ಭಾನುವಾರ, ಡಿಸೆಂಬರ್ 8, 2019
19 °C
ಜೆಎಸ್ಎಸ್ ರಂಗೋತ್ಸವದಲ್ಲಿ ಮೊರಬದ ಮಲ್ಲಿಕಾರ್ಜುನ ಅಭಿಮತ

ರಂಗಭೂಮಿ– ಬದುಕಿನ ನಿಜವಾದ ಶಿಕ್ಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ‘ಸಿನಿಮಾ, ರಂಗಭೂಮಿ ಮತ್ತು ದೃಶ್ಯ ಮಾಧ್ಯಮ... ಈ ಮೂರರಲ್ಲಿ ನಾಟಕ ಸಾರ್ಥಕತೆಯ ಕಲಾ ಮಾಧ್ಯಮವಾಗಿ ನಮಗೆ ಬದುಕು ಕಟ್ಟಿಕೊಡುತ್ತದೆ’ ಎಂದು ಜೆಎಸ್ಎಸ್ ಮಹಾವಿದ್ಯಾಪೀಠ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ನಗರದ ಜೆಎಸ್‌ಎಸ್‌ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ಜೆಎಸ್ಎಸ್ ಕಲಾ ಮಂಟಪ, ಜೆಎಸ್‌ಎಸ್‌ ಮಹಿಳಾ ಕಾಲೇಜು ಮತ್ತು ಜೆಎಸ್‌ಎಸ್‌ ಪದವಿಪೂರ್ವ ಮಹಿಳಾ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಜೆಎಸ್ಎಸ್ ರಂಗೋತ್ಸವದಲ್ಲಿ ಅವರು ಮಾತನಾಡಿದರು.

‘ಸಿನಿಮಾ ಮಾಧ್ಯಮವು ಮನುಷ್ಯ ಆತ ಇರುವುದಕ್ಕಿಂತ ದೊಡ್ಡದಾಗಿ ತೋರಿಸುತ್ತದೆ ಎಂದು ಬಿ.ವಿ.ಕಾರಂತರು ಹೇಳುತ್ತಾರೆ. ದೃಶ್ಯ ಮಾಧ್ಯಮ ತೀರ ಚಿಕ್ಕದಾಗಿ ತೋರಿಸುವ ಪ್ರಯತ್ನ ಮಾಡುತ್ತದೆ. ಆದರೆ, ಮನುಷ್ಯ ಎಷ್ಟಿದ್ದಾನೋ ಅಷ್ಟನ್ನೇ, ಹೇಗಿದ್ದಾನೆ ಹಾಗೆಯೇ.. ಬದುಕು ಯಾವ ರೀತಿ ಇದೆಯೋ ಹಾಗೇಯೇ, ಕೀಳರಿಮೆ ಇಲ್ಲದೆ ತೋರಿಸುವ ಮಾಧ್ಯಮ ಎಂದರೆ ಅದು ರಂಗಭೂಮಿ ಮಾತ್ರ ಎಂದಿದ್ದರು. ಅವರ ಮಾತಿನಂತೆ ರಂಗಭೂಮಿ ನಮ್ಮ ಬದುಕಿನ ಅಂಗವಾಗಿದೆ’ ಎಂದು ಹೇಳಿದರು.

‘ನಮ್ಮ ಬದುಕು ಅರ್ಥಪೂರ್ಣ ಆಗಬೇಕಾದರೆ ನಾಟಕ ಆಡಬೇಕು ಮತ್ತು ನೋಡಬೇಕು. ನಾವು ಬೇರೆ ಬೇರೆ ಸಂದರ್ಭದಲ್ಲಿ ನಾಟಕ ಆಡುತ್ತೇವೆ, ನೋಡುತ್ತೇವೆ. ಇದರಿಂದಲೂ ರಂಗ ಚಟುವಟಿಕೆ ನಡೆಯುತ್ತದೆ’ ಎಂದರು.

ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಎಸ್.ಉಮೇಶ್ ಮಾತನಾಡಿ, ‘ಎಲ್ಲರಲ್ಲೂ ನಾಟಕದ ಶಕ್ತಿ ಅಡಕವಾಗಿದೆ. ಇದರಲ್ಲಿ ವಿಶೇಷತೆ ಏನಿಲ್ಲ. ಆದರೆ, ಮಕ್ಕಳಲ್ಲಿ ನಾಟಕ ಆಡಿಸುವುದು ಒಂದು ವಿಶೇಷ. ಅವರ ಬದುಕಿನ ಅಧ್ಯಯನಕ್ಕೆ ನಾಟಕ ಸಹಕಾರಿಯಾಗುತ್ತದೆ. ಇದರಲ್ಲಿ ನಿರಂತರ ಅಧ್ಯಯನವೂ ಮುಖ್ಯವಾಗುತ್ತದೆ’ ಎಂದು ಹೇಳಿದರು.

ರಂಗಕರ್ಮಿ ಚಂದ್ರಶೇಖರಾಚಾರ್‌ ಹೆಗ್ಗೊಠಾರ ಮಾತನಾಡಿ, ‘ಪ್ರಾರಂಭದಲ್ಲಿ (1948) ಜೆಎಸ್ಎಸ್‌ ಕಲಾಮಂಟಪದಲ್ಲಿ ಭಕ್ತಿ ಪ್ರಧಾನ ನಾಟಕಗಳನ್ನು ಮಾತ್ರ ಪ್ರದರ್ಶಿಸಲಾಗುತ್ತಿತ್ತು. ಮಕ್ಕಳು ರಂಗಭೂಮಿಯೊಂದಿಗೆ ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಆರು ವರ್ಷಗಳಿಂದ ಸಾಮಾಜಿಕ ನಾಟಕ ಪ್ರದರ್ಶನ ನೀಡುತ್ತಿದೆ. ಅಲ್ಲದೇ ಅಂತರರಾಷ್ಟ್ರೀಯ ಮಟ್ಟದ ವಿಭಾಗಗಳಲ್ಲಿ ಖ್ಯಾತಿ ಪಡೆದಿದೆ. ಸಾವಿರಕ್ಕೂ ಹೆಚ್ಚು ಮಕ್ಕಳು ರಂಗಭೂಮಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ’ ಎಂದರು.

ಜೆಎಸ್ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎ.ಜಿ.ಶಿವಕುಮಾರ್, ಮಹಾಲಿಂಗಪ್ಪ, ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಸಂಪರ್ಕ ಅಧಿಕಾರಿ ಆರ್.ಎಂ.ಸ್ವಾಮಿ, ಸುವರ್ಣಾ ಮಹೋತ್ಸವ ಆಚರಣಾ ಸಮಿತಿಯ ಸಂಚಾಲಕ ಪ್ರೊ.ಕೆ.ವೀರಣ್ಣ ಇದ್ದರು.

ವಿದ್ಯಾರ್ಥಿಗಳ ಮನಗೆದ್ದ ‘ತಲೆಬಾಗದ ಜನ’
ಮಂಜುನಾಥ್ ಕಾಚಕ್ಕಿ ನಿರ್ದೇಶನದಲ್ಲಿ ಪ್ರದರ್ಶನ ಕಂಡ ‘ತಲೆಬಾಗದ ಜನ’ ನಾಟಕ ನೆರೆದಿದ್ದ ವಿದ್ಯಾರ್ಥಿಗಳು, ವೀಕ್ಷಕರ ಮನಗೆದ್ದಿತು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಪುಟ್ಟ ಗ್ರಾಮವಾದ ಈಸೂರಿನಲ್ಲಿ ನಡೆದ ಘಟನೆಯನ್ನು ನಂಜನಗೂಡಿನ ಮಹದೇವನಗರದ ಜೆಎಸ್ಎಸ್ ಪ್ರೌಢಶಾಲೆಯ ಮಕ್ಕಳು ಅದ್ಭುತವಾಗಿ ಪ್ರದರ್ಶಿಸಿದರು.

ಸಾರಾಂಶ: ಬ್ರಿಟಿಷರ ದಬ್ಬಾಳಿಕೆಯನ್ನು ಪ್ರತಿಭಟಿಸಿ ಅದೇ ಗ್ರಾಮ ತನಗೆ ತಾನೇ ಸ್ವತಂತ್ರ ಹಳ್ಳಿ ಎಂದು ಘೋಷಿಸಿಕೊಳ್ಳುತ್ತದೆ. ಗ್ರಾಮದ ಎಲ್ಲರೂ ಗಾಂಧಿ ಟೋಪಿ ಧರಿಸಲೇಬೇಕು ಎಂದು ಹೇಳಲಾಗುತ್ತದೆ. 10 ವರ್ಷದ ಬಾಲಕನನ್ನು ಅಮಲ್ದಾರನಾಗಿ ನೇಮಕ ಮಾಡಿ ಬ್ರಿಟಿಷರ ವಿರುದ್ಧ ನಿಲ್ಲಿಸುತ್ತಾರೆ. ಇದೇ ವೇಳೆ ಗ್ರಾಮದ ಮುಖಂಡರಿಗೂ ಅಮಲ್ದಾರ ಮತ್ತು ಪೊಲೀಸ್‌ ಇನ್‌ಸ್ಪೆಕ್ಟರ್‌ ನಡುವೆ ಗಲಾಟೆ ಆರಂಭವಾಗುತ್ತದೆ. ಅಮಲ್ದಾರ, ಇನ್‌ಸ್ಪೆಕ್ಟರ್‌ ಕೊಲೆಯಾಗುತ್ತಾರೆ. ಈ ವೇಳೆ ಪೊಲೀಸ್‌ ಪಡೆ ಗ್ರಾಮದಲ್ಲಿ ದೊಂಬಿ ಎಬ್ಬಿಸುತ್ತದೆ. ಸಿಕ್ಕ ಸಿಕ್ಕವರ ಮೇಲೆ ಪೊಲೀಸರು ಮೊಕದ್ದಮೆ ಹೂಡುತ್ತಾರೆ. ಕೊನೆಯಲ್ಲಿ ಗ್ರಾಮದ ಐವರು ಪ್ರಮುಖ ಮುಖಂಡರಿಗೆ ಗಲ್ಲು ಶಿಕ್ಷೆಯಾಗುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು