ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗು ನಗುತ ಬಾಳ್

Last Updated 7 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಬದುಕಿನಲ್ಲಿ ನಗೆಯೆಂಬುದು ಅಪರಮಿತ ಮೌಲ್ಯಯುಳ್ಳ ಸರಕು. ಅದು ನೀಡುವವರಿಗೂ ಪಡೆಯುವವರಿಗೂ ಸಂತೋಷವನ್ನು ನೀಡುವಂಥದ್ದು. ಜೊತೆಗೆ ಎದುರಿಗಿದ್ದ ವ್ಯಕ್ತಿ ನಕ್ಕಾಗ ಇತ್ತ ಕಡೆಯಿಂದಲೂ ನಗುವುದು ಅನಿವಾರ್ಯ ಕ್ರಿಯೆ. ಜೊತೆಗೆ ನಗೆಯಿಂದ ಮುಖದ ಸ್ನಾಯುಗಳು ಹೆಚ್ಚು ಸಡಿಲಗೊಂಡು ಮುಖಕಮಲವು ಅರಳುತ್ತದೆ. ಮನುಷ್ಯ ಮೂಲತಃ ಆನಂದಸ್ವರೂಪಿ. ಆನಂದವೇ ಬ್ರಹ್ಮ ಎಂದು ವೇದವು ಘೋಷಿಸುತ್ತದೆ. ಭಗವಂತನು ಕೂಡ ಆನಂದರೂಪಿಯಾದ್ದರಿಂದ, ಮನುಷ್ಯನು ಅವನ ಪ್ರತಿರೂಪವಾಗಿ ಆನಂದದಲ್ಲಿ ಇರಬೇಕಾದದ್ದು ಸಹಜ. ಆದರೆ ಇದನ್ನು ಮರೆತ ಮನುಷ್ಯಜೀವಿ ಮತ್ತೆ ಅದೇ ಆನಂದವನ್ನು ಪಡೆಯುವ ಮಾರ್ಗವನ್ನು ಹಿಡಿಯಬೇಕು.

‘ಕನ್ನಡದ ಗೀತೆ’ ಎನಿಸಿಕೊಂಡ ಕಗ್ಗದಲ್ಲಿ ನಗುವನ್ನು ಕುರಿತಂತೆ ಡಿ.ವಿ.ಜಿ.ಯವರು ನಗು ಮತ್ತು ಅಳುವನ್ನು ‘ರಸಪಾಕ’ ಎನ್ನುತ್ತಾರೆ. ನಗುವ ವ್ಯಕ್ತಿಯನ್ನು ‘ಪರಿಮಳವನ್ನು ಹರಡುವ ಹೂವಿನಂತೆ’ ಎಂದು ತಿಳಿಸುತ್ತಾರೆ. ಮತ್ತೊಂದು ಪದ್ಯದಲ್ಲಿ ಎಳೆಯ ಸಸಿ ದಿನದಿಂದ ದಿನಕ್ಕೆ ಹೊಸ ಚಿಗುರನ್ನು ಪಡೆವಂತೆ, ಚಿಲುಮೆಯಲ್ಲಿ ತಿಳಿ ನೀರು ನಿಲ್ಲದೆ ಸತತ ಉಕ್ಕುವಂತೆ, ಎಳೆಯ ಮಕ್ಕಳಲ್ಲಿ ತಿಳಿವು ಮೊಳೆತು ಬೆಳೆಯುವುದು ಇಳೆಯ ಸೊಗಸು ಎನ್ನುವ ‘ತಿಮ್ಮಕವಿ’ ಸೂಕ್ಷ್ಮವಾಗಿ ಈ ತಿಳಿಳಿಕೆಯು ನಗೆಯ ರೂಪದಲ್ಲಿ ವ್ಯಕ್ತವಾಗುತ್ತದೆ ಎಂದು ಸೂಚಿಸುತ್ತಾರೆ.

ವರಕವಿ ಬೇಂದ್ರೆಯವರು ನಗೆಯನ್ನು ಮತ್ತೊಂದು ರೀತಿಯಲ್ಲಿ ‘ಹಾಸ್ಯಕಿರಣತದನುಸರಣ, ತದಿತರ ಪಥಕಾಣೆನಾ’ ಎಂದಿದ್ದಾರೆ. ಕಿರಣಗಳು ಬೆಳಕನ್ನು ಸೂಸುವಂತೆ ಮತ್ತು ಅದು ಪ್ರತಿಬಿಂಬಿತವಾಗುವಂತೆ ಮನುಜರ ನಗೆ, ಆನಂದದ ಅಭಿವ್ಯಕ್ತಿಗೆ ಇತರ ಮಾರ್ಗವಿಲ್ಲ ಎಂದು ಬೇಂದ್ರೆ ಇಲ್ಲಿ ಸೂಚಿಸುತ್ತಾರೆ. ಬೀಚಿಯವರು ಬಹಳ ಮೊನಚಾಗಿ ಹೀಗೆ ಹೇಳಿದ್ದಾರೆ: ‘ನಗಿಸುವನು ತಿಂಮಪ್ಪ ನಗುವವನು ನಮ್ಮಪ್ಪ, ನಗುನಗುತ ನಗಿಸುವನು ಎಲ್ಲರಪ್ಪ; ನಗಲಾರದವನ ಕತ್ತೆ ಎಂದೊಡೆ, ಅಗಸನಾ ಕತ್ತೆ ಅತ್ತಿತ್ತೋ ತಿಂಮ.’ ಸೃಷ್ಟಿಯ ಯಾವ ಪ್ರಾಣಿಯೂ ಸಂತೋಷವನ್ನು ಈ ಬಗೆಯಲ್ಲಿ ಅಂದರೆ ಮುಖದ ಮೇಲಿನ ಮಂದಹಾಸದೊಂದಿಗೆ ವ್ಯಕ್ತಪಡಿಸಲಾರದು. ಆದರೆ ಮನುಷ್ಯರಿಗೆ ಮಾತ್ರ ಅದಕ್ಕೆ ತಕ್ಕಂತಹ ಮೊಗದ ಲಕ್ಷಣವನ್ನು ನೀಡಲಾಗಿದೆ. ಗಂಟುಮೋರೆಗಿಂತ ನಗುಮೊಗದ ವ್ಯಕ್ತಿಯನ್ನು ಎಲ್ಲರೂ ಕಾಣಬಯಸುತ್ತಾರೆ. ಜಗತ್ತನ್ನು ಕನ್ನಡಿಗೆ ಹೋಲಿಸಲಾಗಿದೆ. ಅಥವಾ ಪ್ರತಿಧ್ವನಿಗೂ ಅನ್ವಯಿಸುವಂತೆ ಜಗದತ್ತ ಮೊಗ ಮಾಡಿ ನಕ್ಕಾಗ ಅದು ನಮ್ಮನ್ನು ನೋಡಿ ಮರುನಗೆ ನೀಡುತ್ತದೆ. ನಾವು ಅತ್ತರೆ ಅದು ನಮ್ಮನ್ನು ನೋಡಿ ಅಳುತ್ತದೆ. ಮೂಲತಃ ಆನಂದಸ್ವರೂಪಿಯೇ ಆದ ಮನುಷ್ಯ ನಗುತ್ತ ಬದುಕುವುದನ್ನು ಕಲಿಯಬೇಕು. ಕಗ್ಗ ಇದನ್ನು ಸೊಗಸಾಗಿ, ‘ನಗುವುದು ಸಹಜದ ಧರ್ಮ, ನಗಿಸುವುದು ಪರಧರ್ಮ; ನಗುವ ಕೇಳುತ ನಗುವುದತಿಶಯದಧರ್ಮ, ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ಮಿಗೆ ನೀನು ಬೇಡಿಕೊಳೊ’ ಎಂದು ಹೇಳುತ್ತಾ ಜೀವನದಲ್ಲಿ ನಗುವಿನ ಮೌಲ್ಯ ಎಷ್ಟು ಮುಖ್ಯವಾದುದು ಎಂಬುದನ್ನು ತಿಳಿಸುತ್ತದೆ.

ಸಾಹಿತ್ಯದಲ್ಲೂ ನಗೆಗೆ ಪ್ರಮುಖವಾದ ಸ್ಥಾನವಿದೆ. ರಾಷ್ಟ್ರಕವಿ ಕುವೆಂಪು ಅವರು ತಮ್ಮ ‘ರಾಮಾಯಣದರ್ಶನಂ’ ಮಹಾಕಾವ್ಯದಲ್ಲಿ ಒಂದು ಸಂದರ್ಭದಲ್ಲಿ ನಗುವನ್ನು ರಸವತ್ತಾಗಿ ತಂದಿದ್ದಾರೆ. ಅಭ್ಯಾಸವಿರದ ಸೀತೆ ಹಸಿ ಸೌದೆಯಲ್ಲಿ ಅಡುಗೆ ಮಾಡಿ ಹೊಗೆಯಿಂದ ಉಂಟಾದ ಇರಿಸು ಮುರಿಸನ್ನು ನೀಗಿಕೊಳ್ಳಲು ಮಸಿ ಮೆತ್ತಿದ ತನ್ನ ಕೈಗಳನ್ನು ಬಳಸಿಕೊಂಡಾಗ ಮೋರೆಯಲ್ಲಾ ಮಸಿಯಾಗಿ ಹೋದುದನ್ನು ಗಂಡ ಮತ್ತು ಮೈದುನನಿಗೆ ತಿಳಿಸುವ ಸಂದರ್ಭದಲ್ಲಿ ಅವರು ಅದನ್ನು ಉಲ್ಲಾಸದಿಂದ ಕೇಳಿ ಮಧ್ಯೆ ಮಧ್ಯೆ ನಗುವುದನ್ನು ಚಿತ್ರಿಸಿದ್ದಾರೆ. ‘ನಗುತಳ್ಳೆಬಿರಿವಂತೆ’ ಆ ನಗುವಿತ್ತು ಎಂದು ಕವಿ ತಿಳಿಸುತ್ತಾರೆ. ಈ ಬಗೆಯ ನಗುವಿಗೆ ಸ್ವಪ್ರತಿಷ್ಠೆ ಅಹಂಕಾರ ಸಂಬಂಧಗಳ ತೊಡಕು ಇರುವುದಿಲ್ಲ. ಮುಕ್ತವಾಗಿ ನಗಲು ಹೃದಯ ಮುಗ್ಧವಾಗಿರಬೇಕು, ಮನಸ್ಸು ನಿರಳವಾಗಿರಬೇಕು. ಬಲವಂತದ ನಗೆ ಸೊಗವನ್ನು, ಮುದವನ್ನು ನೀಡುವುದಿಲ್ಲ. ಮಕ್ಕಳು ನಗುವಾಗ ಅಲ್ಲಿ ಯಾವ ಬಗೆಯ ಕೃತ್ರಿಮತೆಯೂ ಇರುವುದಿಲ್ಲ. ಅಂತಹ ನಗು ಮಾತ್ರ ಕಡಲ ಮುತ್ತಿನಂತೆ ಮನೋಹರವಾಗಿ ಮುದವನ್ನು ನೀಡಬಲ್ಲದು.

ಖಲೀಲ್ ಗಿಬ್ರಾನ್ ನಗುವನ್ನು ಕುರಿತು ಹೀಗೆ ಹೇಳುತ್ತಾನೆ: ‘ನನ್ನ ಎದೆಯ ನಗೆಯನ್ನು ನೂರು ಸಾವಿರ ನಿಧಿಯ ಕಾರಣಕ್ಕೂ ವಿನಿಮಯಿಸಲಾರೆ.’ ಈ ಮಾತಿನ ಹಿಂದೆ ಜೀವನದ ಸಂತೃಪ್ತಿ ನಗೆಯ ಮೂಲಕ ವ್ಯಕ್ತವಾಗುತ್ತದೆಯೇ ಹೊರತು ಇನ್ನಾವ ತೋರಾಣಿಕೆಯ ಮೂಲಕವೂ ಅಲ್ಲ ಎಂಬ ಸೂಚನೆಯಿದೆ. ಮತ್ತೊಂದೆಡೆಯಲ್ಲಿ ಅವನು ಜೀಸಸ್ ಮತ್ತು ಭಗವಂತ ಕಾಡಿನಲ್ಲಿ ಒಟ್ಟಿಗೆ ಕೂತು ಮಾತನಾಡುವ ಬಗ್ಗೆ ಚಿತ್ರಿಸುತ್ತ, ‘ಅವರಿಬ್ಬರೂ ಹೊಳೆಯ ಬದಿಯಲ್ಲಿ ಕುಳಿತು ತಮ್ಮ ತಮ್ಮ ಮಾತುಗಳನ್ನು ಹಂಚಿಕೊಂಡರು ಮತ್ತು ಜೀಸಸ್‍ನ ನಗೆ ಭಗವಂತನದ್ದಕ್ಕಿಂತ ಹೆಚ್ಚು ಉಲ್ಲಸಿತವಾಗಿತ್ತು’ ಎನ್ನುತ್ತಾನೆ. ಎಂದರೆ ಆನಂದಸ್ವರೂಪಿಯಾದ ಭಗವಂತನಿಗಿಂತ ಅವನ ಭಕ್ತಿಯಲ್ಲಿ ಮತ್ತನಾದ ಭಕ್ತನ ನಗೆ ಇನ್ನೂ ಸೊಗಸಾಗಿರುತ್ತದೆ ಎಂಬುದನ್ನು ಸೂಚಿಸುತ್ತಾನೆ. ಇದನ್ನೇ ಪುರಂದರದಾಸರು ‘ನೀನ್ಯಾಕೋ ನಿನ್ನ ಹಂಗ್ಯಾಕೋ’ ಎಂದು ಹಾಡಿ ಕುಣಿಯುತ್ತಾರೆ.

ಯಾವುದೇ ಅವತಾರಪುರುಷ ತಾನು ನಗೆಯಲ್ಲಿ ಮಿಂದು ಜಗತ್ತನ್ನು ನಗಿಸಿ ನಲಿದು, ಕುಣಿದು ಮರೆಯಾಗುತ್ತಾನೆ. ಹೀಗೆ ಅಶಾಶ್ವತವಾದ ಬದುಕಿನಲ್ಲಿ ನಗೆಯೆಂಬುದು ಶಾಶ್ವತ ಮೌಲ್ಯ. ಇಂತಹ ನಗೆ ನಮ್ಮದಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT