ಜೇನುಕಲ್ಲು: ಸೆಳೆತದ ಸೂಜಿಗಲ್ಲು

7

ಜೇನುಕಲ್ಲು: ಸೆಳೆತದ ಸೂಜಿಗಲ್ಲು

Published:
Updated:
Prajavani

ಹಚ್ಚ ಹಸಿರಿನಿಂದ ಕಂಗೊಳಿಸುವ ಭೂರಮೆ, ಬೆಟ್ಟಗಳ ನಡುವೆ ‘ಬೆಳದಿಂಗಳ ಬಾಲೆ’ಯಂತೆ ಬಳುಕುತ್ತಾ ಬರುವ ಮೇಘಮಾಲೆ, ಆಳದ ಕಣಿವೆಯಲ್ಲಿ ನಿರುಮ್ಮಳವಾಗಿ ಹರಿಯುವ ಬೇಡ್ತಿ ನದಿ, ಮುಗಿಲ ಚುಂಬಿಸುವ ಗಿರಿಶ್ರೇಣಿ, ಎಲೆ–ಬಳ್ಳಿಗಳ ಮೇಲೆ ಮುತ್ತಿನಂತೆ ಹೊಳೆಯುವ ಮಂಜು... ಈ ಸ್ವರ್ಗಸದೃಶ ತಾಣವೇ ‘ಜೇನುಕಲ್ಲು ಗುಡ್ಡ’.

ಉತ್ತರ ಕನ್ನಡ ಜಿಲ್ಲೆ, ಯಲ್ಲಾಪುರ ತಾಲ್ಲೂಕಿನಲ್ಲಿರುವ ಜೇನುಕಲ್ಲು ಗುಡ್ಡ ಸಹ್ಯಾದ್ರಿ ಶ್ರೇಣಿಯ ಇಡಗುಂದಿ ಅರಣ್ಯ ವಲಯದಲ್ಲಿರುವ ಪ್ರಕೃತಿಯ ರಮ್ಯ ತಾಣ. ಪಶ್ಚಿಮ ಘಟ್ಟಗಳ ಪ್ರಮುಖ ವೀಕ್ಷಣಾ ಸ್ಥಳ (ವ್ಯೂ ಪಾಯಿಂಟ್‌) ಗಳಲ್ಲೊಂದಾಗಿದೆ. ಜೇನುಕಲ್ಲು, ಕೊಡೆಕಲ್ಲು ಮತ್ತು ಬಾಳೆಕಲ್ಲು ಎಂಬ ತ್ರಿವಳಿ ಗುಡ್ಡಗಳ ಸಂಗಮ ಸ್ಥಳ. ಕಲ್ಲುಬಂಡೆಯ ಪಾರ್ಶ್ವ ಮತ್ತು ತಳಭಾಗದಲ್ಲಿ ಹೆಜ್ಜೇನು ಗೂಡು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವುದರಿಂದ ಈ ಸ್ಥಳಕ್ಕೆ ‘ಜೇನುಕಲ್ಲು ಗುಡ್ಡ’ ಎಂಬ ಅನ್ವರ್ಥಕ ನಾಮ ಬಂದಿದೆ ಎನ್ನುತ್ತಾರೆ ಸ್ಥಳೀಯರು.

ಕ್ಷಣಕ್ಕೊಂದು ಬಣ್ಣ...

ಮೈ ಗಡಗಡ ನಡುಗಿಸುವ ಚಳಿಗಾಲದಲ್ಲಿ ಬೆಳಿಗ್ಗೆ 7 ಗಂಟೆಗೆ ಗುಡ್ಡ ಹತ್ತಿ ನಿಂತರೆ, ಅಲ್ಲಿನ ಮಂಜು ಮುಸುಕಿನ ವಾತಾವರಣ ‘ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದೂ ಅರಿಯೆ ನಾ...’ ಎಂಬ ಹಾಡನ್ನು ನೆನಪಿಗೆ ತರುತ್ತದೆ. ಆ ಶ್ವೇತ ವರ್ಣದ ಪರದೆಯನ್ನು ಸೀಳಿ ಬರುವ ಭಾಸ್ಕರನ ರಶ್ಮಿಗಳು, ಹಸಿರಿನಿಂದ ಕಂಗೊಳಿಸುವ ವನರಾಶಿ, ಗಿರಿಶ್ರೇಣಿಗಳನ್ನು ಗೋಚರಿಸುವಂತೆ ಮಾಡುತ್ತವೆ. ಬೆಟ್ಟಗಳ ನಡುವೆ ಅಲೆ ಅಲೆಯಾಗಿ ಸಾಗಿ ಬರುವ ಮೋಡಗಳ ಚಿನ್ನಾಟವನ್ನು ನೋಡುವುದೇ ಒಂದು ಸೊಬಗು. ಭೋರಿಡುವ ಕುಳಿರ್ಗಾಳಿ ಮೈ–ಮನಗಳಿಗೆ ಉಲ್ಲಾಸ ನೀಡುತ್ತದೆ. ಊಸರವಳ್ಳಿಯಂತೆ, ಇಲ್ಲಿನ ಪ್ರಕೃತಿ ಕ್ಷಣ ಕ್ಷಣಕ್ಕೂ ತನ್ನ ಮೈಬಣ್ಣವನ್ನು ಬದಲಿಸುತ್ತಲೇ ಇರುತ್ತದೆ.

ಜೇನುಕಲ್ಲು ಗುಡ್ಡದ ಮೇಲಿರುವ ವೀಕ್ಷಣಾ ಗೋಪುರದಿಂದ ಕೆಳಗೆ ನೋಡಿದರೆ, ದಟ್ಟ ಕಾನನದ ನಡುವೆ ವೈಯ್ಯಾರದಿಂದ ಹರಿಯುವ ಕೆಂಬಣ್ಣದ ಬೇಡ್ತಿ ನದಿಯು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಈ ನದಿಯು ಮಾಗೋಡು ಜಲಪಾತದಿಂದ ಧುಮ್ಮಿಕ್ಕಿ ಹರಿದು, ಶಿರಸಿ ಕಡೆಯಿಂದ ಬರುವ ಶಾಲ್ಮಲಾ ನದಿಯೊಂದಿಗೆ ಸಂಗಮವಾಗಿ ‘ಗಂಗಾವಳಿ ನದಿ’ಯಾಗಿ ಹೆಸರು ಬದಲಿಸಿಕೊಂಡು ಅರಬ್ಬಿ ಸಮುದ್ರದಲ್ಲಿ ಲೀನವಾಗುತ್ತದೆ. ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತಾ, ತನ್ನ ಎಲ್ಲೆಯನ್ನು ವಿಸ್ತರಿಸುತ್ತಾ ಸಾಗುತ್ತದೆ.

ಪ್ರೇಮ ಸಂಜೆಯಾ...

‘ಆಗುಂಬೆಯ ಪ್ರೇಮ ಸಂಜೆಯಾ’ ಎಂಬ ಹಾಡು ಆಗುಂಬೆಯ ಸೂರ್ಯಾಸ್ತದ ಸೊಬಗನ್ನು ವರ್ಣಿಸುತ್ತದೆ. ‘ಆಗುಂಬೆಯಾ ಸಹೋದರ’ ಎಂದೇ ಕರೆಸಿಕೊಳ್ಳುವ ಈ ಜೇನುಕಲ್ಲು ಗುಡ್ಡ ಸೂರ್ಯಾಸ್ತಕ್ಕೆ ಹೆಸರುವಾಸಿ. ಪಶ್ಚಿಮ ದಿಕ್ಕಿನಲ್ಲಿರುವ ಗುಡ್ಡಗಳ ಮರೆಯಲ್ಲಿ ಸೂರ್ಯ ಮರೆಯಾಗುವ ವೇಳೆ ಇಡೀ ವಾತಾವರಣ ಹಳದಿ ಮಿಶ್ರಿತ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹೊಂಬೆಳಕಿನಲ್ಲಿ ಮೀಯುವ ಅಲ್ಲಿನ ಗಿರಿಶ್ರೇಣಿಗಳಿಗೆ ಹೊಸ ಕಳೆ ಬರುತ್ತದೆ. ಅದರಂತೆ ಅಲ್ಲಿನ ಬೇಡ್ತಿ ನದಿಗೂ ಜೀವಕಳೆ. ಈ ವರ್ಣಿಸಲಸದಳ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರಕೃತಿಪ್ರಿಯರು ಇಲ್ಲಿಗೆ ಓಡೋಡಿ ಬರುತ್ತಾರೆ.

ಜೇನುಕಲ್ಲು ಏರುವ ಮುನ್ನ...

ಯಲ್ಲಾಪುರ-ಅಂಕೋಲ ರಾಷ್ಟ್ರೀಯ ಹೆದ್ದಾರಿಯಲ್ಲಿ 3 ಕಿ.ಮೀ ಸಾಗಿ ನಂತರ ಎಡಕ್ಕೆ ತಿರುಗಿ, ಮಾಗೋಡು ಜಲಪಾತದ ರಸ್ತೆಯಲ್ಲಿ 17 ಕಿ.ಮೀ. ಸಾಗಿದರೆ ಜೇನುಕಲ್ಲು ಗುಡ್ಡ ತಲುಪಬಹುದು.

ಗುಡ್ಡಕ್ಕೆ ತಲುಪುವ ಕೊನೆಯ 4 ಕಿ.ಮೀ. ಡಾಂಬರು ರಸ್ತೆ ಹಾಳಾಗಿದ್ದು, ತಗ್ಗು, ಗುಂಡಿಗಳು ಬಿದ್ದಿವೆ. ಖಾಸಗಿ ವಾಹನಗಳಲ್ಲಿ ಬರುವ ಪ್ರವಾಸಿಗರು ಸ್ವಲ್ಪ ಪ್ರಯಾಸದಿಂದಲೇ ಗುಡ್ಡ ತಲುಪಬೇಕು.

ಇಲ್ಲಿಗೆ ನೇರವಾಗಿ ಯಾವುದೇ ಸಾರಿಗೆ ಬಸ್‌ ವ್ಯವಸ್ಥೆ ಇಲ್ಲ. ಯಲ್ಲಾಪುರದಿಂದ ಮಾಗೋಡು ಜಲಪಾತಕ್ಕೆ ಬರುವ ಬಸ್‌ಗಳಲ್ಲಿ ಬಂದು, ಹೆಬ್ಬಾರ ಮನೆ ನಿಲ್ದಾಣದಲ್ಲಿ ಇಳಿದು, 3 ಕಿ.ಮೀ ಹಾದಿಯನ್ನು ಕಾಲ್ನಡಿಗೆಯಲ್ಲಿ ಸಾಗಬೇಕು.

ಇಲ್ಲಿ ಎರಡು ವೀಕ್ಷಣಾ ಗೋಪುರಗಳಿವೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಕಬ್ಬಿಣದ ಬೇಲಿ ಹಾಕಲಾಗಿದೆ. ಯಾವುದೇ ಅಂಗಡಿ, ಹೋಟೆಲ್‌ಗಳು ಇಲ್ಲ.

ಯಲ್ಲಾಪುರದಿಂದಲೇ ತಿಂಡಿ, ತಿನಿಸು, ನೀರನ್ನು ತೆಗೆದುಕೊಂಡು ಹೋಗಬೇಕು. ಬೆಳಿಗ್ಗೆ 6ರಿಂದ ಸಂಜೆ 7ರವರೆಗೆ ಪ್ರವೇಶವಿದೆ.

**

ಇವನ್ನೂ ನೋಡಬಹುದು

ಈ ಜೇನುಕಲ್ಲು ಗುಡ್ಡದಿಂದ 7 ಕಿ.ಮೀ. ಅಂತರದಲ್ಲಿ ಮಾಗೋಡು ಜಲಪಾತ, ಚಂದಗುಳಿಯ ಗಂಟೆ ಗಣಪತಿ ದೇವಾಲಯ, 8 ಕಿ.ಮೀ ಅಂತರದಲ್ಲಿ ಕವಡಿಕೆರೆ ಹಾಗೂ ಕುಳಿ ಮಾಗೋಡು ಜಲಪಾತವಿದೆ. ಕಣ್ಣಿಗೆ ಹಬ್ಬವನ್ನುಂಟು ಮಾಡುವ ಈ ಎಲ್ಲ ಸ್ಥಳಗಳನ್ನು ಒಂದೇ ದಿನದಲ್ಲಿ ಕಣ್ತುಂಬಿಕೊಳ್ಳಬಹುದು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !