ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆಯನ್ನು ಸವಿಯೋಣ...

Last Updated 18 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಹಗಲೆಲ್ಲಾ ಬಿರುಬಿಸಿಲು, ಸಂಜೆಯಾಗುತ್ತಲೇ ತಂಪೆರೆಯುವ ಗಾಳಿ, ಮಳೆ; ಮನೆಯೊಳಗೂ ಪರೀಕ್ಷೆಯ ಧಗೆ ಕಳೆದು ತಂಪಾದ ರಜೆಯ ಮಜಾ ಅನುಭವಿಸುತ್ತಿರುವ ಮಕ್ಕಳು. ಮರಗಳಲ್ಲಿ ಅರಳಿರುವ ಕಣ್ಮನ ತಣಿಸುವ ಬಣ್ಣ ಬಣ್ಣದ ಹೂಗಳು; ದಾಹವನ್ನು ಇಂಗಿಸುವ ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ಮಾವು, ಹಲಸು - ಬಗೆ ಬಗೆಯ ಹಣ್ಣುಗಳು; ಕಿವಿ ತುಂಬುವ ಪಕ್ಷಿಗಳ ಗಾನ; ಮನೆಯಲ್ಲಿಯೂ ಹಾಗೇ ಚೈತ್ರದ ಹೊಸ ಹುರುಪೇ ಮೈತಳೆದು ಬಂದಂತಿರುವ ಮಕ್ಕಳ ಚಿಲಿಪಿಲಿ, ಆಟ, ನಗು, ತುಂಟಾಟ, ತಂಟೆ-ತಕರಾರು. ಯಾವುದೇ ಧಾವಂತವಿರದ ಬೆಳಗು, ಶಾಂತವಾದ ಮಧ್ಯಾಹ್ನ, ಲವಲವಿಕೆಯ ಸಂಜೆಗಳು. ಮಕ್ಕಳ ನೆಪ ಹೇಳಿ ಮಾಡುವ ಬಗೆಬಗೆಯ ತಿಂಡಿಗಳು, ಏಕತಾನತೆಯನ್ನು ಮುರಿಯಲು ಕೈಗೊಳ್ಳುವ ಪ್ರವಾಸಗಳು, ರೂಢಿಸಿಕೊಳ್ಳುವ ಹವ್ಯಾಸಗಳು, ನೆಂಟರಿಷ್ಟರ-ಬಂಧುಗಳ ಭೇಟಿ. ಒಟ್ಟಿನಲ್ಲಿ ಬಾಲ್ಯಕಾಲದ ಅತ್ಯಂತ ಮೋಹಕ ಸಮಯ ಬೇಸಿಗೆ ರಜೆಯ ಈ ಎರಡು ತಿಂಗಳು.

ನಾವು ಚಿಕ್ಕವರಿದ್ದಾಗ ಎಷ್ಟೋ ಪುಸ್ತಕಗಳನ್ನು, ಕಥೆ–ಕಾದಂಬರಿಗಳನ್ನು ಶಾಲೆಯ ಗಡಿಬಿಡಿಯ ನಡುವೆ ಓದಲಾಗದೆ, ಬೇಸಿಗೆ ರಜೆಯಲ್ಲಿ ಓದಬೇಕೆಂದು ಪ್ಲಾನ್ ಮಾಡಿಕೊಂಡಿರುತ್ತಿದೆವು. ಈಗಲೂ ಮಕ್ಕಳಿಗೆ ತಮ್ಮ ಬೇಸಿಗೆ ರಜೆಗಳ ಕುರಿತು ತಮ್ಮದೇ ಕಲ್ಪನೆಗಳಿರುತ್ತವೆ. ಎಷ್ಟೋ ಬಾರಿ ಪೋಷಕರೇ ‘ಈಗ ಬೇಡ, ಚೆನ್ನಾಗಿ ಓದಿಕೋ, ಬೇಸಿಗೆ ರಜೆಯಲ್ಲಿ ಮಾಡುವೆಯಂತೆ’ ಎಂದು ಮಕ್ಕಳ ಹಲವು ಆಸಕ್ತಿಗಳ ಕುರಿತಾಗಿ ಹೇಳಿರುತ್ತಾರೆ. ಈಗ ಆ ಬೇಸಿಗೆ ರಜೆ ಬಂದೇ ಬಿಟ್ಟಿದೆ, ಮಕ್ಕಳು ತಮ್ಮೆಲ್ಲಾ ಕೂಡಿಟ್ಟ ಕನಸುಗಳನ್ನು ಯಾರ ಅಡೆತಡೆಯಿಲ್ಲದೆ ಕಂಡು, ಸುಖವಾಗಿ ಅನುಭವಿಸಿ, ಸಾಧ್ಯವಾದರೆ ನನಸು ಮಾಡಿಕೊಳ್ಳುವ ಕಾಲ. ಹಾಗೆಯೇ ಪೋಷಕರಿಗೂ ಇದು ಸಂತಸದ ಕಾಲವೇ. ಮಕ್ಕಳ ಜೊತೆ ನಕ್ಕು ನಲಿಯಲು, ಕಲಿಯಲು, ಅವರೊಂದಿಗೆ ಮನಬಿಚ್ಚಿ ಮಾತನಾಡಲು, ವಿಹರಿಸಲು ಸಕಾಲ.

ಇಂತಹ ಆರಾಮದಾಯಕ ಸಮಯದಲ್ಲೂ ಸಣ್ಣಪುಟ್ಟ ಕಿರಿಕಿರಿಗಳು ಇದ್ದೇ ಇರುತ್ತವೆ. ಮಕ್ಕಳು ‘ಬೋರಾಗುತ್ತಿದೆ’ ಎಂದು ಗಂಟೆಗೊಮ್ಮೆ ಹೇಳುವುದು, ‘ಏನಾದ್ರು ತಿನ್ನಲು ಕೊಡು’ ಎಂದು ಪದೇ ಪದೇ ಕೇಳಿ ಪೀಡಿಸುವುದು ಎಲ್ಲರ ಮನೆಯಲ್ಲೂ ಇದ್ದಿದ್ದೇ. ಚಿಕ್ಕಮಕ್ಕಳಿಗೆ ನಗರ ಪ್ರದೇಶಗಳಲ್ಲಿ ಆಟವಾಡುವುದಕ್ಕೆ ಸುರಕ್ಷಿತವಾದ ಜಾಗವಿರುವುದಿಲ್ಲ. ಎಲ್ಲರೊಂದಿಗೂ ಮುಕ್ತವಾಗಿ ಬೆರೆಯಲು ಈಗಿನ ಕಾಲಕ್ಕೆ ಅದರದೇ ಆದ ತೊಡಕುಗಳಿವೆ; ಪೋಷಕರ ಅತಿಯಾದ ಕಾಳಜಿ, ನಿರ್ಬಂಧಗಳೂ ಇದಕ್ಕೆ ಕಾರಣವಿರಬಹುದು. ಮಕ್ಕಳು ತಮ್ಮ ಯಾವುದೇ ಕೆಲಸಗಳನ್ನು ಮಾಡಿಕೊಳ್ಳದೇ ಸೋಮಾರಿಯಾಗಿ ಮೊಬೈಲ್, ಟ್ಯಾಬ್‌ಗಳನ್ನು ನೋಡುತ್ತಾ ಕುಳಿತುಕೊಳ್ಳುವುದು, ಹದಿಹರೆಯಕ್ಕೆ ಕಾಲಿಡುತ್ತಿರುವ ಮಕ್ಕಳು ಮತ್ತು ಅವರ ಪೋಷಕರ ನಡುವೆ ಮಾತು ಮಾತಿಗೂ ಸ್ಫೋಟಗೊಳ್ಳುವ ಸಿಟ್ಟು-ಸಿಡಿಮಿಡಿ, ಯಾವುದೇ ರೀತಿಯ ಬೌದ್ಧಿಕ ಪ್ರಚೋದನೆಗಳನ್ನು ಒದಗಿಸದೆ ಮಕ್ಕಳ ಬೆಳವಣಿಗೆ ಕುಂಠಿತಗೊಳಿಸುವ ಕೆಲವು ಕೌಟುಂಬಿಕ ಪರಿಸ್ಥಿತಿಗಳು, ಇನ್ನೂ ಹಲವು ಇಂತಹ ಸಮಸ್ಯೆಗಳು ಬೇಸಿಗೆ ರಜೆಯ ಆನಂದವನ್ನು ಸವಿಯಲು ತೊಡಕುಗಳಾಗಿವೆ.

ಬೇಸಿಗೆ ರಜೆ ಎನ್ನುವುದು ಮಕ್ಕಳು ದೊಡ್ಡವರಾದ ಮೇಲೂ ಅವರು ಸಂತಸದಿಂದ ಮೆಲುಕು ಹಾಕುವ, ಹೃದಯಕ್ಕೆ ಆಪ್ತವಾದ ನೆನಪುಗಳನ್ನು ಸೃಷ್ಟಿಸಿಕೊಳ್ಳುವ ಕಾಲ. ಹಾಗೆಯೇ ಅವರ ಬೌದ್ಧಿಕ, ಭಾವನಾತ್ಮಕ, ದೈಹಿಕ, ಮಾನಸಿಕ ವಿಕಾಸಕ್ಕೆ ಅಗತ್ಯವಿರುವ ವಿರಾಮವನ್ನು ಒದಗಿಸುವ ಕಾಲ. ಪೋಷಕರು ತಮಗಿಷ್ಟವಾದದ್ದನ್ನೆಲ್ಲಾ ಮಕ್ಕಳು ಈ ಕಾಲದಲ್ಲಿ ಕಲಿತುಬಿಡಬೇಕೆಂದು ಬಯಸುವುದು ಸರಿಯಲ್ಲ. ಮಕ್ಕಳು ತಮ್ಮ ರಜೆಯನ್ನು ಹೇಗೆ ಕಳೆಯಬೇಕೆಂದು ಇಷ್ಟಪಡುತ್ತಾರೆನ್ನುವುದನ್ನು ಅವರಿಂದಲೇ ಕೇಳಿ ತಿಳಿಯಬೇಕು, ಆಗ ಅವರಿಗೂ ಪ್ರಾಮುಖ್ಯವನ್ನು ನೀಡಿದಂತಾಗುತ್ತದೆ ಮತ್ತು ಅವರ ಸ್ವಾತಂತ್ರ್ಯವನ್ನು ಗೌರವಿಸಿದಂತಾಗುತ್ತದೆ.

ಮಕ್ಕಳು ಮನೆಯಲ್ಲಿರುವ ರಜೆಯ ಸಮಯದಲ್ಲಿ ಏನೊಂದೂ ಮನೆಕೆಲಸ ಮಾಡದೆ ಎಲ್ಲದಕ್ಕೂ ಮನೆಯ ಇತರ ಸದಸ್ಯರ ಮೇಲೆ ಅವಲಂಬಿತವಾಗಿರುವುದು ಹಲವು ಪೋಷಕರಿಗೆ ತಲೆನೋವಾಗಿ ಪರಿಣಮಿಸಿರುತ್ತದೆ. ಮಕ್ಕಳಿಗೆ ಮನೆಕೆಲಸಗಳನ್ನು ಮಾಡುವುದರ ಮಹತ್ವವನ್ನು ಎಷ್ಟು ತಿಳಿಸಿಕೊಟ್ಟರೂ ಅವರು ತಮ್ಮ ನಡವಳಿಕೆಯಲ್ಲಿ ಹೆಚ್ಚಿನ ಬದಲಾವಣೆಯನ್ನು ತೋರದಿರಬಹುದು. ಈ ವಿಷಯದಲ್ಲಿ ಅವರನ್ನು ಶಿಕ್ಷಿಸುವುದು, ಬಲವಂತಪಡಿಸುವುದು ಉಪಯೋಗಕ್ಕೆ ಬರುವುದಿಲ್ಲ. ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕಾದ ಅನಿವಾರ್ಯ ಸಂದರ್ಭಗಳನ್ನು ಸೃಷ್ಟಿಸಿ ಅವರಿಗೆ ಸ್ವತಂತ್ರವಾಗಿ ಬದುಕುವುದನ್ನು ರೂಢಿ ಮಾಡಿಸಬೇಕು.

ಮಕ್ಕಳೊಡನೆ ಸಂವಹಿಸುವುದು ಒಂದು ಕಲೆ. ಕೇವಲ ‘ಹೀಗೆ ಯಾಕೆ ಮಾಡುತ್ತೀಯ? ಹೀಗಿರು, ಇಂಥದ್ದೇ ಮಾಡು’ ಎನ್ನುವ ಮಾತುಗಳ ಮೂಲಕ ಅವರನ್ನು ಅರಿಯುವುದಾಗಲಿ, ಪೋಷಕರ ನಿಲುವನ್ನು ಅವರಿಗೆ ಅರ್ಥಮಾಡಿಸುವುದಾಗಲಿ ಸಾಧ್ಯವಿಲ್ಲದಿರಬಹುದು. ಮಕ್ಕಳ ಕೆಲವು ವರ್ತನೆಗಳನ್ನು ಬದಲಾಯಿಸುವುದರಲ್ಲಿ ಪೋಷಕರು ಸೋತಿರಬಹುದು. ಯಾವುದೇ ವರ್ತನೆಯನ್ನು ಮುಂದುವರೆಸುವುದಕ್ಕೆ ಮಕ್ಕಳಿಗೆ ಅವರದೇ ಆದ ಕಾರಣಗಳಿರುತ್ತವೆ. ಅವುಗಳನ್ನೆಲ್ಲಾ ಅರಿಯಲು, ಮನಬಿಚ್ಚಿ ಮಾತನಾಡಲು ಬೇಸಿಗೆ ರಜೆ ಸೂಕ್ತ ಕಾಲ. ಮನೆಯ ಹೊರಗೆಲ್ಲಾದರೂ ಮಕ್ಕಳನ್ನು ವಿಹಾರಕ್ಕೆ ಕರೆದೊಯ್ದು ಅವರ ಇಷ್ಟಾನಿಷ್ಟಗಳನ್ನು ಗುರುತಿಸುತ್ತಾ ಅವರೊಂದಿಗೆ ಮಾತಿಗಿಳಿಯಬಹುದು, ಅವರ ಅನಿಸಿಕೆ, ಅಭಿಪ್ರಾಯಗಳ ಬಗೆಗೆ ಕುತೂಹಲ ತುಂಬಿದ ಪ್ರಶ್ನೆಗಳನ್ನು ಕೇಳುತ್ತ ಮಾತನಾಡುವುದು ಪೋಷಕರಿಗೂ ಆಹ್ಲಾದಕರ ಅನುಭವ ನೀಡುತ್ತದೆ.

ಬೇಸಿಗೆ ಶಿಬಿರಗಳು ಶಾಲೆಯಲ್ಲಿ ಕಲಿಸದ ವಿಷಯಗಳನ್ನು ಅರಿತುಕೊಳ್ಳಲು ಅಧ್ಯಯನದ ಪರಿಧಿಯನ್ನು ವಿಸ್ತರಿಸಿಕೊಳ್ಳಲು, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಸಹಕಾರಿ. ಮಕ್ಕಳ ಅಭ್ಯುದಯಕ್ಕೆ ಬೇಕಾದ ಎಲ್ಲಾ ತರಬೇತಿ, ಕೌಶಲಗಳನ್ನು ಶಿಕ್ಷಣ ವ್ಯವಸ್ಥೆಯೇ ಒದಗಿಸಿಬಿಡಬೇಕು ಎನ್ನುವುದು ಅವಾಸ್ತವಿಕವಾದ ನಿರೀಕ್ಷೆ. ಶಿಕ್ಷಣ ವ್ಯವಸ್ಥೆಯ ಲೋಪದೋಷಗಳನ್ನು ಸರಿದೂಗಿಸುವಂತಹ ಕೆಲಸವನ್ನು ಬೇಸಿಗೆ ಶಿಬಿರಗಳು ಮಾಡುವಂತಿರಬೇಕು. ಮಕ್ಕಳಲ್ಲಿ ವಿಮರ್ಶಾತ್ಮಕ ಪ್ರಜ್ಞೆ ಬೆಳೆಸುವಂತಹ, ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ, ತಮ್ಮ ದನಿಯನ್ನು ಕಂಡುಕೊಳ್ಳುವಂತಹ, ಸಮಾಜದಲ್ಲಿ ಕಾಣಬರುವ ಅನ್ಯಾಯ, ಅಸಮಾನತೆಗಳನ್ನು ಧೈರ್ಯವಾಗಿ ಪ್ರಶ್ನಿಸುವಂತಹ ಸಾಮರ್ಥ್ಯವನ್ನು ಉಂಟುಮಾಡುವ ಬೇಸಿಗೆ ಶಿಬಿರಗಳು ಎಷ್ಟಿವೆ? ಮಕ್ಕಳೊಂದಿಗೆ ಆತ್ಮೀಯತೆಯಿಂದ ಮಾತನಾಡುವ, ಪ್ರತಿ ಮಗುವೂ ಅನನ್ಯವಾದ, ವಿಶೇಷವಾದ ವ್ಯಕ್ತಿ ಎಂದು ಭಾವಿಸುವ ವಿಷಯ ತಜ್ಞರು ನಡೆಸಿಕೊಡುವ, ಹೆಚ್ಚು ಹಣ ನೀಡಬೇಕಿಲ್ಲದ, ಸ್ಪರ್ಧಾತ್ಮಕವಾಗಿರದ, ಸಮಾಜದೊಟ್ಟಿಗಿನ ಬಾಂಧವ್ಯವನ್ನು, ಅಂತಃಸತ್ತ್ವವನ್ನು ಗಟ್ಟಿಗೊಳಿಸುವಂತಹ ಬೇಸಿಗೆ ಶಿಬಿರಗಳು ಮಕ್ಕಳ ಬದುಕಿನ ಹಾದಿಯನ್ನೇ ಬದಲಿಸಬಲ್ಲವು. ರಂಗಭೂಮಿ, ಜಾನಪದ ಕಲಾಪ್ರಕಾರಗಳ ಕಲಿಕೆ, ಪರಿಸರ ಸಂರಕ್ಷಣೆಯ ಕುರಿತಾದ ಕಾರ್ಯಾಗಾರಗಳು, ಸಿನೆಮಾ ರಸಗ್ರಹಣ ಶಿಬಿರಗಳು ಈ ನಿಟ್ಟಿನಲ್ಲಿ ಪ್ರಸ್ತುತವೆನಿಸಿಕೊಳ್ಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT