ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೋಬಲ–ಸ್ವಯಂ ರಕ್ಷಣೆಗೆ ‘ಸಮರ ಕಲೆ’

Last Updated 17 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಇದು ಮೂರು ತಿಂಗಳ ಹಿಂದಷ್ಟೇ ಹುಬ್ಬಳ್ಳಿಯ ಜನನಿಬಿಡ ಪ್ರದೇಶ ಕಿಮ್ಸ್ ಸರ್ಕಲ್‌ನಲ್ಲಿ ನಡೆದ ಘಟನೆ. ಅಂದು ಸಂಜೆ 6.45 ಗಂಟೆಗೆ ಎಂದಿನಂತೆ ನಾನು ಕಚೇರಿಗೆ ಹೊರಟಿದ್ದೆ. ಆಗ ಆಗಂತುಕನೊಬ್ಬ ನನ್ನನ್ನು ಹಿಂಬಾಲಿಸುತ್ತಿದ್ದ. ಕೊನೆಗೆ ಭುಜಕ್ಕೆ ಭುಜ ತಾಗಿಸುವಷ್ಟು ಹತ್ತಿರ ಬಂದು ನಿಂತ. ಅವನ ಅಸಭ್ಯ ವರ್ತನೆ ನನ್ನ ತಾಳ್ಮೆಗೆಡಿಸಿತು. ‘ಯಾಕೆ ನನ್ನ ಫಾಲೊ ಮಾಡ್ತಿದ್ದಿಯಾ? ಪೊಲೀಸ್‌ಗೆ ಹೇಳ್ತಿನಿ ನೋಡು’ ಎಂದೆ. ಅದಕ್ಕೂ ಬಗ್ಗದೇ, ಅಸಭ್ಯ ವರ್ತನೆ ಮುಂದುವರಿಸಿದ. ತಕ್ಷಣ ನಾನು ಸಮೀಪದ ಪೊಲೀಸ್‌ ಠಾಣೆ ಹಾಗೂ 112 ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಕಚೇರಿ ಸಹೋದ್ಯೋಗಿಗಳಿಗೂ ತಿಳಿಸಿದೆ. ಪೊಲೀಸರು ಬರುವುದು ವಿಳಂಬವಾಯಿತು. ಅಷ್ಟರೊಳಗೆ ನನ್ನ ಸಹೋದ್ಯೋಗಿಗಳೇ ಬಂದರು. ಅವರನ್ನು ನೋಡಿ ಆತ ಪರಾರಿಯಾಗಲು ಯತ್ನಿಸಿದ. ನಾನು ಅವನ ಕೊರಳಪಟ್ಟಿ ಹಿಡಿದು ಬಾರಿಸಲು ಶುರುಮಾಡಿದೆ. ಒಂದೆರಡು ಕಿಕ್‌ ಕೊಟ್ಟೆ. ನಂತರ ಪೊಲೀಸರು ಬಂದರು. ಆತನನ್ನು ಪೊಲೀಸರಿಗೆ ಒಪ್ಪಿಸಿಯೂ ಆಯಿತು.

20 ವರ್ಷಗಳ ಹಿಂದೆ ಕಲಿತಿದ್ದ ಕರಾಟೆಯ ಪಟ್ಟುಗಳು ನನಗೆ ಅಂದು ಸಹಾಯಕ್ಕೆ ಬಂತು. ಕರಾಟೆಯಿಂದ ನನ್ನಲ್ಲಿ ವೃದ್ಧಿಯಾದ ಆತ್ಮವಿಶ್ವಾಸ, ಮನೋಬಲ ಆವತ್ತಿನ ಸನ್ನಿವೇಶವನ್ನು ಧೈರ್ಯವಾಗಿ ಎದುರಿಸಲು ನೆರವಾಯಿತು.

ನನಗೆ ಇದೇ ಸಂದರ್ಭದಲ್ಲಿ ಮತ್ತೊಂದು ಘಟನೆ ನೆನಪಾಗುತ್ತಿದೆ. ಆ ಘಟನೆಯ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ವಿಡಿಯೊ ತುಣುಕಿನಲ್ಲಿ, ಯುವತಿಯೊಬ್ಬಳು ಕಾಲೇಜಿಗೆ ಹೋಗುತ್ತಿದ್ದಾಗ, ಆಕೆಯನ್ನು ಒಬ್ಬ ವ್ಯಕ್ತಿ ಬೈಕ್‌ನಲ್ಲಿ ಹಿಂಬಾಲಿಸುತ್ತಾನೆ. ಆಕೆ ಅಂಜುತ್ತಾ ದಾರಿಯಲ್ಲೇ ನಿಲ್ಲುತ್ತಾಳೆ. ಅದೇ ವೇಳೆಗೆ ಪಕ್ಕದಲ್ಲಿ ಮಹಿಳಾ ಪೌರಕಾರ್ಮಿ ಕರೊಬ್ಬರು ಕೋಲಿಗೆ ಕಸಬರಿಗೆ ಕಟ್ಟಿಕೊಂಡು ಕಸ ಗುಡಿಸುತ್ತಿರುತ್ತಾರೆ. ಆ ಯುವತಿ ಆಕೆಯ ಕೈಯಿಂದ ಪೊರಕೆ ಕಟ್ಟಿದ ಕೋಲು ತೆಗೆದುಕೊಂಡಿದ್ದೇ, ಅದನ್ನೇ ಲಾಠಿಯಂತೆ ತಿರುಗಿಸಲು ಆರಂಭಿಸುತ್ತಾಳೆ. ಇದನ್ನು ನೋಡಿದ ಆ ವ್ಯಕ್ತಿ ಅಲ್ಲಿಂದ ಕಾಲ್ಕೀಳುವ ದೃಶ್ಯವಿತ್ತು.

***

ನನ್ನ ಅನುಭವ ಮತ್ತು ಈ ಮೇಲೆ ವಿವರಿಸಿದ ಘಟನೆ ಮಹಿಳೆಯರಿಗೆ ಸ್ವಯಂ ರಕ್ಷಣಾ ವಿದ್ಯೆಯ ಅಗತ್ಯವನ್ನು ಒತ್ತಿ ಹೇಳುತ್ತವೆ. ಈಗಿನ ಕಾಲದಲ್ಲಿ ಮಹಿಳೆಯರಿಗೆ ಆತ್ಮಬಲ ವೃದ್ಧಿಸುವ ಪಾಠದ ಜೊತೆಗೆ, ಸ್ವಯಂರಕ್ಷಣೆ ಜ್ಞಾನ, ತಂತ್ರಗಳನ್ನು ಕಲಿಸಬೇಕು ಎಂಬುದನ್ನೂ ಸೂಚಿಸುತ್ತವೆ.

ಪ್ರತಿ ಮಹಿಳೆಯೂ ಬಾಲ್ಯದಿಂದ ಮುಪ್ಪಿನವರೆಗೆ ಬದುಕಿನುದ್ದಕ್ಕೂ ಒಂದಿಲ್ಲೊಂದು ರೀತಿ ದೌರ್ಜನ್ಯ, ಶೋಷಣೆ, ಕಿರುಕುಳವನ್ನು ಎದುರಿಸಿರುತ್ತಾಳೆ. ಇಂಥ ಕಹಿ ಘಟನೆಗಳು ಶಾಲೆ, ಕಾಲೇಜು, ಟ್ಯೂಷನ್‌ ತರಗತಿ, ವಾಹನಗಳಲ್ಲಿ ಪ್ರಯಾಣಿಸುವಾಗ, ಅಷ್ಟೇ ಏಕೆ ನಡೆದು ಹೋಗುವಾಗಲೂ ನಡೆಯಬಹುದು. ಆಗ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಲು ಆಕೆಗಿರುವ ಅಸ್ತ್ರವೇ ಆತ್ಮಸ್ಥೈರ್ಯ. ಈ ಆತ್ಮಸ್ಥೈರ್ಯ ಕರಾಟೆ, ಜೂಡೊ, ಟೇಕ್ವಾಂಡೊ, ಕುಸ್ತಿ, ಕಳರಿಪಯಟ್ಟಿನಂಥ ಸಮರಕಲೆಗಳಿಂದ ಬರುತ್ತದೆ. ಹೆಣ್ಣುಮಕ್ಕಳಿಗೆ ಬಾಲ್ಯದಿಂದಲೇ ಈ ಕಲೆ ಕರಗತವಾಗಬೇಕು. ಶಾಲೆಗಳಲ್ಲಿ ಶಿಕ್ಷಣದ ಪಠ್ಯದ ಜೊತೆಗೆ ಇವುಗಳನ್ನೂ ಕಲಿಸುವಂತಾಗಬೇಕು. ಆದರೆ ನಮ್ಮಲ್ಲಿ ಎಷ್ಟು ಮಂದಿ ಪಾಲಕರು/ ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಸಮರ ಕಲೆ ಕಲಿಸುತ್ತಿದ್ದಾರೆ? ಇತ್ತೀಚಿನ ವರ್ಷಗಳಲ್ಲಿ ಕೆಲವು ಶಾಲೆಗಳಲ್ಲಿ ಕರಾಟೆಯನ್ನು ಪಠ್ಯೇತರ ಚಟುವಟಿಕೆಯಾಗಿ ವಾರಕ್ಕೊಂದು ತರಗತಿ ಕಲಿಸಲಾಗುತ್ತಿದೆ. ಇದು ಸಮಾಧಾನದ ಸಂಗತಿ, ಅಷ್ಟೇ.

‘ಪ್ರಸ್ತುತ ಸನ್ನಿವೇಶದಲ್ಲಿ ಹೆಣ್ಣುಮಕ್ಕಳಿಗೆ ಸಮಗ್ರ ವ್ಯಕ್ತಿತ್ವ ವಿಕಸನದಲ್ಲಿ ಸ್ವಯಂರಕ್ಷಣಾ ಕಲೆ ಅತ್ಯಂತ ಮಹತ್ವವಾಗಿದೆ. ಇದನ್ನು ಬಾಲ್ಯದಿಂದಲೇ ಕಲಿಸಬೇಕು’ ಎನ್ನುತ್ವಾರೆ ಮನೋವೈದ್ಯ ಡಾ.ಆನಂದ ಪಾಂಡುರಂಗಿ.

‘ಈಗ ಹೆಣ್ಣುಮಕ್ಕಳ ಮುಗ್ಧತೆಯ ದುರ್ಬಳಕೆ ತಪ್ಪಿಸಲು ಶಾಲೆ ಮತ್ತು ಮನೆಗಳಲ್ಲಿ ಬಾಲಕಿಯರಿಗೆ ‘ಒಳ್ಳೆಯ ಸ್ಪರ್ಶ, ಕೆಟ್ಟ ಸ್ಪರ್ಶ’ಗಳ (ಗುಡ್ ಟಚ್ – ಬ್ಯಾಡ್ ಟಚ್‌) ಅರಿವು ಮೂಡಿಸಲಾಗುತ್ತಿದೆ. ಇದರ ಜೊತೆಗೆ, ಕರಾಟೆ, ಜೂಡೊ, ಟೇಕ್ವಾಂಡೊದಂತಹ ಸಮರಕಲೆಗಳ ತರಬೇತಿ ಕೊಡಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಇಂಥ ಕಲೆಗಳ ತರಬೇತಿ ಪಡೆದವರ ಮನೋಬಲ ಹೆಚ್ಚುತ್ತದೆ. ಅದು ಸಹಜವಾಗಿ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ’ ಎಂದುಅವರು ವಿಶ್ಲೇಷಿಸುತ್ತಾರೆ.

‘ಕೆಟ್ಟ ಸನ್ನಿವೇಶಗಳು ಎದುರಾದಾಗ, ಅವುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಮೊದಲು ಮನಸ್ಸು ನಿರ್ಣಯಿಸುತ್ತದೆ. ಮನೋಬಲ ಗಟ್ಟಿಯಿದ್ದಾಗ ದೈಹಿಕವಾಗಿ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಗಲಿದೆ. ಮನಸ್ಸು ಮತ್ತು ದೈಹಿಕಕ್ಷಮತೆ ಒಂದಕ್ಕೊಂದು ಕೊಂಡಿಯಂತೆ. ಮನೋಬಲ ಗಟ್ಟಿಯಾಗಿದ್ದಾಗ ದೈಹಿಕ ಬಲವೂ ಜೊತೆಯಾಗಲಿದೆ. ಸ್ವಯಂರಕ್ಷಣೆಯಲ್ಲಿ ಕಲಿತ ಪಂಚ್‌, ಕಿಕ್‌ಗಳನ್ನು ಬಳಸಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಪೋಷಕರು ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ಸ್ವಯಂರಕ್ಷಣಾ ಕಲೆ ತರಬೇತಿ ಕೊಡಿಸುವುದು ಇಂದಿನ ಅಗತ್ಯಗಳಲ್ಲೊಂದು’ ಎನ್ನುತ್ತಾರೆ ಅವರು.

ಡಬಲ್‌ ಬ್ಲ್ಯಾಕ್‌ ಬೆಲ್ಟ್‌ ಶ್ರೇಣಿ ಪಡೆದಿರುವಕರಾಟೆ ಪಟು ಪೂಜಾ ಮಿಸ್ಕಿನ್‌, ‘ಕರಾಟೆ ಕಲಿತಿರುವುದರಿಂದ ನನ್ನಲ್ಲಿ ಆತ್ಮವಿಶ್ವಾಸ, ಧೈರ್ಯ ಹೆಚ್ಚಿದೆ. ಭಯವಿಲ್ಲದೆ ಓಡಾಡುವೆ. ಶಾಲೆ–ಕಾಲೇಜುಗಳಲ್ಲಿ ವಿವಿಧ ಕ್ರೀಡೆಗಳಲ್ಲಿ ಆತ್ಮವಿಶ್ವಾಸದಿಂದ ಪಾಲ್ಗೊಂಡು ಪ್ರಶಸ್ತಿ ಪಡೆಯಲು ಸಹಾಯವಾಗಿದೆ’ ಎನ್ನುತ್ತಾರೆ.

ಪೂಜಾ ಸಹೋದರಿ ಪ್ರಿಯಾ ಮಿಸ್ಕಿನ್‌ ಕೂಡ ಕರಾಟೆಯಲ್ಲಿ ಬ್ಲ್ಯಾಕ್‌ಬೆಲ್ಟ್‌ ಪಡೆದಿದ್ದಾರೆ. ‘ಕರಾಟೆ ಕಲಿತ ಮೇಲೆ, ನನ್ನಲ್ಲಿದ್ದ ಭಯವೆಲ್ಲ ಮಾಯವಾಯಿತು.ಯಾವುದೇ ಕ್ರೀಡಾಸ್ಪರ್ಧೆ ಇದ್ದರೂ ಅದರಲ್ಲಿ ಆತ್ಮವಿಶ್ವಾಸದಿಂದ ಪಾಲ್ಗೊಳ್ಳುತ್ತಿದ್ದೇನೆ. ಜೊತೆಗೆ ಕಷ್ಟದಲ್ಲಿರುವವರಿಗೆ ನೆರವಾಗುವ ಮನೋಭಾವ ಬೆಳೆಸಿಕೊಂಡಿದ್ದೇನೆ’ ಎನ್ನುತ್ತಾರೆ.

ಸ್ವಯಂ ರಕ್ಷಣೆ ವಿದ್ಯೆ, ರಕ್ಷಣೆಗಷ್ಟೇ ಅಲ್ಲ, ಮನೋಧೈರ್ಯ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂಬುದಕ್ಕೆ ಮಿಸ್ಕಿನ್ ಸಹೋದರಿಯರ ಅನುಭವ ಉದಾಹರಣೆಯಾಗುತ್ತದೆ.

***

‘ಸಮರ ಕಲೆ ತರಬೇತಿಯಲ್ಲಿ ಅಭ್ಯಾಸ ಮಾಡುವ ಕಠಿಣ ವ್ಯಾಯಾಮಗಳು ದೇಹವನ್ನು ಹುರಿಗೊಳಿಸುವ ಜೊತೆಗೆ, ಮನಸ್ಸನ್ನು ಗಟ್ಟಿಗೊಳಿಸುತ್ತವೆ. ಇದರಿಂದಮನಸ್ಸನ್ನು ಕೇಂದ್ರೀಕರಿಸಿ ಎದುರಾಳಿಗೆ ಹೊಡೆಯುವ ಪಟ್ಟುಗಳು ಪರಿಣಾಮಕಾರಿಯಾಗಿರುತ್ತವೆ. ಆದ್ದರಿಂದ ಪ್ರತಿ ಹೆಣ್ಣುಮಕ್ಕಳಿಗೆ ಬಾಲ್ಯದಿಂದಲೇ ಸ್ವಯಂರಕ್ಷಣಾ ಕಲೆ ಕರಗತವಾದರೆ ಆಕೆಯ ವ್ಯಕ್ತಿತ್ವ ವಿಕಸನಕ್ಕೂ ದಾರಿಯಾಗಲಿದೆ.

–ಡಾ.ಅಪರ್ಣಾ ದೀಕ್ಷಿತ್‌,ಮನಶಾಸ್ತ್ರಜ್ಞರು ಮತ್ತು ಆಪ್ತ ಸಮಾಲೋಚಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT