ಶನಿವಾರ, ನವೆಂಬರ್ 23, 2019
18 °C

ಮಂದರಗಿರಿಯ ಜಿನ ಮಂದಿರ

Published:
Updated:
Prajavani

ಅಲ್ಲಿ ನಿಸರ್ಗದ ಚೆಲುವಿದೆ. ಇತಿಹಾಸ, ಧಾರ್ಮಿಕ ಹಿನ್ನೆಲೆ ವಿವರಿಸುವ ಶಾಸನಗಳಿವೆ. ಪ್ರಶಾಂತವಾಗಿರುವ ಈ ತಾಣದಲ್ಲಿ ಕೊಳ, ಸುಂದರ ಉದ್ಯಾನವೂ ಇದೆ. ರಾಜಧಾನಿ ಬೆಂಗಳೂರಿನಿಂದ 65 ಕಿ.ಮೀ ದೂರದಲ್ಲಿರುವ ಈ ಸುಂದರ ತಾಣದ ಹೆಸರು ‘ಮಂದರಗಿರಿ’.

ಇದೊಂದು ಜೈನಕ್ಷೇತ್ರ. ತುಮಕೂರಿನ ಕ್ಯಾತ್ಸಂದ್ರದಿಂದ 3 ಕಿ.ಮೀ. ದೂರದಲ್ಲಿದೆ ಈ ತಾಣ. ಹೆದ್ದಾರಿಗೆ ತೆರೆದುಕೊಳ್ಳುವ ಪಂಡಿತರಹಳ್ಳಿ ಗ್ರಾಮದಲ್ಲಿ ಎತ್ತರದ ಕಮಾನಿನ ಪ್ರವೇಶದ್ವಾರವಿದೆ. ಅದನ್ನು ದಾಟಿ ಪಂಡಿತರಹಳ್ಳಿ ತಲುಪಿ, ಅಲ್ಲಿಂದ ತುಸು ಮುಂದಕ್ಕೆ ಹೋದರೆ ಎಡಭಾಗದಲ್ಲಿ ಎತ್ತರಕ್ಕೆ ನಿಂತ ಬಾಹುಬಲಿಯಂತೆ ಕಾಣುವ ಶಾಂತ ಮೂರ್ತಿಯೊಂದು ಕಾಣುತ್ತದೆ. ಆದರೆ ಇದು ಬಾಹುಬಲಿಯಲ್ಲ. ದಿಗಂಬರ ಚಂದ್ರನಾಥ ತೀರ್ಥಂಕರರ ಮೂರ್ತಿ. ಇದನ್ನು 2011ರಲ್ಲಿ ಉದ್ಘಾಟಿಸಲಾಗಿದೆ. ಮೂರ್ತಿಯ ಮುಂದೆ ಸ್ತಂಭವೊಂದಿದ್ದು ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುತ್ತದೆ.

ಪಿಂಚ ಆಕಾರದ ಗುರು ಮಂದಿರ

ಚಂದ್ರನಾಥ ತೀರ್ಥಂಕರರ ಮೂರ್ತಿ ಪಕ್ಕದಲ್ಲೇ ಚಿತ್ತಾಕರ್ಷಕವಾದ ಪಿಂಚ (ನವಿಲಿನ ಗರಿಗಳ ಬೀಸಣಿಗೆಯ ಆಕಾರ) ಆಕಾರದ ಮಂದಿರವಿದೆ(ಕೆಲವೆಡೆ ಪಿಂಚಿ ಮತ್ತು ಪಿಂಜಿ ಎಂದೂ ಕರೆಯುತ್ತಾರೆ). ಇದು 1855 ರಿಂದ 1955ರವರೆಗೆ ಜೀವಿಸಿದ್ದ ಆಚಾರ್ಯ ದಿಗಂಬರ ಜೈನ ಚಾರಿತ್ರ ಚಕ್ರವರ್ತಿ ಶ್ರೀಶಾಂತಿ ಸಾಗರ್ ಜೀ ಮಹಾರಾಜ್ ಗುರು ಮಂದಿರ. ದಿಗಂಬರ ಜೈನ ಮುನಿಗಳು ಉಪಯೋಗಿಸುತ್ತಿದ್ದ ನವಿಲುಗರಿಯ ಮುಚ್ಚಳಿಕೆಯ ಆಕಾರದ ಈ ಮಂದಿರ 81 ಅಡಿ ಎತ್ತರವಿದೆ ಎಂಬುದು ವಿಶೇಷ. ಇದಲ್ಲದೆ ಇದರಲ್ಲಿ ಜೈನ ತೀರ್ಥಂಕರರ ದಿನನಿತ್ಯದ ಜೀವನಶೈಲಿಯ ಚಿತ್ರಗಳನ್ನು ಪ್ರತಿಮೆಯ ಇಕ್ಕೆಲಗಳಲ್ಲಿ ಇಡಲಾಗಿದೆ. ಗುರು ಮಂದಿರದಲ್ಲಿನ ಫೋಟೊ ಗ್ಯಾಲರಿಯನ್ನು ನೋಡಿದರೆ ಜೈನ ತೀರ್ಥಂಕರರ ಜೀವನಶೈಲಿಯನ್ನು ಅರಿಯಬಹುದು. 

ಬಸದಿ ಬೆಟ್ಟ

ಇಲ್ಲಿಂದ ಅನತಿ ದೂರದಲ್ಲಿ ಕಾಣಸಿಗುವುದೇ ‘ಬಸದಿಬೆಟ್ಟ’ ಅಥವಾ ‘ಬಸ್ತಿ ಬೆಟ್ಟ’.  918 ಅಡಿ ಎತ್ತರದ ಏಕಶಿಲಾ ಬೆಟ್ಟದ ಮೇಲಿನ ಜಿನ ಮಂದಿರಗಳಿವೆ. ‌ ಬೃಹತ್ ಬಂಡೆಯಂತೆ ಕಾಣುವ ಕಲ್ಲಿನ ಬೆಟ್ಟ ಏರಲು 435 ಮೆಟ್ಟಿಲುಗಳಿವೆ. ಅಷ್ಟೇನೂ ಕಡಿದಾದ ಮೆಟ್ಟಿಲುಗಳಿಲ್ಲ. ಆಧಾರಕ್ಕೆ ಹಿಡಿದುಕೊಳ್ಳಲು ಕೈ ಕಂಬಿಯಿದೆ. ಹೀಗಾಗಿ ಯಾವ ವಯಸ್ಸಿನವರು ಬೇಕಾದರೂ ಬೆಟ್ಟ ಏರಬಹುದು.

ಬೆಟ್ಟದ ಮೇಲೆ ಮತ್ತೊಂದು ಕಟ್ಟಡವಿದ್ದು ಇದು ಜೈನ ಬಸದಿಗಳ ಸಂಕೀರ್ಣವಾಗಿದೆ. ಇಲ್ಲಿ ಶ್ರೀಚಂದ್ರನಾಥ (ಪದ್ಮಾಸನ), ಶ್ರೀಪಾರ್ಶ್ವನಾಥ, ಶ್ರೀಸುಪಾರ್ಶ್ವನಾಥ ಮತ್ತು ಶ್ರೀಚಂದ್ರನಾಥ (ಖಡ್ಗಾಸನ) ಎಂಬ ನಾಲ್ಕು ಬಸದಿಗಳಿವೆ. ಅತ್ಯಂತ ಪುರಾತನವಾದ ಈ ಬಸದಿಗಳನ್ನು 12 ಮತ್ತು 14ನೇ ಶತಮಾನದಲ್ಲಿ ಕಟ್ಟಲಾಗಿದೆ. ಸುಮಾರು ಸಾವಿರ ವರ್ಷಗಳ ಇತಿಹಾಸ ಈ ಕ್ಷೇತ್ರಕ್ಕಿದೆ.

ಮೈದಾಳಕೆರೆಯ ವಿಹಂಗಮ ನೋಟ

ಬೆಟ್ಟದ ಬುಡದಿಂದ ಹದಿನೈದು, ಇಪ್ಪತ್ತು ನಿಮಿಷ ಚಾರಣ ಮಾಡಿದರೆ ಮೇಲಿನ ಜೈನ ಬಸದಿಗಳ ಬಳಿ ಹೋಗಬಹುದು. ಬೆಟ್ಟದ ಮೇಲೇರಿದಾಗಲೇ ತುಮಕೂರಿನ ಸೌಂದರ್ಯ ರಾಶಿಯ ಅರಿವಾಗುವುದು. ಬೆಟ್ಟದ ಮೇಲೆ ಬೇಸಿಗೆಯಲ್ಲೂ ಬತ್ತದ ನೀರಿನ ಸಣ್ಣ ಹೊಂಡವಿದೆ.

ಮಂದರಗಿರಿಯ ಹಿಂಭಾಗದಲ್ಲಿ ಹರಡಿಕೊಂಡಿರುವ ಬೆಟ್ಟಸಾಲುಗಳು ಒಂದರ ಹಿಂದೆ ಒಂದರಂತೆ ದಿಗಂತದವರೆಗೂ ಚಾಚಿವೆ. ಅಲ್ಲದೆ ವಿಶಾಲವಾಗಿ ಹರಡಿಕೊಂಡಿರುವ ಮೈದಾಳದ ಕೆರೆ ಮನಸ್ಸಿಗೆ ಮತ್ತಷ್ಟು ಮುದ ನೀಡುತ್ತದೆ. ಕೆರೆ ತಲುಪಬೇಕಾದರೆ ಮತ್ತೆರಡು ಸಣ್ಣ ಗುಡ್ಡಗಳನ್ನು ಇಳಿಯಬೇಕು. ಪಿಕ್‍ನಿಕ್ ಮಾಡುವವರಿಗೆ ನೋಡಲು, ಹತ್ತಿಳಿಯಲು ಇಲ್ಲಿ ಸಾಕಷ್ಟು ಜಾಗಗಳಿವೆ. ಇತಿಹಾಸದ ಬಗ್ಗೆ ಯೋಚಿಸುವವರಿಗೆ ಜಿನಮಂದಿರದ ಆವರಣದಲ್ಲಿ ಮಾಹಿತಿ ನೀಡುವ ಶಾಸನವಿದೆ. 

ದೂರದಲ್ಲಿ ಕಾಣುವ ಹಳ್ಳಿಯ ಹೊಲಗಳು ಮತ್ತು ಬಯಲು ಸೀಮೆಯ ವಿಹಂಗಮ ನೋಟ ಕಣ್ಣಿಗೆ ಆಹ್ಲಾದವನ್ನುಂಟು ಮಾಡುತ್ತದೆ. ಇಲ್ಲಿ ತಂಗಾಳಿಯಲ್ಲಿ ಕುಳಿತು ಸೂರ್ಯಾಸ್ತಮಾನ ವೀಕ್ಷಿಸಬಹುದು. ಒಟ್ಟಾರೆ ಇಲ್ಲಿನ ಭೇಟಿ ದಿನವೊಂದರ ಮಟ್ಟಿಗೆ ಮನಸ್ಸನ್ನು ಮುದಗೊಳಿಸುವುದರಲ್ಲಿ ಸಂದೇಹವಿಲ್ಲ.

ಇಲ್ಲಿಯೇ ತಂಗಲು ಅತಿಥಿಗೃಹಗಳಿವೆ. ಈ ವ್ಯವಸ್ಥೆಗಾಗಿ ಜೈನ ಬಸದಿಯ ಕಚೇರಿಯನ್ನು ಸಂಪರ್ಕಿಸಬಹುದು. ಬೆಟ್ಟದ ಮೇಲೆ ಅಥವಾ ಕೆಳಗೆ ಚಂದ್ರನಾಥ ಮೂರ್ತಿಯ ಬಳಿ ನೆರಳು ನೀಡುವ ಮರಗಳಿವೆ. ಆ ಮರಗಳ ಕೆಳಗೆ ಕೂತು ಪ್ರವಾಸಿಗರು ಊಟ ಮಾಡಬಹುದು.

ನಗರಗಳ ಜಂಜಡದಿಂದ ಮುಕ್ತರಾಗಬೇಕೆಂದಾದರೆ ಒಂದು ದಿನದಲ್ಲಿ ಆರಾಮವಾಗಿ ನೋಡಿ ಬರಬಹುದಾದ ಸ್ಥಳ ಮಂದರಗಿರಿ. 

ಹೋಗುವುದು ಹೇಗೆ?

ಬೆಂಗಳೂರಿನಿಂದ ತುಮಕೂರು ರಸ್ತೆಯಲ್ಲಿ ದಾಬಸ್‌ಪೇಟೆ ದಾಟುತ್ತಿದ್ದಂತೆ 59ನೇ ಕಿ.ಮೀ. ಕಲ್ಲಿನ ಬಳಿ ಬಲ ತಿರುವು ಪಡೆದು 1 ಕಿ.ಮೀ. ಕ್ರಮಿಸಿದರೆ ಮಂದರಗಿರಿಯ ತಪ್ಪಲು ಸಿಗುತ್ತದೆ. ಮಂದರಗಿರಿಯ ಬುಡದವರೆಗೂ ಉತ್ತಮ ರಸ್ತೆಯಿದೆ. ತುಮಕೂರು–ಬೆಂಗಳೂರಿನಿಂದ ಸಾಕಷ್ಟು ಬಸ್‌ ವ್ಯವಸ್ಥೆ ಇದೆ. ಖಾಸಗಿ ವಾಹನಗಳಲ್ಲಿ ತೆರಳಿದರೆ ಒನ್‌ ಡೇ ಪ್ರವಾಸ ಮತ್ತಷ್ಟು ಸುಖಕರವಾಗಿರುತ್ತದೆ.

ಊಟ–ಉಪಾಹಾರಕ್ಕೆ: ಊಟೋಪಚಾರಕ್ಕೆ ಹೆದ್ದಾರಿಯ ಪಕ್ಕದಲ್ಲೇ ಕಾಮತ್ ಉಪಚಾರ್ ಮತ್ತು ಕೆಫೆ ಕಾಫಿ ಡೇಗಳಿವೆ. ಬೆಟ್ಟ ಹತ್ತುವವರು ಕುಡಿಯುವ ನೀರು ಕೊಂಡೊಯ್ಯವುದು ಅವಶ್ಯಕ.

ಮಂದರಗಿರಿ ಕ್ಷೇತ್ರಕ್ಕೆ ಭೇಟಿ ನೀಡುವ ಸಮಯ ಬೆಳಿಗ್ಗೆ 7 ರಿಂದ ಸಂಜೆ 4 ರ ವರೆಗೆ. ಹೆಚ್ಚಿನ ಮಾಹಿತಿಗೆ ಕ್ಷೇತ್ರದ ಉಸ್ತುವಾರಿ ಶಿವರಾಜ್ ಸಂಪರ್ಕಕ್ಕೆ: 8550036564

ಚಿತ್ರಗಳು: ಲೇಖಕರವು

ಪ್ರತಿಕ್ರಿಯಿಸಿ (+)