ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಇನ್ನೂ ಒಣಗದ ಪ್ರಸಂಗ

Last Updated 26 ನವೆಂಬರ್ 2021, 19:30 IST
ಅಕ್ಷರ ಗಾತ್ರ

ನಿರಂತರ ಮಳೆ ಸುರಿದು, ತೊಳೆದ ಬಟ್ಟೆ ಒಣಗದೇ, ಅಡುಗೆ ಮನೆ ಡಬ್ಬಗಳಲ್ಲಿ ಧಾನ್ಯಗಳೆಲ್ಲ ಮುದುಡಿ ಕೆಡುವಾಗ ಇವನ್ನೆಲ್ಲಾ ನಿರ್ವಹಿಸುವುದು ಹೇಗಪ್ಪಾ ಅನ್ನುವವರಿಗೆ ಒಂದಿಷ್ಟು ಟಿಪ್ಸ್‌ ಇಲ್ಲಿವೆ.

***

ಮಗಳು: ಅಯ್ಯೋ ಅಮ್ಮ, ಒಂದು ಬಟ್ಟೆನೂ ಒಣಗಿಲ್ಲವಲ್ಲೆ, ಹಿಂಗೆ ಮಳೆ ಸುರಿತಾ ಇದ್ರೆ ಒಂದು ಬಟ್ಟೆ ಅಂಗಡಿ ಕೊಂಡುಕೊಳ್ಳಬೇಕಾಗುತ್ತಾ ಅಂತ!

ಅಮ್ಮ: ಹೌದೇ ಪುಟ್ಟಿ, ಬಟ್ಟೆ ಒಣಗಿಲ್ಲ. ಬೆಳಿಗ್ಗೆ ಸ್ವಲ್ಪ ಬಿಸಿಲು ಕಣ್ಣು ಬಿಡ್ತು ಅಂತ ಬಟ್ಟೆ ಹೊರಗೆ ಹಾಕಿದ್ರೆ, 10 ನಿಮಿಷಕ್ಕೆ ಮಳೆ ಬಂತು. ಸ್ವಲ್ಪ ಒಣಗಿದ್ದ ಬಟ್ಟೆನೂ ಮತ್ತೆ ಒದ್ದೆ ಆಯ್ತು. ನಿನ್ನ ಟಾಪ್‌ ಅನ್ನು ಬಿಸಿ ಬಿಸಿ ಕುಕ್ಕರಿನ ಮೇಲೆ ಹಾಕಿದ್ದೇನೆ ನೋಡು. 10 ನಿಮಿಷ ಒಣಗುತ್ತೆ.

ಅಪ್ಪ: ಅಪ್ಪ, ಹೊಸ ಫರ್ನೀಚರ್‌ ತಂದು ಆರು ತಿಂಗಳು ಆಗಿಲ್ಲ. ಈ ಮಳೆಗೆ ಇವಕ್ಕೆಲ್ಲಾ ತೊನಸು ಬಂದು ಬಿಟ್ಟಿದೆ.

ಅಮ್ಮ: ಅಕ್ಕಿ, ಬೇಳೆ ಮುದ್ದೆಯಾಗಿದೆ. ಸಾಂಬಾರು ಪುಡಿ, ಮೆಣಸಿನ ಪುಡಿಯದ್ದೂ ಅದೇ ಕಥೆ. ಗೋಡಂಬಿ ಮೆತ್ತಗಾಗಿದೆ. ಎಲ್ಲವೂ ಗಟ್ಟಿ ಗಟ್ಟಿಯಾಗಿ ಕೂತಿದೆ.

***

ನವೆಂಬರ್‌ನಲ್ಲೂ ರಾಜ್ಯದಾದ್ಯಂತ ಸುರಿಯುತ್ತಿರುವ ಮಳೆ, ಮನೆ ಮನೆಗಳಲ್ಲಿ ಸೃಷ್ಟಿಸಿರುವ ಅವಾಂತರಗಳಿವು. ಕಳೆದ ಒಂದು ವಾರ ಮಳೆಯಾದಾಗ ಬಟ್ಟೆ ಒಣಗದೇ ಪರದಾಡಿದ್ದು ನೆನಪಾಯ್ತಲ್ಲವಾ? ಅವತ್ತು, ನಿಂತಲ್ಲಿ, ಕುಂತಲ್ಲಿ ಸ್ನೇಹಿತರು ಸಿಕ್ಕಲ್ಲಿ, ಕಚೇರಿಗಳಲ್ಲಿ ’ಬಟ್ಟೆ ಒಣಗಿಸುವುದೇ’ ಚರ್ಚೆ. ಸುರಿವ ಮಳೆ ಒಂದು ದಿನ ಬಿಡುವು ಕೊಟ್ಟಿತು ನೋಡಿ. ಆ ದಿನ ತೊಳೆಯದೆ, ಒಣಗದೇ ಇದ್ದ ಬಟ್ಟೆಗಳಿಗೆಲ್ಲ ಸೂರ್ಯನ ದರ್ಶನ ಮಾಡಿಸಿದ್ದಾಯ್ತು. ಸೂರ್ಯ ಕಣ್ಣು ಬಿಟ್ಟಿದ್ದೇ ತಡ ಎಲ್ಲರ ಮನೆಯ ತಾರಸಿಗಳ ಮೇಲೆ ಬಣ್ಣ ಬಣ್ಣದ ಬಟ್ಟೆಗಳ ಓಕುಳಿ! ಈ ದೃಶ್ಯದ ಒಂದು ಸಣ್ಣ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿತ್ತು. ಹಲವು ಮೀಮ್ಸ್‌ಗಳೂ ಬಂದವು. ಸೂಪರ್‌ಮ್ಯಾನ್‌ ಕೂಡ ಬೆಂಗಳೂರಿನ ಮಳೆ ಕಿರಿಕಿರಿ ಕೊಟ್ಟು ಚಡ್ಡಿ ಒಣಗದೇ ಟವಲ್‌ ಸುತ್ತಿಕೊಂಡಿದ್ದ! ಎಂಬ ಮೀಮ್ಸ್‌ಗಳು ವೈರಲ್‌ ಆಗಿವು.

ಮಲೆನಾಡಿನ ಪರಿಸ್ಥಿತಿ ಕೇಳುವಂತಿಲ್ಲ. ಆ ಭಾಗದವರಿಗೆ ಇದು ಸಾಮಾನ್ಯ. ಆ ಭಾಗದಲ್ಲೂ ಮಳೆಗಾದಲ್ಲಿ ಬಟ್ಟೆ ಒಣಗಿಸಲು, ನೀರು ಕಾಯಿಸುವ ಒಲೆಯ ಮುಂದೆ ಒಂದು ಗಳ ಅಡ್ಡ ಇಟ್ಟು ಅದರ ಮೇಲೆ ಒದ್ದೆ ಬಟ್ಟೆಗಳನ್ನು ಹರವುತ್ತಾರೆ. ಬೆಂಕಿಯ ಶಾಖಕ್ಕೆ ಒಣಗಿಕೊಳ್ಳು ತ್ತದೆ. ಬಟ್ಟೆ ಏನೋ ಒಣಗುತ್ತದೆ ನಿಜ. ಆದರೆ, ಅದರ ಜೊತೆಗೆ ಬೆಂಕಿ ವಾಸನೆಯೂ ಫ್ರೀ!

ಇನ್ನು ನಗರಗಳಲ್ಲಿ ಇಸ್ತ್ರಿ ಮಾಡಿಯೊ, ಕುಕ್ಕರು ಅಥವಾ ಚಪಾತಿ ಮಾಡಿದ ತವೆಯ ಮೇಲೆಯೋ ಬಟ್ಟೆ ಒಣಗಿಸುವಂತಹ ಅಭ್ಯಾಸವಿದೆ. ಈ ಮಳೆಗಾಲದಲ್ಲಿ ಬಟ್ಟೆ ಒಣಗಿಸುವುದಕ್ಕೆ ಎಂಥ ಐಡಿಯಾಗಳು ಹುಟ್ಟಿಕೊಂಡವು ನೋಡಿ. ಇನ್ನು ಮುಂದೆ ಮಳೆ ಆಗಾಗ್ಗೆ ಹೀಗೆ ’ಅಕಾಲಿಕ’ವಾಗುವ ಸಾಧ್ಯತೆ ಇದೆಯಂತೆ. ಹಾಗಾಗಿ, ಬಟ್ಟೆ ಒಣಗಿಸಲು ಒಂದಷ್ಟು ಐಡಿಯಾ ಬೇಕಲ್ಲವಾ? ಇಲ್ಲಿದೆ ನೋಡಿ, ಒಂದಷ್ಟು ಟಿಪ್ಸ್‌..

* ಒಂದು ಪಾತ್ರೆಯಲ್ಲಿ ನೀರನ್ನು ಬಿಸಿಗಿಡಿ, ಪಾತ್ರೆಯನ್ನು ತಟ್ಟೆಯಿಂದ ಮುಚ್ಚಿ. ನೀರು ಕುದಿಯಲು ಪ್ರಾರಂಭಿಸಿದಾಗ, ಒದ್ದೆ ಇರುವ ಬಟ್ಟೆಗಳನ್ನು ತಟ್ಟೆಯ ಮೇಲೆ ಹರವಿ. ಎರಡು ಉಪಯೋಗವಿದೆ. ಸ್ನಾನಕ್ಕೆ ನೀರನ್ನೂ ಕಾಯಿಸಿಕೊಳ್ಳಬಹುದು. ಬಟ್ಟೆಯೂ ಒಣಗುತ್ತದೆ

* ಕೈಯಲ್ಲಿ ಬಟ್ಟೆ ಒಗೆದಾಗ, ನೀರು ಇರದಂತೆ ಬಟ್ಟೆಯನ್ನು ಚೆನ್ನಾಗಿ ಹಿಂಡಿ ಒಣಗಿಸಬೇಕು.

* ಸಾಧ್ಯವಾದಷ್ಟು ಬೆಳಿಗ್ಗೆಯೇ ಬಟ್ಟೆಗಳನ್ನು ತೊಳೆದು ಒಣಗಿಸುವುದು ಒಳ್ಳೆಯದು. ನಾಳೆಗೇ ಹಾಕುವ ಬಟ್ಟೆ ಸಂಜೆಗೂ ಒಣಗದಿದ್ದರೆ ರಾತ್ರಿ ಫ್ಯಾನ್‌ನ ಕೆಳಗೆ ಹಾಕಿಡಿ.

* ಬಟ್ಟೆಯನ್ನು ಒಣಗಿಸುವಾಗ ಸುಕ್ಕು ಇರದಂತೆ ಒಣಗಿಸಿ. ಒಂದು ಬಟ್ಟೆಯಿಂದ ಇನ್ನೊಂದು ಬಟ್ಟೆಗೆ ಸ್ವಲ್ಪ ಅಂತರವಿರಲಿ. ಕ್ಲಾತ್‌ ಸ್ಟ್ಯಾಂಡ್‌ ಬಳಸುವುದು ಹೆಚ್ಚು ಉಪಕಾರಿ.

ಇದ್ಯಾವುದೂ ಕೆಲಸಕ್ಕೆ ಬರಲಿಲ್ಲ ಎಂದಾದರೆ, ಇಸ್ತ್ರೀ ಮಾಡುವುದು ಇದ್ದೇ ಇದೆಯಲ್ಲಾ.

ಅಡುಗೆ ವಸ್ತುಗಳು

ಮಳೆಗಾಲದಲ್ಲಿ ಬಟ್ಟೆಗಳದ್ದು ಒಂದು ಕಥೆಯಾದರೆ, ಅಡುಗೆ ಮನೆಯ ಡಬ್ಬದಲ್ಲಿರುವ ವಸ್ತುಗಳದ್ದು ಇದ್ದಲ್ಲೇ ಮುದುಡಿಬಿಡುತ್ತವೆ. ಕಾಳು, ಹಿಟ್ಟು ಗಂಟಾಗುತ್ತವೆ. ಗೋಡಂಬಿಯಂಥವು ಇಟ್ಟಲ್ಲೇ ಮೆತ್ತಗಾಗುತ್ತವೆ. ಈ ಸಮಸ್ಯೆಗೆ ಪರಿಹಾರ ಏನು ?

* ಗರಿ ಗರಿ ಪದಾರ್ಥಗಳು, ಗೋಡಂಬಿಯಂಥವುಗಳನ್ನು ಗಾಳಿಯಾಡದಂತೆ, ’ಏರ್‌ಟೈಟ್‌’ ಬಾಕ್ಸ್‌ನಲ್ಲಿ ಇಡುವುದು ಸೂಕ್ತ. ಜೊತೆಗೆ ಫ್ರಿಡ್ಜ್‌ನಲ್ಲೂ ಇಡಬಹುದು.

* ಹಳ್ಳಿಗಳಲ್ಲಿ ವರ್ಷಕ್ಕೆ ಬೇಕಾಗುವ ಬೆಳೆ–ಕಾಳುಗಳನ್ನು ಮಳೆಗಾಲ ಆರಂಭವಾಗುವ ಮುನ್ನವೇ ಒಮ್ಮೆಲೆ ತಂದಿಟ್ಟುಕೊಳ್ಳುವ ಪದ್ಧತಿ ಇದೆ. ಹೀಗೆ ತಂದ ಬೇಳೆ–ಕಾಳುಗಳನ್ನು ಸ್ವಚ್ಛ ಮಾಡಿ ಒಂದು ವಾರಗಟ್ಟಲೆ ಬಿರು ಬಿಸಿಲಿಗೆ ಇಟ್ಟು, ನಂತರ ಬೆಚ್ಚಗಿರುವ ಜಾಗದಲ್ಲಿ ಶೇಖರಿಸಿ ಇಡುತ್ತಾರೆ. ಹೀಗೆ ಮಾಡುವುದರಿಂದ ಮಳೆಗಾಲದಲ್ಲಿ ಬೇಳೆ–ಕಾಳುಗಳು ಹಾಳಾಗುವುದಿಲ್ಲ. ನಗರ ಪ್ರದೇಶಗಳಲ್ಲಿ ಇದು ಕಷ್ಟವಾದರೂ, ತಂದು ಇಟ್ಟುಕೊಂಡಿದ್ದನ್ನೇ ಬಿಸಿಲು ಇರುವಾಗ ಒಣಗಿಸಿ ನಂತರ ಶೇಖರಣೆ ಮಾಡಿದರೆ ಒಳಿತು

ಫರ್ನೀಚರ್‌ಗಳು...

* ಕಬೋರ್ಡ್‌ಗಳು, ಮರದ ವಸ್ತುಗಳಿಗೆ ಮಳೆಗಾಲದಲ್ಲಿ ತೊನಸು ಬರುತ್ತದೆ. ಬಿಳಿ ಬಳಿ ಲೇಯರ್‌ ಸೃಷ್ಟಿಯಾಗುತ್ತದೆ. ಇದನ್ನು ತಡೆಯಲು ಮನೆಯೊಳಗಿನ ತೇವಾಂಶ ನಿಯಂತ್ರಿಸಬೇಕು. ಜೊತೆಗೆ ಮರದ ವಸ್ತುಗಳು ಬೆಳಕು, ಗಾಳಿಗೆ ಹತ್ತಿರವಾಗಿದ್ದರೆ, ವಸ್ತುಗಳ ಜಾಗವನ್ನು ಬದಲಿಸಿ.

* ಮನೆಯಲ್ಲಿ ಅಲ್ಲಲ್ಲಿ ಕಲ್ಲು ಉಪ್ಪಿನ ಬ್ಯಾಗ್‌ಗಳನ್ನು ಇಡಿ. ಇದು ತೇವಾಂಶವನ್ನು ಹೀರಿಕೊಳ್ಳುತ್ತದೆ.

* ಬೇವಿನ ಎಲೆಗಳನ್ನು ಮರದ ವಸ್ತುಗಳ ಹತ್ತಿರ ಇಡಬಹುದು.

***

ಒಣಗದ ಒದ್ದೆ ಬಟ್ಟೆ ಕಥೆ ತಕ್ಷಣಕ್ಕೆ ಲಘು ಹಾಸ್ಯವೆನಿಸಿದರೂ, ಅದನ್ನು ಧರಿಸುವುದರಿಂದ ಆಗುವ ತೊಂದರೆಗಳು ತುಸು ಗಂಭೀರವೇ. ’ಒದ್ದೆ ಬಟ್ಟೆ ಧರಿಸುವುದಿರಂದ ಬ್ಯಾಕ್ಟೀರಿಯಾ ಅಥವಾ ಫಂಗಲ್‌ ಸೋಂಕು ಬರುತ್ತದೆ. ಕೆಲವೊಮ್ಮ ವ್ಯಾಯಾಮ ಮುಗಿಸಿದಾಗ, ಮಳೆಯಲ್ಲಿ ನೆನೆದು ಬಂದಾಗ ಬಟ್ಟೆ ಒದ್ದೆಯಾದರೆ, ಆ ತಕ್ಷಣದಲ್ಲಿ ಬದಲಾಯಿಸಬೇಕು. ಸರಿಯಾಗಿ ಒಣಗದಿರುವ ಬಟ್ಟೆ ಧರಿಸಿದರೂ ಇಂಥದ್ದೇ ಸಮಸ್ಯೆ. ಒಳಉಡುಪುಗಳನ್ನಂತೂ ಅವು ಒದ್ದೆಯಾಗಿದ್ದಾಗ ಬಳಸಲೇಬಾರದು’ ಎನ್ನುತ್ತಾರೆ ಚರ್ಮರೋಗತಜ್ಞೆ ಸಾಗರದ ಡಾ. ಆಶಾ ಪಿ.

‘ತುರಿಸುವುದು; ತುರಿಸಿದರೆ ಇನ್ನಷ್ಟು ದೊಡ್ಡ ಗಾಯ ಆಗುತ್ತದೆ. ಆಗಲೂ ಚಿಕಿತ್ಸೆ ಪಡೆಯದೇ ಹೋದರೆ, ಗಾಯ ಮೈತುಂಬಾ ಹರಡುತ್ತಾ ಹೋಗುತ್ತದೆ. ನಿಮ್ಮದೇ ವಿವೇಚನೆಯಲ್ಲಿ ಮನೆಮದ್ದು ಮಾಡಿಕೊಳ್ಳಿ. ಮೆಡಿಕಲ್ ಶಾಪ್‌ನಲ್ಲಿ ಪೌಡರ್ ಅಥವಾ ಕ್ರೀಂ ಖರೀದಿಸಿ ಉಪಯೋಗಿಸುವುದು ಒಳ್ಳೆಯದಲ್ಲ. ಇದು ಪ್ರಯೋಜನಕ್ಕಿಂತ ತೊಂದರೆಯೇ ಹೆಚ್ಚು’ ಎಂದು ಸಲಹೆ ನೀಡುತ್ತಾರೆ ಡಾ. ಆಶಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT