ಸೋಮವಾರ, ಸೆಪ್ಟೆಂಬರ್ 20, 2021
23 °C
ತಂತ್ರಜ್ಞಾನಗಳ ಪರಿಚಯಕ್ಕೆ ಹೊಸ ಪ್ರಯತ್ನ

ಜಾಗ್ವಾರ್ ಆರ್ಟ್‌ ಆಫ್ ಪರ್ಫಾರ್ಮನ್ಸ್ ಟೂರ್

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

Prajavani

ಜಾಗ್ವಾರ್ ಕಾರುಗಳು ಭಾರಿ ವೇಗ, ಐಷಾರಾಮ ಮತ್ತು ಆರಾಮಕ್ಕೆ ಖ್ಯಾತವಾಗಿವೆ. ಐಷಾರಾಮ ಮತ್ತು ಆರಾಮದ ಜತೆಗೆ ಸುರಕ್ಷತೆಯೂ ಮುಖ್ಯವಲ್ಲವೆ. ಈ ವಿಚಾರದಲ್ಲೂ ಜಾಗ್ವಾರ್ ಕಾರುಗಳು ಪ್ರತಿಸ್ಪರ್ಧಿಗಳಿಂದ ಹಿಂದೆ ಉಳಿಯುವುದಿಲ್ಲ. ಕಾರುಗಳಲ್ಲಿನ ಸುರಕ್ಷತೆಗೆ ಎರಡು ಆಯಾಮಗಳಿವೆ. ಮೊದಲನೆಯದ್ದು ಅಪಘಾತಗಳ ಸಂದರ್ಭದಲ್ಲಿ ಕಾರುಗಳು ತಮ್ಮ ಪ್ರಯಾಣಿಕರನ್ನು ಎಷ್ಟರಮಟ್ಟಿಗೆ ಕಾಪಾಡುತ್ತವೆ ಎಂಬುದು. ಎರಡನೆಯದ್ದು, ಅಪಘಾತಗಳು ಆಗದಂತೆ ಕಾರುಗಳು ಹೇಗೆ ವರ್ತಿಸುತ್ತವೆ ಎಂಬುದು.

ಅಪಘಾತಗಳು ನಡೆಯದಂತೆ ಕಾರುಗಳನ್ನು ಅಭಿವೃದ್ಧಿಪಡಿಸುವುದು ಈ ದಶಕದ ಸವಾಲು. ಜಗತ್ತಿನ ಬಹುತೇಕ ಎಲ್ಲಾ ಕಾರು ತಯಾರಕ ಕಂಪನಿಗಳೂ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಜಾಗ್ವಾರ್ ಸಹ ಇದಕ್ಕೆ ಹೊರತಲ್ಲ. ಕಾರುಗಳನ್ನು ಹೀಗೆ ರೂಪಿಸುವುದು ಸಂಪೂರ್ಣ ತಾಂತ್ರಿಕ ವಿಚಾರ. ಈ ನಿಟ್ಟಿನಲ್ಲಿ ಬಳಕೆಗೆ ಬಂದ ತಂತ್ರಜ್ಞಾನಗಳಲ್ಲಿ ಟ್ರ್ಯಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), ಆ್ಯಂಟಿ ಲಾಕ್‌ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್ (ಇಬಿಡಿ) ಪ್ರಮುಖವಾದವುಗಳು. ಜಾಗ್ವಾರ್ ಕಾರುಗಳಲ್ಲಿ ಈ ಎಲ್ಲಾ ಸೌಲಭ್ಯಗಳೂ ಇವೆ.

ಬೇರೊಂದು ವಾಹನಕ್ಕೆ ಡಿಕ್ಕಿ ಹೊಡೆದೇ ಅಪಘಾತ ಸಂಭವಿಸಬೇಕು ಎಂದೇನಿಲ್ಲ. ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು, ಅಡ್ಡಾದಿಡ್ಡಿಯಾಗಿ ಚಲಿಸಿ ಪಲ್ಟಿಯಾದರೂ, ಹಳ್ಳಕ್ಕೆ ಇಳಿದರೂ ಅಥವಾ ಮರಕ್ಕೆ ಅಪ್ಪಳಿಸಿದರೂ ಅಪಘಾತವಾಗುತ್ತದೆ. ಆ ಅಪಘಾತ ಮಾರಣಾಂತಿಕವೂ ಆಗಬಹುದು. ಭಾರಿ ವೇಗದಲ್ಲಿ ಚಲಾಯಿಸುವಾಗ ಕಾರಿನ ಚಲನೆಯ ದಿಕ್ಕನ್ನು ದಿಢೀರ್ ಎಂದು ಬದಲಿಸಿದರೆ (ಲೇನ್ ಬದಲಿಸಿದರೆ) ಅಥವಾ ಕಾರನ್ನು ಜಿಗ್‌ಜಾಗ್‌ ರೀತಿಯಲ್ಲಿ (ತುರ್ತು ಸಂದರ್ಭದಲ್ಲಿ ಇಂತಹ ಪರಿಸ್ಥಿತಿ ಎದುರಾಗಬಹುದು) ಚಲಾಯಿಸಿದರೆ ಅಥವಾ ಭಾರಿ ವೇಗದಲ್ಲಿ ತಿರುವು ಪಡೆದರೆ ಕಾರು ಚಾಲಕನ ನಿಯಂತ್ರಣ ಕಳೆದುಕೊಳ್ಳುವ ಅಪಾಯವಿರುತ್ತದೆ. ಈ ಮೇಲಿನ ಎಲ್ಲಾ ವ್ಯವಸ್ಥೆಗಳು ಇಂತಹ ಅಪಘಾತಗಳನ್ನು ತಪ್ಪಿಸಲು ನೆರವಾಗುತ್ತವೆ. ಅದು ಹೇಗೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡುವುದೇ 'ಜಾಗ್ವಾರ್ ಆರ್ಟ್‌ ಆಫ್ ಪರ್ಫಾರ್ಮನ್ಸ್ ಟೂರ್'ನ ಉದ್ದೇಶ. ಖಾಸಗಿ ವಿಮಾನ ನಿಲ್ದಾಣವೊಂದರ ರನ್‌ವೇಯಲ್ಲಿ ಈ ಕಾರ್ಯಕ್ರಮವನ್ನು ಜಾಗ್ವಾರ್ ಆಯೋಜಿಸಿತ್ತು. 

ಒಂದೆಡೆ ಕಾರನ್ನು ಭಾರಿ ವೇಗದಲ್ಲಿ ಚಲಾಯಿಸಿ ದಿಢೀರ್ ಎಂದು ಎರಡು ಬಾರಿ (ಬಲಕ್ಕೆ ತಿರುವು ಪಡೆದು, ತಕ್ಷಣವೇ ಎಡಕ್ಕೆ ತಿರುವು ಪಡೆಯಬೇಕಿತ್ತು) ದಿಕ್ಕು ಬದಲಿಸಿ, ಬ್ರೇಕ್ ಹಾಕಿ ನಿಲ್ಲಿಸಬೇಕಿತ್ತು. ಸಾಮಾನ್ಯ ಕಾರನ್ನು ಹೀಗೆ ಚಲಾಯಿಸಿದರೆ ಅದು ಪಲ್ಟಿಯಾಗುವ ಅಪಾಯವಿರುತ್ತದೆ. ಆದರೆ ಜಾಗ್ವಾರ್‌ನ ಎಲ್ಲಾ ಕಾರುಗಳಲ್ಲಿ ಎಬಿಎಸ್+ಇಬಿಡಿ ಇರುವುದರಿಂದ ಈ ಕಸರತ್ತನ್ನು ಸುಲಭವಾಗಿ ಪೂರೈಸಲು ಸಾಧ್ಯವಾಯಿತು.

ಎರಡನೇ ಕಸರತ್ತು ತೀರಾ ಸವಾಲಿನದ್ದಾಗಿತ್ತು. ಇಲ್ಲಿ ನೇರ ಪಥ ಮಾತ್ರವಿತ್ತು. ಆದರೆ ಎದುರಿಗೆ ವ್ಯಕ್ತಿಯೊಬ್ಬರು ನಿಂತಿರುತ್ತಿದ್ದರು. ಕಾರು ಭಾರಿ ವೇಗ ಪಡೆಯುತ್ತಿದ್ದಂತೆಯೇ ಆ ವ್ಯಕ್ತಿ ಎಡಕ್ಕೆ ಅಥವಾ ಬಲಕ್ಕೆ ಕೈ ತೋರುತ್ತಿದ್ದರು. ಅವರು ಕೈತೋರಿದ ದಿಕ್ಕಿಗೆ ವಿರುದ್ಧ ದಿಕ್ಕಿಗೆ ಕಾರನ್ನು ತಿರುಗಿಸಿ, ಮತ್ತೆ ನೇರಪಥದತ್ತ ತಿರುಗಿಸಬೇಕಿತ್ತು. ಇಲ್ಲಿಯೂ ಕಾರು ಪಲ್ಟಿಯಾಗುವ ಮತ್ತು ಅಡ್ಡಾದಿಡ್ಡಿಯಾಗಿ ಚಲಿಸುವ ಅಪಾಯವಿತ್ತು. ಆದರೆ ಹಾಗೆ ಆಗದಂತೆ ಇಎಸ್‌ಪಿ+ಇಬಿಡಿ+ಟ್ರಾಕ್ಷನ್ ಕಂಟ್ರೋಲ್ ಕೆಲಸ ಮಾಡಿದವು.

ಮೂರನೇ ಕಸರತ್ತಿನಲ್ಲಿ, ರನ್‌ವೇಯಲ್ಲಿ ತಿರುವುಗಳನ್ನು ಸೃಷ್ಟಿಸಲಾಗಿತ್ತು. ಆ ತಿರುವುಗಳಲ್ಲಿ ಕಾರನ್ನು ಭಾರಿ ವೇಗದಲ್ಲಿ (8೦ ಕಿ.ಮೀ./ಪ್ರತಿಗಂಟೆ) ಚಲಾಯಿಸಬೇಕಿತ್ತು.

ಕಸರತ್ತಿನ ಸವಾಲುಗಳು
* ನೇರ ರಸ್ತೆಯಲ್ಲಿ ಕಾರನ್ನು ಭಾರಿ ವೇಗದಲ್ಲಿ ಚಲಾಯಿಸಿ ಎಡಕ್ಕೆ-ಬಲಕ್ಕೆ-ಎಡಕ್ಕೆ-ಬಲಕ್ಕೆ-ಎಡಕ್ಕೆ-ಬಲಕ್ಕೆ ತಿರುವು ಪಡೆಯಬೇಕಿತ್ತು.

* ಭಾರಿ ವೇಗದಲ್ಲಿ ಹೀಗೆ ಎಡಕ್ಕೆ ತಿರುವು ಪಡೆದಾಗ ಕಾರಿನ ಎಡಭಾಗದ ಚಕ್ರಗಳು ರಸ್ತೆಯಿಂದ ಮೇಲೇಳುತ್ತವೆ. ತಿರುವು ಪಡೆಯುವಾಗ ಕಾರಿನ ನಾಲ್ಕೂ ಚಕ್ರಗಳು ಒಂದೇ ವೇಗದಲ್ಲಿ ಚಲಿಸುವುದರಿಂದ ಹೀಗಾಗುತ್ತದೆ. ಆಗ ಅವುಗಳ ಹಿಡಿತ ಕಡಿಮೆಯಾಗುತ್ತದೆ. ಇದರಿಂದ ಚಾಲಕ ಕಾರಿನ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಅಪಾಯವಿರುತ್ತದೆ

* ಹೀಗೆ ತಿರುವು ಪಡೆದಾಗ ಕಾರು ಅಗತ್ಯಕ್ಕಿಂತ ಹೆಚ್ಚು ತಿರುವು ತೆಗೆದುಕೊಳ್ಳುವ ಅಪಾಯವಿರುತ್ತದೆ. ಇದನ್ನು ಓವರ್‌ ಸ್ಟೀರ್ ಎನ್ನಲಾಗುತ್ತದೆ. ಅಗತ್ಯಕ್ಕಿಂತ ಕಡಿಮೆ ತಿರುವು ಪಡೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಇದನ್ನು ಅಂಡರ್ ಸ್ಟೀರ್ ಎನ್ನಲಾಗುತ್ತದೆ. ತಿರುವು ಪಡೆಯುವಾಗ ಚಕ್ರಗಳಿಗೆ ರಸ್ತೆ ಹಿಡಿತ ಕಡಿಮೆಯಾಗಿದ್ದರೆ ಹೀಗಾಗುತ್ತದೆ. ಓವರ್‌ ಸ್ಟೀರ್ ಮತ್ತು ಅಂಡರ್‌ ಸ್ಟೀರ್‌ ಸಂದರ್ಭಗಳಲ್ಲಿ ಕಾರು ಸೂಚಿತ ದಿಕ್ಕಿನಲ್ಲಿ ಚಲಿಸದೆ ಅಕ್ಕಪಕ್ಕದ ವಾಹನಗಳಿಗೆ ಅಥವಾ ತಡೆಗೋಡೆಗಳಿಗೆ ಅಥವಾ ರಸ್ತೆ ಬದಿಯ ಮರಕ್ಕೆ ಅಪ್ಪಳಿಸುವ ಅಥವಾ ಹಳ್ಳಕ್ಕೋ/ಕಮರಿಗೋ ಬೀಳುವ ಅಪಾಯವಿರುತ್ತದೆ

ನೆರವಾಗುವ ತಂತ್ರಜ್ಞಾನಗಳು
*
 ಹೀಗೆ ದಿಢೀರನೆ ಒಂದರ ಹಿಂದೆ ಒಂದು ತಿರುವು ಪಡೆಯುವಾಗ ಎಬಿಎಸ್+ಇಬಿಡಿ (ಬ್ರೇಕ್ ಬಳಸಿದರೆ ಮಾತ್ರ)+ಟ್ರಾಕ್ಷನ್ ಕಂಟ್ರೋಲ್+ಇಎಸ್‌ಪಿ ನೆರವಿಗೆ ಬರುತ್ತವೆ

* ಭಾರಿ ವೇಗದಲ್ಲಿ ಎಡಕ್ಕೆ ತಿರುವು ಪಡೆದಾಗ ಎಡಭಾಗದ ಚಕ್ರಗಳು ನೆಲದಿಂದ ಮೇಲೇಳುತ್ತವೆ. ಹೆಚ್ಚು ಶಕ್ತಿ ರವಾನೆಯಾಗುವುದರಿಂದ ಹೀಗಾಗುತ್ತದೆ. ಇಎಸ್‌ಪಿ ವ್ಯವಸ್ಥೆಯು ಚಕ್ರಗಳಿಗೆ ಸ್ವಯಂಚಾಲಿತ ವಾಗಿ ಬ್ರೇಕ್ ಹಾಕುವ ಮೂಲಕ ಕಡಿಮೆಶಕ್ತಿ ರವಾನೆಯಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ಚಕ್ರಗಳ ರಸ್ತೆ ಹಿಡಿತ ನಿಗದಿತ ಪ್ರಮಾಣದಲ್ಲೇ ಉಳಿಯುತ್ತದೆ. ಚಾಲಕ ಕಾರಿನ ಮೇಲೆ ನಿಯಂತ್ರಣ ಕಳೆದುಕೊಳ್ಳುವುದು ತಪ್ಪುತ್ತದೆ.

* ಓವರ್ ಸ್ಟೀರ್ ಮತ್ತು ಅಂಡರ್ ಸ್ಟೀರ್ ಸಂದರ್ಭದಲ್ಲಿ ಇಎಸ್‌ಪಿ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ನೆರವಿಗೆ ಬರುತ್ತದೆ. ಇಲ್ಲಿಯೂ ಚಕ್ರಗಳು ನೆಲದಿಂದ ಮೇಲೇಳುವುದರಿಂದ ರಸ್ತೆ ಹಿಡಿತ ತಪ್ಪುತ್ತದೆ. ಇಲ್ಲಿಯೂ ಇಎಸ್‌ಪಿ ನೆರವಿಗೆ ಬರುತ್ತದೆ. ಚಕ್ರಗಳು ರಸ್ತೆಯಿಂದ ಮೇಲೆದ್ದಾಗ ಅವಕ್ಕೆ ಹೆಚ್ಚು ಶಕ್ತಿ ರವಾನೆಯಾಗಿ, ಅವು ಭಾರಿ ವೇಗದಲ್ಲಿ ತಿರುಗುವುದನ್ನು ಟ್ರ್ಯಾಕ್ಷನ್  ಕಂಟ್ರೋಲ್ ತಪ್ಪಿಸುತ್ತದೆ. ರಸ್ತೆ ಹಿಡಿತ ಉತ್ತಮವಾಗಿರುವ ಚಕ್ರಕ್ಕೆ ಹೆಚ್ಚು ಶಕ್ತಿ ರವಾನಿಸಿ, ಕಾರು ಸರಿಯಾದ ದಿಕ್ಕಿಗೆ ತಿರುವು ಪಡೆಯಲು ನೆರವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.