ಶಕ್ತಿ ಪ್ರದರ್ಶನಕ್ಕೆ ದೇವಾನಂದ ಕಸರತ್ತು..!

ಶುಕ್ರವಾರ, ಏಪ್ರಿಲ್ 26, 2019
36 °C
ನಾಮಪತ್ರ ಸಲ್ಲಿಕೆಗೆ ಜೆಡಿಎಸ್‌ ಅಗ್ರೇಸರರ ಗೈರು ? ಕುಂದಿದ ಉತ್ಸಾಹ

ಶಕ್ತಿ ಪ್ರದರ್ಶನಕ್ಕೆ ದೇವಾನಂದ ಕಸರತ್ತು..!

Published:
Updated:

ವಿಜಯಪುರ: ಕಾಂಗ್ರೆಸ್‌–ಜೆಡಿಎಸ್‌ನ ಮೈತ್ರಿ ಅಭ್ಯರ್ಥಿಯಾಗಿ, ನಾಗಠಾಣ ಶಾಸಕ ದೇವಾನಂದ ಚವ್ಹಾಣ ಪತ್ನಿ ಸುನೀತಾ ಚವ್ಹಾಣ ಗುರುವಾರ ನಾಮಪತ್ರ ಸಲ್ಲಿಸಲಿದ್ದು, ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ.

ಎರಡು ದಶಕದಿಂದ ಕಮಲ ಪಾಳೆಯದ ಭದ್ರ ಕೋಟೆಯಾಗಿರುವ ಲೋಕಸಭಾ ಕ್ಷೇತ್ರವನ್ನು ವಶಪಡಿಸಿಕೊಳ್ಳಲಿಕ್ಕಾಗಿ ದಳಪತಿಗಳು ರಣ ತಂತ್ರ ರೂಪಿಸಿದ್ದು, ಹಾಥ್‌ನ ಸಾಥ್‌ನೊಂದಿಗೆ ಅಖಾಡಕ್ಕಿಳಿಯಲು ಸಕಲ ಸಿದ್ಧತೆ ನಡೆಸಿಕೊಂಡಿದ್ದಾರೆ.

ಈಚೆಗಿನ ವರ್ಷಗಳಲ್ಲಿ ಜೆಡಿಎಸ್‌ ನಿಷ್ಠ ಎಂದೇ ಗುರುತಿಸಿಕೊಂಡಿರುವ ದೇವಾನಂದ ಚವ್ಹಾಣ, ಈ ಹಿಂದಿನ ದಿನಗಳಲ್ಲಿ ಆಹ್ವಾನಿಸಿದ ಪ್ರತಿ ಸಂದರ್ಭವೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್ ಅಗ್ರೇಸರ ಎಚ್‌.ಡಿ.ದೇವೇಗೌಡ ಭೇಟಿ ನೀಡಿ ಚವ್ಹಾಣಗೆ ಬಲ ತುಂಬಿದ್ದರು.

ಗುರುವಾರ ನಾಮಪತ್ರ ಸಲ್ಲಿಕೆ ನಿಗದಿಯಾಗಿದ್ದು, ಅಂತಿಮ ಕ್ಷಣಗಳಲ್ಲಿ ದಳಪತಿಗಳಲ್ಲಿ ಯಾರೊಬ್ಬರೂ ಬರುತ್ತಿಲ್ಲ ಎಂಬುದು ಜೆಡಿಎಸ್‌ ಪಾಳೆಯದ ಮುಖಂಡರ ಉತ್ಸಾಹವನ್ನು ಕೊಂಚ ಕುಂದಿಸಿದೆ. ಇದರಿಂದ ಶಕ್ತಿ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಾಗದ ರೀತಿ, ಕಾರ್ಯಕ್ರಮ ರೂಪಿಸಲು ದೇವಾನಂದ ಚವ್ಹಾಣ ತಂತ್ರಗಾರಿಕೆ ರೂಪಿಸಿದ್ದಾರೆ ಎಂದು ಜೆಡಿಎಸ್ ಮೂಲಗಳಿಂದ ತಿಳಿದು ಬಂದಿದೆ.

‘ಕುಮಾರಸ್ವಾಮಿ, ದೇವೇಗೌಡ ಇದೀಗ ದಕ್ಷಿಣ ಕರ್ನಾಟಕದ ಲೋಕಸಭಾ ಕ್ಷೇತ್ರಗಳಲ್ಲಿ ಬಿರುಸಿನ ಚಟುವಟಿಕೆ ಕೈಗೊಂಡಿದ್ದಾರೆ. ನಾಮಪತ್ರ ಸಲ್ಲಿಕೆ ನೀವೇ ನಡೆಸಿಕೊಳ್ಳಿ. ಪ್ರಚಾರಕ್ಕೆ ಬರುತ್ತೇವೆ. ಸ್ಥಳೀಯ ಕಾಂಗ್ರೆಸ್‌ ಮುಖಂಡರ ವಿಶ್ವಾಸದೊಂದಿಗೆ ಮುನ್ನಡೆಯಿರಿ ಎಂಬ ಸೂಚನೆ ನೀಡಿದ್ದಾರೆ’ ಎಂಬುದು ಗೊತ್ತಾಗಿದೆ.

ನೆಲೆಗಟ್ಟಿನಲ್ಲೇ ಅಪಸ್ವರ..!

ಜೆಡಿಎಸ್‌ ನೆಲೆ ಭದ್ರವಾಗಿರುವ ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬುಧವಾರ ಮೈತ್ರಿಯ ಮೊದಲ ಜಂಟಿ ಸಭೆ ನಡೆದಿದೆ. ಆದರೆ ಮೊದಲ ಈ ಸಭೆಯಲ್ಲೇ ಅಪಸ್ವರವೂ ಕೇಳಿ ಬಂದಿದೆ.

ಮಾಜಿ ಶಾಸಕ ಶರಣಪ್ಪ ಸುಣಗಾರ ಸಭೆಯಿಂದ ದೂರ ಉಳಿದು, ಸಚಿವ ಮನಗೂಳಿ ವಿರುದ್ಧ ತಮ್ಮೊಳಗಿದ್ದ ಅಸಮಾಧಾನವನ್ನು ಹೊರಹಾಕಿದ್ದಾರೆ.

‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದೆ. ಅದರಲ್ಲಿ ನಾವೂ ಭಾಗಿದಾರರಾಗಿದ್ದೇವೆ. ತಾಲ್ಲೂಕಿನ ಸುಂಗಠಾಣ ಗ್ರಾಮದ ಕಾಂಗ್ರೆಸ್‌ ಕಾರ್ಯಕರ್ತನೊಬ್ಬನದ್ದು ಪ್ರಮುಖ ಕೆಲಸವಾಗಬೇಕಿತ್ತು. ಸಚಿವ ಎಂ.ಸಿ.ಮನಗೂಳಿಗೆ ಶಿಫಾರಸು ಪತ್ರ ಕೊಡುವಂತೆ ಮಾಜಿ ಶಾಸಕ, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷನಾಗಿದ್ದ ನಾನು ಕೋರಿದರೂ; ಸ್ಪಂದಿಸಲಿಲ್ಲ.’

‘ಇದೀಗ ಚುನಾವಣೆ ಬಂದಿದೆ. ಜೆಡಿಎಸ್‌ನವರಿಗೆ ಕಾಂಗ್ರೆಸ್‌ನವರ ಸಖ್ಯ ಬೇಕಿದೆ. ಅದಕ್ಕೆ ಕರೆದಿದ್ದಾರೆ. ಉಳಿದಂತೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ವರ್ತಿಸುತ್ತಾರೆ’ ಎಂದು ಕಾಂಗ್ರೆಸ್‌ ಮುಖಂಡ ಶರಣಪ್ಪ ಸುಣಗಾರ ತಮ್ಮ ಆಪ್ತ ವಲಯದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವುದು ಗೊತ್ತಾಗಿದೆ.

‘ವಿಜಯಪುರ ಜಿಲ್ಲೆಯ ಪ್ರಭಾವಿಗಳು, ಕಾಂಗ್ರೆಸ್‌ ಹೈಕಮಾಂಡ್‌ ಸಹ ಇದೂವರೆಗೂ ಚುನಾವಣೆಯಲ್ಲಿ ಕೆಲಸ ಮಾಡುವಂತೆ ನನಗೆ ಸೂಚಿಸಿಲ್ಲ. ಅದಕ್ಕಾಗಿಯೇ ನಾನು ಸಭೆಯಿಂದ ಹೊರ ಉಳಿದೆ’ ಎಂದು ತಮ್ಮ ಆಪ್ತರ ಬಳಿ ಸುಣಗಾರ ಹೇಳಿಕೊಂಡಿರುವುದು ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !