‘ಮುಟ್ಟಿನ ಬಟ್ಟಲು’ ಅಥವಾ ‘ಮೆನ್ಸ್ಟ್ರುವಲ್ ಕಪ್ಸ್’ ಎಂದರೇನು? ಅದರ ಉಪಯೋಗ ಹೇಗೆ?

7

‘ಮುಟ್ಟಿನ ಬಟ್ಟಲು’ ಅಥವಾ ‘ಮೆನ್ಸ್ಟ್ರುವಲ್ ಕಪ್ಸ್’ ಎಂದರೇನು? ಅದರ ಉಪಯೋಗ ಹೇಗೆ?

Published:
Updated:

‘ಅರೆ ಇದೇನಿದು, ಈ ಸೀಸನ್‌ನ ಐ.ಪಿ.ಎಲ್. ಮುಗಿದೇ ಹೋಯ್ತು; ಆರ್‌.ಸಿ.ಬಿ. ಕಪ್ ಗೆಲ್ಲಲಿಲ್ಲ; ಆದರೂ ಕಪ್ ನಮ್ದೆ ಅಂತಿದಾರಲ್ಲ’ ಅಂತ ಯೋಚಿಸ್ತಿದ್ದೀರಾ? ಬೇಸಿಗೆಯ ಪವರ್ ಕಟ್‌ಗಳ ನಡುವೆ ಹಾಗೂ ಹೀಗೂ ಬಂದು ಹೋಗೋ ಮಳೆಯ ನಡುವೆ ದಿನಕ್ಕೆರಡರಂತೆ ಕ್ರಿಕೆಟ್ ಮ್ಯಾಚ್ ನಡೀತಾನೆ ಇತ್ತು; ಆರ್‌.ಸಿ.ಬಿ. ತಾನೇ ಕಪ್ ಗೆಲ್ಲಬೇಕೆಂಬ ಛಲದಿಂದ ಆಡುತ್ತಲೂ ಇತ್ತು. ಆದ್ರೂ ಸೋತ್ಹೊಯ್ತು. ಇರ್ಲಿ ಬಿಡಿ, ಆಟದಲ್ಲಿ ಸೋಲು–ಗೆಲುವು ಇದ್ದದ್ದೇ ಅಲ್ವೇ? ಆದರೆ, ಇಲ್ಲಿ ನಾವು ಮಾತಾಡುತ್ತಿರೋದು ಪಂದ್ಯಾವಳಿ ಗೆದ್ದಾಗ ಕೊಡುವ ಕಪ್ ಬಗ್ಗೆ ಅಲ್ಲ; ನಮ್ಮ ಗಮನ ಏನಿದ್ದರೂ ‘ಮೆನ್ಸ್ಟ್ರುವಲ್‌ ಕಪ್‌’ ಬಗ್ಗೆ. ನಾವಿದನ್ನು ‘ಮುಟ್ಟಿನ ಬಟ್ಟಲು’ ಎಂದೂ ಕರೆಯಬಹುದು. 

ಏನಿದು ‘ಮುಟ್ಟಿನ ಬಟ್ಟಲು?’
ಮೆನ್ಸ್ಟ್ರುವಲ್‌ ಕಪ್‌ ಅಥವಾ ಮುಟ್ಟಿನ ಬಟ್ಟಲು ಎಂದರೆ ಏನು ಎಂದು ಯೋಚಿಸುತ್ತಿದ್ದೀರಾ? ಇದು ತಿಂಗಳ ಮುಟ್ಟಿನ ಸಮಯದಲ್ಲಿ ಬಳಸಬಹುದಾದ ಸ್ತ್ರೀಯರ ನೈರ್ಮಲ್ಯ ಉತ್ಪನ್ನ. ಸ್ಯಾನಿಟರಿ ಪ್ಯಾಡ್, ಟ್ಯಾಂಪೂನ್ ಇತ್ಯಾದಿಯ ಬಳಕೆ ನಮಗೆ ಗೊತ್ತೇ ಇದೆ; ತಿಂಗಳ ಋತುಸ್ರಾವದ ಸಮಯದಲ್ಲಿ, ರಕ್ತವು ಹೊರಗೆ ಸ್ರವಿಸಿ ನಮ್ಮ ಬಟ್ಟೆಯೂ ಕಲೆಯಾಗಬಾರದು ಎಂಬ ಕಾರಣಕ್ಕೆ ಈ ಪ್ಯಾಡ್, ಟ್ಯಾಂಪೂನ್ ಮುಂತಾದುವನ್ನು ಬಳಸುತ್ತೇವೆ. ಅದೇ ರೀತಿ ಕೆಲವು ದಶಕಗಳಿಂದ ‘ಮೆನ್ಸ್ಟ್ರುವಲ್ ಕಪ್’ ಅನ್ನು ಬಳಸಲಾಗುತ್ತಿದೆ. ಆದರೆ ಇದರ ಬಗ್ಗೆ ತಿಳಿವಳಿಕೆ ಕಡಿಮೆಯಿರುವ ಕಾರಣ, ಪ್ಯಾಡ್‌ಗಳಷ್ಟು ವ್ಯಾಪಕವಾಗಿ ಇದನ್ನು ಬಳಸಲಾಗುತ್ತಿಲ್ಲ; ಹೀಗಿದ್ದರೂ, ಒಂದು ಸಂತಸದ, ಸಮಾಧಾನದ ಸಂಗತಿಯೆಂದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ಈ ಮುಟ್ಟಿನ ಬಟ್ಟಲಿನ ಉಪಯೋಗ ಹೆಚ್ಚುತ್ತಿದೆ.

ಮುಟ್ಟಿನ ಬಟ್ಟಲನ್ನು ವೈದ್ಯಕೀಯ ದರ್ಜೆಯ ‘ಸಿಲಿಕೋನ್’ ಎಂಬ ಸಂಯುಕ್ತ ಪದಾರ್ಥದಿಂದ ಮಾಡುತ್ತಾರೆ; ಈ ಪದಾರ್ಥವು ಸಾಮಾನ್ಯವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರವಾಗಿ ಬಳಸಲಾಗುತ್ತಿದ್ದು, ಶಸ್ತ್ರಚಿಕಿತ್ಸೆಯ ತರುವಾಯ ಅಥವಾ ಶಸ್ತ್ರಚಿಕಿತ್ಸೆಗಳ ಭಾಗವಾಗಿ ‘ಸಿಲಿಕೋನ್’ ಸಾಧನಗಳನ್ನು ನಮ್ಮ ದೇಹದೊಳಗೆ ಸೇರಿಸುತ್ತಾರೆ. ವೈದ್ಯಕೀಯ ದರ್ಜೆಯ ಸಿಲಿಕೋನ್‌ಗಳನ್ನು, ಜೈವಿಕ ಹೊಂದಾಣಿಕೆಗಾಗಿ ಪರೀಕ್ಷಿಸಲಾಗಿದ್ದು, ವೈದ್ಯಕೀಯ ಅನ್ವಯಗಳಿಗೆ ಬಳಸಲು ಸೂಕ್ತವಾಗಿದೆ; ಇದರಿಂದ ಯಾವುದೇ ಸೋಂಕುಗಳು ಉಂಟಾಗುವುದಿಲ್ಲ. ಇಂತಹ ಸಿಲಿಕೋನ್‌ನಿಂದ ಮಾಡಲ್ಪಟ್ಟ ಗಂಟೆಯಾಕಾರದ ಬಟ್ಟಲುಗಳೇ ಈ ‘ಮೆನ್ಸ್ಟ್ರುವಲ್ ಕಪ್.’

ಇದರ ಬಳಕೆ ಹೇಗೆ?
ತಿಂಗಳ ಮುಟ್ಟು ಆರಂಭವಾದ ದಿನ, ಮೊದಲನೆಯದಾಗಿ ನಮ್ಮ ಕೈಗಳನ್ನು ಮತ್ತು ಈ ಬಟ್ಟಲನ್ನು ಶುಭ್ರವಾಗಿ ನೀರಿನಲ್ಲಿ ತೊಳೆಯಬೇಕು. ಈ ಬಾಗುವ–ಬಳುಕುವ ನಮ್ಯತೆಯಿಂದ ಕೂಡಿದ ಬಟ್ಟಲನ್ನು ಇಂಗ್ಲಿಷ್‌ ಅಕ್ಷರ ‘c’ ಆಕಾರದಲ್ಲಿ ಮಡಚಿ ಯೋನಿಯೊಳಗೆ ತೂರಿಸಬೇಕು.

ನಮ್ಮ ಬೆರಳುಗಳ ಸಹಾಯದಿಂದ ಈ ಮೃದುವಾದ ಬಟ್ಟಲನ್ನು ಒಳಗೆ ಸೇರಿಸಿದ ನಂತರ, ಅಲ್ಲಿ ನಿರ್ವಾತದಂತಹ ಸ್ಥಿತಿ ಸೃಷ್ಟಿಯಾಗಿ, ಒಳಗೆ ಯೋನಿಯ ಗೋಡೆಯ ಆಕಾರಕ್ಕೆ ತಕ್ಕಂತೆ ಈ ಬಟ್ಟಲು ತೆರೆದುಕೊಳ್ಳುತ್ತದೆ ಮತ್ತು ನಂತರ ಋತುಸ್ರಾವವು ಆ ಬಟ್ಟಲಿನಲ್ಲಿ ಶೇಖರಣೆಗೊಳ್ಳುತ್ತದೆ. ನಿಮ್ಮ ಋತುಸ್ರಾವವು ಕಡಿಮೆ ಅಥವಾ ಸಾಮಾನ್ಯ ಪ್ರಮಾಣದಲ್ಲಿದ್ದರೆ 8 ರಿಂದ 12 ಗಂಟೆಗಳ ನಂತರ ಈ ಬಟ್ಟಲನ್ನು ಹೊರತೆಗೆದು, ಅದರಲ್ಲಿ ಸಂಗ್ರಹಿತವಾದದ್ದನ್ನು ಕಮೋಡ್ ಒಳಗೆ ಚೆಲ್ಲಿ, ತೊಳೆದು ಪುನಃ ಧರಿಸಬಹುದು. ನಿಮ್ಮ ರಕ್ತಸ್ರಾವವು ಹೆಚ್ಚಿನ ಪ್ರಮಾಣದಲ್ಲಿದ್ದರೆ 4 - 8 ಗಂಟೆಗಳ ನಂತರ, ಬಟ್ಟಲನ್ನು ಹೊರತೆಗೆದು, ಬರಿದು ಮಾಡಿ, ತೊಳೆದು ಪುನಃ ಧರಿಸಬಹುದು. ಈ ಬಟ್ಟಲಿನ ಬುಡವನ್ನು ಮೃದುವಾಗಿ ಒತ್ತಿ

ದಾಗ, ಒಳಗೆ ಸೃಷ್ಟಿಯಾಗಿದ್ದ ನಿರ್ವಾತವು ಬಿಡುಗಡೆಗೊಂಡು, ಸಲೀಸಾಗಿ ಈ ಬಟ್ಟಲು ಹೊರಬರುತ್ತದೆ. ಈ ಬಟ್ಟಲಿನ ಬಳಕೆಯು ಖಂಡಿತವಾಗಿಯೂ ಕಷ್ಟವಲ್ಲ. ಈ ಬಟ್ಟಲನ್ನು ಧರಿಸುವಾಗ ಅಥವಾ ಹೊರತೆಗೆಯುವಾಗ ನಾವು ಮಾಡಬೇಕಾಗಿರುವುದು ಇಷ್ಟೇ; ಶಾಂತ ಮನಸ್ಸಿನಿಂದ ಇರಬೇಕು; ಮನಸ್ಸಿನ ಶಾಂತಿಯು ನಮ್ಮ ಮಾಂಸಖಂಡಗಳ ಮೇಲೆ ಪರಿಣಾಮ ಬೀರಿ, ಅವುಗಳನ್ನೂ ಸಡಿಲಗೊಳಿಸುತ್ತದೆ. ಇದರ ಪರಿಣಾಮವಾಗಿ ‘ಮುಟ್ಟಿನ ಬಟ್ಟಲು’ ಅನಾಯಾಸವಾಗಿ, ಯಾವುದೇ ಬಗೆಯ ನೋವುಂಟು ಮಾಡದೆ ಒಳಗೆ ಅಥವಾ ಹೊರಗೆ ಸರಿಯುತ್ತದೆ. ಆ ಐದು ದಿನಗಳು ಪ್ರತಿ ಬಾರಿ ಬಳಸಿದಾಗಲೂ ಕೈಯನ್ನು ಮತ್ತು ಬಟ್ಟಲನ್ನು ಶುಭ್ರವಾಗಿ ಬಿಸಿನೀರು/ ತಣ್ಣೀರಿನಲ್ಲಿ ಸೋಪ್ ಸಹಿತ/ರಹಿತ ತೊಳೆಯಬೇಕಷ್ಟೇ; ಪ್ರತಿ ತಿಂಗಳ ಮುಟ್ಟಿನ ದಿನಗಳು ಮುಗಿದಾಗ, ಈ ಬಟ್ಟಲನ್ನು ತೊಳೆದು, ನೀರಿನಲ್ಲಿ ಕುದಿಸಿ, ಒರೆಸಿ ಒಣ ಜಾಗದಲ್ಲಿ ಶೇಖರಿಸಿ ಇಡಬಹುದು. ಮುಂದಿನ ತಿಂಗಳು ಮತ್ತೆ ಬಳಸುವಾಗ, ಸುಮ್ಮನೆ ನೀರಿನಲ್ಲಿ ತೊಳೆದು ಬಳಕೆ ಮುಂದುವರೆಸಬಹುದು.

ಏಕೆ ಬಳಸಬೇಕು?
ಹಲವು ದಶಕಗಳ ಕೆಳಗೆ ಋತುಸ್ರಾವದ ಸಮಯದಲ್ಲಿ, ರಕ್ತವನ್ನು ಹೀರಿಕೊಳ್ಳಲು ಹಳೆಯ ಬಟ್ಟೆಯನ್ನು ಬಳಸುತ್ತಿದ್ದರು. ಅದು ತಪ್ಪೇನು ಅಲ್ಲ; ಆದರೆ, ಹಾಗೆ ಬಳಸಿದ ಬಟ್ಟೆಯನ್ನು ಶುಭ್ರವಾದ ನೀರಿನಲ್ಲಿ ಒಗೆದು ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಳ್ಳುತ್ತಿದ್ದರೆ ಆರೋಗ್ಯಸಮಸ್ಯೆ ಕಾಣಿಸಿಕೊಳ್ಳುತ್ತಿರಲಿಲ್ಲ; ಮೌಢ್ಯಾಚರಣೆಗಳ ಕಾರಣ ಅಥವಾ ಮುಂಚಿನ ಕಾಲದಲ್ಲಿ ಮನೆಯಲ್ಲಿ ಮುಕ್ತವಾದ ವಾತಾವರಣ ಇಲ್ಲದ ಕಾರಣ – ಹಿತ್ತಲಿನಲ್ಲಿ ಯಾರ ಕಣ್ಣಿಗೂ ಅದರಲ್ಲೂ ಗಂಡುಮಕ್ಕಳ ಕಣ್ಣಿಗೆ ಕಾಣದಂತೆ ಅರೆಬರೆ ಒಣಗಿಸಿ ಎತ್ತಿಟ್ಟು ಬಳಸಿ ಹೆಣ್ಣುಮಕ್ಕಳು ತೊಂದರೆ ಅನುಭವಿಸುತ್ತಿದ್ದರು. ನಂತರ ಬಂದ ಸ್ಯಾನಿಟರಿ ಪ್ಯಾಡ್ ಅಥವಾ ಟ್ಯಾಂಪೂನ್‌ಗಳು ಹೆಣ್ಣುಮಕ್ಕಳ ಜೀವನವನ್ನೂ ಮನಸ್ಸನ್ನೂ ಹಗುರಗೊಳಿಸಿದ್ದು ಸುಳ್ಳಲ್ಲ; ಬಳಸಿ ಬಿಸಾಡಬಹುದಾದ ಇವು ಹಲವು ಕಷ್ಟಗಳಿಂದ ಮತ್ತು ಸೊಂಕುಗಳಿಂದ ಸ್ತ್ರೀಯರನ್ನು ಬಿಡುಗಡೆಗೊಳಿಸಿದ್ದವು. ಆದರೆ, ಇವುಗಳ ಹೆಚ್ಚಿನ ಬಳಕೆಯೂ ದಿನಕಳೆದಂತೆ ಬ್ಯಾಕ್ಟೀರಿಯದ ಸೋಂಕು, ಯೋನಿಯ ತುರಿಕೆ, ಸುತ್ತಲಿನ ಚರ್ಮದಲ್ಲಿ ದದ್ದು ಏಳುವುದು – ಇತ್ಯಾದಿ ಸಮಸ್ಯೆಗೆ ನಾಂದಿ ಹಾಡಿತು. ಅಷ್ಟೇ ಅಲ್ಲದೇ, ಹೀಗೆ ಬಳಸಿ ಬಿಸಾಡುವ ಪ್ಯಾಡ್‌ಗಳ ಸಂಖ್ಯೆಯು ಎಗ್ಗಿಲ್ಲದಂತೆ ಏರುತ್ತಾ, ಭೂಮಿಯ ಆರೋಗ್ಯಕ್ಕೆ ಕುತ್ತು ತಂದಿತು; ಇದು ಪ್ರಸ್ತುತ ಪ್ರಮುಖ ಮಾಲಿನ್ಯಕಾರಕಗಳಲ್ಲಿ ಒಂದು ಎಂಬುದನ್ನು ಸಮೀಕ್ಷೆಗಳು ಬಹಿರಂಗಪಡಿಸಿವೆ; ಇದಕ್ಕೆ ಕಾರಣ, ಸ್ಯಾನಿಟರಿ ಪ್ಯಾಡ್ ಮತ್ತು ಟ್ಯಾಂಪೂನ್‌ಗಳಲ್ಲಿ ಹತ್ತಿಯ ಜೊತೆ ಅಪಾರವಾದ ಪ್ಲಾಸ್ಟಿಕ್ ಕೂಡ ಇದ್ದು, ಮಣ್ಣಿನಲ್ಲಿ ಒಂದು ಪ್ಯಾಡ್ ಸಂಪೂರ್ಣವಾಗಿ ನಾಶಗೊಳ್ಳಲು ಕನಿಷ್ಠ 25 ವರ್ಷಗಳು ಬೇಕು; ಅದರಲ್ಲೂ ಸರಿಯಾಗಿ ತ್ಯಾಜ್ಯ ಚಿಕಿತ್ಸೆಯನ್ನು ನಡೆಸಿ ವಿಲೇವಾರಿ ಮಾಡಿದರೆ ಮಾತ್ರ. ಬಳಸಿ ಬಿಸಾಡಬಹುದಾದ ಸ್ಯಾನಿಟರಿ ಪ್ಯಾಡ್ ಮತ್ತು ಟ್ಯಾಂಪೂನ್‌ಗಳ ಬೆಲೆಗೆ ಹೋಲಿಸಿದರೆ ಈ ಮುಟ್ಟಿನ ಬಟ್ಟಲಿನ ಬೆಲೆ ಕಡಿಮೆಯೇ! ಸುಮಾರು ₹300 ರಿಂದ 400ಕ್ಕೆ ದೊರೆಯುವ ಈ ಮುಟ್ಟಿನ ಬಟ್ಟಲನ್ನು, ಒಮ್ಮೆ ಖರೀದಿಸಿದರೆ ಸುಮಾರು 5ರಿಂದ10 ವರ್ಷಗಳು ಉಪಯೋಗಿಸಬಹುದು ಎಂದರೆ ನಂಬುತ್ತೀರಾ?

ಈ ಅವಧಿಯಲ್ಲಿ ನೀವು ಬಿಸಾಡಬಹುದಾದ ಸ್ಯಾನಿಟರಿ ಪ್ಯಾಡ್ ಮತ್ತು ಟ್ಯಾಂಪೂನ್‌ಗಳ ಮೇಲೆ ಖರ್ಚು ಮಾಡದೇ, ಸುಮಾರು ಒಂದು ಲಕ್ಷ ರೂಪಾಯಿಗಳನ್ನು ಉಳಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಮುಟ್ಟಿನ ಬಟ್ಟಲು ಯಾವುದೇ ಸೋಂಕನ್ನೂ ಉಂಟುಮಾಡುವುದಿಲ್ಲ ಮತ್ತು ಭೂಮಿಗೂ ಯಾವುದೇ ರೀತಿಯಲ್ಲೂ ತೊಂದರೆಮಾಡುವುದಿಲ್ಲ. ಹಾಗಾಗಿ ಈ ಮೆನ್ಸ್ಟ್ರುವಲ್ ಕಪ್ ನಿಮ್ಮ ಆರೋಗ್ಯ ಹಾಗೂ ಭೂಮಿಯ ಆರೋಗ್ಯದ ‘ಗೆಲುವಿನ ಕಪ್’ ಎಂದರೆ ಅತಿಶಯೋಕ್ತಿಯಲ್ಲ. ಅಷ್ಟೇ ಅಲ್ಲದೇ, ಇದನ್ನು ಧರಿಸಿರುವಾಗ ನಮಗೆ ನಮ್ಮೊಳಗೆ ಏನೋ ವಸ್ತು ಇರುವ ಹಾಗೆ ಕಿಂಚಿತ್ತೂ ಅನುಭವವಾಗುವುದಿಲ್ಲ; ಸ್ಯಾನಿಟರಿ ಪ್ಯಾಡ್ ಮತ್ತು ಟ್ಯಾಂಪೂನ್‌ಗಳನ್ನು ಬಳಸಿದಾಗ, ಮನಸ್ಸೂ ಅದರ ಕಡೆಗೆ ಗಮನ ಹರಿಸುತ್ತಲೇ ಇರುತ್ತದೆ, ಆದರೆ ಈ ಕಪ್ ಹಾಗಲ್ಲ;ಅದನ್ನು ಧರಿಸಿ ನಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಯಾವುದೇ ಅಳುಕಿಲ್ಲದೆ, ಕೆಟ್ಟ ಅನುಭವವಿಲ್ಲದೆ ತೊಡಗಿಕೊಳ್ಳಬಹುದು; ಓಡಬಹುದು, ಈಜಬಹುದು, ಕುಣಿಯಬಹುದು! ಯಾವುದೇ ಸೋರುವಿಕೆಯೂ ಆಗುವುದಿಲ್ಲ; ಈಗಾಗಲೇ ಈ ಬಟ್ಟಲನ್ನು ಬಳಸುತ್ತಿರುವ ಸ್ತ್ರೀಯರಲ್ಲಿ ಶೇ 98 ಜನರು, ತಮ್ಮ ಅನುಭವದ ಆಧಾರದ ಮೇಲೆ ಇತರರಿಗೆ ಇದನ್ನೇ ಶಿಫಾರಸು ಮಾಡುತ್ತಾರೆ ಎನ್ನುತ್ತದೆ ಅಂತರಾಷ್ಟ್ರೀಯ ಸಮೀಕ್ಷೆ.

ಅಂತರ್ಜಾಲದ ಅಂಗಡಿಗಳಲ್ಲಿ ಈ ಮುಟ್ಟಿನ ಕಪ್‌ಗಳು ಸುಲಭವಾಗಿ ಲಭ್ಯವಿದ್ದು, ಕೊಂಡರೆ ಮನೆ ಬಾಗಿಲಿಗೆ ಬಂದು ತಲುಪುತ್ತದೆ. ಹಾಗಿರುವಾಗ ಮತ್ತಿನ್ನೇಕೆ ತಡ? ಆರೋಗ್ಯಕ್ಕೆ, ಜೇಬಿಗೆ, ಭೂಮಿಗೆ ಒಳಿತನ್ನು ಬಯಸಿ, ಮುಟ್ಟಿನ ಬಟ್ಟಲನ್ನು ಬಳಸಿ, ಮುಟ್ಟಿನ ದಿನಗಳನ್ನು ಸಂತೋಷವಾಗಿ ಕಳೆಯಿರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !