ಗುರುವಾರ , ಡಿಸೆಂಬರ್ 12, 2019
26 °C
ಕನ್ನಡ ಮಾಸಾಚರಣೆ– ಕನ್ನಡ ಹಬ್ಬದ ಸಮಾರೋಪ

ಬಡವರನ್ನಾಗಿಸಲು ವ್ಯವಸ್ಥಿತ ಪಿತೂರಿ: ಗೊ.ರು.ಚನ್ನಬಸಪ್ಪ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೊಳ್ಳೇಗಾಲ: ದೇಶದಲ್ಲಿರುವ ರಾಜಕೀಯ ಪಕ್ಷಗಳ ಸ್ವಾರ್ಥದಿಂದ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚಾಗುತ್ತಿದೆ. ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡಲು ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಜನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಆತಂಕ ವ್ಯಕ್ತಪಡಿಸಿದರು.

ನಗರದ ಎಸ್.ವಿ.ಕೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜೆ.ಎಸ್.ಬಿ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಮಾಸಾಚರಣೆ– ಕನ್ನಡ ಹಬ್ಬದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಖಂಡ ಭಾರತ ನಿರ್ಮಾಣ ರಾಜಕಾರಣಿಗಳಿಗೆ ಬೇಕಾಗಿಲ್ಲ. ತಮ್ಮ ಮತ ಬ್ಯಾಂಕ್‍ಗೆ ಏನು ಬೇಕೋ ಅದನ್ನು ಮಾಡುತ್ತಿದ್ದಾರೆ ಎಂದು ದೂರಿದರು.

ರಾಜ್ಯದ ಯುವಕರು ಶಿಕ್ಷಣ ಪಡೆಯುವ ಜತೆಗೆ ಪ್ರಜ್ಞಾವಂತರಾಗಬೇಕು. ದೇಹ, ಬುದ್ಧಿ, ಮನಸ್ಸು ಒಟ್ಟಿಗೆ ಕೆಲಸ ಮಾಡಿದಾಗ ಮಾತ್ರ ಸಮನ್ವಯತೆ ಕಾಯ್ದುಕೊಳ್ಳಲು ಸಾಧ್ಯ. ಆದರೆ, ರಾಜಕಾರಣಿಗಳ ದೇಹ, ಬುದ್ಧಿ ಮತ್ತು ಮನಸ್ಸು ಒಟ್ಟಿಗೆ ಕೆಲಸ ಮಾಡದೆ ಇರುವುದರಿಂದ ಸಮನ್ವಯತೆ ಕೊರತೆ ಹೆಚ್ಚಾಗುತ್ತಿದೆ ಎಂದರು.

ಕನ್ನಡ ಅನ್ನ ಕೊಡುವ ಭಾಷೆ. ಕನ್ನಡ ನೆಲದಲ್ಲಿ ಕನ್ನಡವೇ ಪ್ರಧಾನ ಭಾಷೆಯಾಗಬೇಕು. ಆಡಳಿತವು ಸಹ ಸಂಪೂರ್ಣವಾಗಿ ಕನ್ನಡದಲ್ಲೇ ನಡೆಯಬೇಕು. ಪ್ರತಿಯೊಂದು ಮಗುವೂ ಕನ್ನಡ ಮಾಧ್ಯಮದಲ್ಲೇ ಅಭ್ಯಾಸ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಬಸವ ಕೇಂದ್ರದ ಬಸವಯೋಗಿ ಪ್ರಭು ಸ್ವಾಮೀಜಿ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಮಹದೇವಪ್ಪ, ಪ್ರಭಾರ ಪ್ರಾಂಶುಪಾಲ ಮಲ್ಲೇಶಪ್ಪ, ಕನಕಪುರದ ಚಿಂತಕ ನಿರಂಜನ್, ಲೆಕ್ಕಪರಿಶೋಧಕ ಶಿವಕುಮಾರ್, ಜಾಗತಿಕ ಮಹಾಸಭಾ ತಾಲ್ಲೂಕು ಸಂಚಾಲಕ ಸುಂದ್ರಪ್ಪ, ಮುಡಿಗುಂಡ ಪ್ರಸಾದ್, ಕುಣಗಳ್ಳಿ ಜಯಶಂಕರ, ಜೆ.ಎಸ್‍.ಬಿ ಪ್ರತಿಷ್ಠಾನದ ಅಧ್ಯಕ್ಷ ಶಶಿಕುಮಾರ್, ಶಿಕ್ಷಕ ದೊರೆಸ್ವಾಮಿ, ವೀರಪ್ಪ ಮುಂತಾದವರಿದ್ದರು.

 

ಕನ್ನಡ ಮಾಸಾಚರಣೆ ಯಶಸ್ವಿ:

ಜೆ.ಎಸ್‍.ಬಿ ಪ್ರತಿಷ್ಠಾನವು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನ.1ರಿಂದ ಹಮ್ಮಿಕೊಂಡಿದ್ದ ಕನ್ನಡ ಮಾಸಾಚರಣೆ ಯಶಸ್ವಿಯಾಗಿದೆ.

ತಾಲ್ಲೂಕಿನ ಪ್ರೌಢಶಾಲೆಗಳಲ್ಲಿ ಪ್ರತಿ ದಿನ ಮಾಸಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಗಿದೆ. ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಪ್ರಬಂಧ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಮಕ್ಕಳಲ್ಲಿ ಕನ್ನಡ ಭಾಷಾ ಪ್ರೇಮ ಮೂಡುವಂತೆ ಮಾಡಿರುವುದು ಈ ಕಾರ್ಯಕ್ರಮದ ವಿಶೇಷ.

ಪ್ರತಿಕ್ರಿಯಿಸಿ (+)