ವಿಶ್ವರೂಪಂ-2: ತಂತ್ರ ಕೌಶಲದ ಬೆಳಕು, ಸಡಿಲ ಶಿಲ್ಪದ ಕತ್ತಲು

7
ಅಭಿನಯದಲ್ಲಿ ಕಮಲ ಹಾಸನ್ ಲಾಲಿತ್ಯ

ವಿಶ್ವರೂಪಂ-2: ತಂತ್ರ ಕೌಶಲದ ಬೆಳಕು, ಸಡಿಲ ಶಿಲ್ಪದ ಕತ್ತಲು

Published:
Updated:

ಚಿತ್ರ: ವಿಶ್ವರೂಪಂ 2 (ತೆಲುಗು ಡಬ್ ಆದ ಆವೃತ್ತಿ)
ನಿರ್ಮಾಣ, ನಿರ್ದೇಶನ: ಕಮಲ ಹಾಸನ್
ತಾರಾಗಣ: ಕಮಲ ಹಾಸನ್‌, ರಾಹುಲ್‌ ಬೋಸ್‌, ಪೂಜಾ ಕುಮಾರ್, ಆ್ಯಂಡ್ರಿಯಾ ಜೆರೆಮಿಯಾ, ಶೇಖರ್‌ ಕಪೂರ್‌, ವಹೀದಾ ರೆಹಮಾನ್

ಒಂದು ಬಿಂದುವಿನಿಂದ ಉಪಕಥೆ ಶುರುವಾಗುತ್ತದೆ. ಅದು ಈ ಕ್ಷಣ ನಮಗೆ ಕಾಣುತ್ತಿರುವ ಬಿಂದುವಿಗೆ ಬಂದು ಕೂಡುತ್ತದೆ. ಮತ್ತೆ ಆ ಬಿಂದುವಿನಿಂದ ಇನ್ನೊಂದು ಉಪಕಥೆಯ ಗೆರೆ ಎಳೆಯುವ ಉಮೇದು. ಹೀಗೆ ಅನನುಕ್ರಮಣಿಕೆಯ ಮಾದರಿಯಲ್ಲಿ (ನಾನ್‌ ಲೀನಿಯಾರ್ ನರೇಷನ್) ಕಮಲ ಹಾಸನ್ ಭಯೋತ್ಪಾದಕರ ಕಥೆಗೊಂದು ಪೂರ್ಣವಿರಾಮ ಹಾಕಿದ್ದಾರೆ. ಅವರ ಬಿಂದುವಿನಾಟ ಹಾಗೂ ಪೂರ್ಣವಿರಾಮ ಕೊಡುವ ತಾತ್ವಿಕ ಚಿಂತನೆ ನೋಡುಗರ ತಾಳ್ಮೆಯನ್ನು ಪದೇ ಪದೇ ಪರೀಕ್ಷೆಗೊಡ್ಡಿದೆ.

ಅಲ್‌ ಖೈದಾ ಉಗ್ರ ಒಮರ್‌ ಸೇಡಿನ ಕಥಾನಕವನ್ನು 2013ರ ತಮ್ಮ ಮೊದಲ ಭಾಗದ ಸಿನಿಮಾದಿಂದ ಕಮಲ್ ಮುಂದುವರಿಸಿದ್ದಾರೆ. ಹಳೆ ಭಾಗಗಳ ಮುಚ್ಚಟೆ ಹಾಗೂ ಹೊಸ ಆವೃತ್ತಿಯ ಸಾಧ್ಯತೆಯನ್ನು ಒಟ್ಟಿಗೆ ಬೆಸೆಯುವುದು ಅವರ ಉದ್ದೇಶ. ತಾಂತ್ರಿಕ ಕುಶಲತೆ ಇದ್ದೂ ಅಸ್ಥಿರವಾದ ದೃಶ್ಯ ಸಂಯೋಜನೆಯಿಂದಾಗಿ ಸಿನಿಮಾ ಅಸ್ತವ್ಯಸ್ತವಾಗಿ ರೂಪುಗೊಂಡಿದೆ. ಮೊದಲ ಭಾಗದಲ್ಲಿದ್ದ ರಾಹುಲ್ ಬೋಸ್ ಅಭಿನಯ ತೀವ್ರತೆಯಾಗಲೀ ಕಮಲ ಹಾಸನ್ ಪಾತ್ರದ ಸಂಶೋಧನೆಯ ರೂಹು ಆಗಲೀ ಮುಂದುವರಿದ ಈ ಭಾಗದಲ್ಲಿ ನಾಪತ್ತೆಯಾಗಿದೆ. ತಂತ್ರ ಕೌಶಲ ಮುಂದಾಗಿರುವುದೇ ಶಿಲ್ಪ ಸಡಿಲಗೊಳ್ಳಲು ಕಾರಣವಿದ್ದರೂ ಇರಬಹುದು.

ಮಹೇಶ್‌ ನಾರಾಯಣ್‌ ಹಾಗೂ ವಿಜಯ್‌ ಶಂಕರ್ ಸಂಕಲನದ ಶ್ರಮ ಸಿನಿಮಾ ಕಟ್ಟುವಿಕೆಯಲ್ಲಿ ಹೆಚ್ಚೇ ಇದೆ. ಸಾನು ವರ್ಗೀಸ್‌, ಶಮ್ದಾತ್‌ ಶೈನುದ್ದೀನ್ ಸಿನಿಮಾಟೊಗ್ರಫಿಯ ಕಣ್ಕಟ್ಟಿಗೆ ಅಂಕ ಸಲ್ಲಬೇಕು. ಮೊಹಮ್ಮದ್ ಘಿಬ್ರನ್‌ ಸಂಗೀತದಲ್ಲಿ ಗಾಢವಾಗಿ ಕಾಡುವ ಮೌನ ಮೆಚ್ಚಿಕೊಳ್ಳದೇ ಇರಲೂ ಕಾರಣಗಳಿಲ್ಲ. ಶಾಟ್‌ಗಳ ಸಂಯೋಜನೆಯಲ್ಲಿನ ತಾಂತ್ರಕ ಜಾಣ್ಮೆಯನ್ನು ಕಥನದ ಓಘ ಕಾಯ್ದುಕೊಳ್ಳುವುದಕ್ಕೂ ಹೆಚ್ಚು ವಿನಿಯೋಗಿಸಬೇಕಿತ್ತು. ಬಿಡಿ ಬಿಡಿ ದೃಶ್ಯಗಳಲ್ಲಿ ಕಾಣುವ ನೇಯ್ಗೆಯಲ್ಲಿನ ಸಾವಧಾನ ಮೆಚ್ಚಿಕೊಳ್ಳಬಹುದು. ಹೀಗಿದ್ದೂ ಬಂಧವಿಲ್ಲದೇ ಇರುವುದರಿಂದ ಇದನ್ನು ದುರ್ಬಲ ಸಿನಿಮಾ ಎನ್ನದೆ ವಿಧಿಯಿಲ್ಲ.

ಇದು ಥ್ರಿಲ್ಲರ್. ಸಸ್ಪೆನ್ಸ್‌ ಥ್ರಿಲ್ಲರ್‌ ಆಗಿಯೂ ಅಲ್ಲಲ್ಲಿ ಪ್ರಕಟಗೊಳ್ಳುತ್ತದೆ. ಸಾವಧಾನದಿಂದ ತಣ್ಣಗೆ ಕಾಣುತ್ತಲೇ ದಿಢೀರನೆ ‘ಶಾಕ್’ ಕೊಡುವಂಥ ಪ್ರಕರಣಗಳನ್ನು ಸೃಷ್ಟಿಸಲಾಗಿದೆ. ಇಂಥ ಪ್ರಕರಣಗಳು ಸಿನಿಮಾದಲ್ಲಿನ ಮಹತ್ವದ ತಿರುವುಗಳಾಗುವುದಿಲ್ಲ. ಸ್ಫುರಿಸುವ ಭಾವವನ್ನು ಸ್ಥಿರವಾಗಿ ಕಾಯ್ದಿಟ್ಟುಕೊಳ್ಳುವ ಹೆಣಿಗೆ ಕೂಡ ದೃಶ್ಯಗಳ ಅನನುಕ್ರಮಣಿಕೆ ತಂತ್ರಕ್ಕೆ ಒದಗಿಬಂದಿಲ್ಲ.

ಅಭಿನಯದಲ್ಲಿ ಕಮಲ ಹಾಸನ್ ಲಾಲಿತ್ಯ ಮುಂದುವರಿದಿದೆ. ಸಿನಿಮಾವನ್ನು ಸಂಪೂರ್ಣ ಅವರೇ ಆವರಿಸಿಕೊಳ್ಳುವಂತೆ ಶಾಟ್‌ಗಳ ಸಂಯೋಜನೆ ಮಾಡಲಾಗಿದೆ. ಚೂಪು ಮೂಗಿನ ಆ್ಯಂಡ್ರಿಯಾ ಜೆರೆಮಿಯಾ ಪಾತ್ರದ ತೂಕವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇತ್ತು. ಇರುವ ಅವಕಾಶದಲ್ಲಿ ಅವರು ಹೆಚ್ಚೇ ಮಿಂಚಿದ್ದಾರೆ. ಸಿನಿಮಾದಲ್ಲಿ ಗೊಂದಲಕ್ಕೀಡಾದ ಪಾತ್ರವಾಗಿಯೇ ಪ್ರಕಟಗೊಳ್ಳುವ ಆ್ಯಂಡ್ರಿಯಾ ಜೆರೆಮಿಯಾ ಅಭಿನಯದಲ್ಲಿ ತಿಣುಕಾಟವಿದೆ. ವಹೀದಾ ರೆಹಮಾನ್ ಚಿಕ್ಕ ಪಾತ್ರದಲ್ಲಿಯೇ ಗಮನ ಸೆಳೆದಿದ್ದಾರೆ. ರಾಹುಲ್‌ ಬೋಸ್‌ ಪಾತ್ರ ಈ ಭಾಗದಲ್ಲಿ ತೀರಾ ತೆಳುವಾಗಿದೆ. ಶೇಖರ್‌ ಕಪೂರ್‌ ಕೂಡ ಅಧಿಕಾರಿಯಾಗಿ ಮನದಲ್ಲಿ ಉಳಿಯುವುದಿಲ್ಲ.

ಅಗತ್ಯಕ್ಕಿಂತ ಹೆಚ್ಚೇ ಜಾಣ್ಮೆ ಪ್ರದರ್ಶಿಸಲು ಹೋಗಿ ಕಮಲ್‌ ಅವರಿಗೆ ಎದುರಾಗಿರಬಹುದಾದ ಬಿಕ್ಕಟ್ಟುಗಳು ಸಿನಿಮಾ ಭಿತ್ತಿಯ ಮೇಲೂ ಉಳಿದುಬಿಟ್ಟಿವೆ. ಇಷ್ಟಾಗಿ ಸಾಹಸ ಸಂಯೋಜನೆ, ಸಂಕಲನ ಹಾಗೂ ದೃಶ್ಯ ತೀವ್ರತೆಯ ಕೌಶಲಕ್ಕೆ ಶಹಬ್ಬಾಸ್‌ ಹೇಳಬೇಕು.

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !