ಲೋಹಾದ್ರಿಬೆಟ್ಟದ ಜಂಬುಕೇಶ್ವರ

ಮಂಗಳವಾರ, ಏಪ್ರಿಲ್ 23, 2019
31 °C

ಲೋಹಾದ್ರಿಬೆಟ್ಟದ ಜಂಬುಕೇಶ್ವರ

Published:
Updated:

ಬಳ್ಳಾರಿ ಜಿಲ್ಲೆ ಹೊಸಪೇಟೆಯಿಂದ ದಕ್ಷಿಣ ದಿಕ್ಕಿನಲ್ಲಿ ಬಳ್ಳಾರಿಗೆ ಹೋಗುವ ರಸ್ತೆ ಇದೆ. ಆ ರಸ್ತೆಗೆ ಸಮೀಪ ಗಣಿಗಾರಿಕೆ ನಡೆದಿರುವ ಬೆಟ್ಟಗಳು ಕಾಣುತ್ತವೆ. ಗಣಿಬೆಟ್ಟಗಳ ನಡುವಿನ ದೇವಾಲಯವೇ ಜಂಬುಕೇಶ್ವರ ದೇವಾಲಯ.

ಸಮುದ್ರದ ಮಟ್ಟದಿಂದ ಸುಮಾರು ಮೂರು ಸಾವಿರ ಅಡಿ ಎತ್ತರದಲ್ಲಿರುವ ಈ ಸ್ಥಳದಲ್ಲಿ ಎತ್ತರದ ಈ ಲೋಹಾದ್ರಿ ಬೆಟ್ಟಗಳ ತಪ್ಪಲಲ್ಲಿ ಜಂಬುನಾಥನಹಳ್ಳಿ, ಗಣಿ ಕಾರ್ಮಿಕರ ವಾಸದ ಮನೆಗಳಿವೆ.

ಕ್ರಿ.ಶ.1420ರಲ್ಲಿ ಹರಿಹರರಾಯರು ರಚಿಸಿದ ಒಂದು ಕಾವ್ಯದಲ್ಲಿ ಹಂಪಿ ಕ್ಷೇತ್ರವನ್ನು ವರ್ಣಿಸುತ್ತಾ ‘ಜಂಬುಕೇಶ್ವರ ದೇವಾಲಯ ಹಂಪಿಯ ದಕ್ಷಿಣದ್ವಾರ’ ಎಂದು ಉಲ್ಲೇಖಿಸಿರುವುದನ್ನು ಇತಿಹಾಸ ಸಂಶೋಧಕ ಡಾ. ಚಿದಾನಂದಮೂರ್ತಿ ತಿಳಿಸುತ್ತಾರೆ. ಜಂಬುಕೇಶ್ವರ ಹಾಗೂ ಹಂಪಿಯ ವಿರೂಪಾಕ್ಷೇಶ್ವರ ನಡುವೆ ಗುರುಶಿಷ್ಯರ ಸಂಬಂಧವಿದೆ. ಜಂಬುಕೇಶ್ವರನ ಜಾತ್ರೆ ಚೈತ್ರ ಶುದ್ಧ ತ್ರಯೋದಶಿ (17 ಏಪ್ರಿಲ್ 2019) ಯಂದು ನಡೆಯುತ್ತದೆ. ಇದಾದ ಮೂರನೇ ದಿನ ಹಂಪಿಯ ವಿರೂಪಾಕ್ಷೇಶ್ವರನ ಜಾತ್ರೆ ನಡೆಯುತ್ತದೆ.

ಜಾಂಬವಂತ ಮಾಡಿದ ತಪಸ್ಸಿನ ಫಲವಾಗಿ ಈ ತಫೋಭೂಮಿಯಲ್ಲಿ ನೆಲೆಸಿರುವ ಶಿವಲಿಂಗ ಜಂಬುಕೇಶ್ವರನೆಂದು ಹಾಗೂ ಶಿವನ ಕೋರಿಕೆಯಿಂದಾಗಿ ಚತುರ್ಮುಖ ಬ್ರಹ್ಮ ಏಕಮುಖನಾಗಿ ಇಲ್ಲಿ ನೆಲೆಸಿದ್ದಾನೆಂದೂ ಪುರಾಣದಲ್ಲಿ ಉಲ್ಲೇಖವಿದೆ.

ಪೌಳಿ, ತ್ರಿಶಂಕು ಹಾಗೂ ಚೌಳರಾಜರು ಈ ದೇವಾಲಯವನ್ನು ಬೆಟ್ಟದ ವಿಶಾಲ, ಸಮತಟ್ಟಾದ ಸ್ಥಳದಲ್ಲಿ ಪೂರ್ವಾಭಿಮುಖ ನಿರ್ಮಿಸಿದ್ದಾರೆ. ದೇವಾಲಯದ ಸುತ್ತಲೂ ಸಾಲು ಮಂಟಪಗಳಿವೆ. ಅವುಗಳನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಆಧುನಿಕ ವ್ಯವಸ್ಥೆಗಳಿಲ್ಲ, ಆದರೂ ವಾಸ್ತವ್ಯಕ್ಕೆ ಅನುಕೂಲ ಮಾಡಲಾಗಿದೆ.


ಜಂಬುಕೇಶ್ವರ ಬೆಟ್ಟ

ಬೆಟ್ಟಗಳ ನಡುವಿನ ದೇವಾಲಯ

ಪೂರ್ವ, ಪಶ್ಚಿಮ ಹಾಗೂ ದಕ್ಷಿಣಕ್ಕೆ ಬೆಟ್ಟಗಳಿವೆ. ಉತ್ತರಕ್ಕೆ ಬಂದು ಹೋಗುವ ದಾರಿ ಇದೆ‌. ಪೂರ್ವದ ಹಾಗೂ ಉತ್ತರದ ದ್ವಾರದಲ್ಲಿನ ಗೋಪುರಮಂಟಪ ಪ್ರವೇಶಿಸಿದಂತೆ ವಿಶಾಲವಾದ 36 ಕಂಬಗಳುಳ್ಳ ಮುಖ ಮಂಟಪವಿದೆ. ಪೌಳಿಯ ನೆಲದಡಿಯಿಂದ ಗುಹಾಂತರವಾಗಿ ಶಿವನಿಗೆ ಪ್ರದಕ್ಷಿಣೆ ಮಾಡುವಂತಿದ್ದರೂ, ಕಾರಣಾಂತರಗಳಿಂದ ಅದನ್ನು ಮುಚ್ಚಲಾಗಿದೆ.

ಪೂರ್ವ ಹಾಗೂ ಉತ್ತರದ ಮುಖ್ಯ ದ್ವಾರಗಳ ಮೂಲಕ ದೇವಸ್ಥಾನದ ಆವರಣಕ್ಕೆ ಪ್ರವೇಶಿಸಿದೊಡನೆ ವಿಶಾಲವಾದ ತೆರೆದ ರಂಗಮಂಟಪದಲ್ಲಿರುವ ಕಂಬಗಳಲ್ಲಿ ಉಬ್ಬುಚಿತ್ರಗಳ ಕೆತ್ತನೆಯ ಶಿಲ್ಪಕಲಾ ವೈಭವವಿದೆ.

ರಂಗಮಂಟಪದ ನಂತರವಿರುವ ಮಂಟಪವನ್ನು ಪೌಳಿರಾಜ ಕಟ್ಟಿಸಿದ್ದಾನೆ. ಸಾಮಾನ್ಯವಾಗಿ ಶಿವನ ದೇವಾಲಯದಲ್ಲಿ ಶಿವನ ಮೂರ್ತಿಗೆ ಅಭಿಮುಖವಾಗಿ ಒಂದು ನಂದಿ ಇರುತ್ತದೆ. ದೇವಾಲಯವನ್ನು ಮೂರು ರಾಜರು ಕಟ್ಟಿಸಿದ ಕಾರಣವೋ ಏನೋ ಇಲ್ಲಿ ಮೂರು ನಂದಿಗಳಿವೆ.

ಶ್ರೀರಾಮಚಂದ್ರನ ವಂಶಜ ತ್ರಿಶಂಕುರಾಜನಿಂದ ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದರೆಂದು ಹೇಳುತ್ತಾರೆ. ಪ್ರತಿದಿನ ಸೂರ್ಯೋದಯಕ್ಕೂ ಮುಂಚೆಯೇ ಜಲಾಭಿಷೇಕ, ರುದ್ರಾಭಿಷೇಕ, ಬಿಲ್ವಪತ್ರೆ ಹಾಗೂ ಹೂವಿನ ಆಲಂಕಾರ ನೈವೇದ್ಯ, ಪೂಜೆಗಳಿರುತ್ತವೆ. ಸೋಮವಾರ, ಗುರುವಾರ, ಅಮವಾಸ್ಯೆ, ಶಿವರಾತ್ರಿಯ ದಿನಗಳಲ್ಲಿ ನೆರೆಯ ಜಿಲ್ಲೆ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ.

ಬೆಟ್ಟದಲ್ಲಿ ಬಾವಿ ಇದೆ. ಇದರಲ್ಲಿ ವರ್ಷಪೂರ್ತಿ ನೀರು ಇರುತ್ತದೆ. ಕಾಂಚನಮಾಲಿನಿ ಎಂಬ ಸ್ತ್ರೀ ತನ್ನ ಶಾಪ ವಿಮೋಚನೆಗಾಗಿ ಮಿಂದ ಈ ಬಾವಿಗೆ ‘ಕಾಂಚನತೀರ್ಥ’ ಎಂದು ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ. ಈ ಬಾವಿಯಲ್ಲಿ ಖನಿಜಯುಕ್ತ ನೀರಿದ್ದು, ಇದರಿಂದ ಚರ್ಮರೋಗ, ರೋಗಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಇದಕ್ಕೆ ಬಿಸಿಲು ಬೀಳದ ಬಾವಿ ಎಂದೂ ಕರೆಯುತ್ತಾರೆ.

ಬಾವಿ ಕೊಳೆ ತೊಳೆಯುವ ಆಚರಣೆ

ಜಂಬುಕೇಶ್ವರನ ಜಾತ್ರೆ ಆದ 9ನೇ ದಿನ ‘ಬಾವಿ ಕೊಳೆ ತೊಳೆಯುವ’ ವಿಶಿಷ್ಟ ಆಚರಣೆ ಇರುತ್ತದೆ. ಸಾಮಾನ್ಯವಾಗಿ ಜಾತ್ರೆಗೆ ಬಂದು ಹೋಗುವ ಸಹಸ್ರಾರು ಭಕ್ತರು ಸ್ನಾನ, ಪೂಜೆಗಾಗಿ ಕಾಂಚನತೀರ್ಥ ಬಾವಿಯ ನೀರನ್ನು ಬಳಸುತ್ತಾರೆ. ಹೆಚ್ಚು ಜನರು ಬಾವಿ ನೀರು ಬಳಸುವುದರಿಂದ, ಆ ನೀರು ಕೊಳೆಯಾಗಿರುತ್ತದೆ. ಅಲ್ಲಿನ ಅರ್ಚಕರು ಈ ಬಾವಿಯ ಕೊಳೆ ತೊಳೆಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ.

ಆ ದಿನ ಮಧ್ಯರಾತ್ರಿಯಲ್ಲಿ ಎಲ್ಲಾ ಅರ್ಚಕರು ಬಾವಿಯಲ್ಲಿ ಳಿದು ನೀರಿನ ಸೆಲೆಯನ್ನು ಮುಚ್ಚಿ ಬಾವಿಯಲ್ಲಿದ್ದ ನೀರೆಲ್ಲಾ ಖಾಲಿಮಾಡುತ್ತಾ ಕೊಳೆ, ಪಾಚಿ, ಕಲ್ಮಶವನ್ನೆಲ್ಲ ತೆಗೆದು ಸ್ವಚ್ಛಗೊಳಿಸುತ್ತಾರೆ. ನಂತರ ಲಿಂಗರೂಪಿ ಜಂಬುಕೇಶ್ವರ ಹಾಗೂ ಗಂಗಾಮಾತೆಗೆ ಪೂಜೆಸಲ್ಲಿಸಿ, ಮುಚ್ಚಿದ ಜಲ ಕಣ್ಣುಗಳನ್ನು (ನೀರಿನ ಸೆಲೆಯನ್ನು) ತೆಗೆಯುತ್ತಾರೆ. ಆಗ ಹೊಸ ನೀರಿನ ಬುಗ್ಗೆ ಚಿಮ್ಮುತ್ತದೆ. ‘ಈ ಬಾವಿಗೆ ಎಂದೂ ಬರಗಾಲ ಬಾರದಿರಲಿ. ಇಲ್ಲಿನ ತೀರ್ಥದಿಂದ ಸ್ನಾನಪಾನ ಮಾಡಿದವರ ಇಷ್ಟಾರ್ಥಗಳನ್ನು ಸಿದ್ಧಿಸಲಿ’ ಎಂದು ಬೇಡಿಕೊಳ್ಳುತ್ತಾರೆ. ಜಾತ್ರೆಗೆ ಬರಲಾಗದ ಭಕ್ತರು ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

ಜಂಬುಕೇಶ್ವರ ಬೆಟ್ಟ ಧಾರ್ಮಿಕ ಆಚರಣೆಗಷ್ಟೇ ಅಲ್ಲದೇ, ಪರಿಸರ ಪ್ರೇಮಿಗಳಿಗೆ ಒಂದು ದಿನದ ಚಾರಣ ಹಾಗೂ ಪ್ರವಾಸಕ್ಕೆ ಸೂಕ್ತ ತಾಣ.ಚಾರಣ ಮಾಡುವವರು ಮಳೆಗಾಲದ ನಂತರದ ದಿನಗ ಳನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ದೇವಾಲಯ ಕುರಿತ ಮಾಹಿತಿಗೆ ಆನಂದಸ್ವಾಮಿ-9902899905, ನಾಗರಾಜ್-9972981019, ಮಲ್ಲಯ್ಯ -9980718379 ಅವರನ್ನು ಸಂಪರ್ಕಿಸಬಹುದು.

ಸಾರಿಗೆ, ಊಟ – ವಸತಿ ?

ಬಳ್ಳಾರಿ ಜಿಲ್ಲೆಯ ಹೊಸಪೇಟೆಗೆ ರಾಜ್ಯದ ಎಲ್ಲಾ ಕಡೆಯಿಂದ ಬಸ್ಸು, ರೈಲು ಸಂಚಾರದ ವ್ಯವಸ್ಥೆ ಗಳಿವೆ. ಅಲ್ಲಿಂದ ಜಂಬುಕೇಶ್ವರ ಬೆಟ್ಟದವರೆಗೆ ಹೋಗಿ ಬರಲು ಹೊಸಪೇಟೆ ನಗರ ಸಾರಿಗೆಯ ಕೆಲವೇ ಕೆಲವು ಬಸ್ಸುಗಳಿವೆ. ಅಮವಾಸ್ಯೆಯ ದಿನಪೂರ್ತಿ ಬಸ್‌ ಸಂಚಾರವಿರುತ್ತದೆ. ಬೆಟ್ಟದ ಮೇಲಿರುವ ದೇವಾಲಯಕ್ಕೆ ಹೋಗಲು ಮೆಟ್ಟಿಲುಗಳ ವ್ಯವಸ್ಥೆ ಇದೆ.

ಹೊಸಪೇಟೆಯಿಂದ ಈ ಸ್ಥಳಕ್ಕೆ ಬಾಡಿಗೆ ಆಟೊ, ಕಾರುಗಳು ಲಭ್ಯವಿವೆ. ದ್ವಿಚಕ್ರ ವಾಹನ ಸೌಲಭ್ಯವಿದ್ದವರು, ಅದರಲ್ಲೇ ಹೋಗಬಹುದು. ರಸ್ತೆ ಅ‌ಷ್ಟು ಉತ್ತಮವಾಗಿಲ್ಲ. ಅಲ್ಲಿ ಯಾವ ಹೋಟೆಲ್, ದರ್ಶಿನಿಗಳಿಲ್ಲ. ಹೀಗಾಗಿ ತಿಂಡಿ ತಿನಿಸುಗಳನ್ನು ಜೊತೆಯಲ್ಲೇ ತೆಗೆದುಕೊಂಡು ಹೋಗುವುದು ಸೂಕ್ತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !