ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅವ್ಯವಸ್ಥೆ: ಮಾನವ ಸರಪಳಿ ರಚಿಸಿ ಧರಣಿ

ಒಳಚರಂಡಿ ಕಾಮಗಾರಿ ನಗರವಾಸಿಗಳಿಗೆ ಶಾಪ: ಧರಣಿನಿರತರ ಆಕ್ರೋಶ
Last Updated 12 ಜೂನ್ 2018, 12:13 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಒತ್ತಾಯಿಸಿ ವಿವಿಧ ಸಂಘಟನೆಗಳ ಸದಸ್ಯರು ಟೋಲ್‌ಗೇಟ್‌ನಲ್ಲಿ ಸೋಮವಾರ ಮಾನವ ಸರಪಳಿ ರಚಿಸಿ ಧರಣಿ ನಡೆಸಿದರು.

‘ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಕೆಯುಡಬ್ಲ್ಯೂಎಸ್‌ಡಿಬಿ) ಅಮೃತ್‌ ಯೋಜನೆಯಡಿ ಜಿಲ್ಲಾ ಕೇಂದ್ರದಲ್ಲಿ ಆರಂಭಿಸಿರುವ ಒಳಚರಂಡಿ ಕಾಮಗಾರಿಯು ನಗರವಾಸಿಗಳಿಗೆ ಶಾಪವಾಗಿದೆ. ಕಾಮಗಾರಿಗಾಗಿ ರಸ್ತೆಗಳನ್ನು ಮನಸೋ ಇಚ್ಛೆ ಅಗೆಯಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಒಳಚರಂಡಿ ಕಾಮಗಾರಿಯಿಂದ ರಸ್ತೆಗಳ ಚಿತ್ರಣವೇ ಬದಲಾಗಿದೆ. ರಸ್ತೆಗಳು ಮಳೆಗೆ ರಾಡಿಯಾಗಿವೆ. ನಗರ ಸೌಂದರ್ಯ ಹಾಳಾಗಿದ್ದು, ದೂಳಿನ ಆರ್ಭಟ ಹೆಚ್ಚಿದೆ. ನಗರವಾಸಿಗಳು ಹಾಗೂ ವಾಹನ ಸವಾರರು ಪ್ರತಿನಿತ್ಯ ಬವಣೆ ಪಡುವಂತಾಗಿದೆ’ ಎಂದು ರಾಜ್ಯ ರೈತ ಸಂಘ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

‘ಗುಂಡಿಮಯ ರಸ್ತೆಗಳುಜನರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿವೆ. ಒಳಚರಂಡಿ ಕಾಮಗಾರಿಯ ಗುತ್ತಿಗೆದಾರರು ಕೆಲಸ ಪೂರ್ಣಗೊಂಡ ಬಳಿಕ ರಸ್ತೆಗಳನ್ನು ದುರಸ್ತಿ ಮಾಡಿಲ್ಲ. ಕೆಯುಡಬ್ಲ್ಯೂಎಸ್‌ಡಿಬಿ ಅಧಿಕಾರಿಗಳು ನೆಪ ಮಾತ್ರಕ್ಕೆ ಗುಂಡಿಗಳಿಗೆ ಜಲ್ಲಿ ಪುಡಿ ಸುರಿಸಿ ರಸ್ತೆಗೆ ಡಾಂಬರು ಹಾಕಿರುವುದಾಗಿ ಬಿಲ್‌ ಮಂಜೂರು ಮಾಡಿದ್ದಾರೆ. ಈ ಅಕ್ರಮದಲ್ಲಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಕೋಟಿಗಟ್ಟಲೆ ಹಣ ದೋಚಿದ್ದಾರೆ’ ಎಂದು ಆರೋಪಿಸಿದರು.

ಸಮಸ್ಯೆಯ ಅರಿವಿಲ್ಲ: ‘ರಸ್ತೆಗಳ ಅಕ್ಕಪಕ್ಕದ ಹೋಟೆಲ್‌, ಬೇಕರಿ, ಅಂಗಡಿ ಕೆಲಸಗಾರರು ಹಾಗೂ ವರ್ತಕರಿಗೆ ದೂಳಿನ ಸಮಸ್ಯೆಯಿಂದ ಕಿರಿಕಿರಿಯಾಗುತ್ತಿದೆ. ನಗರವಾಸಿಗಳಿಗೆ ತೀವ್ರ ತೊಂದರೆಯಾಗಿದ್ದರೂ ಜಿಲ್ಲಾಧಿಕಾರಿ ಸಮಸ್ಯೆ ಪರಿಹಾರಕ್ಕೆ ಗಮನ ಹರಿಸುತ್ತಿಲ್ಲ. ಗುಂಡಿ ಬಿದ್ದ ರಸ್ತೆಗಳಲ್ಲೇ ಸಂಚರಿಸುವ ಅವರಿಗೆ ಸಮಸ್ಯೆಯ ಅರಿವಿಲ್ಲ. ಜನಪ್ರತಿನಿಧಿಗಳು ರಸ್ತೆಗಳ ವಿಚಾರದಲ್ಲಿ ಕಣ್ಣಿದ್ದು ಕುರುಡಾಗಿದ್ದಾರೆ’ ಎಂದು ಧರಣಿನಿರತರು ಅಸಮಾಧಾನ ವ್ಯಕ್ತಪಡಿಸಿದರು.

‘ರಸ್ತೆಗಳ ಅವ್ಯವಸ್ಥೆಯಿಂದ ಪ್ರತಿನಿತ್ಯ ಅಪಘಾತ ಸಂಭವಿಸುತ್ತಿವೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ವಾರದ ಹಿಂದೆ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಅಲ್ಲದೇ, ಅಪಘಾತಗಳಲ್ಲಿ ಹಲವರು ಗಾಯಗೊಂಡಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳದೆ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕರಾದ ನಳಿನಿ, ರಾಮುಶಿವಣ್ಣ, ಶ್ರೀನಿವಾಸ್, ರಾಜೇಶ್, ಶ್ರೀನಾಥ್, ಮಂಜುನಾಥ್, ನಾಗರಾಜ್, ನಾರಾಯಣಸ್ವಾಮಿ, ರಮೇಶ್ ಪಾಲ್ಗೊಂಡಿದ್ದರು.

ಸಂಚಾರ ಅಸ್ತವ್ಯಸ್ತ

ರಸ್ತೆ ತಡೆಯಿಂದ ಶ್ರೀನಿವಾಸಪುರ, ಚಿಂತಾಮಣಿ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿ ವಾಹನಗಳು ಕಿಲೋ ಮೀಟರ್‌ಗಟ್ಟಲೇ ಸಾಲುಗಟ್ಟಿದವು. ಪೊಲೀಸರ ಮನವೊಲಿಕೆ ಪ್ರಯತ್ನಕ್ಕೂ ಜಗ್ಗದ ಧರಣಿನಿರತರು ಜಿಲ್ಲಾಧಿಕಾರಿ ಬಂದು ಸಮಸ್ಯೆ ಆಲಿಸಬೇಕೆಂದು ಪಟ್ಟು ಹಿಡಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅಹವಾಲು ಆಲಿಸಿ, ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ರಸ್ತೆಗಳ ಅವ್ಯವಸ್ಥೆ ಸಂಬಂಧ ನಗರಸಭೆಯಿಂದ ಜಿಲ್ಲಾಡಳಿತದವರೆಗೆ ದೂರು ಕೊಟ್ಟಿದ್ದೇವೆ. ಅಧಿಕಾರಿಗಳು ಪರಸ್ಪರರತ್ತ ಬೊಟ್ಟು ಮಾಡುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿಯು ಸೌಜನ್ಯಕ್ಕೂ ರಸ್ತೆಗಳ ದುಸ್ಥಿತಿ ಪರಿಶೀಲಿಸಿಲ್ಲ.
ವೆಂಕಟೇಶ್‌, ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT