ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇಡ ಕಡಜ

Last Updated 31 ಜುಲೈ 2022, 19:30 IST
ಅಕ್ಷರ ಗಾತ್ರ

ಹೈಮೆನೋಪ್ಟೆರ ಎಂಬ ಗುಂಪಿನಲ್ಲಿ ಬಹಳಷ್ಟು ಕಡಜಗಳು ಪರಭಕ್ಷಕ ಮತ್ತು ಪರತಂತ್ರ ಕೀಟಗಳು. ಜೇಡವೂ ಸಹ ಒಂದು ಪರಭಕ್ಷಕ ಜೀವಿಯಾಗಿದ್ದು ಅದನ್ನೇ ಬೇಟೆಯಾಡಬಲ್ಲ ಪರಭಕ್ಷಕ ಕೀಟ ಈ ಜೇಡ ಕಡಜ.

ಜೇಡ ಕಡಜ(Spider wasp), ಹೆಸರೇ ಹೇಳುವಂತೆ ಇದು ವಿವಿಧ ಜೇಡಗಳನ್ನು ಆಕ್ರಮಿಸಿ ತನ್ನ ವಿಷಮುಳ್ಳಿನಿಂದ ಪಕ್ಷವಾತ (Paralyze) ಅಥವಾ ಪಾರ್ಶ್ವವಾಯುಗೊಳಿಸುತ್ತದೆ. ನಂತರ ಆ ಜೇಡವನ್ನು ತನ್ನ ಬಾಯಿಯಲ್ಲಿ ಕಚ್ಚಿ ತಂದು ನೆಲದೊಳಗೆ ತಾನು ಮಾಡಿರುವ ಗೂಡು ತೂಬಿನಲ್ಲಿಡುತ್ತದೆ. ನಂತರ ಅದರ ಮೇಲೆ ತನ್ನದೊಂದು ಮೊಟ್ಟೆಯನ್ನಿಟ್ಟು ಗೂಡನ್ನು ಮುಚ್ಚುತ್ತದೆ. ಪುನಃ ಸತ್ತ ಇರುವೆಗಳನ್ನು ಹೊತ್ತು ತಂದು ತನ್ನ ಗೂಡಿನ ಸುತ್ತಲು ಆವರಿಸುತ್ತದೆ. ಈ ಇರುವೆಗಳಲ್ಲಿರುವ ರಾಸಾಯನಿಕದಿಂದ ಇತರೆ ಕೀಟಗಳು ಗೂಡನ್ನು ಪ್ರವೇಶಿಸದಂತೆ ವಿಸರ್ಜಿಸುವ ಕ್ರಿಯೆಯೂ ವಿಸ್ಮಯಕಾರಿ.

ಒಂದೆರೆಡು ದಿನಗಳ ನಂತರ ಜೇಡದ ಮೈಮೇಲಿಟ್ಟ ಕಡಜದ ಮೊಟ್ಟೆಯೊಡದು ಹೊರಬಂದ ಮರಿಯು ಜೇಡದ ಮೃದು ಅಂಗಾಂಗಗಳನ್ನು ತಿನ್ನುತ್ತಾ ಬೆಳೆಯುತ್ತದೆ. ಬೇಟೆಯಾಡಿದ ಜೇಡವನ್ನು ಇದು ಕೊಲ್ಲುವುದಿಲ್ಲ. ಆದರೆ, ಕಾಲಕ್ರಮೇಣ ತನ್ನ ಮರಿ ಹಂತಗಳಿಗೆ ಹಂತಹಂತವಾಗಿ ಆಹಾರ ಸಿಗಲೆಂದು ಕೋಶಾವಸ್ಥೆಯವರೆಗೆ ಜೇಡವನ್ನು ತಿನ್ನಬೇಕಾದ್ದರಿಂದ ಒಂದೇ ಬಾರಿಗೆ ಸಾಯಿಸುವುದಿಲ್ಲ. ಅಂತಿಮ ಹಂತ ತಲುಪಿದ ಕಡಜದ ಮರಿಯು ಮುಂದುವರೆದು ರೇಷ್ಮೆಯಂತಹ ದಾರದೆಳೆಗಳನ್ನು ಹೆಣೆಯುತ್ತ ಕೋಶಾವಸ್ಥೆಗೆ ತಲುಪುತ್ತದೆ.

ಪಾಂಪಿಲಿಡೆ(Pompilidae) ಕುಟುಂಬದ ಈ ಕಡಜ ಒಂಟಿ ಜೀವನ ನಡೆಸಬಲ್ಲ ಕೀಟ. ಬಹಳ ಬಲಿಷ್ಠ ಹಾಗೂ ವೇಗ ಗತಿಯಲ್ಲಿ ಇದು ವಾಯುಯಾನ ಮಾಡಬಲ್ಲದು. ಇದರ ಮುಂಗಾಲುಗಳು ನೆಲವನ್ನು ಅಗೆಯಲು ಸಹಕಾರಿಯಾಗಿದ್ದು ಎದೆಯ ಮಾಂಸಖಂಡಗಳು ಇದಕ್ಕಾಗಿಯೇ ಬಹಳ ಬಲಿಷ್ಠವಾಗಿವೆ.

ಈ ಜೇಡ ಕಡಜಗಳು ಹೂವುಗಳಿಂದ ಮಕರಂದ ಹೀರಿ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತವೆ. ನೀಲಗಿರಿ ಹೂವುಗಳೆಂದರೇ ಇವಕ್ಕೆ ಬಹಳ ಇಷ್ಟ. ಗಂಡು ಕಡಜಗಳು ಸಮಾಗಮಕ್ಕೆಂದೇ ಹೆಣ್ಣು ಕಡಜಗಳನ್ನು ಆಹ್ವಾನಿಸಲು ಸೂಕ್ತ ಸ್ಥಳ(Perch territories)ಗಳನ್ನು ನಿಗದಿ ಪಡಿಸಿಕೊಳ್ಳುತ್ತವೆ. ಇಂತಹ ಸ್ಥಳಗಳಲ್ಲಿ ಒಂದೆಡೆ ಕೂತು ಅಲ್ಲಿ ಸುಳಿದಾಡುವ ಹೆಣ್ಣುಗಳಲ್ಲಿ ಸೂಕ್ತ ಹೆಣ್ಣು ಯಾವುದೆಂದು ಹೊಂಚು ಹಾಕುತ್ತ ಅದರೊಟ್ಟಿಗೆ ಸಮಾಗಮವಾಗುತ್ತದೆ. ವಿವಿಧ ಕಾಂತಿಯುತ ಬಣ್ಣಗಳಲ್ಲಿ ದಕ್ಕುವ ಈ ಜೇಡ ಕಡಜಗಳಲ್ಲಿ 4500ಕ್ಕೂ ಹೆಚ್ಚು ವಿಧಗಳಿವೆ.

→ಲೇಖಕರು: ಕೃಷಿ ಅಧಿಕಾರಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT