ಸಾಮಾಜಿಕ ಒಳನೋಟ ನೀಡಿದ ಕನಕ

7
ಕನಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿ ಕೆ.ಮರುಳಸಿದ್ದಪ್ಪ ಅಭಿಮತ

ಸಾಮಾಜಿಕ ಒಳನೋಟ ನೀಡಿದ ಕನಕ

Published:
Updated:
Prajavani

ಬೆಂಗಳೂರು: ‘ಕನಕದಾಸರು ಕರುಣೆಯ ಕಣ್ಣನ್ನು ಹೊಂದಿದ್ದರು. ತಮ್ಮ ಕೃತಿಗಳ ಮೂಲಕ ಸಾಮಾಜಿಕ ಒಳನೋಟವನ್ನು ನಾಡಿಗೆ ಒದಗಿಸಿದರು’ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಮರುಳಸಿದ್ದಪ್ಪ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕನಕ ಗೌರವ ಮತ್ತು ಕನಕ ಯುವ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಾರಸ್ವತ ಲೋಕದ ಇತಿಹಾಸದಲ್ಲಿಯೇ ತಳಸಮುದಾಯದಿಂದ ಬಂದ ಶ್ರೇಷ್ಠ ಕವಿ ಕನಕದಾಸ. ಅವರು ಅಂದಿನ ಜ್ವಲಂತ ಸಮಸ್ಯೆಗಳನ್ನು ರೂಪಕಗಳ ಮೂಲಕ ‘ರಾಮಧಾನ್ಯ ಚರಿತೆ’ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅದು ಎಲ್ಲಾ ಸಂವೇದನೆಗಳನ್ನು ಒಳಗೊಂಡಿದೆ’ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಚ್‌.ಜಯಪ್ರಕಾಶ ಶೆಟ್ಟಿ, ‘ಅನ್ನದ ಮೇಲೆ ಆಕ್ರಮಣ ನಡೆಯುತ್ತಿರುವ ಈ ಸಂದರ್ಭದಲ್ಲಿ ಕನಕರ ರಾಮಧಾನ್ಯ ಚರಿತೆ ಮುಖ್ಯವಾಗುತ್ತದೆ’ ಎಂದರು.

‘ಜನರ ಮಾತನ್ನು ಕೇಳಿಸಿಕೊಳ್ಳ ಬೇಕಾದ ಇಂದಿನ ಪ್ರಭುತ್ವ, ಕಿವಿ ಕಳೆದುಕೊಂಡಿದೆ. ಆದ್ದರಿಂದ ಬೇರೆ ರೀತಿಯಾಗಿ ಕನಕದಾಸರನ್ನು ಶಾಲಾ ಮಕ್ಕಳ ಬಳಿ ತೆಗೆದುಕೊಂಡು ಹೋಗಬೇಕಾದ ತುರ್ತು ಇದೆ. ಅದರ ಕುರಿತು ಯೋಚಿಸಬೇಕಿದೆ’ ಎಂದು ಹೇಳಿದರು.

‘ಕನಕ ಸಾಹಿತ್ಯ ಲೋಕ’ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಪ್ರೌಢಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಪ್ರಶಸ್ತಿ ಪ್ರದಾನ

ಕನಕದಾಸರ ಶ್ರೀಹರಿಭಕ್ತಿಸಾರದ 108 ಪದ್ಯಗಳ ಮೇಲೆ ವ್ಯಾಖ್ಯಾನ ಬರೆದ ಎಂ.ಆರ್‌.ಸತ್ಯನಾರಾಯಣ ಅವರಿಗೆ ಕನಕ ಗೌರವ ಮತ್ತು ಕನಕದಾಸರ ಚಿಂತನೆಗಳನ್ನು ವರ್ತಮಾನದ ಸಂವೇದನೆಗಳಿಗೆ ಒಳಪಡಿಸಿದ ಎಚ್‌.ಜಯಪ್ರಕಾಶ ಶೆಟ್ಟಿಯವರಿಗೆ ಯುವ ಪುರಸ್ಕಾರ ಪ್ರದಾನ ಮಾಡಲಾಯಿತು.

ಕನಕ ಗೌರವ ಪ್ರಶಸ್ತಿ ₹75,000 ನಗದು, ಪ್ರಶಸ್ತಿ ಫಲಕ ಮತ್ತು ಕನಕ ಯುವ ಪುರಸ್ಕಾರ ₹50,000 ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !