’ಸ್ಮಾರ್ಟ್‌’ ಆಗಲಿದೆ ಕೆ.ಆರ್‌.ಮಾರುಕಟ್ಟೆ

ಶನಿವಾರ, ಏಪ್ರಿಲ್ 20, 2019
24 °C
ಅಭಿವೃದ್ಧಿಗೆ ಟೆಂಡರ್‌ ; ಕಾಮಗಾರಿ ಮುಗಿಸಲು 2 ವರ್ಷಗಳ ಗಡುವು

’ಸ್ಮಾರ್ಟ್‌’ ಆಗಲಿದೆ ಕೆ.ಆರ್‌.ಮಾರುಕಟ್ಟೆ

Published:
Updated:
Prajavani

ಬೆಂಗಳೂರು: ನಗರದ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ಕೆ.ಆರ್‌.ಮಾರುಕಟ್ಟೆಯಲ್ಲಿನ ಅವ್ಯವಸ್ಥೆಗಳಿಗೆ ಇತಿಶ್ರೀ ಹಾಡಲು ಬಿಬಿಎಂಪಿ ಮುಂದಾಗಿದೆ.

ಸ್ಮಾರ್ಟ್‌ ಸಿಟಿ ಯೋಜನೆಯ ಅನುದಾನ ಬಳಸಿಕೊಂಡು ವ್ಯಾಪಾರಿ ಮತ್ತು ಗ್ರಾಹಕಸ್ನೇಹಿಯಾದ ವಾತಾವರಣವನ್ನು ಈ ಮಾರುಕಟ್ಟೆಯಲ್ಲಿ ನಿರ್ಮಿಸಲು ಯೋಜನೆ ರೂಪಿಸಿದೆ. ಅದಕ್ಕೀಗ ಟೆಂಡರ್‌ ಕೂಡ ಕರೆಯಲಾಗಿದೆ.

ಸಾರ್ವಜನಿಕರು ಮಾರುಕಟ್ಟೆಯ ಕಟ್ಟಡಕ್ಕೆ ಸರಾಗವಾಗಿ ಬಂದು–ಹೋಗಲು ಚಿಕ್ಕಪೇಟೆ ಮೆಟ್ರೊ ನಿಲ್ದಾಣ ಮತ್ತು ಕೆ.ಆರ್‌.ಮಾರುಕಟ್ಟೆ ಬಸ್‌ ನಿಲ್ದಾಣಗಳನ್ನು (ಜಾಮೀಯಾ ಮಸಿದಿ) ಸಂಪರ್ಕಿಸುವ ಪಾದಚಾರಿ ಮೇಲ್ಸೇತುವೆ ಮಾರ್ಗ ನಿರ್ಮಾಣಗೊಳ್ಳಲಿದೆ. ಈ ಮಾರ್ಗವು 355 ಮೀ. ಉದ್ದ, 3 ಮೀಟರ್‌ ಅಗಲವಿರಲಿದೆ.

1921ರಲ್ಲಿ ಕಟ್ಟಿದ ಹಳೆಯ ಕಟ್ಟಡದ ಪಾರಂಪರಿಕ ವಿನ್ಯಾಸಕ್ಕೆ ಧಕ್ಕೆಯಾಗದಂತೆ ನವೀಕರಣ ಮಾಡಲಾಗುತ್ತದೆ. ಜತೆಗೆ ಮುಖ್ಯ ಕಟ್ಟಡದಲ್ಲಿನ ವಿದ್ಯುತ್‌ ಸಂಪರ್ಕ ವ್ಯವಸ್ಥೆ, ಪ್ಲಂಬಿಂಗ್‌ ಜಾಲಗಳನ್ನು ಸರಿಪಡಿಸಿ, ಶೌಚಾಲಯಗಳನ್ನು ನಿರ್ಮಿಸಲಾಗುತ್ತದೆ. 50,000 ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್‌ ಸಹ ಕಟ್ಟಲಾಗುತ್ತದೆ. ಎಸ್ಕಲೇಟರ್‌ಗಳನ್ನೂ ಅಳವಡಿಸಲಾಗುತ್ತದೆ. ಬಳಿಕ ಕಟ್ಟಡಗಳಿಗೆ ಸುಣ್ಣ–ಬಣ್ಣದ ರಂಗನ್ನು ನೀಡಲಾಗುತ್ತದೆ.‌

ಈಗಿರುವ ಮಾಂಸದ ಮಾರುಕಟ್ಟೆ ಮತ್ತು ಅಂಚೆ ಕಚೇರಿ ಕಟ್ಟಡಗಳನ್ನು ಸಂಪೂರ್ಣವಾಗಿ ಕೆಡವಿ, ಹೊಸ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ.

ಪಾದಚಾರಿ ಮೇಲ್ಸೇತುವೆ ಮಾರ್ಗದ ಮೂಲಕ ಈ ಕಟ್ಟಡಗಳಿಗೆ ಸುಲಭವಾಗಿ ಹೋಗಿ–ಬರಲು ದಾರಿಯನ್ನು ಮಾಡಲಾಗುತ್ತದೆ. ಈ ಹೊಸ ಕಟ್ಟಡಗಳು ಈಗಿರುವ ಜಾಗದಲ್ಲೇ ಎದ್ದು ನಿಲ್ಲಲಿವೆ.      

ಬೀದಿಬದಿ ವ್ಯಾಪಾರಿಗಳಿಗಾಗಿ ‘ವೆಂಡಿಂಗ್‌ ಪ್ಲಾಜಾ’: ಮಾರುಕಟ್ಟೆಯ ನವೀಕರಣದ ಈ ಕಾಮಗಾರಿಯಿಂದಾಗಿ ಬೀದಿಬದಿ ವ್ಯಾಪಾರಿಗಳು ಬೀದಿಪಾಲಾಗಲು ಬಿಬಿಎಂಪಿ ಬಿಟ್ಟಿಲ್ಲ.

ಮಾರುಕಟ್ಟೆಯ ಮುಖ್ಯ ಕಟ್ಟಡದ ಸುತ್ತಲಿನ ಜಾಗದಲ್ಲಿ ಬೀದಿಬದಿ ವ್ಯಾಪಾರಿಗಳು ಹೂ, ಹಣ್ಣು, ತರಕಾರಿಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ‘ವೆಂಡಿಂಗ್ ಪ್ಲಾಜಾ’ ನಿರ್ಮಿಸಲಾಗುತ್ತದೆ.

ಇದು ಕಟ್ಟೆಗಳು ಮತ್ತು ಚಾವಣಿಯ ನೆರಳಿರುವ ರಚನೆಗಳನ್ನು ಹೊಂದಿರಲಿದೆ. ಇಲ್ಲಿ ಗ್ರಾಹಕರು ಸರಾಗವಾಗಿ ಮುಂದಿನ ಮಳಿಗೆಗಳಿಗೆ ಹೋಗುವಷ್ಟು ಸ್ಥಳಾವಕಾಶ ನೀಡಲಾಗುತ್ತದೆ. ಇಲ್ಲಿಗೆ ಸರಕು–ಸರಂಜಾಮುಗಳನ್ನು ಹೊತ್ತು ತರುವ ಭಾರಿ ವಾಹನಗಳು ನಿಲ್ಲಲು, ಅಲ್ಲಿ ಲೋಡಿಂಗ್‌, ಅನ್‌ಲೋಡಿಂಗ್‌ ಮಾಡಲು ಬೇಕಾಗುದಷ್ಟು ನಿರ್ದಿಷ್ಟ ಜಾಗವನ್ನು ನಿಗದಿಪಡಿಸಲಾಗುತ್ತದೆ. 

ಸೌರ ಇಂಧನ: ವಿದ್ಯುಚ್ಛಕ್ತಿಯಲ್ಲಿ ಸ್ವಾವಲಂಬನೆ ಸಾಧಿಸಲು ಸೋಲಾರ್‌ ಶಕ್ತಿ ಸಂಗ್ರಹ ವ್ಯವಸ್ಥೆ ಮಾಡಲಾಗುತ್ತಿದೆ. ಘನತ್ಯಾಜ್ಯ ವಿಂಗಡಿಸಿ, ವಿಲೇವಾರಿ ಮಾಡುವ ಸುಧಾರಿತ ವ್ಯವಸ್ಥೆ ಸಹ ಈ ಅಭಿವೃದ್ಧಿಯಲ್ಲಿ ಸೇರಿದೆ.
*

ಅಗ್ನಿ ಶಮನಕ್ಕೆ ಅತ್ಯಾಧುನಿಕ ವ್ಯವಸ್ಥೆ

ಸಾವಿರಾರು ಜನರಿಂದ ಗಿಜಿಗುಡುವ ಮಾರುಕಟ್ಟೆಯಲ್ಲಿ ಒಂದು ವೇಳೆ ಅಗ್ನಿ ಆಕಸ್ಮಿಕ ಸಂಭವಿಸಿದರೆ, ಅದನ್ನು ನಿಯಂತ್ರಿಸಲು ಬೇಕಾದ ತಾಂತ್ರಿಕ ವ್ಯವಸ್ಥೆ ಅಳವಡಿಸಿಕೊಳ್ಳಲಾಗುತ್ತಿದೆ.

ಅಗ್ನಿ ಶಾಮಕ ವಾಹನಗಳು ಕಟ್ಟಡಗಳ ಬದಿಗೆ ಸರಾಗವಾಗಿ ಹೋಗಲು ದಾರಿ ಇರಲಿದೆ. ಸ್ಮೋಕ್‌ ಡಿಟೆಕ್ಟರ್‌ಗಳನ್ನು ಅಳವಡಿಸಿ, ಬೆಂಕಿ ಕಾಣಿಸಿಕೊಂಡ ತಕ್ಷಣ ‘ಫೈರ್‌ ಅಲಾರಾಂ’ ಮೊಳಗಿಸುವ ವ್ಯವಸ್ಥೆ ಜೋಡಿಸಲಾಗುತ್ತಿದೆ. ಬೆಂಕಿ ನಂದಿಸಲು 1,800 ಸ್ಪ್ರಿಂಕ್ಲರ್‌ಗಳನ್ನು ಅಲ್ಲಲ್ಲಿ ಜೋಡಿಸಲಾಗುತ್ತದೆ. ಅಗ್ನಿ ಅವಘಡಗಳ ನಿಯಂತ್ರಣ ವ್ಯವಸ್ಥೆ ಅಳವಡಿಕೆಗಾಗಿಯೇ ₹ 2.70 ಕೋಟಿ ಖರ್ಚು ಮಾಡಲಾಗುತ್ತಿದೆ.

***
ಬಸ್‌ ನಿಲ್ದಾಣಕ್ಕೆ ಹೊಸರೂಪ

ಜಾಮೀಯಾ ಮಸೀದಿ ಮತ್ತು ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ನಡುವೆ ಈಗ ಇರುವ ಮಾರುಕಟ್ಟೆ ಬಸ್‌ ನಿಲ್ದಾಣವನ್ನು ಪ್ರಯಾಣಿಕರ ಸ್ನೇಹಿಯಾಗಿಸುವ ಯೋಜನೆ ಸಹ ರೂಪುಗೊಂಡಿದೆ.

ಪ್ರಯಾಣಿಕರು ಚಾವಣಿಯ ನೆರಳಿನ ಬೆಂಚುಗಳಲ್ಲಿ ಕುಳಿತು ಬಸ್‌ಗಾಗಿ ಕಾಯಲು, ನಿರ್ದಿಷ್ಟ ಸ್ಥಳದಲ್ಲಿ ನಿರ್ದಿಷ್ಟ ಪ್ರದೇಶದ ಬಸ್‌ ನಿಲ್ಲಲು ವ್ಯವಸ್ಥೆ ಮಾಡಲಾಗುತ್ತದೆ. ಮಾರುಕಟ್ಟೆಯ ಅಂಡರ್‌ಪಾಸ್‌ ಮೂಲಕ ಜನರು ಬಂದು ಬಸ್‌ಗಳನ್ನು ಹತ್ತುವಂತೆ ಮಾಡಲಾಗುತ್ತದೆ.   
*

ಅಂಕಿ–ಅಂಶ

- 14 ಎಕರೆ ಕೆ.ಆರ್‌.ಮಾರುಕಟ್ಟೆಯ ವಿಸ್ತೀರ್ಣ

₹ 50.90 ಕೋಟಿ - ಮಾರುಕಟ್ಟೆ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಮೊತ್ತ
*

ಮಾರುಕಟ್ಟೆ ಜಾಗವನ್ನು ಯಾರೂ, ಎಂದೆಂದಿಗೂ ಒತ್ತುವರಿ ಮಾಡದಂತೆ ಅಭಿವೃದ್ಧಿ ಯೋಜನೆ ರೂಪಿಸಿದ್ದೇವೆ.
- ಎನ್‌.ಮಂಜುನಾಥ್ ಪ್ರಸಾದ್, ಆಯುಕ್ತ, ಬಿಬಿಎಂಪಿ
*

ಅಭಿವೃದ್ಧಿ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ. ಎಲ್ಲ ಕಾಮಗಾರಿಗಳನ್ನು ಹಂತ–ಹಂತವಾಗಿ ಎರಡು ವರ್ಷಗಳಲ್ಲಿ ಮುಗಿಸಲು ಗಡುವು ವಿಧಿಸಲಾಗಿದೆ. 
- ಜಿ.ಟಿ.ಸುರೇಶ್‌, ಮುಖ್ಯ ಎಂಜಿನಿಯರ್‌, ಸ್ಮಾರ್ಟ್‌ ಸಿಟಿ ಯೋಜನೆ

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !