ಕಾವೇರಿ ತೀರದ ಕನ್ನಡ ಪೂಜಾರಿ

7
ಕಾವೇರಿ ತೀರದ ಕನ್ನಡ ಪೂಜಾರಿ

ಕಾವೇರಿ ತೀರದ ಕನ್ನಡ ಪೂಜಾರಿ

Published:
Updated:
Deccan Herald

ಮನೆ ಎಂದ ಮೇಲೆ ಅಲ್ಲೊಂದು ದೇವರ ಮನೆ. ಆ ಮನೆಯಲ್ಲಿ ತಮ್ಮಿಷ್ಟದ ದೇವರಿಗೆ ಸ್ಥಾನ ಮೀಸಲಿಡುವುದು ವಾಡಿಕೆ. ಆದರೆ ಇಲ್ಲೊಬ್ಬರು ಕನ್ನಡ ಅಭಿಮಾನಿ ತಮ್ಮ ನಿವಾಸದ ದೇವರ ಮನೆಯಲ್ಲಿ ಎಲ್ಲ ದೇವರನ್ನು ಬಿಟ್ಟು ಕನ್ನಡ ರಾಜರಾಜೇಶ್ವರಿಯ ಭಾವಚಿತ್ರವಿಟ್ಟು ಆರಾಧಿಸುತ್ತಾ ಬಂದಿದ್ದಾರೆ!

ಮಂಡ್ಯ ಜಿಲ್ಲೆಯ ಗಡಿ ಭಾಗದಲ್ಲಿ, ಕೆಆರ್‌ಎಸ್‌ ಜಲಾಶಯದ ದಡದಲ್ಲಿರುವ ಕುಪ್ಪೆದಡ ಎಂಬ 40 ಮನೆಗಳ ಪುಟ್ಟ ಗ್ರಾಮದ ಎಂ. ಶಿವನಂಜು 25 ವರ್ಷಗಳಿಂದ, ಪ್ರತಿ ನಿತ್ಯ ‘ಕನ್ನಡ ಕುಲದೇವಿ’ಯನ್ನು ಆರಾಧಿಸುತ್ತಾರೆ. ‘ಕನ್ನಡವೇ ದೇವರು– ಕರ್ನಾಟಕವೇ ಉಸಿರು’ ಎಂಬುದು ಇವರ ಪಾಲಿಗೆ ಬೀಜ ಮಂತ್ರವಾಗಿದೆ. ಮುಂಜಾನೆ ಎದ್ದೊಡನೆ ರಾಜರಾಜೇಶ್ವರಿಯ ದರ್ಶನ ಪಡೆಯುತ್ತಾರೆ. ಹಣೆಯಲ್ಲಿ ಹಳದಿ– ಕೆಂಪು ತಿಲಕ ಮತ್ತು ಹೆಗಲ ಮೇಲೆ ಕನ್ನಡ ಶಾಲು ಶಿವನಂಜು ಅವರ ಹೆಗ್ಗುರುತು. ಮನೆಯಿಂದ ಹೊರಗೆ ಅಡಿಯಿಡುವ ಮುನ್ನ ದೇವರ ಮನೆಯಲ್ಲಿರುವ ಕನ್ನಡ ದೇವಿಗೆ ದೀಪ, ಧೂಪದಿಂದ ಪೂಜಿಸುತ್ತಾರೆ. ಇವರಿಗೆ ಮಾತ್ರವಲ್ಲ, ಪತ್ನಿ ಸುಧಾಮಣಿ, ಪುತ್ರ ಕೈಲಾಶ್‌ಗೂ ಕನ್ನಡಾಂಬೆಯೇ ಮನೆ ದೇವರು!

ಶಿವನಂಜು ಅವರದ್ದು 25/25 ಅಡಿ ಅಳತೆಯ ಸಾಧಾರಣ ಮನೆ. ಅದರ ಹೆಸರೇ ‘ಕನ್ನಡ ಮನೆ’. ಮನೆಯ ಬಣ್ಣವೂ ಕನ್ನಡ ಧ್ವಜದ ಬಣ್ಣ. ಮನೆ ಹೊಕ್ಕಿದರೆ ಎತ್ತ ನೋಡಿದರತ್ತ ಕನ್ನಡ, ಕನ್ನಡ, ಕನ್ನಡ. ಅಡುಗೆ ಮನೆ, ಮಲಗುವ ಕೋಣೆ, ಗ್ರಂಥಾಲಯ, ಹಜಾರ, ಛಾವಣಿ, ಕಿಟಕಿ, ಬಾಗಿಲುಗಳೂ ‘ಕನ್ನಡ ಧ್ವಜ’ದ ಹಳದಿ– ಕೆಂಪು ಬಣ್ಣದಿಂದ ಶೋಭಿಸುತ್ತಿವೆ. ನಾಲ್ಕೂ ದಿಕ್ಕಿನ ಗೋಡೆಗಳ ಮೇಲೆ ಕುವೆಂಪು, ಕಾರಂತ, ಬೇಂದ್ರೆ, ಬಸವಣ್ಣ, ಸರ್ವಜ್ಞ, ಕನಕದಾಸ ಇತರ ಕನ್ನಡ ಕವಿಪುಂಗವರ ಪ್ರಸಿದ್ಧ ಪ್ರೇರಕ ವಾಕ್ಯಗಳು ರಾರಾಜಿಸುತ್ತಿವೆ.

‍ಪ್ರತಿ ವರ್ಷ ನವೆಂಬರ್‌ ತಿಂಗಳ ಮೊದಲ ದಿನ ಕುಪ್ಪೆದಡ ಗ್ರಾಮದ ಪಾಲಿಗೆ ವಿಶೇಷ ದಿನ. ಅಂದು ಊರಿನಲ್ಲಿ ‘ಕನ್ನಡದ ಹಬ್ಬ’, ಜನರಲ್ಲಿ ಸಂಭ್ರಮವೋ ಸಂಭ್ರಮ. ಊರಿನ ದ್ವಾರವನ್ನು ತಳಿರು, ತೋರಣಗಳಿಂದ ಅಲಂಕರಿಸಲಾಗುತ್ತದೆ. ಶಿವನಂಜು ಅವರು ಇಡೀ ಊರಿನ ಜನರನ್ನು ತಮ್ಮ ಮನೆಗೆ ಕರೆದು ‘ಕನ್ನಡ ಹಬ್ಬ’ ಆಚರಿಸುತ್ತಾರೆ. ಕನ್ನಡ ಸಾಹಿತಿಗಳನ್ನು ಆಹ್ವಾನಿಸಿ ಕನ್ನಡ ಮತ್ತು ಕರ್ನಾಟಕದ ಮಹತ್ವದ ಬಗ್ಗೆ ಉಪನ್ಯಾಸ ಏರ್ಪಡಿಸುತ್ತಾರೆ. ಸ್ಥಳೀಯ ಸಾಧಕರನ್ನು ಸನ್ಮಾನಿಸಿ ಮನೆ ಮನೆಗೆ ಸಿಹಿ ಹಂಚುತ್ತಾರೆ.

ಕನ್ನಡ ಬಾವುಟ: ಕುಪ್ಪೆದಡದ ಈ ಕನ್ನಡ ಮನೆಯ ಮೇಲೆ ದಿನದ ಇಪ್ಪತ್ತ ನಾಲ್ಕು ಗಂಟೆಯೂ ಕನ್ನಡ ಬಾವುಟ ಹಾರಾಡುತ್ತಿರುತ್ತದೆ. ತಾಜಾತನ ಇರಲೆಂದು ವರ್ಷಕ್ಕೆ ಎರಡು, ಮೂರು ಬಾರಿ ಈ ಬಾವುಟವನ್ನು ಬದಲಿಸುತ್ತಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಶಿವನಂಜು ಅವರಿಗೆ ‘ಕನ್ನಡ ಶಾಲೆಗಳು ಉಳಿಯಬೇಕು’ ಎಂದು ಹಂಬಲವಿದೆ. ತಮ್ಮ ಮನೆಗೆ ಕೂಗಳತೆ ದೂರದಲ್ಲೇ ಕಣ್ಣು ಕುಕ್ಕುವಂತೆ ಖಾಸಗಿ ಶಾಲೆಗಳಿದ್ದರೂ ಶಿವನಂಜು ಮಗನನ್ನು ಸರ್ಕಾರಿ ಕನ್ನಡ ಶಾಲೆಯಲ್ಲಿಯೇ ಓದಿಸುತ್ತಿದ್ದಾರೆ.

ಕನ್ನಡ ಕೃತಿಗಳ ಭಂಡಾರ: ‘ಕನ್ನಡ ಮನೆ’ಯಲ್ಲಿ ಸುಮಾರು ಎರಡು ಸಾವಿರ ಕನ್ನಡ ಪುಸ್ತಕಗಳಿವೆ. ಭಗವದ್ಗೀತೆಯಿಂದ ಹಿಡಿದು ಕುವೆಂಪು ಅವರ ‘ಕಿಂದರ ಜೋಗಿ’ ವರೆಗೆ, ಬಸವಣ್ಣನ ವಚನ ಸಂಪುಟದಿಂದ ತ್ರಿವೇಣಿಯವರ ಕಾದಂಬರಿಯವರೆಗೆ ಅಪರೂಪದ ಕನ್ನಡ ಕೃತಿಗಳಿವೆ. ರಾಮಾಯಣ, ಮಹಾಭಾರತದಂತಹ ಬೃಹತ್‌ ಗ್ರಂಥಗಳು, ನಾಟಕಗಳು, ಕಥಾ ಸಂಕಲನ, ಕವನ ಸಂಕಲನ, ವಿಮರ್ಶೆ, ವ್ಯಕ್ತಿ ಚಿತ್ರ, ಕನ್ನಡ ಚಿತ್ರಗೀತೆ ಪುಸ್ತಕಗಳು, ಆತ್ಮಕತೆ, ಪ್ರವಾಸ ಕಥನ, ಶಬ್ದಕೋಶ, ಜಾನಪದ ಗೀತೆ, ಭಾವಗೀತೆ, ಭಕ್ತಿಗೀತೆ, ಅಪರೂಪದ ಕನ್ನಡ ಪತ್ರಿಕೆಗಳು ಈ ಕನ್ನಡ ಮನೆಯಲ್ಲಿ ಓದಲು ಸಿಗುತ್ತವೆ.

ಪ್ರಸಿದ್ಧ ಚಿತ್ರಗಳು: ಕನ್ನಡ ಸಾಹಿತಿಗಳು ಹಾಗೂ ಪ್ರಸಿದ್ಧ ಚಿತ್ರನಟರ ಚಿತ್ರಗಳು ಈ ಮನೆಯ ಕನ್ನಡತನವನ್ನು ಇಮ್ಮಡಿಗೊಳಿಸಿವೆ. ಮಂದಸ್ಮಿತ ಬೀರುವ ವರನಟ ಡಾ.ರಾಜಕುಮಾರ್‌ ಅವರ ಚಿತ್ರ ಕಣ್ಮನ ಸೆಳೆಯುತ್ತದೆ. ಶ್ರೀಕೃಷ್ಣದೇವರಾಯ, ಮದಕರಿನಾಯಕ, ಕಂಠೀರವ ನರಸರಾಜ ಒಡೆಯರ್‌, ನಟ ವಿಷ್ಣುವರ್ಧನ್‌, ಕುವೆಂಪು, ಕೈಲಾಸಂ, ಜಿ.ಪಿ. ರಾಜರತ್ನಂ, ಬೇಂದ್ರೆ, ಭೈರಪ್ಪ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಪ್ರೇಮ ಕವಿ ಕೆ.ಎಸ್‌. ನರಸಿಂಹಸ್ವಾಮಿ, ಪುತಿನ, ವಿ.ಕೃ. ಗೋಕಾಕ್‌, ಗಿರೀಶ್‌ ಕಾರ್ನಾಡ, ತ್ರಿವೇಣಿ ಮಾತ್ರವಲ್ಲದೆ ಕೀರ್ತನಕಾರರಾದ ಕನಕದಾಸ, ಪುರಂದರದಾಸರ ಚಿತ್ರಗಳು ಈ ಕನ್ನಡ ಮನೆಯ ಗೋಡೆಗಳನ್ನು ಅಲಂಕರಿಸಿವೆ.

ಕನ್ನಡ ಭಾಷೆ ಮತ್ತು ಕರ್ನಾಟಕದ ಮೇಲಿನ ತಮ್ಮ ಅಪರಿಮಿತ ಪ್ರೀತಿಯ ಬಗ್ಗೆ ಶಿವನಂಜು ಹೇಳುವುದು ಹೀಗೆ: ‘ತಾಯಿ, ತಾಯ್ನುಡಿ ಮತ್ತು ತಾಯ್ನೆಲ ಬೇರೆಯಲ್ಲ. ಅವ್ವನಿಂದ ಬಳುವಳಿಯಾಗಿ ಬಂದ ಕನ್ನಡ ಕೇವಲ ಭಾಷೆಯಲ್ಲ; ನನ್ನ ಪಾಲಿಗೆ ಅದೊಂದು ಜೀವನ ವಿಧಾನವೂ ಹೌದು. ಹಾಗಾಗಿ 1984ರಿಂದ ಕನ್ನಡ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದೇನೆ. ಕನ್ನಡ ಅತ್ಯಂತ ಸುಂದರ, ಸರಳ ಹಾಗೂ ಸುಲಲಿತ ಭಾಷೆ ಎಂದು ವಿದೇಶಿ ಭಾಷಾ ತಜ್ಞರೇ ಹೇಳಿದ್ದಾರೆ. ಹೀಗಿದ್ದರೂ ಕನ್ನಡಿಗರಲ್ಲಿ ಅನುಕರಣಾ ಪ್ರವೃತ್ತಿ ಹೆಚ್ಚುತ್ತಿದೆ. ನಗರ ಪ್ರದೇಶಗಳಲ್ಲಿ ಕನ್ನಡಿಗರೇ ಕನ್ನಡದಲ್ಲಿ ಮಾತನಾಡಲು ಹಿಂಜರಿಯುವ ಸ್ಥಿತಿ ಬಂದಿದೆ. ಕನ್ನಡ ಅಳಿದರೆ ಈ ನೆಲದ ಶ್ರೀಮಂತ ಸಂಸ್ಕೃತಿಯೂ ಅಳಿಯುತ್ತದೆ’ ಎಂದು ಎಚ್ಚರಿಕೆಯನ್ನೂ ನೀಡುತ್ತಾರೆ.

ಪ್ರಶಸ್ತಿ ಪುರಸ್ಕಾರ

ಶಿವನಂಜು ಅವರ ಅಪರಿಮಿತ ಕನ್ನಡಾಭಿಮಾನವನ್ನು ಗುರುತಿಸಿ ಮಂಡ್ಯ ಜಿಲ್ಲಾಡಳಿತ 2014ರಲ್ಲಿ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದೆ. ಬೆಂಗಳೂರಿನ ದಿಶಾ ಚಾರಿಟಬಲ್‌ ಟ್ರಸ್ಟ್‌ 2012ರಲ್ಲಿ ‘ಟಿಪ್ಪು ಸಲ್ತಾನ್‌ ರಾಜ್ಯ ಪ್ರಶಸ್ತಿ’ ನೀಡಿ ಪುರಸ್ಕರಿಸಿದೆ. 2010ರಲ್ಲಿ ತಾಲ್ಲೂಕು ಆಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು, ಕೆಆರ್‌ಎಸ್‌ ಕನ್ನಡ ಕೂಟ, ಬೆಳಗೊಳ ಗೆಳೆಯರ ಬಳಗ ಇತರ ಹತ್ತಾರು ಸಂಘ, ಸಂಸ್ಥೆಗಳು ಅವರನ್ನು ಅಭಿನಂದಿಸಿವೆ. ಸಂಪರ್ಕಕ್ಕೆ ಮೊ:9945419635.

ಚಿತ್ರಗಳು: ಲೇಖಕರವು

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !