ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯ ಬಿಸಾಕಿ ಆನಂದದ ನೆಲೆಯನ್ನು ತಲುಪಿ..

Last Updated 13 ಜೂನ್ 2022, 19:30 IST
ಅಕ್ಷರ ಗಾತ್ರ

ಭಯ! ಎಲ್ಲ ಜೀವಿಗಳನ್ನೂ ಹುಟ್ಟಿನಿಂದ ಸಾವಿನವರೆಗೆ ಕಾಡುವ ಭಾವಸ್ಥಿತಿ ಭಯ. ಹುಟ್ಟಿಗೆ ಸಾವಿನ ಭಯ. ಸಾವಿಗೆ ಹುಟ್ಟಿನ ಭಯ. ಉಪನಿಷತ್ತು ಕೂಡ ಭಯವಿಲ್ಲದ ಜಾಗವನ್ನು ‘ಸ್ವರ್ಗ’ ಎನ್ನುತ್ತದೆ: ‘ಸ್ವರ್ಗೇಲೋಕೇ ನ ಭಯಂ ಕಿಂಚನಾಸ್ತಿ, ನ ತತ್ರ ತ್ವಂ ನ ಜರಯಾ ಬಿಭೇತಿ, ಉಭೇ ತ್ರೀತ್ವಾ ಅಶನಾಯಾಪಿಪಾಸೇ, ಶೋಕಾತಿಗೋ ಮೋದತೇ ಸ್ವರ್ಗಲೋಕೇ’ (ಕಠೋಪನಿಷತ್ತು). ಅಂದರೆ, ‘ಸ್ವರ್ಗದಲ್ಲಿ ಭಯವಿಲ್ಲ, ಅಲ್ಲಿ ನೀನಿಲ್ಲ (ನೀನು = ಯಮ), ಮುಪ್ಪಿನ ಭೀತಿಯಿಲ್ಲ, ಸ್ವರ್ಗಲೋಕದಲ್ಲಿ ಹಸಿವುಬಾಯಾರಿಕೆಯಾದಿಗಳು ಇಲ್ಲ, ಶೋಕ ಇಲ್ಲ. ಇದುವೇ ಸ್ವರ್ಗ.’ ಭಯದ ವಿವಿಧ ರೂಪಗಳನ್ನು ಈ ಒಂದೇ ಶ್ಲೋಕ ಹೇಳಿಬಿಟ್ಟಿದೆ. ಸ್ವರ್ಗದ ಕಲ್ಪನೆ ನಿಂತಿರುವುದೇ ನರಕದ ಭಯದ ಮೇಲೆ. ಮತ್ತೂ ಮುಂದುವರೆದು ಹೇಳಬೇಕೆಂದರೆ ಸಾಂಸ್ಥಿಕ ಧರ್ಮಗಳು ನಿಂತಿರುವುದೇ ಜನಸಾಮಾನ್ಯರಲ್ಲಿ ಅದು ಬಿತ್ತುವ ಭಯದ ನೆಲೆಯ ಮೇಲೆ. ಎಲ್ಲ ಓಡುವಿಕೆಯ ಹಿಂದೆ ಭಯವಿದೆ. ಹಿಂದುಳಿಯುವ ಭಯ, ಮುಂದುವರೆಯುವ ಭಯ, ಇದ್ದಲ್ಲೇ ಇರುವ ಭಯ! ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ, ಪರೀಕ್ಷೆಗೆ ಫಲಿತಾಂಶದ ಭಯ, ಫಲಿತಾಂಶಕ್ಕೆ ಭವಿಷ್ಯದ ಭಯ. ಆಗ ಹುಟ್ಟಿದ ಮಗು ಕೂಡ ಅಳುತ್ತದೆ. ಹೊಸ ಲೋಕದ, ಅಸ್ತಿತ್ವದ ಭಯ. ಇಡೀ ಬದುಕು ಭಯದ ನೂರು ತೆರೆ.

ಭಯವು ಸಾಮಾನ್ಯ ಸಾರ್ವತ್ರಿಕ ಎಂದರೂ ಮನುಷ್ಯನ ಮೂಲಸ್ವರೂಪ ಆನಂದವಾದ್ದರಿಂದ ಅವನು ಭಯದ ಆವರಣಗಳನ್ನು ದಾಟಿ ಆನಂದದ ನೆಲೆಯನ್ನು ತಲುಪಬೇಕು, ತಲುಪುತ್ತಾನೆ. ಸಾಮಾನ್ಯ ಭಯಗಳು ನಮ್ಮ ಗುರಿಗೆ ಪ್ರಚೋದಕಗಳೂ ಆಗಬಹುದು. ಪರೀಕ್ಷೆಯಲ್ಲಿ ಅನುತ್ತೀರ್ಣನಾಗುವ ಭಯದಿಂದಲೇ ವಿದ್ಯಾರ್ಥಿಯು ವಿಷಯದ ಅಧ್ಯಯನ ಮಾಡುವುದು. ಜೀವನವನ್ನು ಕಟ್ಟಿಕೊಳ್ಳುವ ಈ ಪ್ರಯತ್ನಗಳಲ್ಲಿನ ಭಯದ ಸ್ವರೂಪ ಬೇರೆ. ತನ್ನೊಳಗೇ ಹುಟ್ಟಿಕೊಳ್ಳುವ ಭಯ ಬೇರೆ. ಈ ಜಗತ್ತಿನ ಇತರ ವ್ಯಕ್ತಿ ಮತ್ತು ಸಮಾಜದ ಸಂಸರ್ಗದ ಸಮಯದಲ್ಲಿ ಹುಟ್ಟಿಕೊಳ್ಳುವ ಭಯ ಬೇರೆ. ಇವೆಲ್ಲವನ್ನು ಮೆಟ್ಟಿ ನಿಂತಾಗಲೇ ವ್ಯಕ್ತಿಗೆ ಆನಂದದ ನಿಜಸ್ವರೂಪದ ದರ್ಶನವಾಗುವುದು. ಭಯದ ನೂಲೆಳೆಯಿದ್ದರೂ ಆತಂಕದ ಕಾರಣದಿಂದ ಆನಂದದಿಂದ ವಂಚಿತರಾಗುತ್ತೇವೆ. ಕಗ್ಗ, ‘ಕಳವಳವ ನೀಗಿಬಿಡು, ತಳಮಳವ ದೂರವಿಡು’ ಎಂದು ಹೇಳಿ, ‘...ತಳ್ಳು ಗಲಭೆ ಗಾಬರಿಯ ಮನದಿಂದ, ಅಲೆದಾಡುತಿರೆ ದೀಪ ಕಣ್ಗೆ ಗುರಿ ತಪ್ಪುವುದು’ ಎಂದು ಪದ್ಯವನ್ನು ಮುಕ್ತಾಯಗೊಳಿಸುತ್ತದೆ. ಅಂದರೆ ಭಯದ ಕಾರಣದಿಂದ ಮನಸ್ಸು ವಿಚಲಿತವಾಗಿದ್ದರೆ ಅಲ್ಲಿ ಶಾಂತಿ ಇಲ್ಲ, ಆ ಕಾರಣದಿಂದ ಅಲ್ಲಿ ಆನಂದವೂ ಇಲ್ಲ! ಆಧುನಿಕ ಯುಗದಲ್ಲಂತೂ ಎಲ್ಲದಕ್ಕೂ ಆತಂಕ. ಯಾರಾದರೂ ನಮ್ಮತನವನ್ನು ಕದಿಯುತ್ತಾರೋ, ನಮ್ಮ ಪಾಸ್ ವರ್ಡ್, ಪಿನ್ ನಂಬರ್ ಕದಿಯುತ್ತಾರೋ ಎಂಬ ಭಯ! ಲೋಕಜಾಲವನ್ನು ಮತ್ತು ಪುರಾಣದ ಮಾಯಾಲೋಕವನ್ನೂ ಮೀರಿಸುವ ಅಂತರ್ಜಾಲವೆಂಬ ಲೋಕದ ಅಮೂರ್ತ ದಾಳಿಕೋರರ ಭಯ. ಬಳಸದಿರುವಂತಿಲ್ಲ, ಬಳಸಿದರೆ ಅಸ್ತಿತ್ತ್ವವನ್ನು ಕಾಪಾಡಿಕೊಳ್ಳುವ ಭಯ.

ಭಯವನ್ನು ಭಯದಿಂದ ಗೆಲ್ಲಲಾಗದು. ಧೈರ್ಯದಿಂದ ಗೆಲ್ಲಬೇಕು. ಅಂದರೆ? ರೂಮಿ ಹೇಳುತ್ತಾನೆ: ‘ಅನಿಶ್ಚಯ ಸಂದರ್ಭವನ್ನು ಒಪ್ಪಿಕೊಳ್ಳದಿರು
ವುದೇ ಭಯ. ಅದನ್ನು ಒಮ್ಮೆ ಒಪ್ಪಿಕೊಂಡುಬಿಟ್ಟರೆ ಬದುಕೊಂದು ಸಾಹಸ!’ ಭಯದ ನಿರಾಕರಣೆ ಮಾಡದೆ ಆ ಭಾವದ ಉದಾತ್ತೀಕರಣ ಮಾಡುವತ್ತ ಗಮನಹರಿಸು ಎನ್ನುತ್ತದೆ ಗೀತೆ. ‘ಎಲ್ಲ ಭಯಗಳನ್ನು ಬದಿಗೆ ಸರಿಸಿ ನಿನಗೆ ವಿಧಿಸಿದ ಕಾರ್ಯದಲ್ಲಿ ತೊಡಗು, ಅದರಲ್ಲಿ ಪೂರ್ಣ ಮನವಿಡು’ ಎನ್ನುತ್ತಾನೆ ಶ್ರೀಕೃಷ್ಣ. ಅಧ್ಯಯನ ಮಾಡುವಾಗ ಪರೀಕ್ಷೆಯ ಚಿಂತೆಯನ್ನೂ, ಪರೀಕ್ಷೆ ಬರೆವಾಗ ಫಲಿತಾಂಶದ ಭಯವನ್ನು ಹೊಂದಿರಬಾರದು. ಬದುಕುವಾಗ ಸಾವಿನ ಭಯ ಇರಬಾರದು. ಸಾವು ಬಂದಾಗ ಅದನ್ನು ಸ್ವೀಕರಿಸುವ ಧೈರ್ಯವೂ ಇರಬೇಕು. ಆರೋಗ್ಯದಲ್ಲಿ ಇರುವಾಗ ಅನಾರೋಗ್ಯದ ಚಿಂತೆ ಕಾಡಬಾರದು. ಹಾಗೆಯೇ ಅನಾರೋಗ್ಯ ಬಂದಾಗ ಎದೆಗುಂದಬಾರದು. ಮೊನ್ನೆ ಕೊರೊನಾ ಸಂದರ್ಭದಲ್ಲಿ ಕೋವಿಡನ್ನು ಗೆದ್ದುಬಂದವರೂ ಇದ್ದಾರೆ. ಹಾಗೆಯೇ ಸೋಂಕು ತಗುಲಿದೆ ಎಂಬುದನ್ನು ಕೇಳಿ ಕುಸಿದುಬಿದ್ದವರೂ ಇದ್ದಾರೆ. ಧೈರ್ಯದಿಂದ ಮಾತ್ರ ಭಯವನ್ನು ಗೆಲ್ಲಬಹುದು. ‘ಜೀವನದ ಪ್ರತಿ ಕ್ಷಣದಲ್ಲೂ ಭಯದಿಂದ ಕೊರಗುತ್ತ ಹೇಡಿಯಂತೆ ಬಾಳುವೆಯೇಕೆ? ಓ.. ನನ್ನ ಸೋದರ, ಸಾವು ಅನಿವಾರ್ಯ, ನಿರ್ಜೀವ ವಸ್ತುಗಳಂತೆ, ಕಲ್ಲಿನಂತೆ ಜೀವಿಸುವುದಕ್ಕಿಂತ ಆದರ್ಶ ನಾಯಕನಂತೆ ಧೀರತೆಯಿಂದ ಸಾಯುವುದು ಒಳಿತಲ್ಲವೆ? ಈ ನಶ್ವರ ಜಗತ್ತಿನಲ್ಲಿ ಒಂದೆರಡು ದಿನ ಹೆಚ್ಚಿಗೆ ಇರುವುದರಿಂದೇನು ಪ್ರಯೋಜನ? ತುಕ್ಕು ಹಿಡಿದು ಸಾಯುವುದಕ್ಕಿಂತ, ಇತರರ ಒಳಿತಿಗಾಗಿ ಸೇವೆ ಸಲ್ಲಿಸುತ್ತ ಸವೆಯುವುದು ಒಳಿತು’ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಮುಂದುವರೆದು, ಮತ್ತೊಂದೆಡೆಯಲ್ಲಿ ‘ವೈಶಾಲ್ಯವೇ ಜೀವನ, ಸಂಕುಚಿತತೆಯೇ ಮರಣ’ – ಎನ್ನುತ್ತಾರೆ ಅವರು.

ಕೊನೆಯದಾಗಿ, ಭೂತ ಭವಿಷ್ಯತ್ತುಗಳನ್ನು ಬಿಟ್ಟು ಆ ಕ್ಷಣದಲ್ಲಿ ಬದುಕುವುದೇ ಭಯಕ್ಕೆ ಪರಿಹಾರ ಎಂಬುದಕ್ಕೆ ರಮಣರ ಜೀವನದ ಈ ಘಟನೆ ಸಾಕ್ಷಿ. ಒಮ್ಮೆ ಅವರು ತಮ್ಮ ಭಕ್ತರೊಂದಿಗೆ ಮಾತನಾಡುತ್ತ ಕುಳಿತಿದ್ದರು. ಇದ್ದಕಿದ್ದಂತೆ ಹಾವೊಂದು ಅವರ ಪಾದಗಳ ಮೇಲೆ ಹರಿದುಹೋಯಿತು. ಇದು ಕ್ಷಣಮಾತ್ರದಲ್ಲಿ ನಡೆದುದ್ದರಿಂದ ಭಕ್ತರಿಗೆ ಗಾಬರಿಯಾದರೂ ಏನೂ ತೋಚಲಿಲ್ಲ. ಹಾವು ಹೋದಮೇಲೆ ಒಬ್ಬರು ಕೇಳಿದರು, ‘ಸ್ವಾಮಿ, ಏನನ್ನಿಸಿತು?’ ರಮಣರು ಯಾವುದೇ ಭಾವವನ್ನು ತೋರದೆ, ‘ತಣ್ಣಗಿತ್ತು, ನುಣುಪಾಗಿತ್ತು’ ಎಂದರು. ಅದು ಹಾವು, ವಿಷಜಂತು, ಕಚ್ಚಬಲ್ಲದು, ಸಾಯಿಸಬಲ್ಲದು ಇವೆಲ್ಲ ಅಲ್ಲಿ ಬರಲೇ ಇಲ್ಲ. ಆ ಕ್ಷಣದ ಅನುಭವಕ್ಕೆ ಮಾತ್ರ ಅವರ ಮನಸ್ಸು ತೆರೆದಿತ್ತು. ಹಾಗಾಗಿ ಅಲ್ಲಿ ಭಯ ಆತಂಕ ಉದ್ಭವಿಸಲಿಲ್ಲ. ನಾವು ಕೂಡ ಬದುಕಿನ ಸಲ್ಲಾಪದಲ್ಲಿ ತೊಡಗಿದ್ದೇವೆ. ಹಾವುಗಳು ಹರಿಯಲಿ ಬಿಡಿ; ಭಯ ಬಿಸಾಕಿ, ಆನಂದದಿಂದ ಬದುಕಿ!

v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT