₹ 2 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ

7
ನನಗೀಗ ಇನ್ನೂ 84 ವರ್ಷ; ಮನಗೂಳಿ ಖಡಕ್ ನುಡಿ

₹ 2 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ

Published:
Updated:
Prajavani

ಸಿಂದಗಿ: ‘ಪಟ್ಟಣದ ಜನತೆ ನೀರು ಕುಡಿಯುವಾಗ ಮನಗೂಳಿ, ಮನಗೂಳಿ ಎನ್ನುವರು, ತಾಲ್ಲೂಕಿನ ರೈತರು ಜಮೀನಿನಲ್ಲಿ ಬೆಳೆ ಬಿತ್ತನೆ ಸಂದರ್ಭದಲ್ಲಿ ಮನಗೂಳಿ ನೆನಸುವರು. ಆದರೆ ಚುನಾವಣೆಯಲ್ಲಿ ಮನಗೂಳಿ ಮರೆತು ಬಿಡುವರು. ಅಂತೆಯೇ ನಾನು 4 ಸಲ (20 ವರ್ಷ) ಚುನಾವಣೆಯಲ್ಲಿ ಸೋತರೂ ಛಲ ಬಿಡಲಿಲ್ಲ. ಈಗ ಆರಿಸಿ ಬಂದೆ, ಮತ್ತೆ ಸಚಿವನಾದೆ...’

’ಸಿಂದಗಿ ಪಟ್ಟಣದಲ್ಲಿ ನೀರಿನ ಹಾಹಾಕಾರ ಇತ್ತು. ಬೇರೆ ಊರಿನವರು ಇಲ್ಲಿಗೆ ಕನ್ಯೆ ಕೊಡುತ್ತಿರಲಿಲ್ಲ. ಅದಕ್ಕೆಂದೇ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾರ್ಯ ರೂಪಕ್ಕೆ ತಂದೆ. ಜತೆಗೆ ಎರಡು ವರ್ಷ ಚಪ್ಪಲಿಯಿಲ್ಲದೆ ಬರಿಗಾಲಲ್ಲಿ ತಿರುಗಾಡಿ ₹ 480 ಕೋಟಿ ರೂಪಾಯಿ ವೆಚ್ಚದ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತಂದೆ.’

‘ಈಗ ಮತ್ತೆ ಸಚಿವನಾದರೆ ಮನಗೂಳಿಗೆ ವಯಸ್ಸಾಗಿದೆ ಏನು ಮಾಡ್ತಾನ ಎಂಬ ಕುಚೇಷ್ಟೆ ಮಾತುಗಳನ್ನಾಡುವ ಜನರಿಗೆ ನೇರ ಮಾತು. ನನಗೀಗ ಇನ್ನೂ 84 ವರ್ಷ. ನನ್ನಲ್ಲಿ ಉತ್ಸಾಹವಿದೆ, ಚೈತನ್ಯವಿದೆ. ಹಿಂದಿನಂತೆ ಈಗಲೂ ಶಾಶ್ವತ ಮರೆಯದ ಅಭಿವೃದ್ಧಿ ಕೆಲಸ ಮಾಡಿ ತೋರಿಸುವೆ’ ಎಂದು ಖಡಕ್ ಆಗಿ ನುಡಿದವರು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ.

ಗುರುವಾರ ಪಟ್ಟಣದ ಡೋಹರ ಕಕ್ಕಯ್ಯ ವೃತ್ತದಿಂದ ಮಲಘಾಣ ಕ್ರಾಸ್ ವರೆಗೆ ₹ 2 ಕೋಟಿ ವೆಚ್ಚದ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಶೀಘ್ರವೇ ₹ 32 ಕೋಟಿ ರೂಪಾಯಿ ವೆಚ್ಚದ ಕಡಣಿ–ಆಲಮೇಲ–ಸಿಂದಗಿ ರಸ್ತೆ ಕಾಮಗಾರಿ ಕಾರ್ಯಾರಂಭಗೊಳ್ಳಲಿದೆ. ಅಲ್ಲದೇ ಸಿಂದಗಿ ಒಳಚರಂಡಿ ಕಾಮಗಾರಿ, ಬಳಗಾನೂರ ಕೆರೆಯಿಂದ ಕುಡಿಯುವ ನೀರಿನ ಯೋಜನೆ, ಮಿನಿವಿಧಾನಸೌಧ ಕಟ್ಟಡ ಈ ಮಹತ್ವದ ಕಾಮಗಾರಿಗಳು ಪ್ರಾರಂಭಗೊಳ್ಳುವವು ಎಂದು ಸಚಿವರು ಘೋಷಿಸಿದರು.

ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಸಿಂದಗಿಯ 20 ವರ್ಷಗಳ ಇತಿಹಾಸದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅನುದಾನ ಎಸ್.ಸಿ/ ಟಿ.ಎಸ್.ಪಿ ಯೋಜನೆ ಸಮರ್ಪಕವಾಗಿ ಬಳಕೆ ಮಾಡಿರುವುದು ಇದೇ ಮೊದಲು ಎಂದರು.

ಪುರಸಭೆ ಅಧ್ಯಕ್ಷ ಬಾಷಾಸಾಬ್‌ ತಾಂಬೋಳಿ, ಮುತ್ತು ಮುಂಡೇವಾಡಗಿ, ಗುರನಗೌಡ ಪಾಟೀಲ ನಾಗಾವಿ, ಸೋಮನಗೌಡ ಬಿರಾದಾರ, ರಮೇಶ ಹೂಗಾರ, ಅಶೋಕ ಅಲ್ಲಾಪುರ, ಗೊಲ್ಲಾಳಪ್ಪಗೌಡ ಪಾಟೀಲ, ನಿಂಗಣ್ಣ ಬಿರಾದಾರ, ಶೈಲಜಾ ಸ್ಥಾವರಮಠ, ಪರುಶರಾಮ ಕಾಂಬಳೆ, ಮುತ್ತು ಸೊನ್ನದ, ಪಿಡಬ್ಲೂಡಿ ಎಇಇ ನಿಡೋಣಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !