ಬುಧವಾರ, ನವೆಂಬರ್ 20, 2019
21 °C
ಎಸ್‌ಜೆಸಿಐಟಿ ಕ್ರೀಡಾಂಗಣದಲ್ಲಿ ವಿಟಿಯು ಅಂತರ್ ಕಾಲೇಜು ಜುಡೊ ಮತ್ತು ಕುಸ್ತಿ ಪಂದ್ಯಾವಳಿಗೆ ಚಾಲನೆ

ಕ್ರೀಡೆ ನಿತ್ಯ ಬದುಕಿನ ಭಾಗವಾಗಲಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ದೇಹ ಮತ್ತು ಮನಸ್ಸಿನ ಸಮತೋಲನ ಸಾಧಿಸುವಲ್ಲಿ ಕ್ರೀಡೆಯ ಪಾತ್ರ ಮುಖ್ಯವಾದದ್ದು. ಆದ್ದರಿಂದ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು’ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಂದನಾಥ ಸ್ವಾಮೀಜಿ ತಿಳಿಸಿದರು.

ನಗರ ಹೊರವಲಯದ ಶ್ರೀ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ತಾಂತ್ರಿಕ ಸಂಸ್ಥೆ (ಎಸ್‌ಜೆಸಿಐಟಿ) ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಅಂತರ್ ಕಾಲೇಜು ಜುಡೊ ಮತ್ತು ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೈಹಿಕ ಮತ್ತು ಮಾನಸಿಕವಾಗಿ ಕ್ರಿಯಾಶೀಲರಾಗಿರಲು ಕ್ರೀಡೆ ಬಹು ಮುಖ್ಯ. ಗೆದ್ದವರು ಗೆಲುವನ್ನು ಕಾಯ್ದುಕೊಳ್ಳಬೇಕು. ಸೋತವರು ಆತ್ಮವಿಶ್ವಾಸ ಕಳೆದುಕೊಳ್ಳದೆ ಗೆಲ್ಲುವ ಛಲ ಬೆಳೆಸಿಕೊಳ್ಳಬೇಕು. ಗೆಲುವು ಮತ್ತು ಸೋಲನ್ನು ಸಮಚಿತ್ತದಿಂದ ಸ್ವೀಕರಿಸುವ ಮನಸ್ಥಿತಿ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು’ ಎಂದರು.

ಕ್ರೀಡಾಕೂಟದಲ್ಲಿ ವಿಟಿಯು ವ್ಯಾಪ್ತಿಗೆ ಒಳಪಡುವ 80ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಿಜಿಎಸ್ ಶಿಕ್ಷಣ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಂ ರೆಡ್ಡಿ, ಕಾಲೇಜಿನ ಪ್ರಾಂಶುಪಾಲ ಕೆ.ಎಂ.ರವಿಕುಮಾರ್, ಎಸ್‌ಜೆಸಿಐಟಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಟಿ.ಚಂದನ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)