ಮುಚ್ಚೇವು ಕನ್ನಡದ ಶಾಲೆ

ಮಂಗಳವಾರ, ಏಪ್ರಿಲ್ 23, 2019
31 °C

ಮುಚ್ಚೇವು ಕನ್ನಡದ ಶಾಲೆ

Published:
Updated:
Prajavani

ಮನ್ನಿಸಿರೆಲ್ಲರು ನಮ್ಮನು ಕನ್ನಡದ ಪೂರ್ವಸೂರಿಗಳೆ
ನುಡಿಯ ಬಿತ್ತಿಬೆಳೆಸಿದ ನಾಡ ಹಿರಿಯ ಜೀವಗಳೆ
ಕನ್ನಡಕೆ ವೈರಿಗಳು ಅನ್ಯರೆಂಬುವರಿಲ್ಲ
ಇದ್ದರದು ನಾವೆ ಪಾಪದ ಕನ್ನಡಿಗರೇ ಎಲ್ಲ

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಅಂದು ಹಾಡುತ ನೀವು ಎಲ್ಲ ನೋವನು ಮರೆತು ಒಂದಾದಿರಿ
ಒಡೆದು ಹೋಗಲಿ ನಾಡು ಜಾತಿಜೇಡಗಳ ಗೂಡು
ಎಂದು ಹಾರೈಸುತಿದೆ ಇಂದು ರಾಜಕಾರಣದ ಜಾಡು

ಕನ್ನಡವೆನೆ ಕುಣಿದಾಡುವುದೆನ್ನೆದೆ | ಕಿವಿ ನಿಮಿರುವುದು
ಅಂದಿರಿ ನೀವು ಹೆಮ್ಮೆಯಲಿ ದನಿ ಎತ್ತಿ ನಾಡು ನುಡಿ ಹಿರಿಮೆ
ಕನ್ನಡವೆನೆ ಕೀಳರಿಮೆಯಲ್ಲಿ ನರಳುವುದೆಮ್ಮೆದೆ
ಇದು ಇಂದಿನ ಹಿರಿಮೆ ಕನ್ನಡವ ಮರೆವುದೆ ನಮ್ಮಯ ಗರಿಮೆ

ಕನ್ನಡಕೆ ಕೈಎತ್ತು ನಿನ್ನ ಕೈ ಕಲ್ಪತರು ಕಾಮಧೇನು
ಅಂದಿರಿ ನೀವು ಬೆಳೆಸಿದಿರಿ ಕನ್ನಡದ ಕಬ್ಬ
ಕನ್ನಡಕೆ ಧ್ವಜವೆತ್ತಿದರಿಂದು ಜೈಲುವಾಸವು ನಿನಗೆ
ನವೆಂಬರಿನಲಿ ಮಾತ್ರ ಸಿರಿಗನ್ನಡಂ ಗೆಲ್ಗೆ

ಕನ್ನಡಕೆ ಕೊರಳೆತ್ತು ನಿನ್ನ ಕೊರಳು ಪಾಂಚಜನ್ಯ
ಅಂದು ಹೇಳಿದಿರಿ ನೀವು ಬಾರಿಸಿದಿರಿ ಕನ್ನಡದ ಡಿಂಡಿಮವ
ಇಂದು ಕನ್ನಡಕೆ ಕೊರಳೆತ್ತಿದರೆ ಪ್ರತಿಪದಕೆ ದಂಡ ಅರವತ್ತು
ಶಾಲೆ ಶಿಕ್ಷಣದಲ್ಲಿ ಇದುವೆ ಕನ್ನಡಕೆ ಆಪತ್ತು ಕುತ್ತು

ಕನ್ನಡದ ಪುಲ್ಲೆನಗೆ ಪಾವನದ ಶ್ರೀ ತುಳಸಿ
ಅಂದಿರಿ ನೀವು ಅಭಿಮಾನದಲಿ ಹಿರಿಹಿಗ್ಗಿ
ಇಂದು ಕನ್ನಡವ ನುಡಿದರೆ ಕೆಲಸ ಖಾಲಿ ಇಲ್ಲ
ಹಿಂದಿಯೋ ಇಂಗ್ಲಿಷೋ ಕರುನಾಡ ಒಳಬನ್ನಿ ಸುಗ್ಗಿ

ಹಚ್ಚೇವು ಕನ್ನಡದ ದೀಪ ಸಿರಿನುಡಿಯ ದೀಪ
ಅಂದು ಹೇಳಿದಿರಿ ಹಚ್ಚಿದಿರಿ ನಾಡು ನುಡಿ ದೀಪ
ಇಂದು ಮುಚ್ಚೇವು ಕನ್ನಡದ ಶಾಲೆ ಹಚ್ಚೇವು ಇಂಗ್ಲಿಷ್ ಮೇಲೆ
ಕನ್ನಡವ ಕೊಂದು ಇಂಗ್ಲಿಷ್ ತಂದು ಊದೇವು ಕಹಳೆ

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !