ಭಾನುವಾರ, ನವೆಂಬರ್ 17, 2019
21 °C

2,441 ಕಿಲೋಮೀಟರ್‌, 8ಗಂಟೆ 56 ನಿಮಿಷ ಪ್ರಯಾಣ, ಬುಲೆಟ್ ರೈಲಿನ ಅನುಭವ

Published:
Updated:
Prajavani

ರೈಲಿನಲ್ಲಿ ಪ್ರವಾಸ ಮಾಡುವ ಖುಷಿಯೇ ಬೇರೆ. ಪ್ರಸ್ತುತ ಹೆಚ್ಚಿನ ಪ್ರವಾಸಪ್ರಿಯರು ರೈಲನ್ನೇ ನೆಚ್ಚಿಕೊಳ್ಳುತ್ತಾರೆ. ಕಾರಣ, ಬೇಕಾದಂತೆ ಯಾನ ಕೈಗೊಳ್ಳಬಹುದು. ಸ್ಥಿರ ದರಗಳಿರುತ್ತವೆ. ಬ್ಯಾಗೇಜ್‌ ಶುಲ್ಕ ಇರುವುದಿಲ್ಲ. ಜತೆಗೆ ತ್ವರಿತ ಪ್ರಯಾಣದಲ್ಲಿ ಗತ ನೆನಪುಗಳ ಮೆಲುಕು ಹಾಕುತ್ತಾ ಸಾಗಬಹುದು.

ಇಂಥ ಆಸಕ್ತಿಯನ್ನೇ ಗುರುತಿಸಿದ ಕೆಲವು ದೇಶಗಳು, ರೈಲು ಪ್ರಯಾಣಿಕರಿಗೆ ವಿಶೇಷ ಪಾಸ್‌ ವ್ಯವಸ್ಥೆ ಮಾಡಿದೆ. ಅವುಗಳಲ್ಲಿ ಜಪಾನ್‌, ಚೀನಾ, ಯುರೋಪ್‌ನಂತಹ ಆಯ್ದ ರಾಷ್ಟ್ರಗಳಲ್ಲಿರುವ ಕೈಗೆಟಕುವ ದರಗಳ ರೈಲು ಯಾನದ ಪ್ಯಾಕೇಜ್‌ನ ಸಂಕ್ಷಿಪ್ತ ಮಾಹಿತಿ ಇಲ್ಲಿ ಕೊಡಲಾಗಿದೆ. ಆ ದೇಶಗಳಿಗೆ ಹೋದಾಗ, ನೀವು ಪಾಸ್ ಪಡೆದು, ರೈಲಿನಲ್ಲೇ ಪ್ರವಾಸ ಮಾಡಿ.

ಇದು ಜಪಾನ್‌ನ ವಿಸ್ತಾರವಾದ ದ್ವೀಪ ಸಮೂಹದತ್ತ ಪ್ರಯಾಣಿಸುವ ಮಾರ್ಗ. ಹಲವು ಭೂಪ್ರದೇಶದ ವಿಸ್ತಾರತೆ ಕಂಡಾಗ ನೀವೊಬ್ಬರು ಕವಿಯಾಗುತ್ತೀರಿ. ಪ್ರಯಾಣದ ದಾರಿಯ ಇಕ್ಕೆಲಗಳಲ್ಲಿ ಹಿಮಾಚ್ಛಾದಿತ ಕಟ್ಟಡ, ಬೆಟ್ಟ, ಗುಡ್ಡಗಳ ನೋಟ ಮುದ ನೀಡುತ್ತದೆ. ಕಟ್ಟಡಗಳ ಅದ್ಭುತ ವಾಸ್ತುಶಿಲ್ಪ ಅಚ್ಚರಿ ಮೂಡಿಸುತ್ತದೆ. 7, 14 ಅಥವಾ 21 ದಿನಗಳ ಪ್ರಯಾಣದ ಪ್ಯಾಕೇಜನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ ನೀವು ಆಯ್ಕೆ ಮಾಡಿಕೊಂಡ ಪ್ಯಾಕೇಜ್‌ ಅವಧಿಯಲ್ಲಿ ಆಯಾ ಪ್ರದೇಶದ ಸಾರಿಗೆ/ ಹೋಟೆಲ್‌ ಸೌಲಭ್ಯ ಬಳಕೆಗೆ ಯಾವುದೇ ಮಿತಿ ಇಲ್ಲ. ಕ್ಯೂಷುವಿನಿಂದ ಒಸಾಕಾ, ಕ್ಯೋಟೋ, ಫುಕುಶಿಮಾ ಮತ್ತು ಉತ್ತರದ ಕಡೆಗೆ ಸಾಗಿ ಹೊಕ್ಕೈಡೋಗೆ ತಲುಪಬಹುದು.  

 ಇದು ಕಳೆದ ವರ್ಷ ಚೀನಾದಲ್ಲಿ ಆರಂಭಗೊಂಡ ಸೇವೆ. ಷೆನ್ಜೆನ್‌– ಗ್ವಾಂಗ್‌ಝೌ– ಹ್ಯಾಂಗ್ಝೌ–ಶಾಂಘೈ ಮತ್ತು ಬೀಜಿಂಗ್‌ ನಡುವೆ ಸಂಪರ್ಕ ಕಲ್ಪಿಸುತ್ತದೆ. ಇದು 2,441 ಕಿಲೋಮೀಟರ್‌ ಅಂತರದ ಪ್ರಯಾಣ. ಪ್ರಯಾಣದ ಅವಧಿ ಕೇವಲ 8 ಗಂಟೆ 56 ನಿಮಿಷ. ಪ್ರಮುಖ ನಗರಗಳ ಮಧ್ಯೆ ಸಂಚರಿಸುವ ರೈಲು 44 ನಿಲ್ದಾಣಗಳನ್ನು ಹಾದುಹೋಗುತ್ತದೆ. ಇದು ಬುಲೆಟ್‌ ರೈಲು. ಗಡಿಯಾಚೆಗಿನ ಸೇವೆಯನ್ನು ನೀಡುತ್ತಿದೆ. ಹಾಗೆಂದು ನೀವು ಏಕ ಪ್ರಕಾರದ ಪ್ರಯಾಣ ಆಯ್ಕೆ ಮಾಡಬೇಕೆಂದೇನಿಲ್ಲ. ಏಕ ದಿನದ ಪ್ರವಾಸಿಗರು ಗ್ಯಾಂಗ್‌ಡಾಂಗ್‌ನಲ್ಲಿ 50 ನಿಮಿಷಗಳ ಕಾಲ ಸಣ್ಣ ಬ್ರೇಕ್‌ ತೆಗೆದುಕೊಂಡು ಸುತ್ತಮುತ್ತಲಿನ ಪ್ರದೇಶ ಸುತ್ತಾಡಿಕೊಂಡು ಬರಬಹುದು. ಷೆನ್ಜೆನ್‌, ಹ್ಯಾಂಗ್ಝೌ ನಗರಗಳು ನಿಮ್ಮನ್ನು ಆಕರ್ಷಿಸುವ ಕಾಂತಶಕ್ತಿ ಹೊಂದಿವೆ.  

ಯೂರೋಪ್‌ ಪ್ರಾಂತ್ಯದಲ್ಲಿ ಸುತ್ತಾಡಲು ‘ಯೂರೋಪ್‌ ಪಾಸ್‌’ ಅತ್ಯುತ್ತಮ ಆಯ್ಕೆ. ನೀವು ಮೊದಲೇ ಈ ಪಾಸ್‌ ಅನ್ನು ಕಾಯ್ದಿರಿಸಬೇಕು. ಈ ಪಾಸ್‌ನಿಂದ ಇಡೀ ಖಂಡದಲ್ಲಿ ಸುತ್ತಾಡುವ ರಹದಾರಿಯೇ ಸಿಕ್ಕಂತಾಗುತ್ತದೆ. ಈ ಪಾಸ್‌ ಬಳಸಿ ಆ್ಯಮ್‌ಸ್ಟರ್‌ಡ್ಯಾಮ್‌, ಬರ್ಲಿನ್, ವೆನಿಸ್ ಎಲ್ಲಿ ಬೇಕಾದರೂ ನಿಮಗಿಷ್ಟ ಬಂದಂತೆ ಸುತ್ತಾಡಬಹುದು. ನಿಮ್ಮ ಪ್ರಯಾಣ ಪ್ಯಾರಿಸ್‌ನಿಂದ ಆರಂಭವಾದರೆ ಚೆನ್ನ.    

ಕೆ-ಪಾಪ್, ಕೆ-ಡ್ರಾಮಾ, ಕೆ-ಬ್ಯೂಟಿ ... ಎಂಬ ಉಕ್ತಿಯು ಸಿಯೋಲ್ ಸಂಸ್ಕೃತಿ ಮತ್ತು ಸೃಜನಶೀಲತೆಗೆ ಸಮಾನಾರ್ಥಕವಾಗಿದೆ. ದಕ್ಷಿಣ ಕೊರಿಯದಲ್ಲಿ ರಾಜಧಾನಿ ಸಿಯೋಲ್‌ನಾಚೆಗೂ ಅದ್ಭುತ ತಾಣಗಳಿವೆ. ನೀವು ಇಲ್ಲಿನ ಯಾವುದೇ ಗಡಿಗಳನ್ನು ಮೀರದೇ ದಕ್ಷಿಣ ಕೊರಿಯದ ಹಲವು ಪ್ರದೇಶಗಳಿಗೆ ಭೇಟಿ ನೀಡಬಹುದು. ಅದಕ್ಕಾಗಿ ‘ಕೊರಿಯ ರೈಲ್ವೆ ಪಾಸ್‌’ ಒಳ್ಳೆಯ ಆಯ್ಕೆ. ಎರಡು ದಿನ, ಐದು ದಿನಗಳ ಅವಧಿಯ ಆಕರ್ಷಕ ಪ್ಯಾಕೇಜ್‌ಗಳು ಲಭ್ಯ ಇವೆ. ಪಾಸ್‌ ಮೂಲಕ ಅನಿಯಮಿತವಾಗಿ ರೈಲು ಪ್ರಯಾಣ ಮಾಡಬಹುದು. ದೇಶದಾದ್ಯಂತ 600ಕ್ಕೂ ಹೆಚ್ಚು ರೈಲು ನಿಲ್ದಾಣಗಳಿವೆ. ಪ್ಯಾಕೇಜ್‌ ಅವಧಿಯೊಳಗೆ ಇಲ್ಲಿ ಬೇಕಾದಷ್ಟು ಸುತ್ತಾಡಬಹುದು. ಯೋಂಗಿನ್, ಜಿಯಾಂಜು ಮತ್ತು ಡೇಗು ಪಟ್ಟಣಗಳು ನೀವು ನೋಡಬೇಕಾದ ಪ್ರಮುಖ ಸ್ಥಳಗಳು.

ಪ್ರತಿಕ್ರಿಯಿಸಿ (+)