‘ಜನಸಂಖ್ಯಾಧಾರಿತ ಮೀಸಲಾತಿ ಜಾರಿಯಾಗಲಿ’

ಶನಿವಾರ, ಜೂಲೈ 20, 2019
23 °C
ಕುಣಿಗಲ್ ತಾಲ್ಲೂಕಿನ ಅರೇಶಂಕರಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ ಆಗ್ರಹ

‘ಜನಸಂಖ್ಯಾಧಾರಿತ ಮೀಸಲಾತಿ ಜಾರಿಯಾಗಲಿ’

Published:
Updated:
Prajavani

ಮೈಸೂರು: ‘ಜನಸಂಖ್ಯಾಧಾರಿತ ಮೀಸಲಾತಿ ಜಾರಿಯಾಗಬೇಕಿದೆ. ಪ್ರಸ್ತುತ ಇದು ಅಗತ್ಯವೂ ಇದೆ’ ಎಂದು ತುಮಕೂರು ಜಿಲ್ಲೆಯ ಕುಣಿಗಲ್‌ ತಾಲ್ಲೂಕಿನ ಅರೇಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ ಪ್ರತಿಪಾದಿಸಿದರು.

‘ಮೀಸಲಾತಿ ಅನುಷ್ಠಾನಗೊಳಿಸುವುದಿದ್ದರೆ ಜನಸಂಖ್ಯಾಧಾರಿತವಾಗಿ ನೀಡಲಿ. ಇಲ್ಲದಿದ್ದರೇ ಯೋಗ್ಯತೆ ಇದ್ದವರು ಅವಕಾಶಗಳನ್ನು ಪಡೆದುಕೊಳ್ಳಲಿ ಎಂಬ ನಿಲುವಿಗೆ ಸರ್ಕಾರ ಬರಬೇಕು’ ಎಂದು ಶುಕ್ರವಾರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಒಕ್ಕಲಿಗರ ಸಂಘದ ಸಂಸ್ಥಾಪಕರಲ್ಲೊಬ್ಬರಾದ ಕೆ.ಎಚ್.ರಾಮಯ್ಯ ಸಮಾಧಿ ಬಳಿ ಹಕ್ಕೊತ್ತಾಯ ಮಂಡಿಸಿದರು.

ಒಕ್ಕಲಿಗ ಸಮಾಜದ ಶ್ರೇಯೋಭಿವೃದ್ಧಿಗೆ ಮೈಸೂರು ಸಂಸ್ಥಾನದ ಆಡಳಿತದಲ್ಲೇ ಶ್ರಮಿಸಿದ್ದ ಕೆ.ಎಚ್.ರಾಮಯ್ಯ ಅವರ 140ನೇ ಜಯಂತಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಜನಸಂಖ್ಯೆಯಲ್ಲಿ ಶೇ 7ರಷ್ಟಿರುವ ನಾಯಕರು, 9% ಮೀಸಲಾತಿಯ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಆದರೆ ಒಕ್ಕಲಿಗ ಸಮಾಜ ರಾಜಕಾರಣದಲ್ಲೇ ಕಾಲ ಕಳೆಯುತ್ತಿದೆ. ಸಮಾಜದ ಏಳ್ಗೆಗಾಗಿ ಜನಸಂಖ್ಯೆ ಆಧಾರಿತವಾಗಿ ಮೀಸಲಾತಿ ಜಾರಿಗೊಳಿಸಿ ಎಂಬ ಹಕ್ಕೊತ್ತಾಯದ ಹೋರಾಟಕ್ಕೆ ಚಾಲನೆ ನೀಡಲಾಗುವುದು’ ಎಂದು ಸ್ವಾಮೀಜಿ ತಿಳಿಸಿದರು.

ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ಅಧ್ಯಕ್ಷೆ ಎಚ್‌.ಎಲ್.ಯಮುನಾ ಮಾತನಾಡಿ ‘ಒಕ್ಕಲಿಗ ಸಮಾಜದ ಮೇರು ವ್ಯಕ್ತಿ ಕೆ.ಎಚ್.ರಾಮಯ್ಯ. ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ಮೈಸೂರು ಸಂಸ್ಥಾನದ ಆಡಳಿತದ ಕಾಲಘಟ್ಟದಲ್ಲೇ ಒಕ್ಕಲಿಗರಿಗೆ ಮೀಸಲಾತಿ ಕೊಡಿಸಿದ ಧೀಮಂತರು’ ಎಂದು ಬಣ್ಣಿಸಿದರು.

‘ಕೆ.ಎಚ್‌.ರಾಮಯ್ಯ ಸಮಾಧಿಯನ್ನು ಸ್ಮಾರಕವನ್ನಾಗಿಸಬೇಕು. ಒಕ್ಕಲಿಗರಿಗೆ 7 % ಮೀಸಲಾತಿ ಕೊಡಬೇಕು’ ಎಂಬ ಹಕ್ಕೊತ್ತಾಯದ ಚಳವಳಿಗೂ ಸಮಾಜದ ಮುಖಂಡರು ಇದೇ ಸಂದರ್ಭ ಚಾಲನೆ ನೀಡಿದರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ರವಿಕುಮಾರ್, ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ಮಾರ್ಗದರ್ಶಿ ಟಿ.ಎನ್.ದಾಸೇಗೌಡ, ಕೆ.ಆರ್.ಮಿಲ್ ಶಿವಣ್ಣ, ರಾಜ್ಯ ಒಕ್ಕಲಿಗರ ಕೆಂಪೇಗೌಡ ಯುವ ಶಕ್ತಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಅನಿಲ್‌ಗೌಡ, ಸಮಾಜದ ಮುಖಂಡರಾದ ಸಿ.ಎಂ.ಕ್ರಾಂತಿಸಿಂಹ, ಡಿ.ಎಂ.ಸುಬ್ಬೇಗೌಡ, ಬೋರೇಗೌಡ, ಪುಟ್ಟಸ್ವಾಮಿಗೌಡ, ರಾಮಕೃಷ್ಣೇಗೌಡ, ಜಿ.ಪ್ರಕಾಶ್‌, ನಾಗವೇಣಿ, ಹರ್ಷರಾಜಗೌಡ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !