‘ಕಾಂಚನ’ ಹಿಂದಿ ರಿಮೇಕ್‌ನಲ್ಲಿ ಅಕ್ಷಯ್‌, ಕಿಯಾರಾ

ಸೋಮವಾರ, ಮೇ 27, 2019
29 °C

‘ಕಾಂಚನ’ ಹಿಂದಿ ರಿಮೇಕ್‌ನಲ್ಲಿ ಅಕ್ಷಯ್‌, ಕಿಯಾರಾ

Published:
Updated:
Prajavani

ತಮಿಳಿನ ಹಾರರ್ ಕಾಮಿಡಿ ಚಿತ್ರ ‘ಕಾಂಚನ’ ಹಿಂದಿಗೆ ರಿಮೇಕ್ ಆಗುವ ಸುದ್ದಿ ಹೊಸದೇನಲ್ಲ. ಹಿರಿಯ ನಟ ಅಕ್ಷಯ್‌ ಕುಮಾರ್‌ಗೆ ಜೋಡಿಯಾಗಿ ಕಿಯಾರಾ ಅಡ್ವಾನಿ ನಟಿಸಲಿರುವುದೂ ಗೊತ್ತಿರುವ ಸಂಗತಿ. ಆದರೆ ತಮಿಳಿಗಿಂತ ಹಿಂದಿ ಆವೃತ್ತಿಯಲ್ಲಿ ಮಹತ್ತರ ಬದಲಾವಣೆ ಇರಲಿದೆ ಎಂಬುದು ಹೊಸ ಸುದ್ದಿ. ತಮಿಳಿನ ಪ್ರಮುಖ ನಟ ಆರ್.ಮಾಧವನ್‌ ಕೂಡಾ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ.

ತಮಿಳಿನಲ್ಲಿ ಮೂರು ದೆವ್ವಗಳ ಹಿಡಿತದಲ್ಲಿ ಸಿಕ್ಕಿ ಒದ್ದಾಡುವ ಪಾತ್ರದಲ್ಲಿ ರಾಘವ ಲಾರೆನ್ಸ್‌ ನಟಿಸಿದ್ದರೆ ಅಕ್ಷಯ್ ಕುಮಾರ್‌ ಹೆಣ್ಣು ದೆವ್ವವೊಂದರ ಕೈಗೆ ಸಿಕ್ಕಿಹಾಕಿಕೊಳ್ಳಲಿದ್ದಾರೆ. ಆ ಹೆಣ್ಣು ದೆವ್ವ ಲಕ್ಷ್ಮೀ ಎಂಬ ಲಿಂಗಪರಿವರ್ತಿತೆಯದ್ದಾಗಿರುವ ಕಾರಣ ಅಕ್ಕಿ ಸಿನಿಮಾಕ್ಕೆ ಅದೇ ಶೀರ್ಷಿಕೆಯನ್ನು ಇಡಲಾಗಿದೆ. 

ತಮಿಳಿನಲ್ಲಿ ‘ಮೌನಿ 2’ ನಿರ್ದೇಶಿಸಿದ ರಾಘವ ಲಾರೆನ್ಸ್‌ ಅವರೇ ಅಕ್ಕಿ– ಕಿಯಾರಾ– ಮಾಧವನ್‌ಗೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಮೂಲ ಕತೆ– ಚಿತ್ರಕತೆ ಬರೆದ ಫರ್ಹಾದ್‌ ಸಾಮ್‌ಜಿ ಹಿಂದಿ ರಿಮೇಕ್‌ಗೆ ಚಿತ್ರಕತೆಯನ್ನು ಹೊಂದಿಸುತ್ತಿದ್ದು, ಹಿಂದಿ ಸಬ್‌ ಟೈಟಲ್‌ಗೆ ಹೊಂದುವಂತಹ ಪದಗಳನ್ನು ಜೋಡಿಸುತ್ತಿದ್ದಾರಂತೆ! 

ತಮಿಳಿನಲ್ಲಿ ಮುನಿ, ಕಾಂಚನ (ಮುನಿ 2), ಕಾಂಚನ 2 ಗಂಗಾ (ಮುನಿ 3) ಭಾರಿ ಯಶಸ್ಸು ಕಂಡಿದ್ದರೆ ಕಾಂಚನ–3 ಕಳೆದ ವಾರವಷ್ಟೇ ಬಿಡುಗಡೆಯಾಗಿದೆ. ಈ ಸರಣಿಯ ನಾಲ್ಕನೇ ಚಿತ್ರವಾದ ಕಾಂಚನ 3ಗೂ ಆರಂಭಿಕ ಪ್ರತಿಕ್ರಿಯೆ ಉತ್ತಮವಾಗಿಯೇ ಇದೆ. ಅಲ್ಲಿ ಲಿಂಗ ಪರಿವರ್ತಿತ ಮಹಿಳೆ ಲಕ್ಷ್ಮಿಯ ಪಾತ್ರದಲ್ಲಿ ಶರತ್ ಕುಮಾರ್‌ ಅಮೋಘವಾಗಿ ಅಭಿನಯಿಸಿದ್ದರು. ಈ ಪಾತ್ರಕ್ಕಾಗಿ ಮಾಧವನ್‌ ಸಹಿ ಹಾಕಿದ್ದಾರೆ ಎನ್ನಲಾಗುತ್ತಿದೆ ಆದರೆ ಸಂಜಯ್ ದತ್ ಅವರ ಬಳಿಯೂ ಮಾತುಕತೆ ನಡೆದಿದೆ ಎನ್ನಲಾಗಿದೆ. ಲಾರೆನ್ಸ್‌ ಮಾಡಿದ್ದ ನಾಯಕನಟನ ಪಾತ್ರವನ್ನು ಹಿಂದಿಯಲ್ಲಿ ಅಕ್ಕಿ ಮಾಡಲಿದ್ದಾರೆ.

ಕಿಯಾರಾ ಅಡ್ವಾನಿ ಅವರ ತಾರಾ ವರ್ಚಸ್ಸು ಮತ್ತು ಹಿಂದಿಯ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಹಿಂದಿ ಆವೃತ್ತಿಗೆ ಹೊಸ ಬಣ್ಣ ನೀಡಲಿದ್ದಾರೆ ನಿರ್ದೇಶಕರು. ಅಕ್ಷಯ್ ಕುಮಾರ್‌ ಪತ್ನಿಯ ಪಾತ್ರದಲ್ಲಿ ಕಿಯಾರಾ ಕಾಣಿಸಿಕೊಳ್ಳಲಿದ್ದಾರೆ. ಆದರೆ ಚಿತ್ರದಲ್ಲಿ ಬಹುಮುಖ್ಯ ಪಾತ್ರ ಅವರದ್ದಾಗಿರುತ್ತದೆ ಎಂದು ನಿರ್ದೇಶಕರು ಹೇಳುತ್ತಾರೆ.

ಅಕ್ಕಿಗೆ ಲಕ್ಷ್ಮೀಯ ದೆವ್ವ ಹಿಡಿದ ನಂತರದ ಸನ್ನಿವೇಶಗಳನ್ನು ಮೂಲ ಚಿತ್ರಕ್ಕಿಂತ ವಿಭಿನ್ನವಾಗಿ ಹಿಂದಿಯಲ್ಲಿ ತೆರೆಗೆ ತರಲಾಗುವುದು. ಈ ಟ್ವಿಸ್ಟ್‌ ಏನು ಎಂಬುದನ್ನು ಈಗಲೇ ಹೇಳಿದರೆ ಚಿತ್ರ ನೋಡಲು ಆಸಕ್ತಿ ಉಳಿಯಲಾರದು ಎಂದು ರಾಘವ ಲಾರೆನ್ಸ್‌ ವಿವರಣೆ ನೀಡುತ್ತಾರೆ.

ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಮುಂಬೈನ ಬೊರಿವಲಿಯಲ್ಲಿ ‘ಬಿಸ್ಮಿಲ್ಲಾ’ ಎಂಬ ಹಾಡಿನ ಚಿತ್ರೀಕರಣವೂ ನಡೆದಿದೆ. ಅದಕ್ಕೂ ಮೊದಲು ಅಕ್ಷಯ್‌ ಟ್ವೀಟ್ ಮಾಡಿ ‘ಲಕ್ಷ್ಮೀ’ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವ ವಿಷಯವನ್ನು ಹಂಚಿಕೊಂಡಿದ್ದರು. 

ಒಟ್ಟಿನಲ್ಲಿ ಅಕ್ಷಯ್‌ ಕುಮಾರ್‌ ಅವರನ್ನು ಮತ್ತೊಮ್ಮೆ ಹಾರರ್ ಕಾಮಿಡಿಯಲ್ಲಿ ನೋಡುವ ಅವಕಾಶ ಕೂಡಿಬಂದಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !