ಕಾಜಿರಂಗದ ಕಾಡಿನಲ್ಲಿ...

ಭಾನುವಾರ, ಜೂನ್ 16, 2019
28 °C
ಅಸ್ಸಾಂ ಡೈರೀಸ್

ಕಾಜಿರಂಗದ ಕಾಡಿನಲ್ಲಿ...

Published:
Updated:
Prajavani

ಅಸ್ಸಾಂ ರಾಜ್ಯದ ತೇಜ್‍ಪುರ್‌ದಲ್ಲಿ ನವದಹೆಯ ಸಂಗೀತ–ನಾಟಕ ಅಕಾಡೆಮಿಯುವರು ನಾಟಕೋತ್ಸವ ಆಯೋಜಿಸಿದ್ದರು. ಕರ್ನಾಟಕದ ನಾವು 12 ಮಂದಿ ಉತ್ಸವದಲ್ಲಿ ನಾಟಕ ಪ್ರದರ್ಶಿಸಲು ಹೋಗಿದ್ದೆವು.

ನಾಟಕ ಪ್ರದರ್ಶನ ಮುಗಿದ ನಂತರ ಮರುದಿನ ಹತ್ತಿರದಲ್ಲಿದ್ದ ಅಸ್ಸಾಂನ ಪ್ರಮುಖ ತಾಣ ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೆ ಹೋಗಲು ನಾನು, ಗಣೇಶ ಮತ್ತು ಅಕ್ಕ ಮೂವರು ಪ್ಲಾನ್‌ ಮಾಡಿದೆವು. ಇದಕ್ಕಾಗಿ ಗೂಗಲ್‌ನಲ್ಲಿ ಹುಡುಕಾಡಿ ಸ್ಥಳೀಯರಿಂದ ‘ಅಲ್ಲಿಗೆ ಹೋಗುವುದು ಹೇಗೆ’ ಎಂಬ ಮಾಹಿತಿ ಕಲೆ ಹಾಕಿದ್ದಾಯಿತು.

ಸಿಕ್ಕ ಮಾಹಿತಿ ಪ್ರಕಾರ, ಕಾಜಿರಂಗದ ಒಳ ಹೋಗಲು ನಾಲ್ಕು ಪ್ರವೇಶ ದ್ವಾರಗಳಿದ್ದವು. ನಾವಿದ್ದ ಸ್ಥಳದಿಂದ ಕಾಜಿರಂಗದ ಮಧ್ಯ ಪ್ರದೇಶದ್ವಾರ ಹತ್ತಿರವಿತ್ತು. ನಾವು ಅದನ್ನೇ ಆಯ್ಕೆ ಮಾಡಿಕೊಂಡೆವು.

ಬೆಳಗ್ಗೆ 10 ಗಂಟೆಗೆ ಬಾಡಿಗೆ ವಾಹನ ಮಾಡಿಕೊಂಡು ತೇಜ್‍ಪುರದಿಂದ ಕಾಜಿರಂಗದತ್ತ ಹೊರಟೆವು. ಅಲ್ಲಿಂದ ಪಾರ್ಕ್‌ಗೆ ಸುಮಾರು 2 ಗಂಟೆಯ ಪಯಣ. ಆ ಪಯಣವನ್ನು ಸಂಪೂರ್ಣ ಅನುಭವಿಸಬೇಕೆಂದು ಮೊದಲೇ ನಿರ್ಧರಿಸಿಕೊಂಡಿದ್ದೆ. ಪ್ರತಿ ನಿಮಿಷದಲ್ಲೂ ಅತ್ತಿತ್ತ ನೋಡುತ್ತಾ ಜೀಪ್‌ ಚಾಲಕನಿಗೆ ಒಂದಷ್ಟು ಪ್ರಶ್ನೆ ಕೇಳುತ್ತಿದ್ದೆ. ಪಯಣ ಶುರುವಾಗಿ 15 ಕಿಲೋಮಿಟರ್ ಮುಗಿದಿತ್ತು. ಆಗ ಡ್ರೈವರ್ 3 ಕಿಲೋಮಿಟರ್ ಉದ್ದದ ಸೇತುವೆ ತೋರಿಸಿ ‘ಅದು ಬ್ರಹ್ಮಪುತ್ರ ನದಿ ಹರಿಯುವ ಜಾಗ’ ಎಂದ. ಆಗ ಸೇತುವೆ ಕೆಳಗೆ ನೀರಿರಲಿಲ್ಲ. ಆದರೂ ಆ ಜಾಗದಲ್ಲಿ ನೀರು ತುಂಬಿ ಹರಿಯುವಾಗ ಅದರ ರಭಸ ಮತ್ತು ಹರಿವಿನ ತೀವ್ರತೆ ನೆನೆದು ನನಗೆ ಭಯವಾಯಿತು. ಅದನ್ನೇ ಯೋಚಿಸುತ್ತಾ ಕುಳಿತಿದ್ದಾಗ ಡ್ರೈವರ್ ಗಾಡಿ ನಿಲ್ಲಿಸಿ ತನ್ನ ಎಡಕ್ಕೆ ಕೈ ತೋರಿಸಿ ‘ಅಲ್ಲಿ ಅಸ್ಸಾಂ ಬೆಸ್ಟ್ ಟೀ ಸಿಗುತ್ತದೆ’ ಎಂದ. ಪುಟ್ಟ ಟೀ ಅಂಗಡಿಯಲ್ಲಿ ಅಸ್ಸಾಂ ಸ್ಪೆಷಲ್ ಟೀ ಸವಿದೆವು. ಆ ಕ್ಷಣಕ್ಕೆ ಅದು ಭೂಲೋಕದ ಅಮೃತವೆನಿಸಿತು.

ಪಯಣ ಮುಂದುವರಿಯಿತು. ಒಂದು ಚಿಕ್ಕ ಕಾಡು ಕಾಣಿಸಿತು. ನಾನು ಕಾಜಿರಂಗವೇ ಬಂತು ಎಂದು ಅಚ್ಚರಿಪಟ್ಟು, ಸೀಟು ತುದಿಗೆ ಕುಳಿತೆ. ಅಷ್ಟರಲ್ಲೇ, ಕಾಡು ದಾಟಿದೆವು. ಅದು ಕಾಜಿರಂಗವಾಗಿರಲಿಲ್ಲ. ನಿರಾಶೆಯಾಯಿತು. ಮತ್ತೆ ಸೀಟಿನ ಹಿಂದಕ್ಕೆ ಒರಗಿ ಕುಳಿತೆ. ಒಂದೆರಡು ಬಾರಿ ಹೀಗೆ ಆಗುತ್ತಿದ್ದಾಗಲೇ, ನನ್ನ ಕುತೂಹಲಕ್ಕೆ ತೆರೆ ಬಿದ್ದಿತು. ಅಷ್ಟರೊಳಗೆ ನಾವು ಕಾಜಿರಂಗ ತಲುಪಿದ್ದೆವು.

ಜೀಪ್ ಇಳಿದು ಕಾಜಿರಂಗ ರಾಷ್ಟ್ರೀಯ ಉದ್ಯಾನದ ಪ್ರವೇಶ ದ್ವಾರದಲ್ಲಿದ್ದ ಕಚೇರಿಯಲ್ಲಿ ವಿಚಾರಿಸಿದೆ. ‘ನೀವು ಎರಡು ಮಾರ್ಗಗಳಲ್ಲಿ ಒಳಗೆ ಹೋಗಬಹುದು. ಒಂದು ಜೀಪಿನಲ್ಲಿ, ಇನ್ನೊಂದು ಆನೆಯ ಮೇಲೆ. ಜೀಪಿನಲ್ಲಾದರೆ 6 ಜನ ಹೋಗಬಹುದು. ಅದಕ್ಕೆ ₹1500 ಆಗುತ್ತದೆ. ಆನೆಯ ಮೇಲಾದರೆ ಒಬ್ಬರಿಗೆ ₹400’ ಎಂದರು. ಆನೆಯ ಮೇಲೆ ಹೋಗುವ ಆಸೆಯಿದ್ದರೂ, ಎಲ್ಲರ ಜೊತೆಗೆ ಹೋಗುವುದು ಕಷ್ಟವೆಂದೆನಿಸಿದಾಗ, ಜೀಪ್‌ ಬುಕ್ ಮಾಡಿದೆ. ಸಂಪೂರ್ಣವಾಗಿ ಕಾಜಿರಂಗ ನೋಡಿ ಬರಲು 2 ಗಂಟೆ ಬೇಕೆಂದು ಗೊತ್ತಾಯಿತು. ಅಲ್ಲೇ ರಸ್ತೆ ಬದಿಯ ಗಾಡಿ ಹೋಟೆಲ್‌ನಲ್ಲಿ ಅಸ್ಸಾಂನ ಸ್ಪೆಷಲ್ ಊಟ (ಅನ್ನ, ದಾಲ್, ತರಕಾರಿ ಪಲ್ಯ ಮತ್ತು ಹಸಿಮೆಣಸಿನಕಾಯಿ) ಉಂಡೆವು. ಊಟವಾದ ಮೇಲೆ ನಾವು 12 ಮಂದಿ 2 ಜೀಪಿನಲ್ಲಿ ಕಾಜಿರಂಗದ ಒಳಗೆ ಹೊರಟೆವು.

15 ನಿಮಿಷದ ದಾರಿ ಕಳೆಯಿತು. ಸುತ್ತಮುತ್ತಲು ಮರ ಗಿಡಗಳು, ದಾರಿ ಪಕ್ಕಕ್ಕೆ ಹಸಿರು ಹುಲ್ಲಿನ ಹಾಸು. ಆದರೆ ಯಾವ ಪ್ರಾಣಿಯೂ ಕಾಣಿಸಲಿಲ್ಲ. ಸ್ವಲ್ಪ ಬೇಸರವಾಯಿತು. ಪ್ರಯಾಣದಲ್ಲಿ ಉತ್ಸಾಹ ಕಳೆದುಕೊಳ್ಳುತ್ತಿರುವಾಗ, ಮುಂದೆ ಜನ ಜಮಾಯಿಸಿದ್ದು ಕಂಡಿತು. ‘ಅಲ್ಲಿ ಯಾವುದೋ ಪ್ರಾಣಿ ಇದೆ’ ಎಂದುಕೊಂಡು ಸ್ವಲ್ಪ ಉತ್ಸುಕನಾದೆ. ಆದರೆ, ಅವರು ನೋಡುತ್ತಿದದ್ದು ಕಾಡು ಕೋಳಿ ಎಂದು ಗೊತ್ತಾದ ಮೇಲೆ ಬೇಸರಗೊಂಡೆ. ನಾನು ಆ ಕಡೆ ಈ ಕಡೆ ನೋಡುವುದನ್ನು ನಿಲ್ಲಿಸಿ ಡ್ರೈವರ್ ಜೊತೆ ಬಂದಿದ್ದ ಗನ್‌ಮ್ಯಾನ್ ಬಳಿ ಮಾತನಾಡುತ್ತಾ ಕುಳಿತೆ. ಆತನನ್ನು ‘ಇಲ್ಲಿ ಯಾವ ಯಾವ ಪ್ರಾಣಿಗಳಿವೆ’ ಎಂದೆ. ಆತ ಮೊದಲು ಹೇಳಿದ್ದೇ ‘ಹುಲಿ’ ಹೆಸರನ್ನು. ಝೂನಲ್ಲಿ ಒಣಗಿದ ದೇಹದ ಹುಲಿ ನೋಡಿದ್ದ ನನಗೆ ಈ ಕಾಡಿನಲ್ಲಿ ದಷ್ಟಪುಷ್ಟವಾದ ಸ್ವಚ್ಛಂದವಾಗಿ ವಿಹರಿಸುವ ಹುಲಿ ನೋಡುವ ಭಾಗ್ಯ ಬಂತೆಂದು ಉತ್ಸುಕನಾದೆ. ಅಲ್ಲಿವರೆಗೂ ನೆನಪಲ್ಲಿದ್ದ ಒಂಟಿಕೊಂಬಿನ ಘೇಂಡಾಮೃಗ ಮರತೇ ಹೋಯಿತು.

ಪ್ರಯಾಣ ಸಾಗುತ್ತಿತ್ತು ಸ್ವಲ್ಪ ಕಾಡು ಹೆಚ್ಚಾದಂತೆ ರಸ್ತೆ ಬದಿಯಲ್ಲಿ ಜಿಂಕೆಗಳು ಕಾಣಿಸಿದವು. ನೀರಿರುವ ಕಡೆ ಆನೆಗಳು ಸಿಕ್ಕವು. ಮುಂದೆ ಕಾಡು ಹಂದಿ ಕಂಡಿತು. ಅದನ್ನು ನೋಡಲು ಮೂರ್ನಾಲ್ಕು ಜೀಪುಗಳು ಸಾಲಾಗಿ ನಿಂತಿದ್ದವು. ಇದ್ದಕ್ಕಿದ್ದ ಹಾಗೆ ಆ ಹಂದಿ ‘ಗೊರ್’ ಎಂದು ಕೂಗಿ ಜೀಪಿನೆಡೆಗೆ ನೆಗೆಯಿತು. ನಾವೂ ಗಾಬರಿಯಿಂದ ಕೂಗಿದೆವು. ನಮ್ಮ ಡ್ರೈವರ್ ತಕ್ಷಣ ಜೀಪ್ ಮುಂದಕ್ಕೆ ಓಡಿಸಿದ. ಆದರೆ ಹಿಂದಿನ ಜೀಪಿನವನು ಗಡಿಬಿಡಿಯಲಿ ಜೀಪ್ ಆಫ್ ಮಾಡಿಬಿಟ್ಟಿದ್ದನ್ನು ನೋಡಿ ಬಿದ್ದು ಬಿದ್ದು ನಕ್ಕೆವು.

ನಕ್ಕು ಮುಗಿಸುವುದರೊಳಗೆ ನಮಗೆ ದೂರದಲ್ಲಿ ಒಂಟಿ ಕೊಂಬಿನ ಘೇಂಡಾಮೃಗ ಕಾಣಿಸಿತು, ಅದನ್ನು ನೋಡಿ ಪುಳಕಿತಗೊಂಡೆವು. ನನಗೆ ಅದನ್ನು ಹತ್ತಿರದಿಂದ ನೋಡಬೇಕೆಂಬ ಸಣ್ಣ ಆಸೆ. ಡ್ರೈವರ್‌ಗೆ ಹೇಳಿದೆ. ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ ಎಂದ. ಹಾಗೆಯೇ ಹುಲಿ ಎಲ್ಲಿರುತ್ತದೆ ಎಂದಾಗ, ‘ಹುಲ್ಲಿನ ಮಧ್ಯದಲ್ಲಿ’ ಎಂದು ಹೇಳಿದ. ನಾನು ಹಸಿರು ಹುಲ್ಲು ಕಂಡಾಗಲ್ಲೆಲ್ಲ ಜೀಪಿನ ಮೇಲೆ ನಿಂತು ಇಣುಕಿ ಇಣುಕಿ ನೋಡುತ್ತಿದ್ದೆ. ಅಷ್ಟರೊಳಗೆ ನಾವು ಘೇಂಡಾಮೃಗದ ಸಮೀಪ ಬಂದಾಗಿತ್ತು. ಅದನ್ನು ಹತ್ತಿರದಿಂದ ನೋಡಿ ಮೈ ಮರೆತೆವು. ನಮ್ಮ ಹಿಂದೆ ಜೀಪುಗಳು ಬಂದು ಜೋರಾಗಿ ಹಾರ್ನ್ ಮಾಡಿದಾಗಲೇ ಅಲ್ಲಿಂದ ಹೊರಟಿದ್ದು. ಅದು ಕಣ್ಮರೆಯಾಗುವ ತನಕ ಅದನ್ನೇ ನೋಡುತ್ತ ಕುಳಿತೆವು. ಬೃಹದಾಕಾರದ ದೇಹ, ಗಾಂಭೀರ್ಯ, ನೋಟ, ಆಹಾ. ಇಂತಹ ಒಂದು ಪ್ರಾಣಿಯನ್ನು ಹತ್ತಿರದಿಂದ ನೋಡಿ ಜಗತ್ತೇ ಒಂದು ವಿಸ್ಮಯವೆನಿಸಿತು.

ಎರಡು ಗಂಟೆಯ ಪ್ರಯಾಣ ಎರಡು ಜನುಮಕ್ಕೆ ಸಾಕಾಗುವಷ್ಟು ನೆನಪುಗಳನ್ನು ನೀಡಿತು. ಆದರೆ ಹುಲಿಯನ್ನು ನೋಡಬೇಕೆಂಬ ಆಸೆ ಹಾಗೆಯೇ ಉಳಿಯಿತು. ಪ್ರವಾಸದ ಕೊನೆಯವರೆಗೂ ಹುಲ್ಲು ಕಂಡಾಗಲೆಲ್ಲ ಎದ್ದು ಎದ್ದು ಇಣುಕುತ್ತಲೇ ಇದ್ದೆ.

ಮುಂದಿನ ಸಲ ಜಂಬೂ ಸವಾರಿ ಮಾಡಿ ಹುಲಿಯನ್ನು ನೋಡೇ ನೋಡುತ್ತೇನೆಂದು ನಿರ್ಧರಿಸಿ ವಾಪಸ್ ಹೊರಟೆವು.

ಚಿತ್ರಗಳು : ಗಣೇಶ ಕೆಳಮನೆ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !