ಗುರುವಾರ , ಸೆಪ್ಟೆಂಬರ್ 24, 2020
27 °C
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ. ಸಿದ್ಧರಾಮಯ್ಯ ನೇತೃತ್ವದಲ್ಲಿ ಸಭೆ

ಬ್ಯಾಂಕುಗಳಲ್ಲಿ ಕನ್ನಡ: 15 ದಿನದಲ್ಲಿ ವರದಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ‘ಜಿಲ್ಲೆಯಲ್ಲಿರುವ ವಿವಿಧ ಬ್ಯಾಂಕುಗಳ 144 ಶಾಖೆಗಳಲ್ಲಿರುವ ಉದ್ಯೋಗಿಗಳಲ್ಲಿ ಎಷ್ಟು ಮಂದಿ ಕನ್ನಡಿಗರಿದ್ದಾರೆ? ಕನ್ನಡಿಗರೇತರರು ಎಷ್ಟು ಮಂದಿ ಇದ್ದಾರೆ? ಅವರಿಗೆ ಕನ್ನಡ ಕಲಿಸಲು ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ 15 ದಿನಗಳಲ್ಲಿ ವರದಿ ನೀಡಿ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು ಜಿಲ್ಲಾಧಿಕಾರಿ ಹಾಗೂ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಅವರಿಗೆ ಬುಧವಾರ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲೆಯ ಉನ್ನತ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆಸಿದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ಬ್ಯಾಂಕುಗಳಲ್ಲಿ ಕನ್ನಡ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ ಎಂಬ ದೂರು‌ಗಳ ಬಗ್ಗೆ ಪ್ರಸ್ತಾಪಿಸಿದ ಸಿದ್ಧರಾಮಯ್ಯ, ‘ಎಲ್ಲ ಬ್ಯಾಂಕುಗಳು ತ್ರಿಭಾಷಾ ಸೂತ್ರ ಪಾಲಿಸಬೇಕು. ಆದರೆ, 2015ರ ನಂತರ ಬ್ಯಾಂಕುಗಳಲ್ಲಿ ಕನ್ನಡದಲ್ಲಿ ವ್ಯವಹಾರ ನಡೆಯುತ್ತಿಲ್ಲ. ಇತ್ತೀಚೆಗೆ ವಿವಿಧ ಬ್ಯಾಂಕುಗಳು 18 ಸಾವಿರ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಂಡಿವೆ. ಇದರಲ್ಲಿ ನೇಮಕಾತಿ ಆದ ಕನ್ನಡಿಗರು 1,060 ಮಾತ್ರ’ ಎಂದರು.

ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಸುನಂದಾ ಮಾತನಾಡಿ, ‘ಬ್ಯಾಂಕುಗಳಲ್ಲಿ ಕನ್ನಡದಲ್ಲೂ ವ್ಯವಹಾರ ನಡೆಯುತ್ತಿದೆ’ ಎಂದರು.

ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ‘ಎಸ್‌ಬಿಐನಲ್ಲಿ ನಡೆಯುತ್ತಿರಬಹುದು. ಆದರೆ, ಖಾಸಗಿ ಬ್ಯಾಂಕುಗಳಲ್ಲಿ ಕನ್ನಡ ಅನುಷ್ಠಾನ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು’ ಎಂದು ಸೂಚಿಸಿದರು.

ಆರು ತಿಂಗಳ ತರಬೇತಿ: ಬ್ಯಾಂಕುಗಳಲ್ಲಿರುವ ಬಹುತೇಕ ಸಿಬ್ಬಂದಿಗೆ ಕನ್ನಡವೇ ಬರುವುದಿಲ್ಲ. ಹಿಂದಿಯಲ್ಲೇ ಮಾತನಾಡುತ್ತಾರೆ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ ಎಂದು ಕನ್ನಡ ಜಾಗೃತಿ ಸಮಿತಿಯ ಸದಸ್ಯರು ಅಧ್ಯಕ್ಷರ ಗಮನಸೆಳೆದರು.

ಸಿದ್ಧದರಾಮ‌ಯ್ಯ ಮಾತನಾಡಿ, ‘ಕನ್ನಡಿಗರಲ್ಲದವರು ಆರು ತಿಂಗಳ ಒಳಗಾಗಿ ಕನ್ನಡ ಕಲಿಯಬೇಕು ಎಂಬ ನಿಯಮ ಇದೆ. ಅವರಿಗಾಗಿ ಜಿಲ್ಲಾಡಳಿತ ವತಿಯಿಂದ ತರಬೇತಿ ಏರ್ಪಡಿಸಲು ಸಾಧ್ಯವೇ’ ಎಂದು ಕೇಳಿದರು.

‘ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ತರಬೇತಿ ನೀಡುವ ಪ್ರಯತ್ನ ನಡೆದಿತ್ತು. ಆದರೆ, ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‌ ಕುಮಾರ್‌ ಹೇಳಿದರು.

ಜಿಲ್ಲಾಧಿಕಾರಿ ಕಾವೇರಿ ಮಾತನಾಡಿ, ‘ಜಿಲ್ಲಾಡಳಿತ ವತಿಯಿಂದ ತರಬೇತಿ ಕೊಡಿಸುವ ಪ್ರಯತ್ನ ಮಾಡಬಹುದು’ ಎಂದರು.

‘ಆರು ತಿಂಗಳ ಒಳಗಾಗಿ ಬ್ಯಾಂಕ್‌ ಸಿಬ್ಬಂದಿ ಕನ್ನಡ ಕಲಿಯದಿದ್ದರೆ, ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕು’ ಎಂದು ಸಿದ್ಧರಾಮಯ್ಯ ಹೇಳಿದರು.

ಹೊರ ರಾಜ್ಯದವರಿಗೆ ಪರವಾನಗಿ: ಸಾರಿಗೆ ಇಲಾಖೆಯಲ್ಲಿ ಕನ್ನಡಿಗರು ಬಸ್‌ ಪರವಾನಗಿ ಪಡೆದು ಹೊರ ರಾಜ್ಯದವರಿಗೆ ಮಾರುತ್ತಿದ್ದಾರೆ. ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇಲಾಖೆಯೇ ಇದರಲ್ಲಿ ಶಾಮೀಲಾದಂತೆ ಕಾಣುತ್ತಿದೆ ಎಂದು ಸಿದ್ಧರಾಮಯ್ಯ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು, ‘19ರಂದು ಸಾರಿಗೆ ಪ್ರಾಧಿಕಾರದ ಸಭೆ ಕರೆದಿದ್ದೇವೆ. ಅದರಲ್ಲಿ ಈ ವಿಚಾರವನ್ನು ಚರ್ಚಿಸುತ್ತೇವೆ’ ಎಂದರು.

‘ಗಡಿ ಭಾಗದಲ್ಲಿ ಹೊರರಾಜ್ಯದವರಿಗೆ ಜಮೀನು ನೋಂದಣಿ ಮಾಡಿಕೊಡಲಾಗುತ್ತಿದೆ ಎಂಬ ದೂರು ಇದೆ. ಈ ಬಗ್ಗೆಯೂ ಕ್ರಮ ವಹಿಸಬೇಕು’ ಎಂದು ಸಿದ್ಧರಾಮಯ್ಯ ಸೂಚಿಸಿದರು.

ಗಿರವಿ ಅಂಗಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ: ‘ಸಹಕಾರ ಇಲಾಖೆಯ ಅಡಿಯಲ್ಲಿ ಬರುವ ಗಿರವಿ ಅಂಗಡಿಗಳ ಮಾಲೀಕರು ಕನ್ನಡದಲ್ಲಿ ವ್ಯವಹಾರದಲ್ಲಿ ಮಾಡುತ್ತಿಲ್ಲ. ರಸೀದಿ ಸೇರಿದಂತೆ ಎಲ್ಲ ದಾಖಲೆಗಳನ್ನು ಗುಜರಾತ್‌, ಮರಾಠಿ ಸೇರಿದಂತೆ ತಮ್ಮ ಮಾತೃಭಾಷೆಯಲ್ಲಿ ನಿರ್ವಹಿಸುತ್ತಾರೆ. ಇದರಿಂದ ಜನ ಸಾಮಾನ್ಯರು ವಂಚನೆಗೆ ಒಳಗಾಗುತ್ತಿದ್ದಾರೆ. ಬೇರೆ ರಾಜ್ಯಗಳ ಗಿರವಿ ಅಂಗಡಿಯವರು ಕನ್ನಡದಲ್ಲೇ ವ್ಯವಹರಿಸುವಂತೆ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಪ್ರಾಧಿಕಾರದ ಅಧ್ಯಕ್ಷರು ಹೇಳಿದರು.

ಪ್ರತಿಕ್ರಿಯೆ ನೀಡಬೇಕು: ‘ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಂದ ದೂರುಗಳಿಗೆ ವಿವರಣೆ ನೀಡುವಂತೆ ನಾವು ಪತ್ರ ಬರೆದರೂ, ಜಿಲ್ಲೆಯ ಇಲಾಖೆಗಳು ಸ್ಪಂದಿಸುತ್ತಿಲ್ಲ. ಈ ರೀತಿ ಆಗಬಾರದು’ ಎಂದು ಅವರು ಜಿಲ್ಲಾಧಿಕಾರಿಗೆ ಹೇಳಿದರು.

‘ಮುಂದಿನ ದಿನಗಳಲ್ಲಿ ಪ್ರತಿಕ್ರಿಯೆ ನೀಡುತ್ತೇವೆ’ ಎಂದು ಕಾವೇರಿ ಅವರು ಭರವಸೆ ನೀಡಿದರು. ಜೊತೆಗೆ, ‘ಪೂರ್ತಿ ವಿವರ ನೀಡಲು ಸಾಧ್ಯವಾಗದೇ ಹೋದರೂ 15 ದಿನಗಳಲ್ಲಿ ಮಧ್ಯಂತರ ವರದಿಯನ್ನು ಎಲ್ಲ ಇಲಾಖೆಗಳು ಕಡ್ಡಾಯವಾಗಿ ನೀಡಬೇಕು’ ಎಂದು ಅಧಿಕಾರಿಗಳಿಗೆ ಸಭೆಯಲ್ಲೇ ಸೂಚಿಸಿದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌. ಆನಂದ್‌,  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯರಾದ ಗಿರೀಶ್ ಪಟೇಲ್, ಪ್ರಭಾಕರ ಪಾಟೀಲ, ಕನ್ನಡ ಗಣಕ ಪರಿಷತ್ತು ಕಾರ್ಯದರ್ಶಿ ಜಿ ಎನ್ ನರಸಿಂಹ ಮೂರ್ತಿ, ಕನ್ನಡ‌ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಚೆನ್ನಪ್ಪ, ಕನ್ನಡ ಜಾಗೃತಿ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಸಭೆಗೂ ಮುನ್ನ ಸಿದ್ದರಾಮಯ್ಯ ಅವರು ಕನ್ನಡ ಪರ ಸಂಘಟನೆಗಳು, ಜಾಗೃತಿ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಿ ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನಕ್ಕಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.

ವೈದ್ಯಕೀಯ ಕಾಲೇಜಿನಲ್ಲಿ ಕನ್ನಡ ಇಲ್ಲ: ಅಸಮಾಧಾನ
ಚಾಮರಾಜನಗರ ವೈದ್ಯಕೀಯ ಕಾಲೇಜಿನ ಆಡಳಿತ ಮತ್ತು ವ್ಯವಹಾರದಲ್ಲಿ ಕನ್ನಡ ಸಮರ್ಪಕವಾಗಿ ಅನುಷ್ಠಾನ ಆಗದಿರುವ ಬಗ್ಗೆ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

‘ವೈದ್ಯಕೀಯ ಕಾಲೇಜಿಗೂ ಭೇಟಿ ನೀಡಿದ್ದೆವು. ಅಲ್ಲಿ ಕನ್ನಡ ವಾತಾವರಣ ಕಿಂಚಿತ್ತೂ ಇಲ್ಲ. ಕೆಲವು ಫಲಕಗಳನ್ನು ಕನ್ನಡದಲ್ಲಿ ಬರೆದಿರುವುದನ್ನು ಬಿಟ್ಟರೆ ಬೇರೆ ಎಲ್ಲವೂ ಇಂಗ್ಲಿಷ್‌ನಲ್ಲೇ ವ್ಯವಹಾರ ನಡೆಯುತ್ತಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

‘2019ರ ಫೆ.28ರವರೆಗೆ ಅವರಿಗೆ ಗಡುವು ನೀಡಲಾಗಿದೆ. ಅದರ ಒಳಗಾಗಿ ಕಾಲೇಜಿನ ವೆಬ್‌ಸೈಟ್‌ ಕನ್ನಡದಲ್ಲೇ ಇರಬೇಕು. ದೈನಂದಿನ ವ್ಯವಹಾರ ಕನ್ನಡದಲ್ಲೇ ನಡೆಯಬೇಕು ಎಂದು ಕಟ್ಟಿನಿಟ್ಟಿನ ಸೂಚನೆ ನೀಡಿದ್ದೇವೆ. ಆಸ್ಪತ್ರೆಯ ಆಡಳಿತ ಸಕಾರಾತ್ಮಕವಾಗಿ ಸ್ಪಂದಿಸಿದೆ’ ಎಂದರು.

‘ಬಿ.ಕೆ.ಬೋರಲಿಂಗಯ್ಯ ಅವರ ವರದಿ ಪ್ರಕಾರ, ವೈದ್ಯಕೀಯ ಕಾಲೇಜುಗಳಲ್ಲಿ ಎರಡು ಸೆಮಿಸ್ಟರ್‌ಗಳಲ್ಲಿ ಕನ್ನಡ ಬೋಧನೆ ಮಾಡಬೇಕು. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕೂಡ ಈ ಸಂಬಂಧ ಆದೇಶ ಹೊರಡಿಸಿದೆ. ಅದು ಕೂಡ ಇಲ್ಲಿ ಜಾರಿಗೆ ಬಂದಿಲ್ಲ’ ಎಂದು ಹೇಳಿದರು.

‘ನಿಗದಿತ ಗಡುವಿನೊಳಗೆ ಇದನ್ನು ಸರಿಪಡಿಸದಿದ್ದರೆ ಕಾಲೇಜಿನ ನಿರ್ದೇಶಕರು ಹಾಗೂ ವ್ಯವಸ್ಥಾಪಕರನ್ನು ನೇರ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದೇವೆ’ ಎಂದು ತಿಳಿಸಿದರು.

ಗಡಿ ಭಾಗದಲ್ಲಿರುವ ಶಾಲೆಗಳು, ಸಮುದಾಯ, ಕನ್ನಡ ಭವನಗಳ ದುಃಸ್ಥಿತಿ ಬಗ್ಗೆ ಪ್ರಸ್ತಾಪಿಸಿದ ಅವರು, ‘ಇವುಗಳ ದುರಸ್ತಿಗಾಗಿ ಗಡಿ ಅಭಿವೃದ್ಧಿ ಪ್ರಾಧಿಕಾರ ಅನುದಾನ ನೀಡಲು ಮುಂದಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಮನವಿ ಸಲ್ಲಿಸಬೇಕು’ ಎಂದರು.

ಶಾಲೆಗಳಲ್ಲಿ ಕನ್ನಡ ಬೋಧನೆ ಕಡ್ಡಾಯ
ಜಿಲ್ಲೆಯಲ್ಲಿರುವ ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಬೋಧನೆ ಮಾಡಲಾಗುತ್ತಿದೆಯೇ ಎಂಬುದರ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಮಂಜುಳಾ ಅವರಿಂದ ಮಾಹಿತಿ ಪಡೆದ ಸಿದ್ಧರಾಮಯ್ಯ, ಎಲ್ಲ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಡ್ಡಾಯವಾಗಿ ಬೋಧಿಸಲೇಬೇಕು ಎಂದು ಸೂಚಿಸಿದರು.

ಮಂಜುಳಾ ಮಾತನಾಡಿ, ‘ಹನೂರು ತಾಲ್ಲೂಕಿನ ಒಡೆಯರ ಪಾಳ್ಯದಲ್ಲಿರುವ ಟಿಬೆಟನ್‌ ಕಾಲನಿಯಲ್ಲಿ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಶಾಲೆಯೊಂದು ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ಕನ್ನಡ ಬೋಧಿಸಲಾಗುತ್ತಿಲ್ಲ. ಈ ಬಗ್ಗೆ ಅವರಿಗೆ ನೋಟಿಸ್‌ ನೀಡಲಾಗಿದೆ. ಅವರು ಒಂದು ತಿಂಗಳು ಸಮಯ ಕೇಳಿದ್ದಾರೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾಡಳಿತಕ್ಕೆ ಮೆಚ್ಚುಗೆ
ಜಿಲ್ಲಾಡಳಿತಕ್ಕೆ ಸಂಬಂಧಿಸಿದ ವೆಬ್‌ಸೈಟ್‌ಗಳನ್ನು ಕನ್ನಡೀಕರಣಗೊಳಿಸಿರುವುದಕ್ಕೆ ಜಿಲ್ಲಾಡಳಿತವನ್ನು ಸಿದ್ಧರಾಮಯ್ಯ ಅವರು ಶ್ಲಾಘಿಸಿದರು. ಪೊಲೀಸ್‌ ಇಲಾಖೆಯ ವೆಬ್‌ಸೈಟ್‌ ಸಂಪೂರ್ಣ ಇಂಗ್ಲಿಷ್‌ಮಯವಾಗಿರುವುದನ್ನು ಪ್ರಸ್ತಾಪಿಸಿದ ಅವರು, ಶೀಘ್ರವಾಗಿ ಕನ್ನಡದಲ್ಲೂ ವೆಬ್‌ಸೈಟ್‌ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು