ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ, ಕಮಲಕ್ಕೆ ನಿರೀಕ್ಷೆಯ ಜಯ

ರಾಜ್ಯಸಭೆಗೆ ಸೈಯದ್, ಹನುಮಂತಯ್ಯ, ಚಂದ್ರಶೇಖರ್‌, ರಾಜೀವ್‌ ಆಯ್ಕೆ
Last Updated 23 ಮಾರ್ಚ್ 2018, 19:40 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ನಿಯಮ ಉಲ್ಲಂಘನೆ ಆರೋಪ ಹಾಗೂ ಜೆಡಿಎಸ್‌ ಶಾಸಕರ ಮತದಾನ ಬಹಿಷ್ಕಾರದ ನಡುವೆ ನಡೆದ ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಲ್. ಹನುಮಂತಯ್ಯ, ಸೈಯದ್ ನಾಸಿರ್ ಹುಸೇನ್ ಹಾಗೂ ಜಿ.ಸಿ. ಚಂದ್ರಶೇಖರ್ ಮತ್ತು ಬಿಜೆಪಿಯ ರಾಜೀವ್ ಚಂದ್ರಶೇಖರ್ ಆಯ್ಕೆಯಾಗಿದ್ದಾರೆ.

ಜೆಡಿಎಸ್‌ನ ಎಂಟು ಶಾಸಕರ ಅಡ್ಡ ಮತದಾನದಿಂದ 2016ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಸೋಲು ಕಂಡು, ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ ಜೆಡಿಎಸ್‌ನ ಬಿ.ಎಂ. ಫಾರೂಕ್‌ ಪುನಃ ಪರಾಭವಗೊಂಡಿದ್ದಾರೆ. ಜೆಡಿಎಸ್‌ನ 28 ಶಾಸಕರು ಮತದಾನ ಬಹಿಷ್ಕರಿಸಿದ್ದರಿಂದಾಗಿ ಅವರಿಗೆ ಕೇವಲ 2 ಮತಗಳು ದೊರೆತಿವೆ.

ಬಿಜೆಪಿ ಹಾಗೂ ಮಿತ್ರ ಪಕ್ಷಗಳ ಸದಸ್ಯರು, ಇತ್ತೀಚೆಗೆ ಪಕ್ಷಕ್ಕೆ ಬಂದ ಶಾಸಕರ ಮತ ಸೇರಿ 48 ಮತಗಳು ರಾಜೀವ್ ಚಂದ್ರಶೇಖರ್‌ಗೆ ನಿಕ್ಕಿಯಾಗಿದ್ದವು. ಇವರ ಜೊತೆಗೆ ಪಕ್ಷೇತರರಾದ (ಎಂಇಎಸ್‌) ಅರವಿಂದ ಪಾಟೀಲ ಹಾಗೂ ಸಂಭಾಜಿ ಪಾಟೀಲರ ಮತಗಳನ್ನು ರಾಜೀವ್‌ ಪಡೆದಿದ್ದಾರೆ.

ಕಾಂಗ್ರೆಸ್‌ಗೆ ತನ್ನ 122 (ಎ.ಎಸ್. ಪಾಟೀಲ ನಡಹಳ್ಳಿ ಬಿಟ್ಟು) ಮತಗಳ ಜೊತೆ ಕೆಜೆಪಿಯ 1, ಕೆಎಂಪಿಯ 1, ಇತ್ತೀಚೆಗೆ ಪಕ್ಷ ಸೇರಿರುವ ನಾಗೇಂದ್ರ ಹಾಗೂ ಜೆಡಿಎಸ್‌ನ 7 ಬಂಡಾಯ ಶಾಸಕರ ಮತಗಳಿದ್ದವು. ಇವರ ಜತೆಗೆ ಪಕ್ಷೇತರ ಸದಸ್ಯ ವರ್ತೂರು ಪ್ರಕಾಶ್‌ ಬಿಟ್ಟು 5 ಸದಸ್ಯರ ಮತ ಸೇರಿದರೆ 137 ಮತಗಳು ಇದ್ದವು.

ಈ ಪೈಕಿ ತಲಾ 44 ಮತಗಳನ್ನು ಹನುಮಂತಯ್ಯ ಹಾಗೂ ಸೈಯದ್ ನಾಸಿರ್‌ಗೆ ಹಂಚಿಕೆ ಮಾಡಲಾಗಿತ್ತು. ನಿಗದಿಯಾಗಿದ್ದ ಮತಗಳಲ್ಲಿ ಸೈಯದ್‌ಗೆ ಎರಡು ಮತಗಳು ಕಡಿಮೆಯಾಗಿದೆ. ಇವು ತಿರಸ್ಕೃತಗೊಂಡ ಕಾಗೋಡು ತಿಮ್ಮಪ್ಪ ಮತ್ತು ಬಾಬುರಾವ್‌ ಚಿಂಚನಸೂರ ಅವರ ಮತಗಳು ಎಂದು ಮೂಲಗಳು ಹೇಳಿವೆ.

**

ಕಾಗೋಡು, ಚಿಂಚನಸೂರ ಮತ ತಿರಸ್ಕೃತ

ಕಾಂಗ್ರೆಸ್‌ನ ಹಿರಿಯ ಶಾಸಕರಾದ ಕಾಗೋಡು ತಿಮ್ಮಪ್ಪ(ಕಂದಾಯ ಸಚಿವ) ಹಾಗೂ ಬಾಬುರಾವ್ ಚಿಂಚನಸೂರ  ಮಾಡಿದ ಯಡವಟ್ಟು ಇಡೀ ದಿನ ನಾಟಕೀಯ ಬೆಳವಣಿಗೆಗೆ ಕಾರಣವಾಯಿತು

ರಾಜ್ಯಸಭಾ ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕು ಎಂದು ಪಕ್ಷ ಜಾರಿ ಮಾಡಿದ ವಿಪ್‌ ಅನುಸಾರ ಮತ ಹಾಕಬೇಕು. ಅಲ್ಲದೆ, ಪಕ್ಷ ನಿಯೋಜಿಸಿದ ಮತಗಟ್ಟೆ ಏಜೆಂಟ್‌ಗೆ ಮತ ಪತ್ರ ತೋರಿಸದಿದ್ದರೆ ಅಂತಹ ಮತಗಳು ಅಸಿಂಧುವಾಗುತ್ತದೆ.

ಮತದಾನ ಕೇಂದ್ರಕ್ಕೆ ಬಂದ ಕಾಗೋಡು ಮತ್ತು ಚಿಂಚನಸೂರ, ಮತಪತ್ರ (ಬ್ಯಾಲೆಟ್‌ ಪೇಪರ್) ಪಡೆದು ಅಭ್ಯರ್ಥಿಯ ಹೆಸರಿನ ಮುಂದೆ ಗುರುತು ಹಾಕಿದರು. ಬಳಿಕ ಪಕ್ಷದ ಏಜೆಂಟರಾಗಿದ್ದ ಬೋಸರಾಜುಗೆ ತೋರಿಸಿದರು. ಪಕ್ಷದ ಅಭ್ಯರ್ಥಿ ಬಿಟ್ಟು ಬೇರೆ ಪಕ್ಷದ ಅಭ್ಯರ್ಥಿಗೆ ಈ ಇಬ್ಬರು ಮತ ಹಾಕಿದ್ದನ್ನು ಗಮನಿಸಿದ ಬೋಸರಾಜು, ‘ನೀವು ತಪ್ಪು ಮಾಡಿದ್ದೀರಿ’ ಎಂದರು.

ಕೂಡಲೇ ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭಾ ಕಾರ್ಯದರ್ಶಿ ಎಸ್. ಮೂರ್ತಿ ಗಮನಕ್ಕೆ ತಂದರು. ಮೊದಲು ಚಲಾಯಿಸಿದ ಮತ ಪತ್ರವನ್ನು ವಾಪಸ್ ಪಡೆದ ಚುನಾವಣಾಧಿಕಾರಿ ಎರಡನೇ ಮತ ಪತ್ರವನ್ನು ನೀಡಿದರು. ಇದನ್ನು ಬಳಸಿ ಇಬ್ಬರೂ ಶಾಸಕರು ಪಕ್ಷ ನಿಗದಿಪಡಿಸಿದ್ದ ಅಭ್ಯರ್ಥಿಗೆ ಮತ ಹಾಕಿದರು.

ಒಬ್ಬ ಮತದಾರ ಎರಡನೇ ಬಾರಿ ಮತಪತ್ರ ಪಡೆದಿರುವುದು ಸರಿಯಲ್ಲ ಎಂದು ಬಿಜೆಪಿ ಏಜೆಂಟ್‌ ಆಗಿದ್ದ ಅರವಿಂದ ಲಿಂಬಾವಳಿ ಆಕ್ಷೇಪ ತೆಗೆದರು. ಇದಕ್ಕೆ ರಾಜ್ಯಸಭೆಯ ಜೆಡಿಎಸ್‌ ಅಭ್ಯರ್ಥಿ ಬಿ.ಎಂ. ಫಾರೂಕ್ ಹಾಗೂ ಪಕ್ಷದ ಏಜೆಂಟ್ ಎಚ್.ಡಿ. ರೇವಣ್ಣ ಧ್ವನಿಗೂಡಿಸಿದರು. ಈ ಹೊತ್ತಿನಲ್ಲಿ ಮಾತಿನ ಚಕಮಕಿ ನಡೆಯಿತು.

ಮೊದಲು ಬೇರೆ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದು ‘ಅಡ್ಡ ಮತದಾನ’ ವಾಗಿದೆ. ಎರಡನೇ ಬಾರಿ ಮತ ಪತ್ರ ನೀಡುವ ಮೂಲಕ ಚುನಾವಣಾ ಅಕ್ರಮಕ್ಕೆ ದಾರಿ ಮಾಡಿಕೊಡಲಾಗಿದೆ ಎಂದು  ಚುನಾವಣಾ ಆಯೋಗಕ್ಕೆ ಜೆಡಿಎಸ್‌ ದೂರು ಸಲ್ಲಿಸಿತು.

ಮತದಾನ ಕೇಂದ್ರದಲ್ಲಿದ್ದ ಚುನಾವಣಾ ವೀಕ್ಷಕರೂ ಆಗಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಗಮನಕ್ಕೆ ತರಲಾಯಿತು. ಅವರು ಕೂಡ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಲಿಲ್ಲ ಎಂದೂ ಜೆಡಿಎಸ್ ಆಕ್ಷೇಪಿಸಿತು.

**

ಮತ್ತೆ ಅಡ್ಡ ಮತದಾನ

ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಏಳು ಬಂಡಾಯ ಶಾಸಕರು ಪಕ್ಷದ ವಿಪ್‌ ಉಲ್ಲಂಘಿಸಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ್ತೆ ಅಡ್ಡ ಮತದಾನ ಮಾಡಿದ್ದಾರೆ.

ಚಲುವರಾಯಸ್ವಾಮಿ, ಎಚ್.ಸಿ. ಬಾಲಕೃಷ್ಣ, ಅಖಂಡ ಶ್ರೀನಿವಾಸಮೂರ್ತಿ, ಭೀಮಾನಾಯ್ಕ, ರಮೇಶ ಬಂಡಿಸಿದ್ದೇಗೌಡ, ಜಮೀರ್ ಅಹಮದ್‌, ಇಕ್ಬಾಲ್ ಅನ್ಸಾರಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ.

2016ರಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಇವರೆಲ್ಲರೂ ಅಡ್ಡ ಮತದಾನ ಮಾಡಿದ್ದರು. ಇವರನ್ನು ಅನರ್ಹಗೊಳಿಸಬೇಕು ಎಂದು ಜೆಡಿಎಸ್‌ ಶಾಸಕರು ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಲ್ಲದೇ, ಕೋರ್ಟ್ ಮೊರೆ ಹೋಗಿದ್ದಾರೆ.

ರುದ್ರೇಶಗೌಡ ಗೈರು: ಬೇಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ವೈ.ಎನ್. ರುದ್ರೇಶಗೌಡ ಅನಾರೋಗ್ಯದ ಕಾರಣದಿಂದ ಮತದಾನ ಮಾಡಲು ಬರಲಿಲ್ಲ.

**

ಉತ್ತರ ಪ್ರದೇಶ: ಸೋಲಿಗೆ ಸೇಡು ತೀರಿಸಿಕೊಂಡ ಬಿಜೆಪಿ

ನವದೆಹಲಿ/ಲಖನೌ: ಏಳು ರಾಜ್ಯಗಳ 26 ರಾಜ್ಯಸಭಾ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಉತ್ತರ ಪ್ರದೇಶದ 10 ಸ್ಥಾನಗಳ ಪೈಕಿ 9ರಲ್ಲಿ ಗೆಲುವು ಸಾಧಿಸುವ ಮೂಲಕ ಲೋಕಸಭಾ ಉಪ ಚುನಾವಣೆಯ ಸೋಲಿಗೆ ಸೇಡು ತೀರಿಸಿಕೊಂಡಿದೆ.

10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 8 ಸ್ಥಾನಗಳಲ್ಲಿ ಬಿಜೆಪಿ ನಿರಾಯಾಸವಾಗಿ ಗೆಲುವು ಸಾಧಿಸಿತು. 9ನೇ ಸ್ಥಾನಕ್ಕಾಗಿ ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಅಭ್ಯರ್ಥಿಯ ಜತೆ ನಡೆದ ಸೆಣಸಾಟದಲ್ಲಿ ಕೊನೆಗೆ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗೆ ಜಯ ಒಲಿಯಿತು.

ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ಬೆಂಬಲದೊಂದಿಗೆ ಗೆಲ್ಲುವ ನಿರೀಕ್ಷೆಯಲ್ಲಿದ್ದ ಬಿಎಸ್‌ಪಿ ಅಭ್ಯರ್ಥಿ ಭೀಮ್‌ ರಾವ್‌ ಅಂಬೇಡ್ಕರ್‌ ಸೋಲುವುದರೊಂದಿಗೆ ಪಕ್ಷದ ಮುಖ್ಯಸ್ಥೆ ಮಾಯಾವತಿ ಮುಖಭಂಗ ಅನುಭವಿಸಿದ್ದಾರೆ.

ಒಂದು ಸ್ಥಾನ ಸಮಾಜವಾದಿ ಪಕ್ಷದ ಅಭ್ಯರ್ಥಿ, ನಟಿ ಜಯಾ ಬಚ್ಚನ್‌ ಅವರ ಪಾಲಾಗಿದೆ. ಬಿಜೆಪಿಯಿಂದ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ, ವಿಪಿಎಸ್‌ ತೋಮರ್‌, ಅಶೋಕ್‌ ವಾಜಪೇಯಿ, ಎಸ್‌.ಡಿ. ರಾಜ್‌ಬಹಾರ್‌, ಅನಿಲ್‌ ಜೈನ್, ಜಿವಿಎಲ್‌ ರಾವ್‌, ಕಾಂತಾ ಕರದಂ, ಎಚ್‌.ಎಸ್‌. ಯಾದವ್‌, ಅನಿಲ್‌ ಅಗರವಾಲ್‌ (ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ) ರಾಜ್ಯಸಭೆ ಪ್ರವೇಶಿಸಿದ್ದಾರೆ.

ತೀವ್ರ ಸೆಣಸಾಟ

ಉದ್ಯಮಿ ಅನಿಲ್‌ ಅಗರವಾಲ್‌ ಮತ್ತು ಬಿಎಸ್‌ಪಿ ಅಭ್ಯರ್ಥಿ ಅಂಬೇಡ್ಕರ್‌ ನಡುವೆ ಕೊನೆಯ ಕ್ಷಣದವರೆಗೂ ತೀವ್ರ ಸೆಣಸಾಟ ನಡೆದಿತ್ತು. ಅಂಬೇಡ್ಕರ್‌ ಮೊದಲ ಪ್ರಾಶಸ್ತ್ಯದ 32 ಮತ ಮತ್ತು ಅಗರವಾಲ್‌ 22 ಮತ ಪಡೆದರು. ಗೆಲ್ಲಲು ಅಗತ್ಯವಿದ್ದ 37 ಮತಗಳನ್ನು ಯಾರೂ ಪಡೆಯದ ಕಾರಣ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆಗೆ ಮೊರೆ ಹೋಗಲಾಯಿತು. ಇದರಲ್ಲಿ ಅಗರವಾಲ್‌ ಯಶಸ್ಸು ಕಂಡರು. ಇದರೊಂದಿಗೆ ಚುನಾವಣೆಯಲ್ಲಿ ಗೆಲುವಿಗಾಗಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೆಣೆದ ತಂತ್ರ ಫಲ ನೀಡಿತು.

ಈ ಜಯದೊಂದಿಗೆ ಬಿಜೆಪಿಯು ಲೋಕಸಭಾ ಉಪ ಚುನಾವಣೆಯಲ್ಲಿ ಗೋರಖಪುರ ಮತ್ತು ಫೂಲ್‌ಪುರ ಕ್ಷೇತ್ರದಲ್ಲಾದ ಹೀನಾಯ ಸೋಲಿಗೆ ಸೇಡು ತೀರಿಸಿಕೊಂಡು, ಅಖಿಲೇಶ್‌ ಯಾದವ್‌ ಮತ್ತು  ಮಾಯಾವತಿ ಜೋಡಿಗೆ ತಿರುಗೇಟು ನೀಡಿದೆ.

ಅಡ್ಡ ಮತದಾನ: ಉತ್ತರ ಪ್ರದೇಶದಲ್ಲಿ ಅಡ್ಡಮತ ಚಲಾವಣೆಯಾಗಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಬಿಎಸ್‌ಪಿಯ ಅನಿಲ್‌ ಸಿಂಗ್‌, ನಿಶಾದ್‌ ಪಕ್ಷದ ವಿಜಯ್‌ ಶರ್ಮಾ, ಸಮಾಜವಾದಿ ಪಕ್ಷದ ನಿತಿನ್‌ ಅಗರವಾಲ್‌ ಮತ್ತು ಮೂವರು ಪಕ್ಷೇತರ ಶಾಸಕರಾದ ರಾಜಾ ಭಯ್ಯಾ, ಅವರ ಆಪ್ತ ವಿನೋದ್‌ ಸರೋಜ್‌ ಹಾಗೂ ಅಮನ್‌ ಮಣಿ ಅವರು ಬಿಜೆಪಿಗೆ ಮತ ಹಾಕಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಜೆಪಿ ಅಭ್ಯರ್ಥಿಗೆ ಮತ ಹಾಕಿರುವುದಾಗಿ ಬಹಿರಂಗವಾಗಿ ಘೋಷಿಸಿದ ಬಿಎಸ್‌ಪಿ ಶಾಸಕ ಅನಿಲ್ ಸಿಂಗ್‌ ಮತ್ತು ಸಮಾಜವಾದಿ ಶಾಸಕ ನಿತಿನ್‌ ಅಗರವಾಲ್‌ ಮತ ಅಸಿಂಧುಗೊಂಡಿವೆ.

ಪಶ್ಚಿಮ ಬಂಗಾಳದಲ್ಲಿ ದೀದಿ ಮೇಲುಗೈ: ಪಶ್ಚಿಮ ಬಂಗಾಳ ಐದು ಸ್ಥಾನಗಳಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ನಾಲ್ಕು ಸ್ಥಾನ ಬಾಚಿಕೊಂಡಿದೆ. ಉಳಿದೊಂದು ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಭಿಷೇಕ್‌ ಮನು ಸಿಂಘ್ವಿ ಆಯ್ಕೆಯಾಗಿದ್ದಾರೆ.

ಇಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷವು ಸಿಂಘ್ವಿ ಅವರಿಗೆ ಬೆಂಬಲ ನೀಡಿತ್ತು. ಸಿಪಿಎಂ ಅಭ್ಯರ್ಥಿ ಸೋಲು ಕಂಡಿದ್ದಾರೆ. ಒಟ್ಟು ಆರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಟಿಆರ್‌ಎಸ್‌ ಜಯಭೇರಿ: ತೆಲಂಗಾಣದ ಎಲ್ಲ ಮೂರು ಸ್ಥಾನಗಳಲ್ಲಿ ಚಂದ್ರಶೇಖರ್‌ ರಾವ್‌ ನೇತೃತ್ವದ ಆಡಳಿತಾರೂಢ ಟಿಆರ್‌ಎಸ್‌ ಜಯಭೇರಿ ಬಾರಿಸಿದೆ. ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಕೇಂದ್ರದ ಮಾಜಿ ಸಚಿವ ಪಿ. ಬಲರಾಂ ನಾಯ್ಕ್‌ ಹೀನಾಯವಾಗಿ ಸೋತಿದ್ದಾರೆ. ಅವರು ಕೇವಲ 10 ಮತ ಪಡೆದಿದ್ದಾರೆ.

ಜಾರ್ಖಂಡ್‌ನಲ್ಲಿ ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯಾಗಿದೆ. ಎರಡು ಸ್ಥಾನಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ ಒಂದೊಂದು ಸ್ಥಾನದಲ್ಲಿ ಗೆಲುವು ಸಾಧಿಸಿವೆ. ಛತ್ತೀಸ್‌ಗಡದ ಏಕೈಕ ಸ್ಥಾನ ಆಡಳಿತಾರೂಢ ಬಿಜೆಪಿ ಪಾಲಾಗಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಸರೋಜಾ ಪಾಂಡೆ ಮೇಲ್ಮನೆ ಪ್ರವೇಶಿಸಿದ್ದಾರೆ.

ಕೇರಳದ ಒಂದು ಸ್ಥಾನದಿಂದ ಸಂಯುಕ್ತ ಜನತಾದಳ (ಶರದ್‌ ಯಾದವ್‌ ಬಣ) ಅಭ್ಯರ್ಥಿ ಎಂ.ಪಿ. ವೀರೇಂದ್ರ ಕುಮಾರ್‌ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಅವರಿಗೆ ಆಡಳಿತಾರೂಢ ಸಿಪಿಐಎಂ ನೇತೃತ್ವದ ಎಲ್‌ಡಿಎಫ್‌ ಬೆಂಬಲ ನೀಡಿತ್ತು. ಜೆಡಿಯು ಇಬ್ಭಾಗವಾದಾಗ ಶರದ್‌ ಯಾದವ್‌ ಬೆಂಬಲಿಸಿ ವೀರೇಂದ್ರ ಕುಮಾರ್‌ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

**

ತಲೆ ಕೆಳಗಾದ ಲೆಕ್ಕಾಚಾರ

ಉತ್ತರ ಪ್ರದೇಶದಲ್ಲಿ ಬಿಜೆಪಿಯು ತನ್ನ 311 ಮತ್ತು ಮಿತ್ರಪಕ್ಷಗಳ 13 ಶಾಸಕರು ಸೇರಿ ಒಟ್ಟು 324 ಶಾಸಕರ ಬಲ ಹೊಂದಿದೆ. ಇಲ್ಲಿ ಅಭ್ಯರ್ಥಿ ಗೆಲುವಿಗೆ 37 ಮತ ನಿಗದಿಪಡಿಸಲಾಗಿತ್ತು. ಎಂಟು ಅಭ್ಯರ್ಥಿಗಳ ನಿರಾಯಾಸ ಗೆಲುವಿಗೆ ಅಗತ್ಯವಿದ್ದ 296 ಮತಗಳು ಚಲಾವಣೆಯಾದ ಬಳಿಕವೂ ಬಿಜೆಪಿ ಬಳಿ ಹೆಚ್ಚುವರಿಯಾಗಿ 28 ಮತಗಳು ಉಳಿದಿದ್ದವು.

9 ಶಾಸಕರನ್ನು ಹೊಂದಿರುವ ಸೋನೆಲಾಲ್‌ ನೇತೃತ್ವದ ಸೋನೆಲಾಲ್‌ ಅಪ್ನಾ ದಳ ಮತ್ತು ಸುಹೇಲ್‌ದೇವ್‌ ಭಾರತೀಯ ಸಮಾಜ ಪಾರ್ಟಿ (ಎಸ್‌ಬಿಎಸ್‌ಪಿ)ಯ ನಾಲ್ವರು ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಇದರೊಂದಿಗೆ ಬಿಜೆಪಿ ಬೆಂಬಲಿತ 9ನೇ ಅಭ್ಯರ್ಥಿ ಗೆಲುವು ಸುಲಭವಾಯಿತು.

47 ಶಾಸಕರನ್ನು ಹೊಂದಿರುವ ಸಮಾಜವಾದಿ ಪಕ್ಷ ಸುಲಭವಾಗಿ ಒಬ್ಬ ಅಭ್ಯರ್ಥಿಯನ್ನು ಮೇಲ್ಮನೆಗೆ ಕಳಿಸಿದ ನಂತರ 10 ಮತ ಹೆಚ್ಚುವರಿಯಾಗಿ ಉಳಿದಿದ್ದವು.

19 ಶಾಸಕರನ್ನು ಹೊಂದಿದ್ದ ಬಿಎಸ್‌ಪಿಗೆ ಗೆಲ್ಲಲು ಹೆಚ್ಚುವರಿಯಾಗಿ 18 ಮತಗಳ ಅಗತ್ಯವಿತ್ತು. ಅದಕ್ಕಾಗಿ ಮಾಯಾವತಿ ಅವರು ಮಿತ್ರಪಕ್ಷ ಎಸ್‌ಪಿಯ 10 ಹೆಚ್ಚುವರಿ ಮತ ಮತ್ತು ಕಾಂಗ್ರೆಸ್‌ನ 17 ಶಾಸಕರ ಬೆಂಬಲ ನೆಚ್ಚಿಕೊಂಡಿದ್ದರು. ಆದರೆ, ಮಾಯಾವತಿ ಅವರ ಲೆಕ್ಕಾಚಾರ ತಳೆಕೆಳಗಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT