ಜನಸಂಪರ್ಕ ಸಭೆ: 64 ಜನರಿಂದ ಅಹವಾಲು ಸಲ್ಲಿಕೆ

7
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ನೇತೃತ್ವದಲ್ಲಿ ಮೊದಲ ಸಭೆ

ಜನಸಂಪರ್ಕ ಸಭೆ: 64 ಜನರಿಂದ ಅಹವಾಲು ಸಲ್ಲಿಕೆ

Published:
Updated:
Deccan Herald

ಚಾಮರಾಜನಗರ: ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ನೇತೃತ್ವದಲ್ಲಿ ಪಟ್ಟಣದಲ್ಲಿ ಶುಕ್ರವಾರ ಮೊದಲ ಜನಸಂಪರ್ಕ ಸಭೆ ನಡೆಯಿತು.

ಚಾಮರಾಜನಗರದ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕಿನ 64 ಮಂದಿ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ನೇರವಾಗಿ ಜಿಲ್ಲಾಧಿಕಾರಿ ಅವರ ಮುಂದಿಟ್ಟರು.

ಪ್ರತಿಯೊಂದು ಅರ್ಜಿಯನ್ನು ಪರಿಶೀಲಿಸಿದ ಬಿ.ಬಿ.ಕಾವೇರಿ ಅವರು, ಉಪವಿಭಾಗಾಧಿಕಾರಿ, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ತಹಶೀಲ್ದಾರ್‌ ಹಾಗೂ ಇತರ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ, ನಿರ್ದಿಷ್ಟ ದಿನಗಳ ಒಳಗೆ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದರು.

ಪ್ರತಿ ತಿಂಗಳು ಸಭೆ: ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾವೇರಿ, ‘ಮುಖ್ಯಮಂತ್ರಿ ಅವರ ನಿರ್ದೇಶನದ ಮೇರೆಗೆ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ. ತಾಲ್ಲೂಕು ಮಟ್ಟದಲ್ಲಿ ಪ್ರತಿ ತಿಂಗಳೂ ಸಭೆ ನಡೆಸಲಿದ್ದೇವೆ. ಹಿಂದುಳಿದ ಹೋಬಳಿಗಳಲ್ಲೂ ಸಭೆ ನಡೆಯಲಿ‌ದೆ’ ಎಂದರು.

‘ಜನರು ತಮ್ಮ ಕುಂದುಕೊರತೆಗಳನ್ನು, ಸಮಸ್ಯೆಗಳನ್ನು ಮಾತ್ರ ಇಲ್ಲಿ ಹೇಳಬೇಕು. ಸಂಬಂಧಿಸಿದ ಅಧಿಕಾರಿಗಳ ಸಮಕ್ಷಮದಲ್ಲಿ ಅದನ್ನು ತಕ್ಷಣವೇ ಬಗೆಹರಿಸಲು ಪ್ರಯತ್ನ ಮಾಡುತ್ತೇವೆ. ಕೆಲವನ್ನು ನಿರ್ದಿಷ್ಟ ಕಾಲಾವಕಾಶದಲ್ಲಿ ಬಗೆಹರಿಸಲಾಗುವುದು. ಸಂಕೀರ್ಣ ಸಮಸ್ಯೆಗಳಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ’ ಎಂದು ಹೇಳಿದರು.

ಗಂಭೀರವಾಗಿ ಪರಿಗಣಿಸಲು ಸೂಚನೆ: ಜನರ ಅಹವಾಲುಗಳನ್ನು ಸ್ವೀಕರಿಸಿದ ಬಳಿಕ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ, ‘ಜನಸಂಪರ್ಕ ಸಭೆಯಲ್ಲಿ ಜನರು ಸಲ್ಲಿಸಿರುವ ಅರ್ಜಿಗಳನ್ನು ಗಂಭೀರವಾಗಿ ಪರಿಗಣಿಸಬೇಕು. ನಿರ್ದಿಷ್ಟ ಕಾಲಾವಧಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಬೇಕು. ಕೆಲವರಿಗೆ 15 ದಿನ, ಇನ್ನು ಕೆಲವರಿಗೆ ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಲಾಗಿದೆ. ಇಲ್ಲಿಗೆ ಬಂದಿರುವ ಅರ್ಜಿಗಳಿಗೆ ಸಂಬಂಧಿಸಿದ ಕೆಲಸಗಳ ಪ್ರಗತಿಯ ಮೇಲೆ ಖುದ್ದು ನಾನೇ ಗಮನ ಹರಿಸುತ್ತೇನೆ. ಇನ್ನು ಮುಂದೆ ಪ್ರತಿ ತಿಂಗಳೂ ಸಭೆ ನಡೆಸಲಾಗುತ್ತದೆ’ ಎಂದರು.

ಕಂದಾಯ ಹೆಚ್ಚು ಪಡೆಯುತ್ತಿದ್ದಾರೆ: ಪಟ್ಟಣದ ಚಿಕ್ಕ ಅಂಗಡಿ ಬೀದಿಯಲ್ಲಿ ವಾಸಿಸುತ್ತಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, 95 ವರ್ಷದ ಸಿ.ಆರ್‌. ರಂಗಶೆಟ್ಟಿ ಅವರು, ತಮಗೆ ಮನೆ ಕಂದಾಯ ಹೆಚ್ಚು ವಿಧಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮುಂದೆ ಅಳಲು ತೋಡಿಕೊಂಡರು.

‘ಈ ಹಿಂದೆ ಮನೆ ಕಂದಾಯ ₹80–₹90 ಬರುತ್ತಿತ್ತು. ಈಗ ನಾನು ₹1,800 ಕಟ್ಟಬೇಕು ಎಂದು ನಗರಸಭೆ ಹೇಳುತ್ತಿದೆ’ ಎಂದು ದೂರು ನೀಡಿದರು. ಅರ್ಜಿಯನ್ನು ಪರಿಶೀಲಿಸಿದ ಬಿ.ಬಿ.ಕಾವೇರಿ, ನಗರಸಭೆ ಆಯುಕ್ತ ಎನ್‌.ರಾಜಣ್ಣ ಅವರನ್ನು ಕರೆಸಿಕೊಂಡು ಈ ಬಗ್ಗೆ ವಿಚಾರಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ರಂಗಶೆಟ್ಟಿ ಅವರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಬಹುಶಃ ಕಂಪ್ಯೂಟರ್‌ನಲ್ಲಿ ದಾಖಲಿಸುವಾಗ ತಪ್ಪಾಗಿರುವ ಸಾಧ್ಯತೆ ಇದೆ. ಆಯುಕ್ತರು ಶೀಘ್ರದಲ್ಲಿ ಸಮಸ್ಯೆಯನ್ನು ಇತ್ಯರ್ಥಪಡಿಸಲಿದ್ದಾರೆ ಎಂದು ಹೇಳಿದರು.

ಮಣ್ಣು ತೆಗೆಯಲು ಬಿಡುತ್ತಿಲ್ಲ: ತಾಲ್ಲೂಕಿನ ಪಣ್ಯದ ಹುಂಡಿಯಿಂದ ಬಂದಿದ್ದ ರೇವಣ್ಣ, ‘ನಮ್ಮ ಜಮೀನಿನಲ್ಲಿ ಕೃಷಿ ಮಾಡುವುದಕ್ಕಾಗಿ ಕ‍ಪ್ಪು ಮಣ್ಣು ಬೇಕು. ಸಮೀಪದಲ್ಲಿರುವ ಕೆರೆಯಿಂದ (ಚಿಕ್ಕ ಕೆರೆ, ದೊಡ್ಡ ಕೆರೆ) ಹೂಳು ತೆಗೆದು ಜಮೀನಿಗೆ ಹಾಕುತ್ತಿದ್ದೆವು. ಆದರೆ ಈಗ ಬಿಡುತ್ತಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಕೆರೆಯಿಂದ ಮಣ್ಣು ತೆಗೆಯಲು ಅನುಮತಿ ಕೊಟ್ಟರೆ, ಅದನ್ನು ಹೆಚ್ಚಿನವರು ದುರ್ಬಳಕೆ ಮಾಡುತ್ತಾರೆ. ಹಾಗಾಗಿ, ಅವಕಾಶ ನೀಡುವುದಿಲ್ಲ. ಕೃಷಿಗೆ ಬಳಸುವುದಿದ್ದರೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಯಾವುದೇ ಕಾರಣಕ್ಕೂ ಅದನ್ನು ದುರ್ಬಳಕೆ ಆಗದಂತೆ ನೋಡಿಕೊಳ್ಳಬೇಕು. ಸಂಬಂಧಿಸಿದ ಅಧಿಕಾರಿಗಳಿಗೆ ನಾನು ಸೂಚನೆ ನೀಡುತ್ತೇನೆ’ ಎಂದರು.

ಖಾತೆ ಮಾಡಿಕೊಡಲು ಅಧಿಕಾರಿಗಳು ವಿಳಂಬ ಮಾಡುತ್ತಿರುವುದು, ಪಹಣಿಯಲ್ಲಿ ಬೇರೆಯವರ ಹೆಸರು ನಮೂದು ಆಗಿರುವುದು ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ಹಲವು ದೂ‌ರುಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಅವರು, 15 ದಿನ ಇಲ್ಲವೇ 30 ದಿನಗಳೊಳಗೆ ಸಮಸ್ಯೆಯನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬೆಳೆ ವಿಮೆ ಸಿಗದ ಬಗ್ಗೆಯೂ ಕೆಲವು ರೈತರು ದೂರು ನೀಡಿದರು. ಸಾರ್ವಜನಿಕ ಸ್ಥಳದಲ್ಲಿ ಖಾಸಗಿಯವರು ಬೇಲಿ ಹಾಗೂ ಕಾಂಪೌಂಡ್‌ ನಿರ್ಮಿಸುತ್ತಿರುವ ಬಗ್ಗೆಯೂ ದೂರುಗಳು ಬಂದವು.

ತಡವಾಗಿ ಆರಂಭ: ಬೆಳಿಗ್ಗೆ 11 ಗಂಟೆಗೆ ಜನಸಂಪರ್ಕ ಸಭೆ ಆರಂಭವಾಗಬೇಕಿತ್ತು. ಆದರೆ, ಸಭೆ ಶುರುವಾದಾಗ ಮಧ್ಯಾಹ್ನ 12.15 ದಾಟಿತ್ತು.

ಉಪ ವಿಭಾಗಾಧಿಕಾರಿ ಫೌಜಿಯಾ ತರನ್ನುಮ್‌, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್‌, ತಹಶೀಲ್ದಾರ್‌ ಪುರಂದರ, ನಗರಸಭೆ ಆಯುಕ್ತ ಎನ್‌.ರಾಜಣ್ಣ ಹಾಗೂ ವಿವಿಧ ಇಲಾಖೆಯ ತಾಲ್ಲೂಕು ಅಧಿಕಾರಿಗಳು ಇದ್ದರು.

ತಿಂಗಳಿಗೆ ₹2.50 ಸಂಬಳ!

ಜನಸಂಪರ್ಕ ಸಭೆಗೆ ಅಹವಾಲು ಸಲ್ಲಿಸಲು ಬಂದಿದ್ದ ಅನಂತ ಪ್ರಸಾದ್‌ ಅವರು ತಾಲ್ಲೂಕಿನ ಹರಳಕೋಟೆ ಜನಾರ್ದನ ಸ್ವಾಮಿ ದೇವಾಲಯದ ಅರ್ಚಕ. ಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ಈ ದೇವಾಲಯದಲ್ಲಿ ಪೂಜೆ ಮಾಡುತ್ತಿರುವುದಕ್ಕೆ ಅವರಿಗೆ ಪ್ರತಿ ತಿಂಗಳು ಸಿಗುತ್ತಿರುವ ವೇತನ ಕೇವಲ ₹2.50. ಎಣ್ಣೆ, ಕರ್ಪೂರ, ಬತ್ತಿ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಖರೀದಿಗೆ ₹4.75 ಅನ್ನು ಇಲಾಖೆ ಕೊಡುತ್ತದೆ.

ಇದನ್ನು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದ ಅರ್ಚಕರು, ‘ಈ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದೇನೆ. ಆದರೆ, ಏನೂ ಕ್ರಮ ಕೈಗೊಂಡಿಲ್ಲ. ಈ ಹಣದಲ್ಲಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ‘ಈ ಬಗ್ಗೆ ಮುಜರಾಯಿ ಇಲಾಖೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಇದನ್ನು ಸಂಬಂಧಿಸಿದವರ ಗಮನಕ್ಕೆ ತರುತ್ತೇವೆ’ ಎಂದು ಭರವಸೆ ನೀಡಿದರು.

ಸರ್ಕಾರಿ ಜಮೀನಿನ ಪರಭಾರೆ

‘ಯಡಿಯೂರು, ಕೆಂಪನಪುರ ಗ್ರಾಮಗಳ ಸಮೀಪವಿರುವ ಯಡಿಯೂರು ಕೆರೆ ಮತ್ತು ಅಡ್ಡಹಳ್ಳ ಕೆರೆ ಸೇರಿಸಿ ನಿರ್ಮಿಸಿರುವ ಹೊಸ ಕೆರೆ ಒತ್ತುವರಿಯಾಗಿದೆ. ಈ ಕೆರೆ ಹಾಗೂ ಕಾಲುವೆ ನಿರ್ಮಾಣಕ್ಕೆ 1972ರಲ್ಲಿ ಭೂ ಸ್ವಾಧೀನ ನಡೆದಿದೆ. ಇದೇ ಕೆರೆಗೆ ನಿರ್ಮಿಸಿರುವ ಎಡದಂಡೆ ಮತ್ತು ಬಲದಂಡೆ ಕಾಲುವೆಗಳನ್ನು ಒತ್ತುವರಿ ಮಾಡಲಾಗಿದ್ದು, ಕೆಲವರು ಜಮೀನು ಮಾರಾಟವನ್ನೂ ಮಾಡಿದ್ದಾರೆ. ಸರ್ಕಾರ ಸ್ವಾಧೀನ ಪಡಿಸಿಕೊಂಡಿರುವ ಜಮೀನಿನ ವಿವರಗಳನ್ನು ಪಹಣಿಯಲ್ಲಿ ಇನ್ನೂ ನಮೂದಿಸಿಲ್ಲ’ ಎಂದು ಮಹಾಂತಾಳಪುರ ಗ್ರಾಮದ ನಿವಾಸಿ ಮಹದೇವಸ್ವಾಮಿ ಅವರು ದೂರು ನೀಡಿದರು.

ಕಂದಾಯ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಕರೆಸಿ ವಿವರ ಪಡೆದ ಜಿಲ್ಲಾಧಿಕಾರಿ, ‘ಏಕೆ ಇನ್ನೂ ಪಹಣಿಯಲ್ಲಿ ಸ್ವಾಧೀನ ವಿವರಗಳನ್ನು ನಮೂದಿಸಿಲ್ಲ’ ಎಂದು ಪ್ರಶ್ನಿಸಿದರು. ಶೀಘ್ರವಾಗಿ, ಅದನ್ನು ಪರಿಶೀಲಿಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !