ಗುರುವಾರ, 25 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನದು ಒಂಥರಾ ‘ಮ್ಯಾಜಿಕಲ್‌ ಲೈಫ್‌’

Last Updated 22 ಏಪ್ರಿಲ್ 2018, 21:01 IST
ಅಕ್ಷರ ಗಾತ್ರ

ನಾನು ಕೆ.ಎಸ್‌.ರಮೇಶ್‌. ಜಾದೂಗಾರ ರಮೇಶ್‌ ಎಂದೇ ಪರಿಚಿತ. ‘ಮಾಯಾಬಜಾರ್‌ ರಮೇಶ್’ ಎಂದೂ ಜನ ಗುರುತಿಸುತ್ತಾರೆ. ಮ್ಯಾಜಿಕ್‌ ಮಾಡುವುದು ನನ್ನ ಹವ್ಯಾಸ. ಪ್ರವೃತ್ತಿಯೇ ಕ್ರಮೇಣ ವೃತ್ತಿ ಮತ್ತು ಬದುಕು ಆಯಿತು.

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೋಣನೂರು ನಮ್ಮೂರು. ತಂದೆ ಸೂರ್ಯನಾರಾಯಣಪ್ಪ. ನಮ್ಮದು ಕೃಷಿ ಕುಟುಂಬ. ಆದರೆ ನಮ್ಮಪ್ಪ ಕೋಣನೂರಿನಿಂದ ಬೆಂಗಳೂರಿಗೆ ಬಂದು ಎಂಜಿನಿಯರಿಂಗ್ ಓದಿದರು. ನಂತರ ಮಿಲಿಟರಿ ಸೇರಿ, ಕರ್ನಲ್‌ ಆಗಿ ನಿವೃತ್ತರಾದರು. ತಾಯಿ ಶಾರದಾಂಬಾ. ನಾವು ನಾಲ್ವರು ಸಹೋದರರು. ಈ ಪೈಕಿ ನಾನು ಕೊನೆಯವನು.

ದೊಡ್ಡಣ್ಣ ಅಶ್ವತ್ಥ ಕಾರ್ಪೊರೇಟ್‌ ಕ್ಷೇತ್ರದಲ್ಲಿ ಸಿಇಒ ಆಗಿ ಕೆಲಸ ಮಾಡಿದ್ದಾರೆ. ಎರಡನೇ ಅಣ್ಣ ಕೆ.ಎಸ್‌.ಶ್ರೀಧರ್‌ ಸಿನಿಮಾ ರಂಗದಲ್ಲಿದ್ದಾರೆ. ಮೂರನೇ ಅಣ್ಣ ವೆಂಕಟೇಶ್‌, ಸೇನೆಯಲ್ಲಿ ಕರ್ನಲ್‌.

ನನ್ನ ಬಾಲ್ಯ ಮಿಲಿಟರಿ ಪರಿಸರದಲ್ಲಿ ಕಳೆಯಿತು. ಅಪ್ಪ ವರ್ಗವಾದೆಡೆಯೆಲ್ಲಾ ಹೋಗಬೇಕಾಗಿತ್ತು. ಕಾಶ್ಮೀರ ಶ್ರೀನಗರದ ಸೈನಿಕ ಶಾಲೆಯಲ್ಲಿ 2ರಿಂದ 5ನೇ ತರಗತಿವರೆಗೆ ಓದಿದೆ. ಅಲ್ಲಿ ನಾನು ಜ್ಯೂನಿಯರ್‌ ಟೀಂ ಕ್ಯಾಪ್ಟನ್‌ ಆಗಿದ್ದೆ. ಶಾಲೆಗೆ ಜಾದೂಗಾರರು ಬರುತ್ತಿದ್ದರು. ಅವರಿಗೆ ವೇದಿಕೆ ಸಿದ್ಧಪಡಿಸುವ ಕಾರ್ಯ ನನ್ನದಾಗಿತ್ತು. ಅಲ್ಲಿ ಜಾದೂಗಾರರು ವೇದಿಕೆಯ ಹಿಂಭಾಗದಲ್ಲಿ ಏನೆಲ್ಲಾ ಮಾಡುತ್ತಾರೆ ಎಂಬುದು ಗೊತ್ತಾಯಿತು. ಮನೆ, ಶಾಲೆಯಲ್ಲಿ ನನ್ನ ‘ಮ್ಯಾಜಿಕ್ ಕಲೆ’ ತೋರಿಸಿದೆ. ಆ ಕಾಲದಲ್ಲಿಯೇ ಮೆಚ್ಚಿ, ಚಪ್ಪಾಳೆ ದೊರೆಯಿತು. ಆ ಚಪ್ಪಾಳೆಯೇ ನನ್ನನ್ನು ಮ್ಯಾಜಿಕ್‌ನತ್ತ ಸೆಳೆಯಿತು.

ನಂತರದ ಓದು ವಿವಿಧೆಡೆ ಚೆಲ್ಲಾಪಿಲ್ಲಿಯಾಗಿತ್ತು. 1973ರಲ್ಲಿ ಪ್ರೌಢಶಾಲೆಗೆ ಬೆಂಗಳೂರಿಗೆ ಬಂದೆ (ನಾನು ಹುಟ್ಟಿದ್ದು ಬೆಂಗಳೂರಿನಲ್ಲಿಯೇ). ಇಲ್ಲಿನ ಆರ್‌ಬಿಎನ್‌ಎಂಎಸ್‌ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ, ಸೇಂಟ್‌ ಜೋಸೆಫ್‌ ಆರ್ಟ್ಸ್‌ ಅಂಡ್‌ ಸೈನ್ಸ್‌ ಕಾಲೇಜಿನಲ್ಲಿ ಪಿ.ಯು (ವಿಜ್ಞಾನ) ಶಿಕ್ಷಣ ಪೂರೈಸಿದೆ. ಮ್ಯಾಜಿಕ್‌ ಜತೆಗೆ ನಾನು ಓದಿನಲ್ಲೂ ಮುಂದಿದ್ದೆ. ಕ್ರೀಡೆ. ಎನ್‌ಸಿಸಿಯಲ್ಲೂ ಚುರುಕಾಗಿದ್ದೆ. ಎನ್‌ಸಿಸಿಯಲ್ಲಿ ಸಾಕಷ್ಟು ಮೆಡಲ್‌ಗಳನ್ನು ಗಳಿಸಿದ್ದೆ. ನಂತರ ಎಂಜಿನಿಯರಿಂಗ್‌ ಓದಿ, ಆರ್ಮಿ ಸೇರುವ ಆಸೆ ಇತ್ತು. ಸುರತ್ಕಲ್‌ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪ್ರವೇಶ ಪಡೆದೆ.

ಚಿಕ್ಕ ವಯಸ್ಸಿನಿಂದಲೇ ಮ್ಯಾಜಿಕ್‌, ಪ್ರದರ್ಶನ ಕಲೆ ಬಗ್ಗೆ ಕುತೂಹಲ, ಆಸಕ್ತಿ ಮೂಡಿತ್ತು. ಎಂಜಿನಿಯರಿಂಗ್‌ ಓದುವಾಗಲೇ ಈ ಕಡೆ ಒಲವು ಜಾಸ್ತಿ ಆಯಿತು. ಎರಡು ವರ್ಷಕ್ಕೆ ವ್ಯಾಸಂಗವನ್ನು ಮೊಟಕುಗೊಳಿಸಿ, ಮನೋರಂಜನಾ ಕ್ಷೇತ್ರಕ್ಕೆ ಹಾರಿದೆ.

ಇದು ನನ್ನ ಜೀವನದಲ್ಲಿ ತೆಗೆದುಕೊಂಡ ದೊಡ್ಡ ‘ರಿಸ್ಕ್‌’. ನನ್ನ ಈ ಬೆಳವಣಿಗೆಯನ್ನು ಪೋಷಕರು, ಸಂಬಂಧಿಕರು, ಗೆಳೆಯರು ಕುತೂಹಲ, ಆತಂಕದಿಂದ ನೋಡಿದರು. ಕೆಲವರು ಬುದ್ಧಿ ಹೇಳಿದರು.

‘ಬ್ಲ್ಯಾಕ್‌ ಅಂಡ್‌ ವೈಟ್‌’ ಸಿನಿಮಾದ ಕಾಲದಲ್ಲಿ ಹುಟ್ಟಿ, ಬೆಳೆದು ಈಗ ‘ಕಲರ್‌ಫುಲ್‌’ ಜಗತ್ತಿನಲ್ಲಿದ್ದೇನೆ. ಬಿ. ಜಯಶ್ರೀ ಅವರ ‘ಸ್ಪಂದನ’ ತಂಡದಲ್ಲಿ ಅಣ್ಣ ಶ್ರೀಧರ್‌ ಜತೆಯಲ್ಲಿ ತೊಡಗಿಕೊಂಡೆ. ಈ ಮೂಲಕ ನನಗೆ ಹವ್ಯಾಸಿ ರಂಗಭೂಮಿಯಲ್ಲಿಯೂ ಕಲಿಕೆಯಾಯಿತು. ಜಾದೂ, ನಟನೆ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ದ್ವಂದ್ವ ಕಾಡಿತ್ತು.

1980–81ರಲ್ಲಿ ‘ಮ್ಯಾಜಿಕ್‌ ದುನಿಯಾ’ ತಿಳಿಯಲು ಲಂಡನ್‌ಗೆ ಭೇಟಿ ನೀಡಿದೆ. ಅಲ್ಲಿನ ‘ಮ್ಯಾಜಿಕ್‌ ಸರ್ಕಲ್‌’ನ ಸದಸ್ಯನಾದೆ. ಆ ಚಿಕ್ಕ ವಯಸ್ಸಿನಲ್ಲಿಯೇ ಮ್ಯಾಜಿಕ್‌ ಸರ್ಕಲ್‌ನಲ್ಲಿ ಸದಸ್ಯನಾದ ಭಾರತದ ಮೊದಲಿಗ ನಾನಾಗಿದ್ದೆ. ಆಗ ಭಾರತದಲ್ಲಿ ಯಕ್ಷಿಣಿ ಅಥವಾ ಜಾದೂಗಾರ ಪದಗಳಿಗೆ ಗೌರವ ಇರಲಿಲ್ಲ.

ದೂರದರ್ಶನದಲ್ಲಿ ಮ್ಯಾಜಿಕ್‌ ಪ್ರದರ್ಶನಕ್ಕೆ ಅವಕಾಶ ಒದಗಿಸುವಂತೆ ಕೋರಿ ದೆಹಲಿಯಲ್ಲಿ ದೂರದರ್ಶನ ಕಚೇರಿ ಇರುವ  ‘ಮಂಡಿಹೌಸ್‌’ ಮುಂದೆ ಸಾಕಷ್ಟು ಅಲೆದಿದ್ದೇನೆ. ಈ ವೇಳೆ ನಾಸಿರುದ್ದೀನ್‌ ಶಾ, ಓಂಪುರಿ ಅವರೂ ಮಂಡಿಹೌಸ್‌ ಮುಂದೆ ಅವಕಾಶಕ್ಕಾಗಿ ಕಾಯುತ್ತಾ, ಫುಟ್‌ಪಾತ್‌ನಲ್ಲಿ ಚಹ ಕುಡಿಯುತ್ತಾ ಇದ್ದರು. ಸಾಕಷ್ಟು ಮನವಿ, ಒತ್ತಾಯಗಳ ನಂತರ ದೂರದರ್ಶನದಲ್ಲಿ ನನಗೆ ಅವಕಾಶ ಸಿಕ್ಕಿತು. ‘ಮ್ಯಾಜಿಕ್‌ ಕಲೆ’ಯನ್ನು ಧಾರಾವಾಹಿ ಮಾಡಬಹುದು ಎಂಬುದನ್ನು ಅವರಿಗೆ ಮನದಟ್ಟು ಮಾಡಿಸುವಲ್ಲಿ ನಾನು ಯಶಸ್ವಿಯಾದೆ.

ದೆಹಲಿ ದೂರದರ್ಶನದಲ್ಲಿ ಭಾರತದ ಮೊದಲ ಮ್ಯಾಜಿಕ್‌ ಧಾರವಾಹಿ 1984–85ರಲ್ಲಿ ‘ಬಚ್ಚೋಂ ಕೇ ಲಿಯೇ’ 15 ವಾರ ಪ್ರಸಾರವಾಯಿತು. ಅರ್ಧಗಂಟೆಯ ಈ ಕಾರ್ಯಕ್ರಮಕ್ಕೆ ನನಗೆ ದೊರೆಯುತ್ತಿದ್ದ ಸಂಭಾವನೆ ₹ 30. ಇದು ಜಲಂದರ್‌, ಅಮೃತಸರದಿಂದಲೂ ಪ್ರಸಾರವಾಗುತ್ತಿತ್ತು. ಪಾಕಿಸ್ತಾನದ ಲಾಹೋರ್‌ನಲ್ಲಿ ನೋಡುತ್ತಿದ್ದ ಪ್ರೇಕ್ಷಕರು ಈ ಕಾರ್ಯಕ್ರಮವನ್ನು ಏಕೆ ನಿಲ್ಲಿಸಿದಿರಿ ಎಂದು ದೂರದರ್ಶನಕ್ಕೆ ಪತ್ರವನ್ನೂ ಬರೆದಿದ್ದರು. ನಂತರ ಮೂರರಿಂದ ನಾಲ್ಕು ತಿಂಗಳ ಕಾಲ ಪ್ರತಿ ಭಾನುವಾರ ನನ್ನ ಮ್ಯಾಜಿಕ್‌ ಪ್ರದರ್ಶನದ ಪ್ರಸಾರವಾಯಿತು.

ಅಷ್ಟರಲ್ಲಿ ಬೆಂಗಳೂರು ದೂರದರ್ಶನ ಕೇಂದ್ರ ಆರಂಭವಾಗಿತ್ತು. ಇಲ್ಲೂ ನನಗೆ ಅವಕಾಶ ಸಿಕ್ಕಿತು. ಆಗಿನ ನಿರ್ದೇಶಕರಾಗಿದ್ದ ಗುರುನಾಥ್‌ ಅವರು ಹೆಚ್ಚು ಪ್ರೋತ್ಸಾಹಿಸಿದರು. ಯುಗಾದಿ ಸಂದರ್ಭದ ವಿಶೇಷ ಕಾರ್ಯಕ್ರಮದಲ್ಲಿ ನನ್ನ ಮ್ಯಾಜಿಕ್‌ ಪ್ರದರ್ಶನಕ್ಕೆ 15ರಿಂದ 20 ನಿಮಿಷ ಸಮಯ ಕೊಟ್ಟಿದ್ದರು. ಇದು ಹೆಚ್ಚು ಜನಪ್ರಿಯವಾಯಿತು. ನಂತರ ಪ್ರತಿ ವಾರವೂ ಪ್ರದರ್ಶನ ನೀಡಲು ಅವಕಾಶ ದೊರೆಯಿತು. ಆಗ ಬೆಂಗಳೂರು ದೂರದರ್ಶನದಲ್ಲಿ ಎರಡು ಧಾರಾವಾಹಿ ಮಾತ್ರ ಪ್ರಸಾರವಾಗುತ್ತಿತ್ತು. ಅದರಲ್ಲಿ ಒಂದು ‘ಮ್ಯಾಜಿಕ್‌ ಆಫ್‌ ಕೆ.ಎಸ್‌. ರಮೇಶ್‌’ ಮತ್ತೊಂದು, ‘ಸಿಹಿ–ಕಹಿ’ (ಇದರಿಂದ ನಟ ಚಂದ್ರು ಅವರಿಗೆ ಸಿಹಿ–ಕಹಿ ಹೆಸರು ಬಂತು). ಕ್ರಮೇಣ ನಾನು ‘ಮ್ಯಾಜಿಕ್‌ ರಮೇಶ್‌’ ಆಗಿ ಬೆಳೆದೆ. ಹೆಚ್ಚು ಜನಪ್ರಿಯನಾದೆ. ಇದರ ಜತೆಗೆ ಕಲಾವಿದನಾಗಿ ಕೆಲ ಧಾರವಾಹಿಗಳಲ್ಲಿ ನಟಿಸಿದೆ.‘ಈ ಟಿವಿ’ಯಲ್ಲಿ 2010ರಲ್ಲಿ ಪ್ರಸಾರವಾದ ‘ರಮೇಶ್‌ ಮಾಯಾ ಬಜಾರ್‌’ 43 ಕಂತಿನಲ್ಲಿ ಪ್ರಸಾರವಾಯಿತು. ಜತೆಗೆ ಮಾಡೆಲಿಂಗ್‌ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದೆ.

‘ಪುಷ್ಪಕ ವಿಮಾನ’ದಲ್ಲಿ:

1988ರಲ್ಲಿ ಒಂದು ದಿನ ಪ್ರಸಿದ್ಧ ನಟ ಕಮಲ್‌ ಹಾಸನ್‌, ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ್‌ ರಾವ್‌ ಅವರಿಂದ ಕರೆ ಬಂದಿತು. ‘ನೀವೇ ಅಲ್ಲವೇ ಟಿ.ವಿಯಲ್ಲಿ ಮ್ಯಾಜಿಕ್‌ ಮಾಡುವವರು. ಬನ್ನಿ ಸ್ವಲ್ಪ ಹೆಲ್ಪ್‌ ಮಾಡಿ’ ಎಂದು ಕರೆದಿದ್ದರು. ಅವರು ಬೆಂಗಳೂರಿನ ತಾಜ್‌ ಹೋಟೆಲ್‌ನಲ್ಲಿದ್ದರು. ಅಲ್ಲಿಗೆ ಹೋದೆ. ‘ಪುಷ್ಪಕ ವಿಮಾನ ಎಂಬ ಹೆಸರಿನ ಮೂಕಿ ಚಿತ್ರ ನಿರ್ಮಿಸುತ್ತಿದ್ದೇವೆ. ಅದರಲ್ಲಿ ನಾಯಕಿಯ ಪಾತ್ರ ಅಮಲಾ ಮಾಡುತ್ತಾರೆ. ಅವರ ತಂದೆಯ ಪಾತ್ರ ಅಮರೀಶ್‌ ಪುರಿ ಅವರು ಮಾಡಲಿದ್ದಾರೆ. ಅವರಿಗೆ ಸ್ವಲ್ಪ ಮ್ಯಾಜಿಕ್‌ ಹೇಳಿಕೊಡುತ್ತೀರಾ’ ಎಂದು ಕೇಳಿದರು.

ಸಿನಿಮಾಗಾಗಿ ನಾನು ಮಾಡುವಂತೆ ಮ್ಯಾಜಿಕ್‌ ಹೇಳಿಕೊಡುವುದು ಕಷ್ಟ ಎಂದೆ. ಆಗ ಅವರು, ಏನು ಮಾಡಬಹುದು ಎಂದು ನನ್ನನ್ನೇ ಕೇಳಿದರು. ಆಗ ನಾನಿನ್ನೂ ಯುವಕನಾಗಿದ್ದೆ. ಆ ಪಾತ್ರ ಕೊಟ್ಟರೆ ನಾನೇ ಮಾಡುತ್ತೇನೆ ಎಂದೆ. ಅದಕ್ಕೆ ಸಿಟ್ಟಾದ ಕಮಲ್‌, ‘ಇದು ಔಟ್‌ ಆಫ್‌ ಕ್ವೆಷನ್‌’ ಎಂದು ಹೇಳಿ ನನ್ನನ್ನು ಹೊರಗೆ ಕಳುಹಿಸಿಬಿಟ್ಟರು. ತಪ್ಪು ಮಾತನಾಡಿದೆನಾ ಎಂಬ ಬೇಸರದಿಂದಲೇ ಹಿಂದಿರುಗಿದೆ.

ಎರಡು ದಿನ ಆದಮೇಲೆ ಪುನಃ ಅವರು ಕರೆದು, ನೀವು ಹೇಳಿದ್ದನ್ನು ಯೋಚಿಸಿದೆವು. ಆ ಪಾತ್ರವನ್ನು ನೀವೇ ಮಾಡಿ ಎಂದರು. ಇದು ನನ್ನ ಜೀವನಕ್ಕೆ ಮಹತ್ವದ ತಿರುವು ನೀಡಿದ ಕ್ಷಣ. ಆ ಘಟನೆಯನ್ನು ಮರೆಯಲಾಗಲ್ಲ. ಈ ಪಾತ್ರಕ್ಕೆ ತಕ್ಕಂತೆ ಉದ್ದದ ಗಡ್ಡ ಬಿಡಬೇಕು ಎಂದು ಅವರು ಷರತ್ತು ವಿಧಿಸಿದ್ದರು. 30 ವರ್ಷದ ಹಿಂದೆಯೇ ನಾನು ಅಪ್ಪನ ಪಾತ್ರ ಮಾಡಿದ್ದೆ. ಅದರಲ್ಲಿ ನನ್ನ ಪತ್ನಿಯಾಗಿ ಖ್ಯಾತ ನಟಿ ಫರೀದಾ ಜಲಾಲ್‌ ನಟಿಸಿದ್ದರು. ಈ ಚಿತ್ರದಲ್ಲಿ ನಾನು ಕೆಲ ಮ್ಯಾಜಿಕ್‌ ಟ್ರಿಕ್ಸ್‌ಗಳನ್ನು ಬಳಸಿದ್ದು ನನ್ನನ್ನು ಇನ್ನಷ್ಟು ಜನಪ್ರಿಯಗೊಳಿಸಿತು.

ಬಾಲಿವುಡ್‌ನತ್ತ ಪಯಣ:

ಇದೇ ವೇಳೆ ಮುಂಬೈನಿಂದ ಪ್ರಸಿದ್ಧ ನಿರ್ದೇಶಕ ಪ್ರಕಾಶ್‌ ಮೆಹ್ರಾ ಅವರ ಕಚೇರಿಯಿಂದ (ಅಮಿತಾಬ್‌ ಬಚ್ಚನ್‌ ಅನ್ನು ಬೆಳೆಸಿದ ನಿರ್ದೇಶಕರು) ಕರೆ ಬಂತು. ‘‘ನಾನು ಅಮಿತಾಬ್‌ ಅವರನ್ನು ನಾಯಕನನ್ನಾಗಿಸಿಕೊಂಡು ‘ಜಾದೂಗರ್‌’ ಎಂಬ ಸಿನಿಮಾ ಮಾಡುವವನಿದ್ದೇನೆ. ನೀನು ಅಮಿತಾಭ್‌ ಅವರಿಗೆ ಮ್ಯಾಜಿಕ್‌ ಕಲಿಸುತ್ತೀಯಾ’’ ಎಂದು ಮೆಹ್ರಾ ಕೇಳಿದರು. ಇಲ್ಲ ಎನ್ನಲು ನನಗೆ ಆಗಲಿಲ್ಲ. ಬಳಿಕ ಅಮಿತಾಭ್‌ಗೆ ಮ್ಯಾಜಿಕ್‌ ಹೇಳಿಕೊಟ್ಟವನು ಎಂದೂ ಬಾಲಿವುಡ್‌ನಲ್ಲಿ ರಾತ್ರೋರಾತ್ರಿ ಜನಪ್ರಿಯ ವ್ಯಕ್ತಿಯಾದೆ.

ಆ ಕಾಲದಲ್ಲಿ ಮ್ಯಾಜಿಕ್ ಮತ್ತು ಆ್ಯಕ್ಟಿಂಗ್‌ ಕಾಂಬಿನೇಷನ್‌ ಇದ್ದದ್ದು ನಾನೊಬ್ಬನೇ. ಹಾಗಾಗಿ ಹಿಂದಿ ಸಿನಿಮಾದಲ್ಲಿ ನಟನೆಗೆ ಹೆಚ್ಚಿನ ಕರೆಗಳು ಬಂದವು. ಶಂಕರ್‌ನಾಗ್‌ ಅವರ ‘ಮಾಲ್ಗುಡಿ ಡೇಸ್‌’ನಲ್ಲೂ ನಟಿಸಿದೆ. ಕಮಲ್‌ ಹಾಸನ್‌ ತಮಿಳಲ್ಲಿ ‘ಸತ್ಯಾ’ ಸಿನಿಮಾದಲ್ಲಿ ಪಾತ್ರ ನೀಡಿದರು.  ಮ್ಯಾಜಿಕ್‌ ಅನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಬಳಸುವ ಕೆಲಸವನ್ನೂ ಇದೇ ವೇಳೆ ಮಾಡಿದೆ. ಜಾಹೀರಾತು ಮತ್ತು ಇವೆಂಟ್‌ ಇಂಡಸ್ಟ್ರೀಯಲ್ಲಿ ಮ್ಯಾಜಿಕ್‌ ಪರಿಚಯಿಸಿದೆ. ಕಾರು, ಜೀಪು, ವ್ಯಾನ್‌ ಅನ್ನು ಮ್ಯಾಜಿಕ್‌ನಿಂದ ಇಲ್ಯೂಷನ್‌ಗಳಾಗಿ ಬಳಸಿಕೊಂಡೆ.

1996ರಲ್ಲಿ ‘ಮ್ಯಾಜಿಕ್‌ ಅಕಾಡೆಮಿ ಆಫ್‌ ಬೆಂಗಳೂರು’ ಆರಂಭಿಸಿದೆ. ಲಕ್ಷಾಂತರ ರೂಪಾಯಿ ಕಳೆದುಕೊಂಡೆ. ಆದರೆ ನೋವಿಲ್ಲ. ಈಗ ಕನ್ನಡದಲ್ಲಿ ಮಕ್ಕಳ ಚಿತ್ರ ಮಾಡಲು ಹೊರಟಿದ್ದೇನೆ. ದೊಡ್ಡವರಲ್ಲಿನ ಮಗು ಮತ್ತು ಮಕ್ಕಳನ್ನು ಮನರಂಜಿಸಲು ಸಿನಿಮಾ ಮಾಡುತ್ತೇನೆ. ಇದರ ಕತೆ ನನ್ನದೆ. ನಿರ್ದೇಶ, ನಿರ್ಮಾಪಕ ನಾನೇ. ಹೀಗೆ... ಇಷ್ಟೂ ದಿನವೂ ಹತ್ತಾರು ಕ್ಷೇತ್ರಗಳಲ್ಲಿ ಕೈಯಾಡಿಸಿದ್ದೇನೆ. ಜನ ಪ್ರೋತ್ಸಾಹಿಸಿದ್ಆರೆ. ನನ್ನ ಕೈಗೆ ಮ್ಯಾಜಿಕ್‌ ಸ್ಟಿಕ್‌ ಸಿಕ್ಕಿದ್ದರಿಂದ ನಾನು ಮ್ಯಾಜಿಕ್‌ ರಮೇಶ್‌ ಆದೆ. ನನ್ನದು ಒಂಥರಾ ‘ಮ್ಯಾಜಿಕಲ್‌ ಲೈಪ್‌’.

ಜಾದು ಕಲಿಕೆಯ ಆಚೆ ಈಚೆ...

ಮ್ಯಾಜಿಕ್‌ ಅನ್ನು ಮಾಟ, ಮಂತ್ರ ಎನ್ನುವವರೂ ಇದ್ದಾರೆ. ತುಣುಕು ವಿದ್ಯೆ ಕಲಿತ ಕೆಲವರು ಏನೇನೋ ಪವಾಡವನ್ನು ಮಾಡಿ ಜನರನ್ನು ವಂಚಿಸುತ್ತಿದ್ದಾರೆ. ಜನ ಎಚ್ಚೆತ್ತುಕೊಳ್ಳಬೇಕು.

ಕೆಲ ಸ್ವಾಮೀಜಿಗಳು (ಹೆಸರು ಹೇಳಲ್ಲ) ನನ್ನ ಬಳಿ ಬಂದು ಜಾದು ಕಲಿಸಿಕೊಡುವಂತೆ ಮನವಿ ಮಾಡಿದ್ದುಂಟು. ನನ್ನ ವೃತ್ತಿಯ ಗೌರವವನ್ನು ನಾನು ಕಾಪಾಡಬೇಕಲ್ವಾ? ಅವರ ಬೇಡಿಕೆಗೆ ಸ್ಪಂದಿಸಲಿಲ್ಲ.

ಇತ್ತೀಚೆಗೆ ಮಕ್ಕಳಿಗೆ ‘ಮಿಡ್‌ ಬ್ರೈನ್ ಆ್ಯಕ್ಟಿವಿಟಿ’, ‘ಥರ್ಡ್‌ ಐ’ ನಡೆಸುವುದಾಗಿ ಜಾಹೀರಾತುಗಳು ಬರುತ್ತಿವೆ. ಮಕ್ಕಳ ಕಣ್ಣಿಗೆ ಬಟ್ಟೆ ಕಟ್ಟಿ ಬಣ್ಣಗಳನ್ನು ಗುರುತಿಸುವುದೂ ಸೇರಿದಂತೆ ಹಲವು ವಿದ್ಯೆ ಕಲಿಸುವುದಾಗಿ ಹೇಳಲಾಗುತ್ತಿದೆ. ಇದನ್ನು ನಾನು ವಿರೋಧಿಸುತ್ತೇನೆ. ಮಕ್ಕಳನ್ನು ದುರುಪಯೋಗಪಡಿಸಿಕೊಂಡು, ಅವರಿಂದ ಸುಳ್ಳು ಹೇಳಿಸಿ ವಂಚಿಸುವುದು ಸರಿಯಲ್ಲ. ಇಂಥ ಕೆಲಸಗಳನ್ನು ಕೆಲ ಪ್ರತಿಷ್ಠಿತ ಮಠ, ಆಶ್ರಮಗಳು ಮಾಡುತ್ತಿರುವುದು ಬೇಸರದ ಸಂಗತಿ.

(ಪತ್ನಿ ಅರ್ಚನಾ, ಮಕ್ಕಳೊಂದಿಗೆ ಜಾದೂಗಾರ ರಮೇಶ್‌)

ಎಷ್ಟೆಲ್ಲಾ ಸಾಮ್ಯ

ನಾನು ಮತ್ತು ರಮೇಶ್ ಅರವಿಂದ್ ಒಟ್ಟಿಗೆ ಕೆರಿಯರ್‌ ಆರಂಭಿಸಿದೆವು. ದೂರದಿಂದ ಇಬ್ಬರೂ ಒಂದೇ ರೀತಿ ಕಾಣುತ್ತಿದ್ದೆವು. ಇಬ್ಬರದ್ದೂ ಎಂಜಿನಿಯರಿಂಗ್ ಬ್ಯಾಕ್‌ರೌಂಡ್‌. ಕಾಕತಾಳೀಯ ಎಂದರೆ... ಇಬ್ಬರ ಹೆಸರೂ ರಮೇಶ್‌, ಅವರ ಹೆಂಡತಿ ಹೆಸರು ಅರ್ಚನಾ, ನನ್ನ ಹೆಂಡತಿ ಹೆಸರೂ ಅರ್ಚನಾ, ಅವರ ಮಗ ಅರ್ಜುನ್‌, ನನ್ನ ಮಗನೂ ಅರ್ಜುನ್‌, ಅವರ ಅಣ್ಣ ಶ್ರೀಧರ್‌, ನನ್ನ ಅಣ್ಣನೂ ಶ್ರೀಧರ್. ನಾನು ಪುಷ್ಪಕ ವಿಮಾನ–1ರಲ್ಲಿ ನಟಿಸಿದ್ದೇನೆ, ಅವರು ಪುಷ್ಪಕ ವಿಮಾನ–2ರಲ್ಲಿ ನಟಿಸಿದ್ದಾರೆ.

ಇಬ್ಬರ ಕುಟುಂಬದವರೂ ಒಮ್ಮೆ ಭೇಟಿಯಾಗಿದ್ದಾಗ, ಈ ವಿಷಯ ತಿಳಿದು ಎರಡೂ ಕುಟುಂಬದವರೂ ಸಾಕಷ್ಟು ನಕ್ಕಿದ್ದುಂಟು.

ವ್ಯಕ್ತಿ ಪರಿಚಯ

ಹೆಸರು: ಕೆ.ಎಸ್‌.ರಮೇಶ್‌

ಹುಟ್ಟಿದ ದಿನಾಂಕ: 1959ರ ಏಪ್ರಿಲ್‌ 21

ಪತ್ನಿ: ಅರ್ಚನಾ (2004ರಲ್ಲಿ ವಿವಾಹ)

ಮಕ್ಕಳು: ಅರ್ಜುನ್‌ (8ನೇ ತರಗತಿ)

ರಾಹುಲ್‌ (5ನೇ ತರಗತಿ)

ವಿಳಾಸ: 1172, ಮೊದಲ ಮಹಡಿ, 32ನೇ ‘ಸಿ’ ಕ್ರಾಸ್‌, 4ನೇ ‘ಟಿ’ ಬ್ಲಾಕ್‌, ಜಯನಗರ

ಚಿತ್ರ, ವಿಡಿಯೊ– ರಂಜು ಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT