ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆಯ ದಿನವಲ್ಲ ಆಗಸ್ಟ್ 15

Last Updated 14 ಆಗಸ್ಟ್ 2019, 14:11 IST
ಅಕ್ಷರ ಗಾತ್ರ

ಐದು ವರ್ಷದ ಮಗು ಅಮ್ಮನಲ್ಲಿ ಕೇಳುತ್ತದೆ, `ಅಮ್ಮೋ ಸ್ವಾತಂತ್ರ್ಯ ದಿನಾಚರಣೆ ಎಂದರೇನು? ಅದಕ್ಕೆ ಅಮ್ಮ, `ಅದು ನಿನಗೆ ಈಗ ಅರ್ಥವಾಗುವುದಿಲ್ಲ ಮಗು. ದೊಡ್ಡ ಕ್ಲಾಸಿಗೆ ಹೋದ ಮೇಲೆ ಗೊತ್ತಾಗುತ್ತದೆ. ಇವತ್ತು ನಿಂಗೆ ಶಾಲೆಗೆ ರಜೆ, ಹೋವಂರ್ಕ್ ಇದ್ರೆ ಮಾಡಿ ಮುಗಿಸು. ಇಲ್ಲಾಂದ್ರೆ ಫ್ರೆಂಡ್ಸ್ ಜೊತೆ ಆಟವಾಡು ಹೋಗು' ಎಂದು ಸಮಾಧಾನ ಮಾಡುತ್ತಾಳೆ. ಆದರೆ, ಸ್ವಾತಂತ್ರ್ಯದ ಬಗ್ಗೆ ಮಗು ಕೇಳಿದ ಪ್ರಶ್ನೆ ಮಾತ್ರ ಅದರ ಮನಸ್ಸಿನಲ್ಲಿ ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ.

ನಗರ ಪ್ರದೇಶಗಳಲ್ಲಿ ಕೆಲವು ಪೋಷಕರು ಸ್ವಾತಂತ್ರ್ಯ ದಿನಾಚರಣೆಯಂದು ತಮ್ಮ ಕಚೇರಿಗೆ ರಜೆ, ಮಗುವಿಗೂ ಶಾಲೆಗೆ ರಜೆ ಇದೆ ಎಂದು ಹೊರಗೆ ಸುತ್ತಾಡುವುದಕ್ಕೆ ಹೋಗಲು ನಾಲ್ಕು ದಿನ ಮೊದಲೇ ಯೋಜನೆ ಹಾಕಿಕೊಳ್ಳುತ್ತಾರೆ. ವಾರಾಂತ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಬಂದರಂತೂ ಒಟ್ಟಿಗೇ ಎರಡು ಮೂರು ದಿನ ರಜೆ ಹಾಕಿ ಪ್ರವಾಸ ಹೊರಟುಬಿಡುತ್ತಾರೆ.

ಎಲ್ಲ ಶಾಲೆಗಳಲ್ಲೂ ಆ ದಿನ ಧ್ವಜಾರೋಹಣ ಕಾರ್ಯಕ್ರಮ ಇದ್ದರೂ ಹಲವು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ಇಲ್ಲ. ಆ ದಿನ ರಜೆ ಎಂದೇ ಹಲವರ ಅಭಿಪ್ರಾಯ. ಇಂತಹ ಸಂದರ್ಭಗಳಲ್ಲಿ ಮಕ್ಕಳಿಗೆ ನಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ಅದರ ಇತಿಹಾಸ, ಆಚರಣೆಯ ಅಗತ್ಯದ ಬಗ್ಗೆ ಗೊತ್ತಾಗುವುದೇ ಇಲ್ಲ.

ಇದೆಲ್ಲವನ್ನೂ ಮಕ್ಕಳಿಗೆ ತಿಳಿಸಿ ಅವರಲ್ಲಿ ರಾಷ್ಟ್ರ ಪ್ರೇಮವನ್ನು ಬೆಳೆಸುವುದು ಈ ದಿನಾಚರಣೆಯ ಹಿಂದಿನ ಉದ್ದೇಶ. ಹೀಗಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸುವುದರಲ್ಲಿ ಶಾಲೆಗಳು ಮತ್ತು ಶಿಕ್ಷಕರಿಗೆ ಎಷ್ಟು ಜವಾಬ್ದಾರಿ ಇರುತ್ತದೋ ಪೋಷಕರಿಗೂ ಅಷ್ಟೇ ಕಾಳಜಿ ಇರಬೇಕಾಗುತ್ತದೆ.

ಹಾಗೆಂದರೇನು?

ಸ್ವಾತಂತ್ರ್ಯ ದಿನಾಚರಣೆ ಎಂಬುದು ಪ್ರತಿ ದೇಶದ ರಾಷ್ಟ್ರೀಯ ಹಬ್ಬ, ಒಂದು ಐತಿಹಾಸಿಕ ದಿನ. ಇದರ ಹಿಂದೆ ದೀರ್ಘ ಇತಿಹಾಸ ಇರುತ್ತದೆ. ಆ ದೇಶದಲ್ಲಿ ಹುಟ್ಟಿದ ಎಲ್ಲ ಪ್ರಜೆಗೂ ಸ್ವಾತಂತ್ರ್ಯ ದಿನಾಚರಣೆ ಎಂದರೇನು, ಅದನ್ನು ಏಕೆ, ಯಾವಾಗ ಆಚರಿಸುತ್ತಾರೆ, ಅದರ ಹಿಂದಿನ ಕಥೆಯೇನು ಎಂಬುದು ತಿಳಿದಿರಬೇಕಾಗುತ್ತದೆ. ನಾಲ್ಕೈದು ವರ್ಷದ ಮಗು ಸ್ವಾತಂತ್ರ್ಯ ದಿನಾಚರಣೆ ಬಂದಾಗ `ಹಾಗೆಂದರೇನು?' ಎಂದು ಕೇಳಿಯೇ ಕೇಳುತ್ತದೆ.

ಆಗ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಘಟನೆಯನ್ನು ವಿವರಿಸಲು ಹೊರಟರೆ ಪುಟ್ಟ ಮಕ್ಕಳಿಗೆ ಅರ್ಥವಾಗುವುದಿಲ್ಲ. ಅವರ ವಯೋಮಾನಕ್ಕೆ ತಕ್ಕಂತೆ ಅರ್ಥವಾಗುವ ರೀತಿಯಲ್ಲಿ ಅವರ ಭಾಷೆಯಲ್ಲೇ ಸುತ್ತಮುತ್ತಲಿನ ವಿದ್ಯಮಾನಗಳನ್ನು ಇಟ್ಟುಕೊಂಡು ಸರಳವಾಗಿ ಅರ್ಥ ಮಾಡಿಸಬೇಕಾದದ್ದು ಹೆತ್ತವರ, ಪೋಷಕರ ಕರ್ತವ್ಯ.

`ಇಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ದಿನ. ನಿನಗೆ ಮನೆಯಲ್ಲಿ ಆಟವಾಡಲು, ಹೊರಗೆ ಫ್ರೆಂಡ್ಸ್ ಜೊತೆ ಓಡಾಡಲು, ಸಂಜೆ ಬೋರಾದಾಗ ಪಾರ್ಕ್‌ಗೆ ಹೋಗಲು ಅಪ್ಪ, ಅಮ್ಮ ನಿನ್ನನ್ನು ಬಿಡುತ್ತಾರಲ್ಲವೇ? ರಜೆಯ ದಿನ ನಿನಗೆ ಇಷ್ಟ ಬಂದಂತೆ ಇರಲು ಅವಕಾಶ ಕೊಡುತ್ತಾರಲ್ಲವೇ? ಅದು ಸ್ವಾತಂತ್ರ್ಯ. ನಮಗೆ ಹೊರಗೆ ಓಡಾಡಲು ಯಾರ ಭಯವೂ, ಯಾರ ಹಂಗೂ ಇಲ್ಲದಿರುವುದೇ ಸ್ವಾತಂತ್ರ್ಯ' ಎಂದು ಹೇಳಿದರೆ ಮಗುವಿಗೆ ಅರ್ಥವಾಗುತ್ತದೆ. ಈ ಮೂಲಕ ಮಕ್ಕಳಿಗೆ ನಮ್ಮ ದೇಶದ ಸ್ವಾತಂತ್ರ್ಯ ಎಂದರೇನು, ಅದು ಹೇಗೆ ಸಿಕ್ಕಿತು ಎಂದು ವಿವರಿಸಿದರೆ ಅರ್ಥವಾಗಬಹುದು.

ಸ್ವಾತಂತ್ರ್ಯ ದಿನಾಚರಣೆಯಂದು ಎಲ್ಲ ಶಾಲೆಗಳಲ್ಲಿ ಧ್ವಜಾರೋಹಣ ಇರುತ್ತದೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ. ಅಲ್ಲಿ ಮಕ್ಕಳ ಪ್ರತಿಭೆ ಅನಾವರಣಕ್ಕೊಂದು ವೇದಿಕೆ ಸಿಗುತ್ತದೆ. ಈ ದಿನದಂದು ಸ್ವಾತಂತ್ರ್ಯದ ಮಹತ್ವ ಸಾರುವ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಕ್ರಿಯಾತ್ಮಕ ಚಿತ್ರಗಳನ್ನು ಬಿಡಿಸಿ ಅದನ್ನು ಶಾಲೆಗೆ ತೆಗೆದುಕೊಂಡು ಹೋಗಲು ಮಕ್ಕಳಿಗೆ ಪೋಷಕರು ಪ್ರೇರಣೆ ನೀಡಬೇಕು. ಆಗ ಶಾಲೆಯಲ್ಲಿ ಶಿಕ್ಷಕರು ಸಹ ಅಂತಹ ಮಕ್ಕಳನ್ನು ಗುರುತಿಸಿ ಅವರ ಪ್ರತಿಭೆ ಬೆಳೆಯಲು ಅವಕಾಶ ನೀಡುತ್ತಾರೆ.

ಸ್ವಾತಂತ್ರ್ಯ ದಿನಾಚಣೆಯಂದು ಪೋಷಕರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ ಅಲ್ಲಿ ಧ್ವಜಾರೋಹಣ ಹೇಗೆ ಮಾಡುತ್ತಾರೆ, ಯಾವ ರೀತಿ ಆಚರಿಸುತ್ತಾರೆ ಎಂದು ತೋರಿಸಿದರೆ ಮಕ್ಕಳಿಗೂ ಖುಷಿಯಾಗುತ್ತದೆ. ಅನೇಕ ವಿಷಯಗಳನ್ನು ಅವರು ತಿಳಿದುಕೊಳ್ಳುತ್ತಾರೆ. ಬಾವುಟ ಹಾರಿಸುತ್ತಾ, ಆಟವಾಡುತ್ತಾ, ತಿಂಡಿ ತಿನ್ನುತ್ತಾ ಸಂತೋಷದಿಂದ ಕಾಲ ಕಳೆಯುತ್ತಾರೆ. ಇದು ಒಂದು ಭಾಗವಾದರೆ, ಇದರ ಜೊತೆಗೆ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದು ಮುಖ್ಯ.

ನಮ್ಮ ದೇಶದ ಬಾವುಟ ಹೇಗಿರುತ್ತದೆ, ಅದರ ಬಣ್ಣ ಯಾವುದು ಎಂಬುದನ್ನು ಸಹ ತಿಳಿಸಬೇಕು. ಸ್ವಲ್ಪ ದೊಡ್ಡ ಮಕ್ಕಳಿಗೆ ಈ ದೇಶಕ್ಕೆ ಸ್ವಾತಂತ್ರ್ಯ ಹೇಗೆ ಬಂತು, ಅದಕ್ಕಾಗಿ ಶ್ರಮಿಸಿದವರು ಯಾರು, ಅದರ ಇತಿಹಾಸ ಮೊದಲಾದವುಗಳನ್ನು ವಿವರಿಸಬೇಕು. ಸ್ವಾತಂತ್ರ್ಯ ದಿನಾಚರಣೆಯಂದು ನಡೆಯುವ ಭಾಷಣ, ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೇರೇಪಿಸುವುದು, ದಿನಾಚರಣೆಗೆ ಸಂಬಂಧಿಸಿದ ಅನೇಕ ಚಟುವಟಿಕೆಗಳನ್ನು ಅವರ ಕೈಯಿಂದ ಮಾಡಿಸುವುದರಿಂದ ಮಕ್ಕಳಲ್ಲಿ ಆಸಕ್ತಿ ಹುಟ್ಟುತ್ತದೆ.

ಈ ಎಲ್ಲ ಅಂಶಗಳು ಮಕ್ಕಳಲ್ಲಿ ರಾಷ್ಟ್ರ ಪ್ರೇಮವನ್ನು ಬೆಳೆಸುತ್ತವೆ. ಕೇವಲ ಸ್ವಾತಂತ್ರ್ಯ ದಿನಾಚರಣೆಯೊಂದೇ ಅಲ್ಲ, ನಮ್ಮ ಎಲ್ಲ ರಾಷ್ಟ್ರೀಯ ಹಬ್ಬಗಳನ್ನೂ ಮಕ್ಕಳಿಗೆ ಪರಿಚಯ ಮಾಡಿಸಿ, ಅವರು ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಾಗಿರುವುದು ಪೋಷಕರ ಜವಾಬ್ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT