರೆಗೂ ಇನ್ನೂ ಯಾವುದೇ ಆರ್ಡರ್‌ ಬಂದಿಲ್ಲ. ಇನ್ನೂ ಮೂರು ದಿನ ಬಾಕಿ ಇವೆ. ಕೊನೆಯ ಎರಡು ದಿನ (ಭಾನುವಾರ, ಸೋಮವಾರ) ಸಣ್ಣ ಮೂರ್ತಿಗಳು ಹೆಚ್ಚು ಬಿಕರಿಯಾಗುತ್ತವೆ ಎಂಬ ನಿರೀಕ್ಷೆಯಲ್ಲಿ ಬಾಬು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT