ಯೋಜನೆ ವಿರೋಧಿಗಳನ್ನು ಖಂಡತುಂಡವಾಗಿ ವಿರೋಧಿಸಿ: ಸಿದ್ದರಾಮಯ್ಯ ಸಲಹೆ

7
ಭಕ್ತ ಕನಕದಾಸರ 531ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನರಿಗೆ ಸಲಹೆ

ಯೋಜನೆ ವಿರೋಧಿಗಳನ್ನು ಖಂಡತುಂಡವಾಗಿ ವಿರೋಧಿಸಿ: ಸಿದ್ದರಾಮಯ್ಯ ಸಲಹೆ

Published:
Updated:
Prajavani

ಚಿಕ್ಕಬಳ್ಳಾಪುರ: ‘ಈ ಭಾಗದಲ್ಲಿ ಜಾರಿಯಾಗುತ್ತಿರುವ ನೀರಾವರಿ ಯೋಜನೆಗಳನ್ನು ವಿರೋಧಿಸುವವರು, ಅವುಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವವರ ಬಗ್ಗೆ ಚಿಕ್ಕಬಳ್ಳಾಪುರದ ಜನ ಎಚ್ಚರಿಕೆಯಿಂದ ಇರಬೇಕು. ಯೋಜನೆಗಳನ್ನು ವಿರೋಧಿಸುವವರನ್ನು ನೀವು ಖಂಡತುಂಡವಾಗಿ ವಿರೋಧಿಸಬೇಕು’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ಭಕ್ತ ಕನಕದಾಸರ 531ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚಿಕ್ಕಬಳ್ಳಾಪುರ, ಕೋಲಾರ ಹಿಂದುಳಿದ ಮತ್ತು ಮಳೆ ಆಶ್ರಿತ ಕೃಷಿ ಅವಲಂಬಿಸಿದ ರೈತರು ಹೆಚ್ಚಾಗಿರುವ ಜಿಲ್ಲೆಗಳು. ಇಲ್ಲಿ ಯಾವುದೇ ನದಿಗಳು ಹರಿಯುವುದಿಲ್ಲ. ಅಂತರ್ಜಲ ಪಾತಾಳಕ್ಕೆ ಹೋಗಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಅದಕ್ಕಾಗಿ ನಾನು ಎತ್ತಿನಹೊಳೆ, ತ್ಯಾಜ್ಯ ನೀರು ಸಂಸ್ಕರಿಸಿ ಕೆರೆ ತುಂಬುವ ಯೋಜನೆಗಳಿಗೆ ಆದ್ಯತೆ ಮೆರೆಗೆ ಮಂಜೂರಾತಿ ನೀಡಿದೆ’ ಎಂದು ತಿಳಿಸಿದರು.

‘ಕೆಲವರಿಗೆ ಈ ಯೋಜನೆಗಳು ಅನುಷ್ಠಾನಗೊಳ್ಳಬಾರದು ಎಂದು ಅಸೂಹೆ, ಹೊಟ್ಟೆಕಿಚ್ಚು ಇದೆಯೋ ನನಗೆ ಗೊತ್ತಿಲ್ಲ. ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗಳನ್ನು ತುಂಬಿಸಿದರೆ ಅಂತರ್ಜಲ ವಿಷಕಾರಿಯಾಗುತ್ತದೆ ಎಂದು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಅನೇಕ ದೇಶಗಳಲ್ಲಿ ತ್ಯಾಜ್ಯ ನೀರು ಸಂಸ್ಕರಿಸಿ ಕುಡಿಯಲು ಬಳಸುತ್ತಾರೆ. ಆದರೆ ನಾವು ಇಲ್ಲಿ ಕೆರೆ ತುಂಬಿಸಲು ಕೊಡುತ್ತಿದ್ದೇವೆ. ಅದಕ್ಕೂ ನಿಮಗೆ ತಡೆದುಕೊಳ್ಳಲು ಆಗುತ್ತಿಲ್ಲವಲ್ಲ’ ಎಂದು ಖಾರವಾಗಿ, ಯೋಜನೆ ವಿರೋಧಿಸುವವರನ್ನು ಪರೋಕ್ಷವಾಗಿ ಪ್ರಶ್ನಿಸಿದರು.

‘ನೀರಾವರಿ ಯೋಜನೆಗಳಿಗೆ ವಿರೋಧ ಮಾಡುವವರಿಗೆ ರೈತಸಂಘದವರು ಸರಿಯಾಗಿ ಹೇಳಿರಿ. ನಿಮ್ಮ ಕೆರೆಗಳಿಗೆ ನೀರು ತುಂಬಬೇಕು ಬೇಡವೆ? ಅಂತರ್ಜಲ ಹೆಚ್ಚಬೇಕು ಬೇಡವೆ? ಕೊಳವೆಬಾವಿಗಳಿಗೆ ನೀರು ಬರಬೇಕೋ ಬೇಡವೆ? ಆದರೆ ಯೋಜನೆಗಳನ್ನು ವಿರೋಧ ಮಾಡುತ್ತಾರಲ್ಲಾ, ಇದು ಪಾಪದ, ಜನವಿರೋಧಿ ಕೆಲಸ ಅಲ್ಲವೆ? ಜನಪರ ಕಾರ್ಯಕ್ರಮಗಳಿಗೆ ಯಾರೂ ವಿರೋಧಿಸಬಾರದು. ಸಂಸ್ಕರಿಸಿದ ನೀರಿನಿಂದ ಕೆಟ್ಟದಾಗುತ್ತದೆ ಎನ್ನುವಂತಿದ್ದರೆ ನಾವೇಕೆ ಆ ನೀರನ್ನು ಕೆರೆಗಳಿಗೆ ತುಂಬಿಸುತ್ತಿದ್ದೆವು’ ಎಂದು ಕೇಳಿದರು.

‘ಈ ಹಿಂದೆ ಇಂತಹ ಯೋಜನೆಗಳನ್ನು ಯಾರೂ ಮಾಡಿರಲಿಲ್ಲ. ಇದೀಗ ಜನಪರ ಕಾರ್ಯಕ್ರಮ ಮಾಡಿದಾಗ ವಿರೋಧಿಸುತ್ತಾರಲ್ಲ. ಇದು ನಿಮ್ಮ ಮನಸ್ಸಿನಲ್ಲಿ ಇರಲಿ. ಇವೆಲ್ಲ ಮತಕ್ಕಾಗಿ ತಂದ ಯೋಜನೆಗಳಲ್ಲ. ಈ ಭಾಗದ ಜನರಿಗೆ ಬದುಕು ಕಟ್ಟಿಕೊಡಬೇಕು ಎನ್ನುವ ಉದ್ದೇಶದಿಂದ ಮಾಡಿರುವ ಕಾರ್ಯಕ್ರಮಗಳು. ಅಧಿಕಾರ ಶಾಶ್ವತವಲ್ಲ. ಅದು ಸಿಕ್ಕಾಗ ನಾವು ಏನು ಮಾಡಿದ್ದೇವೆ ಎನ್ನುವುದು ಮುಖ್ಯ’ ಎಂದರು.

ಸಂಸದ ವೀರಪ್ಪ ಮೊಯಿಲಿ ಮಾತನಾಡಿ, ‘ಅಪ್ರತಿಮ ಮಹಾಕವಿಯಾಗಿದ್ದ ಕನಕದಾಸರು ವೇದ, ಪುರಾಣಗಳ ಆದರ್ಶಗಳನ್ನು ತಪ್ಪಾಗಿ ತಿಳಿದ ಜನರನ್ನು ವ್ಯವಸ್ಥೆ ಒಳಗೆ ತಿದ್ದಲು ಅವರು ಮಾಡಿದ ಪ್ರಯತ್ನ ಬಹುದೊಡ್ಡದು. ಆದ್ದರಿಂದ ಸಮ್ಮೇಳನ ಮಾಡಿದರೆ ಸಾಲದು ಅಂತಹ ಬಹುಮುಖ ಪ್ರತಿಭೆ ಸಾಮಾನ್ಯ ಜನರ ಹೃದಯಕ್ಕೆ ತಲುಪಬೇಕು. ಅವರ ಭಜನೆ, ಕೀರ್ತನೆ ಇಂದಿನ ಜನಜಾಗೃತಿಗೆ ಬಳಕೆಯಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಶಾಸಕ ಎಚ್‌.ಎಂ.ರೇವಣ್ಣ ಮಾತನಾಡಿ, ‘ಎರಡ್ಮೂರು ದಶಕಗಳ ಹಿಂದೆ ಕುರುಬರು ತಾವು ಕುರುಬರು ಎಂದು ಹೇಳಿಕೊಳ್ಳಲು ಕೀಳರಿಮೆ ಪಟ್ಟುಕೊಳ್ಳುತ್ತಿದ್ದರು. ಆದರೆ ಇವತ್ತು ಸಿದ್ದರಾಮಯ್ಯನವರ ಆಡಳಿತ ಮತ್ತು ಅವರು ಕೊಟ್ಟಂತಹ ಧೈರ್ಯದಿಂದ ಹೆಮ್ಮೆ, ಸ್ವಾಭಿಮಾನದಿಂದ ನಾವು ಕುರುಬರು ಎಂದು ಹೇಳಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗಿದೆ’ ಎಂದು ಹೇಳಿದರು.

ಶಾಸಕರಾದ ಭೈರತಿ ಬಸವರಾಜು, ಮುನಿರತ್ನ, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ನಗರಸಭೆ ಅಧ್ಯಕ್ಷ ಮುನಿಕೃಷ್ಣ, ಉಪಾಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ನಿರ್ದೇಶಕ ಆರ್‌.ಚಂದ್ರು, ಮುಖಂಡರಾದ ಹರ್ಷ ಮೊಯಿಲಿ, ಯಲುವಹಳ್ಳಿ ರಮೇಶ್‌, ಮುನಿಯಪ್ಪ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !