ಮಾಧ್ಯಮವಾಗಿ ಇಂಗ್ಲಿಷ್‌ ಕಲಿಕೆ ಬೇಡ; ಸಿಪಿಕೆ

ಶುಕ್ರವಾರ, ಜೂನ್ 21, 2019
22 °C
ಮೈಸೂರು ವಿಭಾಗದ 321 ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಮಾಧ್ಯಮ ಪ್ರಶಸ್ತಿ ವಿತರಣೆ

ಮಾಧ್ಯಮವಾಗಿ ಇಂಗ್ಲಿಷ್‌ ಕಲಿಕೆ ಬೇಡ; ಸಿಪಿಕೆ

Published:
Updated:
Prajavani

ಮೈಸೂರು: ‘ಭಾಷೆಯಾಗಿ ಇಂಗ್ಲಿಷ್‌ ಕಲಿಯಬೇಕು. ಆದರೆ ಮಾಧ್ಯಮವಾಗಿ ಮಾತ್ರ ಬೇಡವೇ ಬೇಡ’ ಎಂದು ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ ಪ್ರತಿಪಾದಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಭಾನುವಾರ ನಗರದಲ್ಲಿ ನಡೆದ ಮೈಸೂರು ವಿಭಾಗದ 321 ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಮಾಧ್ಯಮ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಭಾಷಾ ಕಲಿಕೆ–ಮಾಧ್ಯಮದ ಕಲಿಕೆ ಎರಡೂ ಬೇರೆ ಬೇರೆ ಎಂಬುದನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಬೇಕಿದೆ’ ಎಂದು ಹೇಳಿದರು.

‘ಇಂಗ್ಲಿಷ್‌ ಮಾಧ್ಯಮದ ಹುಚ್ಚು ಇಂದು ಸರ್ವ ವ್ಯಾಪಿಯಾಗಿದೆ. ಇದರ ಪರಿಣಾಮ ಕನ್ನಡ ಶಾಲೆಗಳನ್ನು ಮುಚ್ಚುವಂಥಹ ಪರಿಸ್ಥಿತಿ ನಿರ್ಮಾಣವಾಗಿರುವುದು ದುರ್ದೈವದ ಸಂಗತಿಯಾಗಿದೆ. ಸರ್ಕಾರಕ್ಕೂ ಸಹ ಸ್ಪಷ್ಟ ಶೈಕ್ಷಣಿಕ ನೀತಿ ಇಲ್ಲವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸರ್ಕಾರದ ನಿಲುವುಗಳು ಸಹ ಆಂಗ್ಲ ಹುಚ್ಚನ್ನು ಹೆಚ್ಚಿಸುತ್ತಿದೆ. ನ್ಯಾಯಾಲಯ ಸಹ ಭಾಷೆಯ ವಿಷಯದಲ್ಲಿ ವಿವೇಚನಾ ತೀರ್ಪು ನೀಡುತ್ತಿಲ್ಲ. ಇಂಥಹ ಸಂದಿಗ್ಧದಲ್ಲಿ ಸಿಲುಕಿರುವ ಮಾತೃ ಭಾಷೆ ಇವೆಲ್ಲವನ್ನೂ ಮೀರಿ ಬೆಳೆಯಬೇಕಿದೆ’ ಎಂಬ ಆಶಯ ವ್ಯಕ್ತಪಡಿಸಿದರು.

‘ಆಂಗ್ಲ ಮಾಧ್ಯಮದ ಶಿಕ್ಷಣ ಇಂದು ಉದ್ಯಮವಾಗಿದೆ. ಅಸಹಜ, ಕೃತಕವಾದುದು. ಇದು ಉತ್ತಮ ಬೆಳವಣಿಗೆಯಲ್ಲ. ಮಾತೃ ಭಾಷಾ ಶಿಕ್ಷಣ ಮಾತ್ರ ಸೃಜನಶೀಲತೆ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಲಿದೆ’ ಎಂದು ಅಭಿಪ್ರಾಯಪಟ್ಟರು.

‘ಇಂಗ್ಲಿಷ್‌ ಕಲಿಕೆ ಬೇಡ ಎಂಬುದು ಮೂರ್ಖತನ. ಪ್ರಸ್ತುತ ಎಲ್ಲ ಭಾಷೆಗಳ ಕಲಿಕೆ ಅತ್ಯಗತ್ಯವಾಗಿದೆ. ಅದರೆ ನಮ್ಮ ಭಾಷೆ ಮಾತ್ರ ತಾಯಿ ಸ್ಥಾನದಲ್ಲಿರಬೇಕು’ ಎಂದು ಹೇಳಿದರು.

‘ಕುವೆಂಪು ಇಂಗ್ಲಿಷ್ ದ್ವೇಷಿಯಾಗಿರಲಿಲ್ಲ. ಆರಂಭದಲ್ಲಿ ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಕೃಷಿ ನಡೆಸಿದ್ದವರು. ಮಹಾತ್ಮ ಗಾಂಧೀಜಿ ನಾನು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯದೆ, ನನ್ನ ಮಾತೃ ಭಾಷೆ ಗುಜರಾತಿಯಲ್ಲಿ ಶಿಕ್ಷಣ ಪಡೆದಿದ್ದರೆ, ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಬಹುದಿತ್ತು’ ಎಂದಿದ್ದನ್ನು ನೆನಪಿಸಿಕೊಂಡರು.

ಕನ್ನಡಿಗರಲ್ಲಿ ಇಚ್ಛಾ ಶಕ್ತಿಯಿಲ್ಲ: ‘ತ್ರಿಭಾಷಾ ಸೂತ್ರದಂತೆ ಇಂಗ್ಲಿಷ್ ಮೊದಲ ಭಾಷೆಯಾಗಿ ಕಲಿಸಲ್ಪಟ್ಟರೆ, ದ್ವಿತೀಯ ಭಾಷೆಯಾಗಿ ಹಿಂದಿ, ತೃತೀಯ ಭಾಷೆಯಾಗಿ ಆಯಾ ರಾಜ್ಯದ ರಾಜ್ಯ ಭಾಷೆ ಕಲಿಸಬೇಕು. ಇಂಥಹ ಸಂದರ್ಭದಲ್ಲಿ ತೃತೀಯ ಭಾಷೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗುತ್ತದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ಆತಂಕ ವ್ಯಕ್ತಪಡಿಸಿದರು.

‘ಕನ್ನಡಿಗರಿಗೆ ಇಚ್ಛಾಶಕ್ತಿಯಿಲ್ಲ. ಭಾಷೆಯ ಬದ್ಧತೆಯಿಲ್ಲ. ತ್ರಿಭಾಷಾ ಸೂತ್ರ ಜಾರಿಗೊಂಡರೆ ಬಹುತೇಕರು ಮೂರನೇ ಭಾಷೆಯಾಗಿ ಕನ್ನಡದ ಬದಲು ಸಂಸ್ಕೃತ, ಜರ್ಮನಿ, ಜಪಾನ್ ಭಾಷೆ ಕಲಿಯಲು ಇಚ್ಛಿಸುತ್ತಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಇದಕ್ಕೆ ಬೆಂಬಲ ನೀಡುತ್ತವೆ’ ಎಂದು ಅವರು ಹೇಳಿದರು.

‘ಶಿಕ್ಷಣದ ಖಾಸಗೀಕರಣ ದಂಧೆಯಾಗಿದೆ. ಭಾಷಾ ವ್ಯಾಪಾರಕ್ಕೆ ಮಕ್ಕಳ ಶಿಕ್ಷಣ ಬಲಿಯಾಗುತ್ತಿದೆ. ಇಂಗ್ಲಿಷ್‌ನ ಭ್ರಮಾತ್ಮಕ ಮೋಹಕ್ಕೆ ಕನ್ನಡ ಭಾಷೆ ದೊಡ್ಡ ಆತಂಕ ಎದುರಿಸುತ್ತಿದೆ. ಇದು ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡಕ್ಕೆ ದೊಡ್ಡ ಹಿನ್ನಡೆಯಾದಂತಾಗಿದೆ. ನೆಲದ ಭಾಷೆ ಅಲಕ್ಷ್ಯಕ್ಕೆ ಗುರಿಯಾದರೆ, ಭವಿಷ್ಯದಲ್ಲಿ ಕಳೆದು ಹೋಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಶಾಸಕ ಎಲ್‌.ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಆರ್‌.ಧರ್ಮಸೇನ, ಮಹಾನಗರ ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಸಿ.ಪರಿಮಳಾ ಶ್ಯಾಂ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಡಿಡಿಪಿಐ ಪಾಂಡುರಂಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚನ್ನಪ್ಪ, ಪ್ರಾಧ್ಯಾಪಕಿ ಡಾ.ಎಂ.ಪಿ.ರೇಖಾ ವಸಂತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಗಿರೀಶ್ ಪಟೇಲ್‌, ಮಾಜಿ ಸದಸ್ಯ ಪ್ರಭಾಕರ ಪಾಟೀಲ್, ಕಾರ್ಯದರ್ಶಿ ಡಾ.ಕೆ.ಮುರಳೀಧರ ಉಪಸ್ಥಿತರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !