‘ವೈಯಕ್ತಿಕ ಕಾನೂನು ಸುಧಾರಣೆಯಾಗಲಿ’

7

‘ವೈಯಕ್ತಿಕ ಕಾನೂನು ಸುಧಾರಣೆಯಾಗಲಿ’

Published:
Updated:
Deccan Herald

ಬೆಂಗಳೂರು: ಏಕರೂಪ ನಾಗರಿಕ ಸಂಹಿತೆಯನ್ನು ರಾಜಕೀಯ ಉದ್ದೇಶದಿಂದ ತರಾತುರಿಯಲ್ಲಿ ಜಾರಿಗೊಳಿಸಲು ಮುಂದಾಗುವುದು ಸರಿಯಲ್ಲ. ಆದರೆ ವಿವಿಧ ಧರ್ಮಗಳ ವೈಯಕ್ತಿಕ ಕಾನೂನುಗಳ ಸುಧಾರಣೆಗೆ ಸರ್ಕಾರ ಮುಂದಾಗಬೇಕು ಎಂಬ ಬಗ್ಗೆ ಒಕ್ಕೊರಲ ಕೂಗು ಕೇಳಿಬಂತು. 

ರಾಜ್ಯ ಜನವಾದಿ ಮಹಿಳಾ ಸಂಘಟನೆ ಶನಿವಾರ ಆಯೋಜಿಸಿದ್ದ ಸಮಾನತೆ ಮತ್ತು ಏಕರೂಪತೆ, ಸಮಾನ ಹಕ್ಕು ಸಮಾನ ಕಾಯ್ದೆ ಚರ್ಚೆಯಲ್ಲಿ ಭಾಗವಹಿಸಿ ಅಭಿಪ್ರಾಯ ಹಂಚಿಕೊಂಡ ಬಹುತೇಕರು ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. 

ಪ್ರಾಧ್ಯಾಪಕಿ ಡಾ.ಚಮನ್‌ ಫರ್ಜಾನಾ, ‘ಕೇಂದ್ರ ಸರ್ಕಾರ ‘ತಲಾಖ್’ ವಿಷಯವನ್ನು ಮಾತ್ರ ಕೇಂದ್ರೀಕರಿಸಿಕೊಂಡು, ಮುಸ್ಲಿಂ ಸಮುದಾಯದ ಇತರ ಸಮಸ್ಯೆಗಳನ್ನು ಗೌಣವಾಗಿಸುವ ಮೂಲಕ ಸಮಾಜದ ಗಮನವನ್ನು ಬೇರೆಡೆಗೆ ಸೆಳೆಯುತ್ತಿರುವುದು ವಿಷಾದನೀಯ. ಸಮುದಾಯದ ಆರೋಗ್ಯ, ಶಿಕ್ಷಣ, ಉನ್ನತ ಹುದ್ದೆಗಳಲ್ಲಿ ಅವಕಾಶದ ಬಗ್ಗೆ ಯಾಕೆ ಚಕಾರವೆತ್ತುತ್ತಿಲ್ಲ? ತಲಾಖ್ ಕಾನೂನಿನ ದ್ವಂದ್ವಗಳಿಂದಾಗಿ ಮಹಿಳೆಯರ ವೈವಾಹಿಕ ಜೀವನ ಅಧೋಗತಿ ತಲುಪಿದಂತಾಗಿದೆ’ ಎಂದು  ಬೇಸರ ವ್ಯಕ್ತಪಡಿಸಿದರು.

ಲೇಖಕಿ ಷಾಕಿರಾ ಖಾನಮ್‌, ‘ತ್ರಿವಳಿ ತಲಾಖ್ ಬೇಕೋ, ಬೇಡವೋ ಎಂಬುದನ್ನು ಮಹಿಳೆ ನಿರ್ಧರಿಸಬೇಕೇ ಹೊರತು, ಕಾನೂನಲ್ಲ. ಅದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅಷ್ಟೇ ಅಲ್ಲದೆ, ಹೆಣ್ಣಿನ ವ್ಯಕ್ತಿತ್ವ ಮತ್ತು ಅಸ್ತಿತ್ವದ ಪ್ರಶ್ನೆಯಾಗಿ ನಿಂತಿದೆ. ತಲಾಖ್ ಬದಲು ಖುಲಾ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ’ ಎಂದು ಪ್ರಶ್ನಿಸಿದರು. 

‘ಬಹುತ್ವ ಭಾರತದಲ್ಲಿ ನಿರ್ದಿಷ್ಟ ಸಮುದಾಯಗಳ ಧರ್ಮ, ಸಂಸ್ಕೃತಿ ಮತ್ತು ಆಚರಣೆಗಳನ್ನು ಮೊಟಕುಗೊಳಿಸಬಾರದು. ವಿವಿಧ ಧರ್ಮಗಳ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆ ತರುವ ಅಗತ್ಯವಿದೆ. ಈ ನಿಟ್ಟಿನಲ್ಲಿ  ಕಾನೂನು ಆಯೋಗದ ಶಿಫಾರಸ್ಸುಗಳನ್ನು ಚರ್ಚೆಗೊಳಪಡಿಸಬೇಕಾದ ಅನಿವಾರ್ಯ ಇದೆ’ ಎಂದು ‘ಪ್ರಜಾವಾಣಿ’ ವ್ಯೂಸ್ ಎಡಿಟರ್ ಸಿ.ಜಿ.ಮಂಜುಳಾ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !