ಮಂಗಳವಾರ, ಏಪ್ರಿಲ್ 20, 2021
26 °C
ಎರಡು ದಿನಗಳಿಂದ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಳೆ, ರೈತರ ಮೊಗದಲ್ಲಿ ಮೂಡದ ಮಂದಹಾಸ

ಬೆಳೆಹಾನಿ: ಮುಂದಿನ ವಾರದಿಂದ ಜಂಟಿ ಸಮೀಕ್ಷೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮುಂಗಾರು ಪೂರ್ವ ಅವಧಿಯಲ್ಲಿ ಮಳೆ ಕೊರತೆಯಿಂದಾಗಿ ಜಿಲ್ಲೆಯಾಗಿ ಆಗಿರುವ ಬೆಳೆಹಾನಿ ಬಗ್ಗೆ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಲಿದ್ದು, ಮುಂದಿನ ವಾರದಿಂದ ಆರಂಭವಾಗಲಿದೆ. 

ಈ ಸಂಬಂಧ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದ್ದು, ಶೀಘ್ರದಲ್ಲಿ ಸಮೀಕ್ಷೆ ಆರಂಭಿಸಲು ಅವರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಜಂಟಿ ಸಮೀಕ್ಷೆಯ ಜೊತೆ ಜೊತೆಗೆ ಕೃಷಿ ಇಲಾಖೆ ಕೂಡ ಬೆಳೆ ಸಮೀಕ್ಷೆ ಆರಂಭಿಸಲಿದೆ' ಎಂದು ಜಂಟಿ ಕೃಷಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮಳೆ ಕೊರತೆಯಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ಕೊಡಿಸುವುದಕ್ಕಾಗಿ ಜಂಟಿ ಸಮೀಕ್ಷೆ ನಡೆಯಲಿದೆ. ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಜಂಟಿಯಾಗಿ ಜಿಲ್ಲೆಯಾದ್ಯಂತ ಸಂಚರಿಸಿ ಬೆಳೆ ಹಾನಿ ಪ್ರಮಾಣದ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ’ ಎಂದು ಅವರು ಹೇಳಿದರು. 

ಬಿತ್ತನೆ ಶೇ 41: ಈ ಮಧ್ಯೆ, ಮಳೆ ಕೊರತೆಯ ಕಾರಣಕ್ಕೆ ಜಿಲ್ಲೆಯಲ್ಲಿ ಕುಂಠಿತವಾಗಿದ್ದ ಬಿತ್ತನೆ ಪ್ರಮಾಣದಲ್ಲಿ ಸುಧಾರಣೆ ಕಂಡು ಬಂದಿಲ್ಲ. ಇದುವರೆಗೆ ಶೇ 41ರಷ್ಟು ಬಿತ್ತನೆ ಮಾತ್ರ ಆಗಿದೆ. 56,600 ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. 

ಮೂಡದ ಮಂದಹಾಸ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಎರಡು ದಿನಗಳಿಂದ ಈಚೆಗೆ ಸುಮಾರಾಗಿ ಮಳೆಯಾಗುತ್ತಿದೆ. ಆದರೆ, ಇದರಿಂದ ರೈತರು ಸಂತಸಗೊಂಡಿಲ್ಲ. ಮುಂಗಾರು ಪೂರ್ವದಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ ಸಂದರ್ಭದಲ್ಲಿ ಸರಿಯಾಗಿ ಮಳೆಯಾಗದೆ ಇದ್ದುದರಿಂದ ಬೆಳೆಗಳು ಈಗಾಗಲೇ ನೆಲ ಕಚ್ಚಿವೆ. ಹಾಗಾಗಿ, ಈಗ ಮಳೆ ಬಂದರೂ ಪ್ರಯೋಜನ ಇಲ್ಲ ಎಂದು ಹೇಳುತ್ತಾರೆ ರೈತರು.

‘ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಳೆಯಾಗುತ್ತಿದ್ದರೂ ಈಗಾಗಲೇ ಒಣಗಿರುವ ಬೆಳೆಗಳಿಗೆ ಪ್ರಯೋಜನ ಇಲ್ಲ. ಇಳುವರಿ ಬರಲು ಸಾಧ್ಯವಿಲ್ಲ. ಆದರೆ, ಬಾಡಿರುವ ಗಿಡಗಳು ಮತ್ತೆ ಚಿಗುರಿ ಮೇವಿಗೆ ಆಗಬಹುದು. ಹುಲ್ಲು ಬೆಳೆಯಬಹುದು’ ಎಂದು ಜಂಟಿ ನಿರ್ದೇಶಕಿ ಚಂದ್ರಕಲಾ  ತಿಳಿಸಿದರು. 

‘ಆದರೆ, ಮುಂದೆ ರೈತರು ಮಾಡಲಿರುವ ಬಿತ್ತನೆಗೆ ಈ ಮಳೆಯಿಂದ ಅನುಕೂಲವಾಗಲಿದೆ. ಇನ್ನೂ ಕೆಲವು ದಿನ ಮಳೆ ಸುರಿದರೆ ಜೋಳ, ಮುಸುಕಿನ ಜೋಳ, ರಾಗಿ, ತೊಗರಿ, ನೆಲಗಡಲೆ, ಭತ್ತ, ಕಬ್ಬು ಸೇರಿದಂತೆ ಇತರ ಬೆಳೆಗಳ ಬಿತ್ತನೆ ಮಾಡಬಹುದು’  ಎಂದು ಅವರು ವಿವರಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ರೈತ ಸಂಘ ಹಾಗೂ ಹಸಿರುವ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು, ‘ನಮ್ಮಲ್ಲಿ ಇದುವರೆಗೆ ಚೆನ್ನಾಗಿ ಮಳೆಯೇ ಆಗಿಲ್ಲ. ಈಗ ಬಿದ್ದಿರುವ ಮಳೆಯಿಂದ ಹಾನಿಗೆ ಒಳಗಾದ ಬೆಳೆಗೆ ಪ್ರಯೋಜನ ಇಲ್ಲ. ಮೇವಿಗೆ ಆಗಬಹುದು. ಈ ಮಳೆಯಿಂದ ಬಿತ್ತನೆ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಇದೇ ರೀತಿ ಮಳೆ ಮುಂದುವರಿದರೆ ಬಿತ್ತನೆ ಮಾಡಬಹುದು, ರಾಗಿ, ಸಿರಿಧಾ‌ನ್ಯಗಳು, ಜೋಳ, ಮುಸುಕಿನ ಜೋಳ ಬಿತ್ತಬಹುದು. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಮಳೆಯಾಗುತ್ತಿರುವುದರಿಂದ ನದಿಗಳು, ಕೆರೆ ಕಟ್ಟೆಗಳು ತುಂಬಬಹುದು. ಇದರಿಂದ ಜಿಲ್ಲೆಯ ರೈತರಿಗೂ ಅನುಕೂಲವಾಗಲಿದೆ’ ಎಂದು ಅವರು ವಿವರಿಸಿದರು. 

ಉತ್ತಮ ಮಳೆಯ ನಿರೀಕ್ಷೆ

ಹವಾಮಾನ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಸೋಮವಾರ ಜಿಲ್ಲೆಯಲ್ಲಿ 5 ಮಿ. ಮೀ ಮಳೆಯಾಗಿದೆ. ಮುಂಗಾರು ಅವಧಿಯಲ್ಲಿ, ಅಂದರೆ ಜೂನ್‌ 1ರಿಂದ ಇದುವರೆಗೆ ಜಿಲ್ಲೆಯಲ್ಲಿ ಸಾಮಾನ್ಯವಾಗಿ 94 ಮಿ.ಮೀ ಮಳೆಯಾಗುತ್ತದೆ. ಈ ಬಾರಿ 72 ಮಿ.ಮೀ ಮಳೆಯಾಗಿದೆ. ಶೇ 23ರಷ್ಟು ಮಳೆ ಕೊರತೆ ಉಂಟಾಗಿದೆ.

ರಾಜ್ಯದ ಕರಾವಳಿ, ಕೊಡಗು ಭಾಗಗಳಲ್ಲಿ ಮುಂಗಾರು ಚುರುಕುಗೊಂಡಿರುವುದರಿಂದ ಜಿಲ್ಲೆಯಲ್ಲಿ ಎರಡು ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಮಳೆಯಾಗುವ ಸಾಧ್ಯತೆ ಇದೆ. 

ಮೈಸೂರಿನ ನಾಗನಹಳ್ಳಿಯಲ್ಲಿರುವ ಗ್ರಾಮೀಣ ಕೃಷಿ ಹವಾಮಾನ ಸೇವಾ ಕೇಂದ್ರ ನೀಡಿರುವ ಮುನ್ಸೂಚನೆ ಪ್ರಕಾರ, ಜಿಲ್ಲೆಯಲ್ಲಿ ಮುಂದಿನ ಐದು ದಿನಗಳ ಕಾಲ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ವಾತಾವರಣವೂ ತಂಪಾಗಿರಲಿದೆ. 

ಅಂಕಿ ಅಂಶ

1.32 ಲಕ್ಷ ಹೆಕ್ಟೇರ್

ಈ ವರ್ಷ ಬಿತ್ತನೆಗೆ ಗುರಿ ಇಟ್ಟುಕೊಂಡಿರುವ ಪ್ರದೇಶ

56.600 ಹೆಕ್ಟೇರ್‌

ಇದುವರೆಗೆ ಬಿತ್ತನೆ ಮಾಡಿರುವ ಪ್ರದೇಶ

41%

ಬಿತ್ತನೆ ಆಗಿರುವ ಪ್ರಮಾಣ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.