‘ಕೆ.ಸಿ ವ್ಯಾಲಿ ಯೋಜನೆ ವ್ಯವಸ್ಥಿತವಾಗಿಲ್ಲ’

7

‘ಕೆ.ಸಿ ವ್ಯಾಲಿ ಯೋಜನೆ ವ್ಯವಸ್ಥಿತವಾಗಿಲ್ಲ’

Published:
Updated:
Deccan Herald

ಬೆಂಗಳೂರು: ‘ಕೆ.ಸಿ (ಕೋರಮಂಗಲ-ಚಲ್ಲಘಟ್ಟ) ಕಣಿವೆಯ ಸಂಸ್ಕರಿತ ತ್ಯಾಜ್ಯ ನೀರನ್ನು ಬಯಲುಸೀಮೆಯ ಕೆರೆಗಳಿಗೆ ಹರಿಸುವ ಯೋಜನೆ ವ್ಯವಸ್ಥಿತವಾಗಿಲ್ಲ’ ಎಂದು ಕೇಂದ್ರೀಯ ಅಂತರ್ಜಲ ಮಂಡಳಿಯ ನಿವೃತ್ತ ಭೂ ವಿಜ್ಞಾನಿ ಡಾ.ವಿ.ಎಸ್‌ ಪ್ರಕಾಶ್‌ ಅಭಿಪ್ರಾಯಪಟ್ಟರು.

ಯುವಶಕ್ತಿ ಸಂಘಟನೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬಯಲುಸೀಮೆಯ ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರು’ ವಿಚಾರಸಂಕಿರಣದಲ್ಲಿ ವಿಷಯ ಮಂಡಿಸಿದ ಅವರು, ‘ಕೆ.ಸಿ ವ್ಯಾಲಿ ಯೋಜನೆಗೆ ಒಳಪಡುವ ಜಿಲ್ಲೆಗಳಲ್ಲಿ ನೀರಿನ ಅಭಾವವಿದೆ. ಅದಕ್ಕಾಗಿ ಗುಣಮಟ್ಟದ ನೀರನ್ನೇ ಒದಗಿಸಬೇಕು’ ಎಂದರು. 

‘ಯೋಜನೆಗೂ ಮುಂಚೆ ಸರ್ಕಾರ ರಾಜಕಾಲುವೆಗಳ ಸುತ್ತಮುತ್ತಲಿನ ಪರಿಸರದ ಕುರಿತು ಅಧ್ಯಯನ ಮಾಡಬೇಕಿತ್ತು. ಹಾಗೆ ಮಾಡದ ಪರಿಣಾಮ ಕಲುಷಿತ ನೀರು ಕೆರೆಗಳಿಗೆ ಹರಿಯುತ್ತಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದ್ದು, ಸರ್ಕಾರ ಇದನ್ನು ಉತ್ತಮಪಡಿಸುವತ್ತ ಗಮನಹರಿಸಬೇಕು’ ಎಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕಿ ಶಶಿರೇಖಾ, ‘ಕೆ.ಸಿ ವ್ಯಾಲಿಯಿಂದ ಬಯಲುಸೀಮೆಗೆ ಹರಿಸುವ ನೀರು ಪ್ಲೋರೈಡ್‌ ಹಾಗೂ ನೈಟ್ರೇಟ್‌ ಮಿಶ್ರಿತವಾಗಿರುತ್ತದೆ. ಕುಡಿಯಲು ಯೋಗ್ಯವಲ್ಲ. ಹಸುಗಳು ಸಹ ಆ ನೀರನ್ನು ಕುಡಿಯುವುದಿಲ್ಲ. ಈ ಯೋಜನೆಗೆ  ಸಂಬಂಧಿಸಿದಂತೆ ಇನ್ನೊಂದು ಸಮಿತಿ ರಚನೆ ಮಾಡಿ ಅಧ್ಯಯನ ನಡೆಸಬೇಕು’ ಎಂದು ಹೇಳಿದರು.

ಈ ವೇಳೆ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಮಹಿಳೆಯರು ಹಾಗೂ ರೈತರು ಕಷ್ಟಗಳನ್ನು ಬಿಚ್ಚಿಟ್ಟರು.

ಚಿಕ್ಕಬಳ್ಳಾಪುರದ ಸುಷ್ಮಾ ಶ್ರೀನಿವಾಸ್‌, ’1,900 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಸ್ಥಳೀಯ ರೈತರ ಒಪ್ಪಿಗೆ ಪಡೆಯದೇ ಯೋಜನೆಯನ್ನು ಪ್ರಾರಂಭಿಸಿದರು. ಈಗ ತ್ಯಾಜ್ಯ ನೀರಿನಿಂದಾಗಿ ರಾತ್ರಿ ನಿದ್ದೆ ಬಾರದಂತಾಗಿದೆ. ಮೊದಲು ಈ ನೀರಿನ ಭೂತದಿಂದ ಹೊರಬಂದರೆ ಸಾಕು’ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !