ಮಾತಿಗೆ ತಪ್ಪಿದ ಕಾಂಗ್ರೆಸ್ಸಿಗರು; ಕಲಬುರ್ಗಿ

ಮಂಗಳವಾರ, ಏಪ್ರಿಲ್ 23, 2019
33 °C

ಮಾತಿಗೆ ತಪ್ಪಿದ ಕಾಂಗ್ರೆಸ್ಸಿಗರು; ಕಲಬುರ್ಗಿ

Published:
Updated:

ವಿಜಯಪುರ: ‘ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಪ್ರತಿ ವರ್ಷ ₹ 10,000 ಕೋಟಿ ನೀಡುತ್ತೇವೆ ಎಂದು ಕೂಡಲಸಂಗಮದಲ್ಲಿ ಸಂಗಮನಾಥನ ಮೇಲೆ ಪ್ರಮಾಣ ಮಾಡಿದ್ದ ಕಾಂಗ್ರೆಸ್ಸಿಗರು ಮಾತಿಗೆ ತಪ್ಪಿದವರು’ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಪಂಚಪ್ಪ ಕಲಬುರ್ಗಿ ಕಿಡಿಕಾರಿದರು.

‘ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ದಕ್ಷಿಣ ಕರ್ನಾಟಕದ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರು ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲು ಮೀನ–ಮೇಷ ಎಣಿಸುತ್ತಿದ್ದಾರೆ’ ಎಂದು ಭಾನುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

‘ಕೇಂದ್ರದ ಎಫ್‌ಆರ್‌ಪಿ ಮಾರ್ಗಸೂಚಿಯಂತೆ ರಾಜ್ಯದ ಯಾವೊಂದು ಸಕ್ಕರೆ ಕಾರ್ಖಾನೆ ರೈತರಿಗೆ ಬಿಲ್ ನೀಡುತ್ತಿಲ್ಲ. ಜವಾಬ್ದಾರಿ ನಿಭಾಯಿಸಬೇಕಿರುವ ಸಕ್ಕರೆ ಆಯುಕ್ತರು ನಿರ್ಜೀವವಾಗಿದ್ದಾರೆ’ ಎಂದು ಪಂಚಪ್ಪ ಗುಡುಗಿದರು.

‘ಬಿಜೆಪಿ ಸ್ವಾಮಿನಾಥನ್‌ ಆಯೋಗದ ವರದಿಗೆ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಹಲವು ಕ್ರಮ ಕೈಗೊಂಡಿದೆ. 2022ರೊಳಗೆ ರೈತರು ಬೆಳೆದ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗಲಿದೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ ಮಾತನಾಡಿ ‘ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ರೈತ ಸ್ನೇಹಿಯಾಗಿ ಅನೇಕ ಯೋಜನೆ ಅನುಷ್ಠಾನಗೊಳಿಸಿದೆ. ಬೆಳೆಗಳಿಗೆ ಬೆಂಬಲ ಬೆಲೆ, ವಿಮೆ... ಹೀಗೆ ಅನೇಕ ಕಾರ್ಯ ಯೋಜನೆಯನ್ನು ಅನುಷ್ಠಾನಗೊಳಿಸಿದೆ’ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಗರಾಜ ದೇಸಾಯಿ, ವಿವೇಕಾನಂದ ಡಬ್ಬಿ, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ವಾಲಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !