ಗುರುವಾರ , ನವೆಂಬರ್ 14, 2019
18 °C

ಕಾಡುವ ಅಜ್ಜಿಯ ನೆನಪುಗಳು...

Published:
Updated:
Prajavani

ನನ್ನ ಮತ್ತು ನನ್ನ ಅಜ್ಜಿಯದು ಮೊದಲಿನಿಂದಲೂ ವಿಶೇಷವಾದ ಸಂಬಂಧ! ಹತ್ತು ಜನ ಮೊಮ್ಮಕ್ಕಳಲ್ಲಿ ಹಿರಿಯಳಾದ ನನ್ನ ಮೇಲೆ ಅಜ್ಜಿಗೆ ವಿಶೇಷ ಅಕ್ಕರೆ! ಬೇಸಿಗೆಯ ರಜೆಯಲ್ಲಿ ಎಲ್ಲ ಮೊಮ್ಮಕ್ಕಳಿಗಿಂತಲೂ ಅವಳೊಡನೆ ಹೆಚ್ಚು ಸಮಯ ಕಳೆಯುತ್ತಿದ್ದವಳು ನಾನೇ. ಅವಳಾಡುವ ಮಾತುಗಳನ್ನೆಲ್ಲ ಕಿವಿಗೊಟ್ಟು ಕೇಳುತ್ತಾ ಚಾಚೂ ತಪ್ಪದೆ ಪಾಲಿಸುತ್ತಿದ್ದವಳೂ ನಾನೇ. ಎಷ್ಟೋ ಬಾರಿ ಕೆಲಸ ಕಾರ್ಯಗಳಲ್ಲಿ ಅವಳನ್ನೇ ಅನುಕರಿಸಲೂ ಪ್ರಯತ್ನಿಸುತ್ತಿದ್ದೆ. ಅಜ್ಜಿಯ ಮಾತೆಂದರೆ ನನಗಾಗ ವೇದ ವಾಕ್ಯ. ಆ ದಿನಗಳಲ್ಲಿ ಅಜ್ಜಿ ಆಡಿದ ಎಲ್ಲ ಮಾತುಗಳು ನನ್ನ ಮುಗ್ಧ ಮನಸ್ಸಿನ ಸ್ಮೃತಿಪಟಲದಲ್ಲಿ ಗಟ್ಟಿಯಾಗಿ ಅಚ್ಚೊತ್ತಿವೆ.

ನನ್ನ ಹಾಗೂ ಅಜ್ಜಿಯ ಆ ಬಗೆಯ ಒಡನಾಟ ಈಗಿಲ್ಲವಾದರೂ ಆಗೊಮ್ಮೆ ಈಗೊಮ್ಮೆ ಹೋಗಿ ಅವಳನ್ನು ಕಂಡು ಬರುವುದಿದೆ. ಆದರೆ, ಒಮ್ಮೆ ನನ್ನ ಬದುಕಿನ ಹಾದಿಯತ್ತ ಹಿಂದಿರುಗಿ ಕಣ್ಣಾಯಿಸಿದರೆ ಎಲ್ಲ ಹಂತಗಳಲ್ಲಿಯೂ ಆಕೆಯ ನಡೆನುಡಿಗಳು ನನ್ನ ಮೇಲೆ ಗಾಢ ಪರಿಣಾಮ ಬೀರಿರುವ ಸಂಗತಿ ಎದ್ದು ಕಾಣುತ್ತದೆ. ನಿಜಕ್ಕೂ ಬೆರಗು ಮೂಡಿಸುತ್ತದೆ.

ನನ್ನ ವೈದ್ಯಕೀಯ ಶಿಕ್ಷಣದ ಸಂದರ್ಭದಲ್ಲಿ ಒಮ್ಮೊಮ್ಮೆ ಗೆಳತಿಯರೆಲ್ಲ ಹೊರಗೆ ಸುತ್ತಾಡಲು ಅಥವಾ ಸಿನಿಮಾ ನೋಡಲು ಹೋಗುವುದಿತ್ತು. ಹಾಗೆ ಹೋಗುವಾಗ ನಾನು ಮೊದಲು ಅಂದು ಓದಬೇಕಾದುದ್ದನ್ನು ಓದಿ ಮುಗಿಸಿಯೇ ಗೆಳತಿಯರೊಡನೆ ಹೊರಡುತ್ತಿದ್ದುದು. ಇದು ಅಜ್ಜಿ ನನ್ನ ತಲೆಗೆ ಮೊದಲಿನಿಂದಲೂ ತುಂಬಿದ ಪಾಠ! ‘ಮೊದಲು ಕೆಲಸ ನಂತರವೇ ಆಟ ಅಥವ ಮನರಂಜನೆ’ ಇದು ನಾವು ಸಣ್ಣವರಿದ್ದಾಗ ಅಜ್ಜಿ ನಮಗೆ ಬೆಳಿಗ್ಗೆ ಏಳುತ್ತಲೇ ಹೇಳುತ್ತಿದ್ದ ಮಾತುಗಳು. ನಾವು ಮಕ್ಕಳು ಮನೆಯಲ್ಲಿ ನಮ್ಮ ಪಾಲಿನ ಸಣ್ಣ ಪುಟ್ಟ ಕೆಲಸಗಳನ್ನು ಮುಗಿಸಿಯೇ ಆಟಕ್ಕೆ ತೆರಳಬೇಕಿತ್ತು. ಸಂಜೆಯ ವೇಳೆಯೂ ಮನೆಯ ಕೆಲಸ ಮುಗಿದ ನಂತರವೇ ಟಿ.ವಿ ಮುಂದೆ ಕೂರಬೇಕಿತ್ತು.
ಮದುವೆಯಾದ ಹೊಸತರಲ್ಲೂ ಅಜ್ಜಿ ನೆನಪಾಗುತ್ತಿದ್ದಳು. ತುಂಬು ಕುಟುಂಬಕ್ಕೆ ಮದುವೆ ಮಾಡಿಕೊಟ್ಟಾಗ ಅತ್ತೆಗೆ ಅಡುಗೆ ಮನೆಯ ಕೆಲಸಕ್ಕೆ ಮೇಲೆ ಬಿದ್ದು ಸಹಾಯ ಮಾಡಲು ಹೋಗುತ್ತಿದ್ದುದು ಅಜ್ಜಿಯ ದಿನನಿತ್ಯದ ಉಪದೇಶದ ಪರಿಣಾಮವೇ. ‘ಹೆಣ್ಣು ಮಕ್ಕಳು ಎಲ್ಲ ಕೆಲಸಗಳನ್ನು ಕಲಿತಿರಬೇಕು’ ಇದು ಅಜ್ಜಿ ದಿನಕ್ಕೊಮ್ಮೆಯಾದರೂ ಉಲಿಯುತ್ತಿದ್ದ ಮಾತು! ದೀಪಾವಳಿ ಹಬ್ಬದಂದು ನಾನು ಮನೆಯ ಮುಂದಿನ ದೊಡ್ಡ ಅಂಗಳದಲ್ಲಿ ಸುಂದರವಾದ ರಂಗೋಲಿಯನ್ನು ಬಿಡಿಸಿದಾಗ ಅತ್ತೆಯಿಂದ ಅದೆಷ್ಟು ಹೊಗಳಿಕೆ! ಅದೂ ಅಜ್ಜಿ ಹಾಕಿದ ನಿಯಮಗಳಿಂದಲೇ ಸಾಧ್ಯವಾದದ್ದು ! ಹೌದು, ಅಜ್ಜಿಯ ಪ್ರಕಾರ ನಾವು ಕಡ್ಡಾಯವಾಗಿ ಬೆಳಗಿನ ಸಮಯದಲ್ಲಿ ಮಾಡಬೇಕಾದ ಕೆಲಸವದು. ಬೆಳಿಗ್ಗೆ ಎದ್ದ ನಾವು ಮನೆಯ ಅಂಗಳ ಸ್ವಚ್ಛಗೊಳಿಸಿ ಅಲ್ಲಿ ರಂಗೋಲಿ ಬರೆಯದಿದ್ದರೆ ಅಜ್ಜಿ ಸಿಟ್ಟಾಗುತ್ತಿದ್ದಳು. ‘ದೇವಾನುದೇವತೆಗಳು ಮನೆ ಮುಂದಿನ ರಂಗೋಲಿಯನ್ನು ನೋಡಿ ಸಂತೃಪ್ತರಾಗಿ ಮನೆಯ ಒಳಗೆ ಅಡಿಯಿಡುತ್ತಾರೆ’ ಎಂದೇನೋ ಹೇಳುತ್ತಿದ್ದಳು.

ಸಂಸಾರ ಸಾಗರವನ್ನು ಅಚ್ಚುಕಟ್ಟಾಗಿ ನಡೆಸುವುದರಲ್ಲಿ ಅಜ್ಜಿ ಪರಿಣಿತೆ. ಕುಟುಂಬ ಸದಸ್ಯರಲ್ಲಿ ಬರುವ ಭಿನ್ನಾಭಿಪ್ರಾಯಗಳನ್ನು ನಿಭಾಯಿಸುವ ರೀತಿಯನ್ನೂ ನಾನು ಆಕೆಯಿಂದಲೇ ಕಲಿತದ್ದು. ತುಂಬು ಕುಟುಂಬದಲ್ಲಿ ಮಗ ಸೊಸೆಯ ಬಗ್ಗೆ, ಸೊಸೆ ಮಗನ ಬಗ್ಗೆ, ಅತ್ತಿಗೆ ಮೈದುನನ ಬಗ್ಗೆ, ನಾದಿನಿ ಅತ್ತಿಗೆಯ ಬಗ್ಗೆ ಹೇಳುತ್ತಿದ್ದ ದೂರುಗಳನ್ನು ಅಜ್ಜಿ ಒಳಗೇ ನುಂಗಿ ಇಬ್ಬರನ್ನೂ ತಿದ್ದುತ್ತಾ ಸಂಸಾರದಲ್ಲಿ ಬಿರುಕು ಬಿಡದಂತೆ ಎಚ್ಚರ ವಹಿಸುತ್ತಿದ್ದ ಪರಿ ನಿಜಕ್ಕೂ ಎಲ್ಲರನ್ನು ಬೆರಗಾಗಿಸುತ್ತಿತ್ತು. ಅಜ್ಜಿಯ ಆ ನಡವಳಿಕೆಯ ಅನುಕರಣೆ ನನಗೆ ಸಂದಿಗ್ಧ ಸಮಯದಲ್ಲಿ ಸಾಕಷ್ಟು ಸಹಕರಿಸಿದೆ ಎಂದರೆ ತಪ್ಪಾಗಲಾರದು.

ರಜಾ ದಿನಗಳಲ್ಲಿ ನಮ್ಮ ಪಾಲಿನ ಕೆಲಸ ಮುಗಿಸಲೆಂದು ಒಮ್ಮೊಮ್ಮೆ ನಾವು ಮಧ್ಯಾಹ್ನ ಮೂರು ಗಂಟೆಗೇ ಮನೆ ಮುಂದಿನ ಗಿಡಗಳಿಗೆ ನೀರುಣಿಸಲು ಹೊರಡುವುದಿತ್ತು. ಅಜ್ಜಿ ಒಳಗಿನಿಂದಲೇ ‘ಗಿಡಗಳಿಗೆ ನೀರು ಹಾಯಿಸುವ ಸಮಯವಾ ಇದು..? ಎಂದು ಗದರುತ್ತಿದ್ದಳು. ಇತ್ತೀಚೆಗೆ ಮಗನಿಗೆ ಪರಿಸರ ವಿಜ್ಞಾನ ಹೇಳಿಕೊಡುವಾಗ ಪಾಠದಲ್ಲಿ ಓದುತ್ತಿದ್ದೆ, ಗಿಡಗಳಿಗೆ ಬೆಳಿಗ್ಗೆ ಅಥವ ಸಂಜೆಯ ವೇಳೆಯಲ್ಲಿಯೇ ಏಕೆ ನೀರುಣಿಸಬೇಕು ಎಂಬ ವಿವರದ ಬಗ್ಗೆ. ಆದರೆ, ಆ ವೈಜ್ಞಾನಿಕ ಮಾಹಿತಿಯನ್ನು ಯಾವ ಶಾಲೆಯ ಮೆಟ್ಟಿಲನ್ನೂ ಹತ್ತದ ಅಜ್ಜಿ ನಮಗೆ ಅಂದೇ ತಿಳಿಸಿದ್ದಳು.

ಕೆಲ ದಿನಗಳ ಹಿಂದೆ ಮಗನಿಗೆ ಶಾಲೆಯಲ್ಲಿ ಅತಿಸಾರವನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಬರೆದು ತರಲು ಹೇಳಿದ್ದರು. ಅವನು ಗೂಗಲ್‍ನಲ್ಲಿ ಹುಡುಕಿ ಸಂಬಂಧಿಸಿದ ಅನೇಕ ಅಂಶಗಳನ್ನು ಬರೆಯುತ್ತಿದ್ದ. ‘ಅಡುಗೆಮನೆಯಲ್ಲಿ ತಯಾರಿಸಿಟ್ಟ ಅಡುಗೆ ಪದಾರ್ಥಗಳನ್ನು ಸರಿಯಾಗಿ ಮುಚ್ಚಿಡಬೇಕು’ ಎಂಬುದೂ ಅದರಲ್ಲಿ ಒಂದಾಗಿತ್ತು. ಮತ್ತೆ ನನ್ನ ಮನಸ್ಸು ಅಜ್ಜಿಯೊಂದಿಗೆ ಕಳೆದ ದಿನಗಳತ್ತ ಓಡಿತ್ತು. ಅಜ್ಜಿ ಆ ವಿಷಯದಲ್ಲಿ ಬಹಳವೇ ಕಟ್ಟುನಿಟ್ಟು. ಅಜ್ಜಿಗೆ ಅಡುಗೆ ಪದಾರ್ಥಗಳಿರುವ ಬಟ್ಟಲುಗಳಿಗೆ ಗಾತ್ರದಲ್ಲಿ ಸರಿಯಾಗಿ ಹೊಂದುವ ಮುಚ್ಚಳಿಕೆಯನ್ನೇ ಮುಚ್ಚಬೇಕಿತ್ತು. ಪಾತ್ರೆ ತೆರೆದಿದ್ದರೆ ಅಜ್ಜಿ ಕೂಗಿ ನಮ್ಮನ್ನು ಕರೆದು ನಮ್ಮಿಂದ ಆ ಕೆಲಸ ಮಾಡಿಸುತ್ತಿದ್ದಳು.

ಆ ಕಾಲದಲ್ಲಿ ಮಿಕ್ಸಿ ಇರಲಿಲ್ಲ. ನಂತರದ ದಿನಗಳಲ್ಲಿ ಮಿಕ್ಸರ್ ಬಂದರೂ ಗ್ರಾಮೀಣ ಪ್ರದೇಶದ ಅಜ್ಜಿ ಮನೆಯಲ್ಲಿ ಸದಾ ಪವರ್ ಕಟ್ ಸಮಸ್ಯೆ ಇರುತ್ತಿತ್ತು. ಹಾಗಾಗಿ ಸಾಂಬಾರಿಗೆ ಹಾಗೂ ಕೆಲವು ಪಲ್ಯಗಳಿಗೆ ಅಜ್ಜಿ ಎಲ್ಲ ಮಸಾಲೆ ಪದಾರ್ಥಗಳನ್ನು ಹುರಿದು ಜೋಡಿಸಿ ಕೊಟ್ಟರೆ ನಾನು ಒಳಕಲ್ಲಿನಲ್ಲಿ ಅದನ್ನು ಅರೆದುಕೊಡಬೇಕಿತ್ತು. ಆಗ ಅಜ್ಜಿ ಮಾಡಿಸಿದ ಆ ಅಭ್ಯಾಸ ಈಗಲೂ ಕರೆಂಟ್ ಇಲ್ಲದಾಗ ಒಮ್ಮೊಮ್ಮೆ ಉಪಯೋಗಕ್ಕೆ ಬರುವುದಿದೆ. ಇತ್ತೀಚೆಗೆ ನಮ್ಮ ಮನೆಯಲ್ಲಿ ದೋಸೆ-ಚಟ್ನಿಯನ್ನು ಸವಿದ ನಾದಿನಿಯ ಮಗಳು ‘ಅತ್ತೆ ನೀವು ತಯಾರಿಸಿದ ಚಟ್ನಿಯ ರುಚಿ ಬೇರೆಯೇ ಇದೆ, ಸ್ವಲ್ಪ ರೆಸಿಪಿ ಹೇಳಿ..’ ಎಂದು ಕೇಳಿದಾಗ ನನಗೆ ಮನಸ್ಸಿನಲ್ಲಿಯೇ ಖುಷಿ. ‘ರುಬ್ಬುವ ಕಲ್ಲಿನಲ್ಲಿ ಅರೆದದ್ದರಿಂದ ಆ ವಿಭಿನ್ನ ರುಚಿ ಕಣೆ’ ಎಂದಿದ್ದೆ. ಆ ಕ್ಷಣಕ್ಕೆ ಅಜ್ಜಿ ಮಸಾಲೆ ಪದಾರ್ಥಗಳನ್ನು ಅಣಿ ಮಾಡಿ ನನಗೆ ತಿರುವಿ ಕೊಡಲು ಕೊಡುತ್ತಿದ್ದುದು ಬೇಡವೆಂದರೂ ನೆನಪಿನಂಗಳಕ್ಕೆ ಬಂತು.

ಕೆಲವೊಮ್ಮೆ ಏನೇನೊ ಆಲೋಚನೆಗಳು ತಲೆಗೆ ಬರುವುದಿದೆ. ‘ನಾನು ಬೇರೆಯೇ ಓದಿದ್ದರೆ.. ಬೇರೆಯೇ ವೃತ್ತಿಯನ್ನು ಹಿಡಿದಿದ್ದರೆ...ಮದುವೆನೇ ಆಗದಿದ್ದರೆ ಇನ್ನಷ್ಟು ಸಾಧಿಸಬಹುದಿತ್ತೇನೊ....’ ಎಂಬ ತಲೆ ಬುಡವಿಲ್ಲದ ನೂರೆಂಟು ಯೋಚನೆಗಳು ಬಂದು ಈ ಹುಚ್ಚು ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುವುದಿದೆ. ಆಗ ಥಟ್ ಎಂದು ಅಜ್ಜಿಯ ಮಾತುಗಳ ನೆನಪಾಗುತ್ತದೆ. ಅಜ್ಜಿ ಯಾವಾಗಲೂ ಹೇಳುತ್ತಿದ್ದಳು ‘ಈ ವಿಧಿಯ ಮುಂದೆ ನಮ್ಮದೇನೂ ಇಲ್ಲ... ನಾವು ಈ ಬದುಕಿನಲ್ಲಿ ಏನನ್ನು ಪಡೆದುಕೊಂಡು ಬಂದಿರುತ್ತೇವೋ ಅಷ್ಟೇ ನಮಗೆ ದಕ್ಕುವುದು..’ ಎಂದು. ಅಜ್ಜಿಯ ಅಂದಿನ ಆ ಮಾತುಗಳು ‘Accept the life as it comes’ ಎಂಬ ಈಗ ಬಳಕೆಯಲ್ಲಿರುವ ಉಕ್ತಿಯ ಒಳ ಅರ್ಥವನ್ನೇ ಹೇಳುತ್ತಿವೆಯಲ್ಲ ಎನ್ನಿಸುತ್ತದೆ.

ಬೆಳೆದ ಮಕ್ಕಳು ಒಮ್ಮೊಮ್ಮೆ ನಮ್ಮ ಮಾತುಗಳಿಗೆ ಎದುರಾಡಿದಾಗ, ‘ಮಕ್ಕಳನ್ನು ಬಾಲ್ಯದಲ್ಲಿ ತಿದ್ದಲಿಲ್ಲವೇನೋ.. ಇನ್ನೂ ಒಳ್ಳೆಯ ರೀತಿಯಲ್ಲಿ ಬೆಳೆಸಬಹುದಿತ್ತೇನೋ...’ ಎಂಬ ಬೇಡದ ವಿಚಾರಗಳು ಮನಸ್ಸನ್ನು ಒಮ್ಮೊಮ್ಮೆ ಚಿಂತೆಯ ಗೂಡನ್ನಾಗಿಸಿ ಬಿಡುವುದಿದೆ. ಆಗಲೂ ಸಹಾಯಕ್ಕೆ ಬರುವುದು ಅಜ್ಜಿಯ ಮಾತುಗಳೇ. ‘ಒಳ್ಳೆಯ ಗಂಡ/ ಹೆಂಡತಿ/ ಮಕ್ಕಳನ್ನು ಪಡೆಯಲೂ ಕೂಡ ಅದೃಷ್ಟ ಪಡೆದುಕೊಂಡು ಬಂದಿರಬೇಕು ಕಣವ್ವ.. ಅದು ಎಲ್ಲರಿಗೂ ಸಿಗುವುದಿಲ್ಲ..’ ಎಂದು ಅಜ್ಜಿ ಹೇಳುತ್ತಿದ್ದ ಮಾತುಗಳು ಒಮ್ಮೊಮ್ಮೆ ಕುಗ್ಗಿ ಹೋದ ಮನಸ್ಸಿಗೆ ಆಪ್ತ ಸಮಾಲೋಚಕರ ಮಾತುಗಳಂತೆ ಸಾಂತ್ವನವನ್ನು ನೀಡಿ ಮನಸ್ಸನ್ನು ತಿಳಿಯಾಗಿಸುತ್ತವೆ.

ಹೀಗೆ ಜೀವನದುದ್ದಕ್ಕೂ ನನ್ನಜ್ಜಿ ಒಮ್ಮೊಮ್ಮೆ ಸ್ನೇಹಿತೆಯಂತೆ ಕೆಲವೊಮ್ಮೆ ತಾಯಿಯಂತೆ ಸಲಹೆ ಸೂಚನೆಗಳನ್ನು ನೀಡುತ್ತಲೇ ಬಂದಿದ್ದಾಳೆ. ಅಷ್ಟೇ ಅಲ್ಲ, ಬಾಳಿನ ಕೆಲವು ಹಂತಗಳಲ್ಲಿ ನನ್ನ ಅಜ್ಜಿ ಶಿಕ್ಷಕಿಯಾಗಿ, ವಿಜ್ಞಾನಿಯಾಗಿ, ವೈದ್ಯಳಾಗಿ, ಅಧ್ಯಾತ್ಮ ಚಿಂತಕಿಯಾಗಿ, ತತ್ವಜ್ಞಾನಿಯಾಗಿ ಹಾಗೂ ಆಪ್ತ ಸಮಾಲೋಚಕಿಯಾಗಿ ನನ್ನನ್ನು ಸರಿ ದಾರಿಯಲ್ಲಿ ಜೀವನ ನಡೆಸಲು ಸಹಕರಿಸುತ್ತಿದ್ದಾಳೆ. ಬದುಕುವ ಕಲೆಯನ್ನು ಕಲಿಸಿದ್ದಾಳೆ. ಅವಳಿಗಿದೋ ನನ್ನ ನಮನಗಳು. 

ಪ್ರತಿಕ್ರಿಯಿಸಿ (+)