ಅಬಕಾರಿ ದಾಳಿ: ಕಳ್ಳಬಟ್ಟಿ ವಶ

7

ಅಬಕಾರಿ ದಾಳಿ: ಕಳ್ಳಬಟ್ಟಿ ವಶ

Published:
Updated:
Prajavani

ನಿಡಗುಂದಿ: ಇಲ್ಲಿನ ತಾಂಡಾದ ಹೊರ ವಲಯದಲ್ಲಿನ ಜಾಲಿ ಕಂಟಿಯಲ್ಲಿ ಶುಕ್ರವಾರ 22 ಲೀಟರ್ ಕಳ್ಳಬಟ್ಟಿ ಹಾಗೂ 100 ಲೀಟರ್‌ ಬೆಲ್ಲದ ರಸಾಯನವನ್ನು, ದೇವಲಾಪುರ ಗ್ರಾಮದಲ್ಲಿ ನಾಲ್ಕು ಲೀಟರ್ ಕಳ್ಳಬಟ್ಟಿ ಹಾಗೂ 30 ಲೀಟರ್ ಬೆಲ್ಲದ ರಸಾಯನ ಜಪ್ತು ಮಾಡಲಾಯಿತು. 

ತಾಂಡಾ ಸಮೀಪ ಗುರುವಾರ ಯುವಕನೊಬ್ಬ ಕೊಲೆಯಾದ ಹಿನ್ನೆಲೆಯಲ್ಲಿ ಅಬಕಾರಿ ಉಪ ಆಯುಕ್ತ ಎ. ರವಿಶಂಕರ ನೇತೃತ್ವದಲ್ಲಿ ನಿಡಗುಂದಿ ತಾಂಡಾ, ದೇವಲಾಪುರ ಸೇರಿದಂತೆ ನಾನಾ ಕಡೆ ದಾಳಿ ನಡೆಯಿತು.

ಕಳೆದ ವರ್ಷ ಕಳ್ಳಬಟ್ಟಿ ಕುಡಿದು ವ್ಯಕ್ತಿಯೊಬ್ಬ ಮೃತಪಟ್ಟಾಗ, ನಿಡಗುಂದಿ ಗ್ರಾಮದ ನೂರಾರು ಮಹಿಳೆಯರು ಕಳ್ಳಬಟ್ಟಿ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಆಗ ಅಬಕಾರಿ ಅಧಿಕಾರಿಗಳು ಸಾಥ್‌ ನೀಡಿದ್ದರು. ಕೆಲ ದಿನ ಮಾತ್ರ ಸ್ಥಗಿತಗೊಂಡಿದ್ದ ಕಳ್ಳಬಟ್ಟಿ ದಂಧೆ ಕೆಲದಿನಗಳ ನಂತರ ಮತ್ತೆ ಆರಂಭಗೊಂಡಿತ್ತು. ಹಾಗೂ ಮಾರಾಟ ಅವ್ಯಾಹತವಾಗಿ ನಡೆದಿತ್ತು. ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯನ್ನು ಗುರುವಾರ ಕೊಲೆ ಮಾಡಲಾಗಿತ್ತು. ಹೀಗಾಗಿ ಶುಕ್ರವಾರ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದರು. ಆದರೆ ಮಾರಾಟ ಮಾಡುವ ಯಾರೊಬ್ಬರು ಪೊಲೀಸರ ಕೈಗೆ ಸಿಗಲಿಲ್ಲ.

ನಿಡಗುಂದಿ ತಾಂಡಾದಲ್ಲಿ ಗ್ರಾಮಸಭೆ ನಡೆಸಿದ ಎ.ರವಿಶಂಕರ ಮಾತನಾಡಿ, ‘ಕಳ್ಳಬಟ್ಟಿ ಕುಡಿತದಿಂದ ಆರೋಗ್ಯ ಹದಗೆಡುವುದಲ್ಲದೇ, ಆತನ ಕುಟುಂಬದ ಆರ್ಥಿಕ ಪರಿಸ್ಥಿತಿ ಹಾಳಾಗಿ, ಕುಟುಂಬವೇ ಬೀದಿಗೆ ಬರುತ್ತದೆ, ಕಳ್ಳಬಟ್ಟಿ ಮಾರಾಟ ಮಾಡುವಾಗ ಬಂಧನವಾದರೆ ಜೈಲೇ ಗತಿಯಾಗಲಿದೆ. ಕಳ್ಳಬಟ್ಟಿ ಮಾರಾಟ ಮಾಡುವ ಯಾರೇ ಸಿಕ್ಕರೂ ಬಂಧಿಸದೇ ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಇನ್ನೂ ಮುಂದೆ ತಾಂಡಾದಲ್ಲಿ ಕಳ್ಳಬಟ್ಟಿ ತಯಾರಿಕೆ, ಮಾರಾಟ ನಡೆಸಿದರೆ ತಾವೇ ಪೊಲೀಸರಿಗೆ ತಿಳಿಸುವುದಾಗಿ ತಾಂಡಾದ ಹಲವು ಯುವಕರು ಪ್ರತಿಜ್ಞೆ ಮಾಡಿದರು.

ದಾಳಿಯಲ್ಲಿ ಅಬಕಾರಿ ಅಧಿಕಾರಿಗಳಾಗದ ಜಗದೀಶ ಇನಾಮದಾರ, ಎ.ಎ.ಮುಜಾವರ, ಸಿಪಿಐ ರಾಜು ಎಚ್ ಗೊಂಡೆ, ಬಸವರಾಜ ಕಿತ್ತೂರ, ಹಾಗೂ ನಿಡಗುಂದಿ ಪಿಎಸ್ಐ ಬಸವರಾಜ ಬಿಸನಕೊಪ್ಪ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !