ಬ್ಯಾಂಕಾಕ್‌ ಪ್ರವಾಸ: ಏಳು ಶಿಖರಗಳ ಜೆಡ್ ಯೋಡ್

7

ಬ್ಯಾಂಕಾಕ್‌ ಪ್ರವಾಸ: ಏಳು ಶಿಖರಗಳ ಜೆಡ್ ಯೋಡ್

Published:
Updated:

‘Buddha is not for decoration’ ಇದು ಥಾಯ್ಲೆಂಡಿನ ಚಿಯಾಂಗ್ ಮಾಯ್ ವಿಮಾನ ನಿಲ್ದಾಣದ ಎದುರಿಗೇ ಇರುವ ಒಂದು ಫಲಕ. ಬೌದ್ಧ ಧರ್ಮವೇ ಪ್ರಧಾನವಾದ ಈ ದೇಶದ ಬಹುತೇಕ ಕಡೆ ಈ ರೀತಿಯ ಸಾಲುಗಳನ್ನು ನೋಡಬಹುದು. ಬುದ್ಧನ ಪ್ರತಿಮೆ ಅಥವಾ ಚಿತ್ರಗಳನ್ನು ಕೇವಲ ಮನೆಯ ಷೋಕೇಸುಗಳಲ್ಲಿ, ಗೋಡೆಗಳ ಮೇಲೆ, ಕಾರಿನ ಮುಂಭಾಗ, ಟೇಬಲ್ಲುಗಳು, ರಿಸೆಪ್ಷನ್ ಬಳಿ ಅಲಂಕಾರಕ್ಕಾಗಿ ಇಟ್ಟುಕೊಳ್ಳುವ ಪ್ರವೃತ್ತಿಯನ್ನು ಹೋಗಲಾಡಿಸಲು ಥಾಯ್ಲೆಂಡ್‌ ಪ್ರಯತ್ನಿಸುತ್ತಿದೆ. ಅದಕ್ಕಾಗಿಯೇ ನಡೆಯುತ್ತಿರುವುದು ಈ ಅಭಿಯಾನ. ಬುದ್ಧನ ಚಿಂತನೆಯನ್ನು ಜೀವನ ವಿಧಾನವಾಗಿಸುವುದು ಇದರ ಉದ್ದೇಶ.

ಆ ದೇಶದ ಮತ್ತೊಂದು ವೈಶಿಷ್ಟ್ಯವೆಂದರೆ ಅಲ್ಲಿನ ಬಹುತೇಕ ಜನ ಬುದ್ಧನ ಕೇವಲ ಮುಖದ ಭಾಗವನ್ನಷ್ಟೇ ನೋಡಲು ಅಥವಾ ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ. ಅದು ಬುದ್ಧನ ಪ್ರತಿಮೆಯಾಗಲಿ, ಚಿತ್ರಗಳಾಗಲಿ, ವಿಗ್ರಹವಾಗಲಿ ಇಡೀ ದೇಹ ಭಂಗಿಯೇ ಇರಬೇಕು ಎಂಬುದು ಅವರ ಅಪೇಕ್ಷೆ. ಇತರರಿಂದಲೂ ಅದನ್ನೇ ನಿರೀಕ್ಷಿಸುತ್ತಾರೆ. ಕನಿಷ್ಠ ಎದೆಯ ಮಟ್ಟವಾದರೂ ಇರಬೇಕು. ಕೇವಲ ಕುತ್ತಿಗೆ ಮೇಲಿನ ತಲೆಯ ಭಾಗ ಕೂಡದು. ಬುದ್ಧನ ಸಂಪೂರ್ಣ ವ್ಯಕ್ತಿತ್ವ ಅರಿಯಬೇಕೆನ್ನುವುದು ಇದರ ಉದ್ದೇಶ.

ಥಾಯ್ಲೆಂಡ್‌ ಥೇರಾವಾದ ಬೌದ್ಧ‌ತತ್ವವನ್ನು ಅನುಸರಿಸುತ್ತದೆ. ನಗರ ಹಾಗೂ ಹಳ್ಳಿಗಳಲ್ಲಿ ಹೆಜ್ಜೆ ಹೆಜ್ಜೆಗೂ ಬುದ್ಧ ಮಂದಿರಗಳಿವೆ (ಥಾಯ್ ಭಾಷೆಯಲ್ಲಿ ‘Wat’ ಎನ್ನುತ್ತಾರೆ). ಮಂದಿರಗಳ ಹೊರಭಾಗ ಮತ್ತು ಒಳಭಾಗದ ವಿನ್ಯಾಸ, ಎತ್ತರ ಹಾಗೂ ಗಾಢ ವರ್ಣ ವೈವಿಧ್ಯ ಥಟ್ಟನೆ ಸೆಳೆಯುತ್ತದೆ. ಬಹುತೇಕ ಮಂದಿರಗಳ ಒಳಭಾಗದ ಗೋಡೆಗಳ ಮೇಲೆ ಬುದ್ಧನ ಜೀವನ ಚರಿತ್ರೆಯ ಮುಖ್ಯಘಟ್ಟಗಳನ್ನು ಚಿತ್ರಿಸಿರುತ್ತಾರೆ.

ಪಚ್ಚೆ ಬುದ್ಧ ಮತ್ತು ಸ್ಲೀಪಿಂಗ್ ಬುದ್ಧ
ಥಾಯ್ಲೆಂಡ್‌ ರಾಜಧಾನಿ ಬ್ಯಾಂಕಾಕಿಗೆ ಹೋದ ಪ್ರವಾಸಿಗರ ಮೊದಲ ಆದ್ಯತೆ ಅಲ್ಲಿನ ಪಚ್ಚೆ ಬುದ್ಧನ (Emerald Buddha) ಮಂದಿರ ಮತ್ತು ಮಲಗಿದ ಬುದ್ಧನ ಚಿನ್ನದ ಪ್ರತಿಮೆ ನೋಡುವುದು.

ನಗರದ ಹೃದಯ ಭಾಗದಲ್ಲಿರುವ ರಾಜನ ಅರಮನೆ ಪ್ರಾಂಗಣದಲ್ಲಿಯೇ ಪಚ್ಚೆ ಬುದ್ಧನ ಭವ್ಯ ಮಂದಿರವಿದ್ದು, ವರ್ಷವಿಡೀ ಪ್ರವಾಸಿಗರು ಹಾಗೂ ಪ್ರಾರ್ಥನೆ ಸಲ್ಲಿಸುವ ಬೌದ್ಧ ಅನುಯಾಯಿಗಳಿಂದ ಕಿಕ್ಕಿರಿದಿರುತ್ತದೆ. 19 ಇಂಚು ಅಗಲ ಮತ್ತು 26 ಇಂಚು ಎತ್ತರದ ಬುದ್ಧನ ವಿಗ್ರಹ ಧ್ಯಾನಸ್ಥ ಭಂಗಿಯಲ್ಲಿದೆ. ಎತ್ತರದ ಗೋಡೆ ಹಾಗೂ ಕಂಬಗಳು ಮತ್ತು ಹೊರಭಾಗದ ಗೋಡೆಗಳ ಮೇಲಿನ ಮ್ಯೂರಲ್‌ ವರ್ಣಚಿತ್ರಗಳು ಇಲ್ಲಿನ ಮತ್ತೊಂದು ವಿಶೇಷ.

ಅರಮನೆಗೆ ತುಸು ದೂರದಲ್ಲಿ ಬುದ್ಧನ ಮಲಗಿದ ಅಥವಾ ಒರಗಿದ ಭಂಗಿಯ ವಿಗ್ರಹವಿರುವ ಮಂದಿರವಿದೆ. ಥಾಯ್ ಭಾಷೆಯಲ್ಲಿ ವಾಟ್ ಫೋ ಎನ್ನಲಾಗುತ್ತದೆ. 1832ರಲ್ಲಿ ನಿರ್ಮಾಣ. ಬ್ಯಾಂಕಾಕಿನ ಅತ್ಯಂತ ಹಳೆಯ ಮಂದಿರಗಳಲ್ಲೊಂದು. ಬುದ್ಧ ತನ್ನ ಮರಣದ ಸಮಯದಲ್ಲಿ ಬಲಗೈಯನ್ನು ತಲೆಗಾನಿಸಿಕೊಂಡು, ಎಡಗೈಯನ್ನು ದೇಹದ ಮೇಲೆ ಇರಿಸಿಕೊಂಡು ಮಲಗಿರುವ ಭಂಗಿ ಇದು. ಕಾಲಿನಿಂದ ತಲೆಯವರೆಗೆ 46 ಮೀಟರ್ ಉದ್ದ ಹಾಗೂ 15 ಮೀಟರ್ ಎತ್ತರದ ಬೃಹತ್ ವಿಗ್ರಹ. ಬಂಗಾರದ ಲೇಪನ ಮಾಡಲಾಗಿದೆ. ಬುದ್ಧನ ಹಸನ್ಮುಖ ಹಾಗೂ ಪಾದಗಳ ಮೇಲೆ ಕೆತ್ತಿರುವ ಬೌದ್ಧ ಧರ್ಮದ 108 ಲಕ್ಷಣಗಳು ವಿಗ್ರಹದ ಆಕರ್ಷಣೆ.

ಕೋಟ್ಯಂತರ ರೂಪಾಯಿ ಬೆಲೆಬಾಳುವ ವಿಗ್ರಹಗಳುಳ್ಳ ಈ ಎರಡೂ ಮಂದಿರಗಳನ್ನು ನೋಡಲು ಕಿರಿಕಿರಿ ಎನಿಸುವ ಸೆಕ್ಯೂರಿಟಿಯೇನೂ ಇಲ್ಲ. ಆದರೆ ಪ್ರವೇಶ ದರ ತುಸು ದುಬಾರಿ.

ಏಳು ಶಿಖರಗಳ ಜೆಡ್ ಯೋಡ್
ಚಿಯಾಂಗ್ ಮಾಯ್ ನಗರದಲ್ಲಿರುವ ಈ ಬುದ್ಧ ಮಂದಿರದ ವಿನ್ಯಾಸ ಭಾರತದ ಮಹಾಬೋಧಿ ಮಂದಿರದಿಂದ ಪ್ರೇರಿತವಾಗಿದೆ. 15ನೇ ಶತಮಾನದಲ್ಲಿ ಥಾಯ್ಲೆಂಡ್‌ ರಾಜ ತಿಲೊಕ್ಕರಾತ್ ಅವರಿಂದ ನಿರ್ಮಾಣ. ಮುಖ್ಯ ಮಂದಿರದ ಮೇಲೆ ಏಳು ಶಿಖರಗಳಿವೆ. ಪ್ರವೇಶದ್ವಾರದ ಎರಡೂ ಬದಿ ಬಾಯಿ ತೆರೆದ ಹಾವಿನ ವಿಗ್ರಹಗಳಿವೆ. ಇವು ಮಂದಿರವನ್ನು ಕಾಪಾಡುತ್ತವೆ ಎಂಬುದು ನಂಬಿಕೆ. ಥಾಯ್ಲೆಂಡ್‌ನ ಹಲವು ಬುದ್ಧ ಮಂದಿರಗಳಲ್ಲಿ ಹಾವಿನ ವಿಗ್ರಹಗಳನ್ನು ಕಾಣಬಹುದು. ಅಲ್ಲದೆ ಈ ಮಂದಿರದ ಒಂದು ಬದಿಯಲ್ಲಿ ನೂರಾರು ಪುಟ್ಟ-ಪುಟ್ಟ ಹಾವಿನ ವಿಗ್ರಹಗಳನ್ನು ಇಟ್ಟಿದ್ದಾರೆ. ಪ್ರಾಚೀನ ಕಾಲದಲ್ಲಿ ಇಲ್ಲಿ ಅಸ್ತಿತ್ವದಲ್ಲಿದ್ದ ನಾಗ ಸಂಸ್ಕೃತಿ ಹಾಗೂ ನಂತರ ಬಂದ ಬುದ್ಧ ಸಂಸ್ಕೃತಿಯ ಸಮ್ಮಿಳನ ಇದಾಗಿರಬಹುದು ಎನ್ನುತ್ತಾರೆ ಥಾಯ್ಲೆಂಡ್‌ನ ಮೈಖೇಲ್.


ಜೆಡ್ ಯೋಡ್ ಮಂದಿರ

ಸಣ್ಣ ಹಳ್ಳಿಗಳಲ್ಲೂ ಬೃಹತ್ ಮಂದಿರಗಳು
ವಿಶಾಲವಾಗಿ ಹರಡಿಕೊಂಡಿರುವುದು ಥಾಯ್ಲೆಂಡ್‌ ಬುದ್ಧ ಮಂದಿರಗಳ ವೈಶಿಷ್ಟ್ಯ. ಪ್ರವೇಶದ್ವಾರದ ಪಕ್ಕದಲ್ಲೇ ದೊಡ್ಡ ಗಂಟೆ, ಬೌದ್ಧ ಬಿಕ್ಕುಗಳ ವಾಸದ ಮನೆ, ಪ್ರವಚನ ಅಥವಾ ಇತರೆ ಊರೊಟ್ಟಿನ ಕೆಲಸಗಳಿಗಾಗಿ ಹಾಲ್ ಕೂಡ ಮಂದಿರದ ಭಾಗವಾಗಿಯೇ ಇರುತ್ತವೆ. ನೀರಿನ ಅರವಟ್ಟಿಗೆ, ಹೂದೋಟಗಳನ್ನೂ ಕೆಲವೆಡೆ ಕಾಣಬಹುದು.

ಹಳ್ಳಿಗಳಲ್ಲಿ ನಡೆಯುವ ಎಲ್ಲಾ ಮುಖ್ಯ ಕೆಲಸಗಳಲ್ಲಿ ಅಲ್ಲಿನ ಬೌದ್ಧ ಬಿಕ್ಕುಗಳ ಸಕ್ರಿಯ ಭಾಗವಹಿಸುವಿಕೆ ಹಾಗೂ ಮಾರ್ಗದರ್ಶನ ಇರುತ್ತದೆ. ಉದಾಹರಣೆಗೆ ಮೆಥಾ ಎಂಬ ಹಳ್ಳಿಯು ಸಾವಯವ ಕೃಷಿಗೆ ತೆರೆದುಕೊಳ್ಳುವಲ್ಲಿ ಹಾಗೂ ಅದಕ್ಕೆ ಸ್ಥಳೀಯ ಸರ್ಕಾರ ಕೈಜೋಡಿಸುವಂತೆ ಮಾಡುವಲ್ಲಿ ಬಿಕ್ಕುಗಳ ಪ್ರಭಾವ ಬಲು ದೊಡ್ಡದು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ ಆ ಹಳ್ಳಿಯ ಯುವ ಕೃಷಿಕ ಆನ್.

ಬೌದ್ಧ ಕ್ಯಾಲೆಂಡರ್ ಅನುಸರಣೆ
ಥಾಯ್ಲೆಂಡ್‌ನಲ್ಲಿ ಬೌದ್ಧ ಕ್ಯಾಲೆಂಡರನ್ನು ಅನುಸರಿಸಲಾಗುತ್ತದೆ. ಬುದ್ಧ ನಿರ್ವಾಣ ಹೊಂದಿದ ವರ್ಷದಿಂದ ಮೊದಲ ವರ್ಷವನ್ನು ಲೆಕ್ಕ ಹಾಕಲಾಗುತ್ತದೆ. 2018ನೇ ಇಸವಿಯು ಬೌದ್ಧ ಕ್ಯಾಲೆಂಡರ್ ಪ್ರಕಾರ 2561ನೇ ಇಸವಿ. ಭಾನುವಾರ ವಾರದ ಮೊದಲ ದಿನ. ನಾವು ನೋಡಿದ ಮೇಥಾ ಹಳ್ಳಿಯ ಬುದ್ಧ ದೇವಾಲಯವನ್ನು ಬೌದ್ಧ ಇಸವಿ 2535ರಲ್ಲಿ ನಿರ್ಮಿಸಲಾಗಿದೆ. ಅಂದರೆ 26 ವರ್ಷಗಳ ಹಿಂದೆ. ಇದು ಬುದ್ಧನ ಅಸ್ತಿತ್ವವನ್ನು ಎಳೆ ತಲೆಮಾರುಗಳಿಗೆ ದಾಟಿಸುವ ಕ್ರಮವೂ ಹೌದು.


ಗಾಢ ಬಣ್ಣ ಹಾಗೂ ಎತ್ತರದ ನಿಲುವಿನ ಬುದ್ಧಮಂದಿರ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !