ಜ್ಯೋತಿರ್ಲಿಂಗಗಳು

ಮಂಗಳವಾರ, ಮಾರ್ಚ್ 19, 2019
33 °C

ಜ್ಯೋತಿರ್ಲಿಂಗಗಳು

Published:
Updated:
Prajavani

ಶಿವನನ್ನು ಲಿಂಗರೂಪದಲ್ಲಿಯೇ ಪೂಜಿಸುವುದು. ಲಿಂಗ ಎಂದರೆ ಚಿಹ್ನೆ. ಅದು ನಿರಾಕಾರತತ್ತ್ವಕ್ಕೆ ಸಂಕೇತ. ಹೀಗೆ ಶಿವನನ್ನು ಲಿಂಗರೂಪದಲ್ಲಿ ಆರಾಧಿಸುವ ಹನ್ನೆರಡು ಕ್ಷೇತ್ರಗಳು ಪ್ರಸಿದ್ಧವಾಗಿವೆ. ಅವನ್ನು ‘ದ್ವಾದಶ ಜ್ಯೋತಿರ್ಲಿಂಗಗಳು’ ಎಂದು ಕರೆಯುತ್ತಾರೆ. ಈ ಹನ್ನೆರಡು ಲಿಂಗರೂಪಗಳೆಂದರೆ:

1. ಸೋಮನಾಥ, 2. ಮಲ್ಲಿಕಾರ್ಜುನ, 3. ಮಹಾಬಲ. 4. ಓಂಕಾರೇಶ್ವರ, 5. ಕೇದಾರನಾಥ, 6. ಭೀಮಶಂಕರ, 7. ವಿಶ್ವನಾಥ, 8. ತ್ರ್ಯಂಬಕೇಶ್ವರ, 9. ವೈದ್ಯನಾಥ, 10. ನಾಗನಾಥ, 11. ರಾಮೇಶ್ವರ, 12. ಘೃಶ್ಮೇಶ್ವರ.

ಈ 12 ಲಿಂಗಗಳಿಗೂ ಹಿನ್ನೆಲೆಯಾಗಿ ಪುರಾಣಕಥೆಗಳಿವೆ. ಇವು ನೆಲೆಯಾಗಿರುವ ಒಂದೊಂದು ಸ್ಥಳವೂ ಪವಿತ್ರ ತೀರ್ಥಕ್ಷೇತ್ರವಾಗಿದ್ದು, ಹೆಸರು ಕ್ರಮವಾಗಿ ಹೀಗಿವೆ: ಪ್ರಭಾಸ (ಗುಜರಾತ್‌), ಶ್ರೀಶೈಲ (ಆಂಧ್ರ ಪ್ರದೇಶ), ಉಜ್ಜಯಿನಿ (ಮಧ್ಯಪ್ರದೇಶ), ಓಂಕಾರೇಶ್ವರ (ಮಧ್ಯಪ್ರದೇಶ), ಕೇದಾರ (ಉತ್ತರಾಖಂಡ), ಭೀಮಾಶಂಕರ (ಮಹಾರಾಷ್ಟ್ರ), ಕಾಶಿ (ಉತ್ತರಪ್ರದೇಶ), ತ್ರ್ಯಂಬಕ (ಮಹಾರಾಷ್ಟ್ರ), ಪರಲಿ (ಮಹಾರಾಷ್ಟ್ರ), ಔಂಧ (ಮಹಾರಾಷ್ಟ್ರ), ರಾಮೇಶ್ವರ (ತಮಿಳುನಾಡು), ಎಲ್ಲೋರ (ಮಹಾರಾಷ್ಟ್ರ).

ಮನೆಯ ತಾಪತ್ರಯಗಳು
ಸಂಸಾರದ ತೊಂದರೆಗಳು ಕೇವಲ ನಮಗಷ್ಟೆ ಅಲ್ಲ; ಶಿವ–ಪಾರ್ವತಿಯರ ಕುಟುಂಬಕ್ಕೂ ಕಷ್ಟಗಳು ತಪ್ಪಿದ್ದಲ್ಲವಂತೆ! ಅಂಥದೊಂದು ಶಿವಸಂಸಾರದ ತಾಪತ್ರಯಗಳನ್ನು – ಗಣಪತಿಯ ಕುಟುಂಬದ ಪಾಡನ್ನು – ವರ್ಣಿಸುವ ಈ ಪದ್ಯ ಅನನ್ಯವಾಗಿದೆ:

ಅತ್ತುಂ ವಾಂಛತಿ ವಾಹನಂ ಗಣಪತೇರಾಖುಂ ಕ್ಷುಧಾರ್ತಃ ಫಣೀ
ತಂ ಚ ಕ್ರೌಂಚಪತೇಃ ಶಿಖೀ ಚ ಗಿರಿಜಾ ಸಿಂಹೋsಪಿ ನಾಗಾನನಂ |
ಗೌರೀ ಜಹ್ನುಸುತಾಮಸೂಯತಿ ಕಲಾನಾಥಂ ಕಪಾಲಾನಲೋ
ನಿರ್ವಿಣ್ಣಃ ಸಪಪೌ ಕುಟುಂಬಕಲಹಾದೀಶೋsಪಿ ಹಾಲಾಹಲಂ ||

‘ಗಣಪತಿಯ ವಾಹನ ಯಾವುದು? ಇಲಿ. ಗಣಪತಿ ತಂದೆಯ ಕೊರಳಿನಲ್ಲಿರುವ ಆಭರಣ ಯಾವುದು? ಹಾವು. ಹಸಿವಿನಿಂದ ಪರಿತಪಿಸುತ್ತಿರುವ ಆ ಹಾವು ಗಣಪತಿಯ ವಾಹನವಾದ ಇಲಿಯನ್ನೇ ತಿನ್ನಲು ಹೊಂಚು ಹಾಕುತ್ತಿದೆಯಂತೆ. ಶಿವನ ಮತ್ತೊಬ್ಬ ಮಗ ಷಣ್ಮುಖನ ವಾಹನ ಯಾವುದು? ನವಿಲು. ಈ ನವಿಲಿಗೆ ಶಿವನ ಕೊರಳಿನಲ್ಲಿರುವ ಹಾವಿನ ಮೇಲೆ ಕಣ್ಣು; ಅದು ಆಹಾರವನ್ನು ತಿನ್ನಲು ಮೇಲೆದ್ದು ಹಾರತೊಡಗಿದೆಯಂತೆ.

ಗಣಪತಿಯ ತಾಯಿಯಾದ ಪಾರ್ವತಿಯ ವಾಹನ ಸಿಂಹ. ಆನೆಗೂ ಸಿಂಹಕ್ಕೂ ಸಹಜವೈರವಲ್ಲವೆ? ತಾಯಿಯ ವಾಹನವಾದ ಸಿಂಹವು ಮಗನ ಮುಖವನ್ನೇ (ಗಣಪತಿ ಆನೆಯ ಮುಖದವನಲ್ಲವೆ!)ವೈರಿಯೆಂದು ತಿಳಿದು ದಾಳಿಗೆ ಸಿದ್ಧವಾಗುತ್ತಿದೆ. ಅಪ್ಪನ ತಲೆಯ ಮೇಲೆ ಗಂಗೆ ಇದ್ದಾಳಲ್ಲವೆ? ಅವಳನ್ನು ನೋಡಿ ಅಮ್ಮ ಪಾರ್ವತಿಗೆ ಸವತಿಮಾತ್ಸರ್ಯ ಉಂಟಾಗುತ್ತಿದೆಯಂತೆ.
ಶಿವನ ಕಪಾಲದಲ್ಲಿ ಉರಿಯುತ್ತಿರುವ ಬೆಂಕಿಯಿದೆ; ಅವನ ಜಟೆಯಲ್ಲಿರುವ ಚಂದ್ರನನ್ನು ಕರಗಿಸಬೇಕೆಂದು ಈ ಉರಿ ಉತ್ಸುಕವಾಗಿದೆಯಂತೆ. ಗಣಪತಿ ಕುಟುಂಬದ ಯಜಮಾನನಾದ ಶಿವನಿಗೆ ತನ್ನ ಮನೆಯ ಪರಿಸ್ಥಿತಿಯನ್ನು ಕಂಡು ಬೇರೆ ದಾರಿ ಕಾಣದೆ ಕೊನೆಗೆ ಹಾಲಾಹಲವನ್ನೇ ಕುಡಿದುಬಿಟ್ಟನಂತೆ!’

ದ್ವಾದಶ ಜ್ಯೋತಿರ್ಲಿಂಗಸ್ತೋತ್ರ

ಸೌರಾಷ್ಟ್ರೇ ಸೋಮನಾಥಂ ಚ ಶ್ರೀಶೈಲೇ ಮಲ್ಲಿಕಾರ್ಜುನಮ್ |
ಉಜ್ಜಯಿನ್ಯಾಂ ಮಹಾಕಾಲಮೋಂಕಾರಮಮಲೇಶ್ವರಮ್ || 

ಪರಲ್ಯಾಂ ವೈದ್ಯನಾಥಂ ಚ ಡಾಕಿನ್ಯಾಂ ಭೀಮಶಂಕರಮ್ |
ಸೇತುಬಂಧೇ ತು ರಾಮೇಶಂ ನಾಗೇಶಂ ದಾರುಕಾವನೇ ||

ವಾರಾಣಸ್ಯಾಂ ತು ವಿಶ್ವೇಶಂ ತ್ರ್ಯಂಬಕಂ ಗೌತಮೀತಟೇ |
ಹಿಮಾಲಯೇ ತು ಕೇದಾರಂ ಘುಶ್ಮೇಶಂ ಚ ಶಿವಾಲಯೇ || 

ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ |
ಸಪ್ತಜನ್ಮಕೃತಂ ಪಾಪಂ ಸ್ಮರಣೇನ ವಿನಶ್ಯತಿ ||

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !