ಗುರುವಾರ , ಮಾರ್ಚ್ 4, 2021
29 °C

ಹಾಲಿನ ಸಾಗರ ಸಿಗಲಿಲ್ಲ ಹಾದಿಯ ಸೊಬಗ ಮರೆಯಲ್ಲ

ಪ್ರಕಾಶ ಡಂಗಿ Updated:

ಅಕ್ಷರ ಗಾತ್ರ : | |

Deccan Herald

ಕಣ್ಣ ಹಸಿವ ತಣಿಸುವ ಹಸಿರು, ಮುಗಿಲಿಗೆ ಹಚ್ಚಿದ ಏಣಿಯಂತೆ ಎತ್ತರಕ್ಕೆ ನಿಂತ ಮರಗಳು, ಸುಂಯ್ ಸುಂಯ್ ಸುಳಿದಾಡುವ ಗಾಳಿ, ಸದ್ದು ಮಾಡದೆ ಆವರಿಸುವ ಮಂಜು, ಒಮ್ಮೆ ಜಿನಿ ಜಿನಿ ಜಿನುಗುತ್ತ ಮತ್ತೆ ಒಮ್ಮಿಂದೊಮ್ಮೆಲೆ ರಪರಪನೇ ಸುರಿವ ಮಳೆ, ಅದು ತನ್ನ ಆರ್ಭಟ ನಿಲ್ಲಿಸಿದರೂ ಟಪ್ ಟಪ್ ಎಂದು ಮರಗಳಿಂದ ಉದುರುವ ಹನಿಗಳ ಸದ್ದು, ಜುಳು ಜುಳು ಹರಿವ ಕಿರು ತೊರೆಗಳು, ಅಲ್ಲಲ್ಲಿ ಹಕ್ಕಿಗಳ ಕೂಗು, ಚಿಟ್ಟೆಗಳ ಹಾರಾಟ, ಜಗದ ಯಾವ ವೇಗದ ಗೊಡವೆಗೂ ತಲೆಕೆಡಿಸಿಕೊಳ್ಳದೆ ನಿರುಮ್ಮಳ ಮನಸಿಂದ ನಿಧಾನವಾಗಿ ತೆವಳುವ ಹುಳ ಹುಪ್ಪಟೆಗಳು, ಸಿಕ್ಕ ಪ್ರಾಣಿಗಳ ರಕ್ತ ಹೀರುವ ಜಿಗಣೆಗಳು, ಆಗೊಮ್ಮೆ ಈಗೊಮ್ಮೆ ಚುಕುಬುಕು ಕೂಊಊ ಎಂದು ಕೂಗುತ್ತ, ಏರುಸಿರು ಬಿಡುತ್ತ ನಿಧಾನವಾಗಿ ಓಡುವ ರೈಲುಗಳು, ಜೊತೆಗೆ ನಮ್ಮ ಹೆಜ್ಜೆಗಳು...

ನಾನು ಹೇಳಹೊರಟಿದ್ದು 14 ಕಿ.ಮೀ. ಕಾಲ್ನಡಿಗೆಯಲಿ ಹೊರಟು, ರೈಲಿನಲಿ ಮರಳಿ ಬಂದ, ಒಂದು ದಿನದ ‘ದೂಧ್ ಸಾಗರ’ ಪ್ರವಾಸದ ಅನುಭವಗಳ ಕುರಿತು... 

ಒಂದು ರವಿವಾರ ದೂಧ್ ಸಾಗರ ಜಲಪಾತ ನೋಡಲೆಂದು ಹೊರಟ ನಮ್ಮ ಗುಂಪಿನಲ್ಲಿ ನನ್ನ ಜತೆ ಅನಿಲ್, ವಿಶ್ವನಾಥ ಹಾಗು ಚೇತನ್‌ ಇದ್ದರು. ಗೋವಾ ಸರಕಾರ ದೂಧ್ ಸಾಗರಕ್ಕೆ ಹೋಗುವುದನ್ನು ನಿಷೇಧಿಸಿತ್ತು. ಹೀಗಿದ್ದೂ ಅಲ್ಲಿಗೆ ಹೋಗುವ ಆಸೆ ಹುಟ್ಟಿಸಿದ್ದು ವಿಶ್ವನಾಥನೇ. ಆದರೆ ನನ್ನದೊಂದು ಸಣ್ಣ ಯಡವಟ್ಟಿನಿಂದ, ಕೊನೆಕ್ಷಣದಲ್ಲಿ ಜಲಪಾತವನ್ನು ನೋಡುವ ಭಾಗ್ಯ ದಕ್ಕದೆ ಹೋಯಿತು. ಹಾಗಾಗಿ ನಾವು ಕೇವಲ ಧೂದ್ ಸಾಗರ ರೈಲು ನಿಲ್ದಾಣವನ್ನಷ್ಟೇ ನೋಡಿ ಬರಬೇಕಾಯ್ತು.ದೂಧ್‌ ಸಾಗರ ಹೋಗುವ ದಾರಿಯುದ್ದಕ್ಕೂ ಇಂಥ ರಮಣೀಯ ದೃಶ್ಯಗಳ ಮೃಷ್ಟಾನ್ನ ಸಿಗುತ್ತವೆ

ಎಲ್ಲ ಶುರುವಾಗಿತ್ತು ಹೀಗೆ

ಬಾಗಲಕೋಟೆಯಿಂದ ಬೆಳಿಗ್ಗೆ ಏಳು ಗಂಟೆಗೆ ಕಾರಿನಲ್ಲಿ ನಾವು ನಾಲ್ಕು ಜನ ಹೊರಟು ಕ್ಯಾಸಲ್ ರಾಕ್ ರೈಲು ನಿಲ್ದಾಣದ ಕಡೆಗೆ ಹೊರಟೆವು. ಬಾಗಲಕೋಟೆಯಿಂದ ಬೆಳಗಾವಿ, ಖಾನಾಪುರ ಮಾರ್ಗವಾಗಿ 210 ಕಿ.ಮೀ. ಚಲಿಸಿದರೆ ಕ್ಯಾಸಲ್ ರಾಕ್ ರೈಲುನಿಲ್ದಾಣ ಸಿಗುತ್ತದೆ. ಅಲ್ಲಿಂದ ರೈಲಿನಲ್ಲಿ ಹೋಗಬೇಕು ಎಂದು ಮೊದಲೇ ನಿರ್ಧರಿಸಿದ್ದೆವು.

ದೂಧ್ ಸಾಗರ ಜಲಪಾತಕ್ಕೆ ಹೋಗಲು ಯಾವುದೇ ದಿಕ್ಕಿನಿಂದ ನೇರ ದಾರಿಗಳಿಲ್ಲ. ಹೋಗುವುದೇ ಆದರೆ ರೈಲಿನ ಮುಖಾಂತರವೇ ಹೋಗಬೇಕು. ಇಲ್ಲವೇ ರೈಲು ಹಳಿಗುಂಟ ನಡೆದುಕೊಂಡು ಹೋಗಬೇಕು. ನಮ್ಮ ರಾಜ್ಯದ, ಉತ್ತರ ಕನ್ನಡ ಜಿಲ್ಲೆಯ ಆ ಭಾಗದ ಕೊನೆಯ ರೈಲು ನಿಲ್ದಾಣವಾಗಿರುವ ಕ್ಯಾಸಲ್ ರಾಕ್ ಸ್ಟೇಷನ್‌ದಿಂದ ದೂಧ್ ಸಾಗರ ಜಲಪಾತದ ತನಕ 15 ಕಿ.ಮೀ. ನಡೆದುಕೊಂಡೇ ಹೋಗಬೇಕು. ಗೋವಾದ ಕಡೆಯಿಂದಲೂ ಅಷ್ಟೆ, ಕೋಲಮ್ ರೈಲು ನಿಲ್ದಾಣದಿಂದ 12 ಕಿ.ಮೀ. ನಡೆದುಕೊಂಡು ಬರಬೇಕಂತೆ.

ಕಾನೂನಿನ ಪ್ರಕಾರ ರೈಲು ಹಳಿಗಳ ಮೇಲೆ ನಡೆದುಕೊಂಡು ಹೋಗುವುದು ಅಪರಾಧ. ಆದರೂ ಅದೆಷ್ಟೋ ಸಾಹಸಿ ಜನ ಪ್ರತಿವರ್ಷ ನಡೆದುಕೊಂಡೇ ಹೋಗುತ್ತಾರಂತೆ. ಹಾಗೆ ನಾವೂ ಕೂಡಾ ನಡೆದೇ ಹೋಗಬೇಕು, ಅಲ್ಲಿನ ನಿಸರ್ಗ ಸೌಂದರ್ಯ ಸವಿಯಬೇಕು ಎಂದು ನಿರ್ಧಾರ ತೆಗೆದುಕೊಂಡೆವು. ಆದರೆ ಹೋಗುವಾಗ ನಮ್ಮ ಪರಿಚಯದ ಪುರಾವೆ ಕೊಟ್ಟು ಕ್ಯಾಸಲ್ ರಾಕ್ ನಿಲ್ದಾಣದಲ್ಲಿ ಮೌಖಿಕ ಪರವಾನಗಿ ಪಡೆದಿದ್ದೆವು.

ಕ್ಯಾಸಲ್ ರಾಕ್ ರೈಲು ನಿಲ್ದಾಣ ತಲುಪಿದಾಗ ಮಧ್ಯಾಹ್ನ 12 ಗಂಟೆ. ನಮ್ಮ ಕಾರನ್ನು ನಿಲ್ದಾಣದ ಹೊರಗಡೆ ಪಾರ್ಕ್‌ ಮಾಡಿದೆವು. ತಾಸಿಗೆ ಐದು ಕಿ.ಮೀ. ನಡೆದರೂ ಮೂರು ತಾಸಿಗೆ 15 ಕಿ.ಮೀ. ನಡೆಯಬಹುದು, ಸ್ವಲ್ಪ ಸಾವಕಾಶ ಫೋಟೊ ತೆಗೆಯುತ್ತಾ ಸಾಗಿದರೂ ನಾಲ್ಕು ತಾಸಿಗೆ ತಲುಪಬಹುದು. ಮತ್ತೆ ಒಂದು ತಾಸು ನಮಗೆ ಜಲಪಾತ ನೋಡುವ ಅವಕಾಶವಿರುತ್ತದೆ ಎಂದು ಲೆಕ್ಕಾಚಾರ ಹಾಕಿಕೊಂಡಿದ್ದೆವು. ಹೇಗೆ ಹೋದರೂ ಸಂಜೆ ಐದು ಗಂಟೆಯ ಒಳಗೆ ಮರಳಿ ದೂಧ್ ಸಾಗರ್‌ ರೈಲು ನಿಲ್ದಾಣಕ್ಕೆ ಬರಲೇ ಬೇಕಾಗಿತ್ತು. ಯಾಕೆಂದರೆ ಆ ಸಮಯಕ್ಕೆ ದಿನದ ಕೊನೆಯ ರೈಲು, ನಿಲ್ದಾಣವನ್ನು ಬಿಡುತ್ತಿತ್ತು.

ಆ ಹೊತ್ತು ಮೀರಿದ್ದೇ ಆದರೆ, ನಂತರ ಬರುವ ಗೂಡ್ಸ್‌ ರೈಲಿನಲ್ಲಿ ವಿನಂತಿಸಿಕೊಂಡು ಗೋವಾದ ಕೋಲಮ್ ರೈಲು ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಬೇರೆ ಟ್ಯಾಕ್ಸಿ ಮಾಡಿಕೊಂಡು ನಮ್ಮ ರಾಜ್ಯದ ಕ್ಯಾಸಲ್ ರಾಕ್ ರೈಲು ನಿಲ್ದಾಣಕ್ಕೆ ಬರಬೇಕು. ಇಲ್ಲವೇ ಮತ್ತೆ ಮರಳಿ 15 ಕಿ.ಮೀ. ನಡೆದುಕೊಂಡೇ ಬರಬೇಕು. ಪ್ರಯಾಣ ಮತ್ತಷ್ಟು ಕಠಿಣವಾಗುತ್ತದಾದ್ದರಿಂದ ಹೋಗುವಾಗ ನಡೆದುಕೊಂಡು ಹೋಗುವುದು, ಬರುವಾಗ ರೈಲಿಗೆ ಬರುವುದು ಅನ್ನೊ ನಿರ್ಧಾರ ಮಾಡಿ ಹೊರಟೆವು.


ದೂಧ್‌ ಸಾಗರಕ್ಕೆ ಹೋಗುವ ಮಂಜು ಮುಸುಕಿದ ದಾರಿ

ಬುತ್ತಿ ಚೀಲ ಮರೆತ ಪ್ರಮಾದ

ಅಲ್ಲಲ್ಲಿ ಕಿರು ಜಲಪಾತಗಳ ಭೋರ್ಗರೆತದ ನಿನಾದ ಕೇಳುವುದೇ ಒಂದು ಖುಷಿ. ಅಂತಹ ಒಂದು ಕಿರು ಜಲಪಾತದಲ್ಲಿ ಕುಳಿತು ಫೋಟೊ ತೆಗೆಯುವ ಧಾವಂತದಲ್ಲಿ ನನ್ನ ಕೈಯಲ್ಲಿದ್ದ ಊಟದ ಡಬ್ಬಿಗಳಿದ್ದ ಕೈಚೀಲವನ್ನು ಅಲ್ಲಿಯೇ ಚಿಕ್ಕ ಪೊದೆಗಳ ಮಧ್ಯೆ ಇಟ್ಟು ಮರೆತುಬಿಟ್ಟಿದ್ದೆ. ಕನಿಷ್ಠ ಎರಡು ಕಿಲೋಮೀಟರಿನಷ್ಟು ದೂರ ಕ್ರಮಿಸಿದಾಗ ಊಟದ ಚೀಲವನ್ನು ಮರೆತು ಬಂದ ಸಂಗತಿ ಅರಿವಾಯಿತು.

ಬೇಡವೆಂದರೂ ಕೇಳದೆ, ಅದನ್ನು ಮರಳಿ ತರಲು ವಿಶ್ವನಾಥ ಒಬ್ಬನೇ ಹೊರಟ. ಅವನ ಜತೆ ಚೇತನ್‌ ಕೂಡ ನಡೆದ. ನನ್ನ ಮರೆವನ್ನು ನಾನೇ ಶಪಿಸಿಕೊಳ್ಳುತ್ತಾ, ಸುಮ್ಮನೆ ಅವರು ಬರುವ ಹಾದಿ ಕಾಯುತ್ತಾ, ಅಲ್ಲೇ ರೈಲು ಹಳಿಗಳ ಪಕ್ಕದಲ್ಲಿ ನಾನು ಹಾಗು ಅನಿಲ್‌ ಕುಳಿತುಕೊಂಡೆವು. ಆ ದಟ್ಟಡವಿಯಲ್ಲಿ ನಮ್ಮಿಬ್ಬರನ್ನು ಬಿಟ್ಟರೆ ಬೇರೆ ಯಾವುದೇ ನರಪಿಳ್ಳೆಯ ಸುಳಿವೂ ಇಲ್ಲ. ಮಳೆ ಮಾತ್ರ ಬೆನ್ನು ಬಿಡದೆ ನಮ್ಮ ಚಲನವಲನಗಳನ್ನು ಗಮನಿಸುತ್ತಾ ಸುರಿಯುತ್ತಲೇ ಇತ್ತು. ಸಮಯವೂ ಸರಿಯುತ್ತಲೇ ಇತ್ತು.

ಆ ಕಡೆಗೆ ಬುತ್ತಿಗಂಟು ತರಲು ಹೋಗಿದ್ದ ಅವರಿಬ್ಬರನ್ನು ಸಂಪರ್ಕಿಸಲು ಫೋನ್ ನೆಟ್‌ವರ್ಕ್‌ ಕೂಡ ಇರಲಿಲ್ಲ. ನಾವು ಕುಳಿತಲ್ಲಿಯೇ ಕುಳಿತು ನಲವತ್ತೈದು ನಿಮಿಷಗಳಾಗಿರಬಹುದು, ಯಾವ ಮಾಯೆಯಲ್ಲಿಯೋ ನೆಟ್‌ವರ್ಕ್‌ ಸಿಕ್ಕಿ ನನ್ನ ಫೋನ್ ರಿಂಗಾಯಿತು. ಆ ಕಡೆಯಿಂದ ವಿಶ್ವನಾಥ ಮಾತಾಡಿದ. ‘ಸರ್ ಬುತ್ತಿ ಚೀಲ ಸಿಕ್ಕೈತ್ರಿ. ಬರಾಕತ್ತೇವ್ರಿ, ಹೋಗಾಗ ಏನೂ ಇದ್ದಿಲ್ರಿ, ಹೊಳ್ಳಿ ಬರುವಾಗ ಇಲ್ಲಿ ದಾರಿಯಾಗ ಹಳಿಮ್ಯಾಗ ಅಡ್ಡಾಕ ಒಂದ ಗಿಡಾ ಬಿದ್ದೈತ್ರಿ. ಆ ಕಡೆಯಿಂದ ಯಾವರ ರೇಲ್ವೆ ಬಂದ್ರ ಅವ್ರಿಗೆ ಇದನ್ನು ತಿಳಸ್ರಿ. ನಾವು ಬರ್ತೆವಿ, ನೀವು ಮುಂದಕ್ಕ ಸಾಗ್ರಿ’ ಅಂತ ಹೇಳುವಷ್ಟರಲ್ಲೇ ಫೋನ್ ಕಟ್ ಆಯ್ತು. ಇನ್ನೂ ಏನೋ ಕೇಳೋದಿತ್ತು; ಆದರೆ ಸಂಪರ್ಕ ಸಾಧ್ಯವಾಗಲಿಲ್ಲ. ಅವರು ಮರಳಿ ಬರುತ್ತಿದ್ದಾರೆಂಬ ಸಮಾಧಾನದೊಂದಿಗೆ ನಾನು ಗೆಳೆಯ ಅನಿಲ್‌ ಸ್ವಲ್ಪ ಸ್ವಲ್ಪವೇ ಮುಂದಕ್ಕೆ ಸಾಗುತ್ತಿದ್ದೆವು. ಅಷ್ಟರಲ್ಲೆ ಹಿಂದಿನಿಂದ ಅವರ ಕೂಗು ಕೇಳಿ ಬಂತು. ನಿಂತು ಮತ್ತೆ ಜೊತೆಯಲ್ಲೆ ಸಾಗಿದೆವು.

ಹಾಗೆ ಸ್ವಲ್ಪ ಮುಂದಕ್ಕೆ ಸಾಗಿರಬಹುದು. ಅಲ್ಲೊಂದು ಚಿಕ್ಕ ರೈಲು ನಿಲ್ದಾಣವಿತ್ತು. ಅಲ್ಲಿ ಮೂರು ನಾಲ್ಕು ಜನ ಸಿಬ್ಬಂದಿ ಇದ್ದರು. ನಿಲ್ದಾಣದಲ್ಲಿ ಒಂದು ಗೂಡ್ಸ್‌ ರೈಲು ಸಹ ನಿಂತಿತ್ತು. ಹಿಂದೆ ಹಳಿಗಳ ಮೇಲೆ ಮರ ಬಿದ್ದಿರುವ ಸಂಗತಿ ತಿಳಿಸಿ ಮುಂದಕ್ಕೆ ಸಾಗಿದೆವು. ಅವರು ನಮ್ಮಿಂದ ಮಾಹಿತಿ ಪಡೆದು ಮುಂದಿನ ನಿಲ್ದಾಣಕ್ಕೆ ಸುದ್ದಿ ಮುಟ್ಟಿಸುವುದಾಗಿ ಹೇಳಿ ಧನ್ಯವಾದ ಹೇಳಿದರು. ಏನೋ ಒಂದು ದೊಡ್ಡ ಅನಾಹುತ ತಪ್ಪಿಸಿದೆವೇನೋ ಅನ್ನೊ ಹೆಮ್ಮೆಯೊಂದಿಗೆ ನಮ್ಮ ಹೆಜ್ಜೆಗಳು ವೇಗ ಪಡೆದವು. ಆಗಲೇ ಮಧ್ಯಾಹ್ನ ಮೂರು ಗಂಟೆ. ಇಲ್ಲಿಂದ ನಮ್ಮ ಪಯಣ ಇನ್ನೂ ಕಠಿಣವಾಗುತ್ತಾ ಸಾಗುತ್ತಿರುವುದು ಅರಿವಿಗೆ ಬಂತು. ಆದರೂ ನಿಲ್ಲುವ ಹಾಗಿಲ್ಲ, ಕುಳಿತುಕೊಳ್ಳುವ ಹಾಗಿಲ್ಲ. ಇನ್ನೂ ಎರಡು ತಾಸು ನಡೆಯಲೇಬೇಕಿತ್ತು. ನಡೆದೆವು. ಫೋಟೊ ಕ್ಲಿಕ್ಕಿಸುತ್ತಲೇ ನಡೆದೆವು. ಸರಿಯಾಗಿ ಐದು ಗಂಟೆ ಹತ್ತು ನಿಮಿಷಕ್ಕೆ ದೂಧ್ ಸಾಗರ ರೈಲು ನಿಲ್ದಾಣಕ್ಕೆ ಬಂದು ತಲುಪಿದೆವು.

ಕೈಗೆ ಬಂದ ತುತ್ತು...

ಈಗ ಮುಂದಿನ ನಿರ್ಧಾರ ತೆಗೆದುಕೊಳ್ಳೊ ಸಮಯ. ನಿಲ್ದಾಣದಿಂದ ಜಲಪಾತಕ್ಕೆ ಅಂದಾಜು ಒಂದೂವರೆ ಕಿ.ಮೀ. ಹಾದಿ. ಹೋಗಿ ನೋಡಿ ಅವಸರದಿಂದ ಮರಳಿದರೂ ಬರಲು ಕನಿಷ್ಠ 45 ನಿಮಿಷಗಳು ಬೇಕಿದ್ದವು. ರಾತ್ರಿಯಾಗಿಬಿಟ್ಟರೆ ಎದುರಾಗುವ ಸಂಕಷ್ಟಗಳನ್ನು ಗಣಿಸಿ ನಮ್ಮ ಪ್ರವಾಸವನ್ನು ಅಲ್ಲಿಯೇ ಮೊಟಕುಗೊಳಿಸಿ ರೈಲು ಹತ್ತಿ ವಾಪಸಾಗುವ ನಿರ್ಧಾರಕ್ಕೆ ಬಂದೆವು. ತಂದ ಬುತ್ತಿಯನ್ನೂ ತಿನ್ನದೆ, ಮರಳಿ ಕ್ಯಾಸಲ್ ರಾಕ್ ನಿಲ್ದಾಣಕ್ಕೆ ರೈಲಿನ ಮುಖಾಂತರ ಬಂದಿಳಿದೆವು.

ಸಂಜೆಗೆ ಮರಳುವ ಸೂರ್ಯನಂತೆ, ಮತ್ತೆ ಬರುವ ಹಂಬಲದೊಂದಿಗೆ, ಸವೆದ ಹಾದಿಯ ಮೆಲುಕಿನೊಂದಿಗೆ, ಒದ್ದೆ ಆಗಿದ್ದ ಮೈ, ಒಜ್ಜೆಯಾಗಿದ್ದ ಕಾಲುಗಳನ್ನು ರಮಿಸುತ್ತ ಕಾರ್‌ ಹತ್ತಿ ಊರ ಕಡೆಗೆ ಪ್ರಯಾಣ ಬೆಳೆಸಿದೆವು.

ನಮ್ಮ ಪ್ರವಾಸದ ಗುರಿಯಾಗಿದ್ದ ದೂಧ್ ಸಾಗರ ತಲುಪಲು ಸಾಧ್ಯವಾಗಿಲ್ಲ ಎಂಬ ಬೇಸರವಂತೂ ಇದ್ದೇ ಇತ್ತು. ಆದರೆ ಆ ಬೇಸರವನ್ನೂ ಮರೆಸುವ ಹಾಗೆ ನಾವು ನಡೆದ ಐದು ಗಂಟೆಗಳ ನಡಿಗೆಯಲ್ಲಿ ಸವಿದ ಪ್ರಕೃತಿ ಸೌಂದರ್ಯದ ನೆನಪು ನಮ್ಮನ್ನು ರಮಿಸುತ್ತಿತ್ತು. 


ರೈಲ್ವೆ ಸುರಂಗದ ಒಳಗೊಂದು ನಡಿಗೆ

ಮಳೆಯ ಜತೆ ಚಿತ್ರಕಥೆ

ಪೋಟೊ ತೆಗೆದುಕೊಳ್ಳುತ್ತಾ ನಮ್ಮ ಹೆಜ್ಜೆಗಳು ಸಾಗಿ ಐದೋ ಹತ್ತೋ ನಿಮಿಷಗಳಾಗಿರಬಹುದು. ಮಳೆ ನಮ್ಮ ಮೇಲೆ ಸವಾರಿ ಮಾಡಲು ಶುರುವಿಟ್ಟಿತು. ಅದೆಷ್ಟು ಮಳೆ ಅಂತೀರಿ... 14 ಕಿ.ಮೀ. ಅಂತರದ ಐದು ತಾಸಿನ ಪ್ರಯಾಣದಲ್ಲಿ ಆಗಾಗ ಬಿಡುವು ಕೊಟ್ಟಿದ್ದು ಹತ್ತೋ ಹದಿನೈದೊ ನಿಮಿಷ ಮಾತ್ರ. ಆದಾಗ್ಯೂ ಆ ನಿಸರ್ಗದ ಮಡಿಲಲ್ಲಿ ಮಳೆ ನಮಗೆ ಬೇಸರ ಅನಿಸಲೇ ಇಲ್ಲ. ದಾರಿ ಮಧ್ಯೆ ಆಗಾಗ ಗೂಡ್ಸ್ ರೈಲುಗಳ ಓಡಾಟಕ್ಕೆ ಹಳಿಗಳ ಪಕ್ಕಕ್ಕೆ ಸರಿದು ನಿಲ್ಲುತ್ತ ಮತ್ತೆ ಮುಂದೆ ಸಾಗುತ್ತಿದ್ದೆವು. ಮುಂಚಿತವಾಗಿ ಅಲ್ಲಿಯ ಪರಿಸರದಲ್ಲಿನ ಆಗುಹೋಗುಗಳು ಗೊತ್ತಿದ್ದಿದ್ದರಿಂದ ಮಳೆಯಿಂದ ರಕ್ಷಣೆಗೆಂದು, ರೇನ್‌ಕೋಟ್‌, ಕೊಡೆ ಒಯ್ದಿದ್ದರೂ ತೋಯಿಸಿಕೊಳ್ಳದೆ ಇರಲಾಗಲಿಲ್ಲ. ಕೊಡೆಗಳು ಮೊಬೈಲ್‌ ಕ್ಯಾಮೆರಾಗಳ ರಕ್ಷಣೆಗೆ ಮಾತ್ರ ಸೀಮಿತವಾಗಿದ್ದವು.

ಕ್ಯಾಸಲ್ ರಾಕ್ ನಿಲ್ದಾಣದಿಂದ ಗೋವಾದ ದೂಧ್ ಸಾಗರ ರೈಲು ನಿಲ್ದಾಣ ತಲುಪುವವರೆಗೆ ಸರಿಯಾಗಿ 10 ಟನೆಲ್ (ಸುರಂಗ ಮಾರ್ಗಗಳು)ಗಳನ್ನು ದಾಟಿದ್ದೆವು. ಈ ಸುರಂಗಗಳು ನಮ್ಮನ್ನು ಮತ್ತಷ್ಟು ರೋಮಾಂಚನಗೊಳಿಸಿದ್ದು ಸುಳ್ಳಲ್ಲ. ದೃಷ್ಟಿ ಹಾಯಿಸಿದಷ್ಟೂ ಹಸಿರಿನಿಂದ ಕಂಗೊಳಿಸುವ, ದಾಂಡೇಲಿ ಹುಲಿ ರಕ್ಷಿತಾರಣ್ಯಕ್ಕೆ ಹೊಂದಿಕೊಂಡಿರುವ ಆ ದಟ್ಟ ಅರಣ್ಯದ ಮಧ್ಯೆ ಹಾದು ಹೋಗಿರುವ ಹಳಿಯಗುಂಟ ರೈಲುಗಳು,  ಒಮ್ಮಿಂದೊಮ್ಮೆಲೇ ದಟ್ಟವಾಗಿ ಆವರಿಸುವ ಮಂಜಿನೊಳಗೆ ನುಸುಳಿ ಮಾಯವಾಗಿ ಮತ್ತಷ್ಟೇ ಅಚಾನಕ್ಕಾಗಿ ಪ್ರತ್ಯಕ್ಷವಾಗುತ್ತ ಮುಂದೆ ಸಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.