‘ರಾಜಕೀಯ ಪಕ್ಷಗಳಲ್ಲ, ವಾಣಿಜ್ಯ ಮಳಿಗೆ’

7

‘ರಾಜಕೀಯ ಪಕ್ಷಗಳಲ್ಲ, ವಾಣಿಜ್ಯ ಮಳಿಗೆ’

Published:
Updated:
ಚಂದ್ರಶೇಖರ ಪಾಟೀಲ ಅವರಿಗೆ ‘ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ಪ್ರದಾನ’ ಮಾಡಲಾಯಿತು. ಚಂದ್ರಶೇಖರ ಪಾಟೀಲ ಅವರ ಪತ್ನಿ ನೀಳಾ, ಕನ್ನಡ ಜನಶಕ್ತಿ ಕೇಂದ್ರ ಅಧ್ಯಕ್ಷ ಸಿ.ಕೆ.ರಾಮೇಗೌಡ, ವೈ.ಎಸ್‌.ವಿ.ದತ್ತ, ಡಾ. ರಾಜೇಂದ್ರ ಚೆನ್ನಿ ಇದ್ದರು

ಬೆಂಗಳೂರು: ‘ಈಗಿರುವ ರಾಜಕೀಯ ಪಕ್ಷಗಳು ವಾಣಿಜ್ಯ ಮಳಿಗೆಗಳಾಗಿವೆ. ಕಪ್ಪು ಹಣ ಇರುವವರಿಗೆ ಟಿಕೆಟ್ ನೀಡುವ ಕಾಲವಿದು’ ಎಂದು ಹಿರಿಯ ರಾಜಕಾರಣಿ ಕೆ.ಆರ್.ಪೇಟೆ ಕೃಷ್ಣ ಬೇಸರ ವ್ಯಕ್ತಪಡಿಸಿದರು.

ಕನ್ನಡ ಜನಶಕ್ತಿ ಕೇಂದ್ರ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಚಂದ್ರಶೇಖರ ಪಾಟೀಲ ಅವರಿಗೆ ‘ಶಾಂತವೇರಿ ಗೋಪಾಲಗೌಡ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

‘ನಮ್ಮ ವ್ಯವಸ್ಥೆಯೇ ಹದಗೆಟ್ಟು ಹೋಗಿರುವಾಗ ಭಗವಂತನೇ ಬಂದು ಮುಖ್ಯಮಂತ್ರಿಯಾದರೂ ನಮ್ಮ ಅಧಿಕಾರಿಗಳು ಲಂಚ ಪಡೆಯುವುದನ್ನು ನಿಲ್ಲಿಸುವುದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ನಿಜವಾಗಲೂ ಬದ್ಧತೆ ಇದ್ದರೆ ಲೋಕಾಯುಕ್ತವನ್ನು ಬಲಗೊಳಿಸಬೇಕು. ಅದನ್ನು ಬಿಟ್ಟು ಅಳುವುದಲ್ಲ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ತಾವು ಪ್ರಾಮಾಣಿಕರು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅದರಿಂದ ಏನೂ ಪ್ರಯೋಜನವಿಲ್ಲ.  ಅವರ ಆಡಳಿತ ಹೇಗಿದೆ ಎಂಬುದು ಮುಖ್ಯ. ಅಣ್ಣಾ ಹಜಾರೆ ಪ್ರತಿಪಾದಿಸಿದ ಲೋಕಪಾಲ್ ಮಸೂದೆ ಜಾರಿಗೆ ತರಲು ಏಕೆ ಮೀನಾಮೇಷ ಎಣಿಸುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

ಜೆಡಿಎಸ್‌ ಮುಖಂಡ ವೈ.ಎಸ್‌.ವಿ. ದತ್ತ, ‘ಲಂಕೇಶ್, ಚಂಪಾ, ಯು.ಆರ್‌.ಅನಂತಮೂರ್ತಿಯಂತಹ ಲೇಖಕರ ಬರಹಗಳನ್ನು ಓದಿಕೊಂಡು ಬೆಳೆದಿದ್ದೇನೆ. ಚುನಾವಣೆಗೆ ನಿಂತು ಸೋತ ಬಳಿಕ ಕ್ಷೇತ್ರದ ಮತದಾರರಿಗೆ ಪತ್ರ ಬರೆದು ಬೇಸರ ವ್ಯಕ್ತಪಡಿಸಿದೆ. ಹಿಂದೆ ಕೆಜೆಪಿ ರಚನೆಯಾಗಿದ್ದರಿಂದ ಜಾತಿಗಳು ವಿಂಗಡಣೆಯಾಗಿತ್ತು. ಹಾಗಾಗಿ ನಾನು ಗೆದ್ದೆ. ಈ ಬಾರಿ ಅವೇ ಜಾತಿಗಳು ಒಂದಾಗಿದ್ದರಿಂದ ಸೋತೆ’ ಎಂದರು.

* ಸಮಾಜವಾದವನ್ನು ಚರ್ಚೆಗೂ ತೆಗೆದುಕೊಳ್ಳಲು ಹಿಂದೇಟು ಹಾಕುವ ಮನಸ್ಥಿತಿಗಳೊಂದಿಗೆ ನಾವು ಬದುಕುತ್ತಿದ್ದೇವೆ. ಜಾತಿ ರಾಜಕೀಯ ಎಲ್ಲೆಡೆ ಆವರಿಸಿದೆ
– ರಾಜೇಂದ್ರ ಚೆನ್ನಿ, ವಿಮರ್ಶಕ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !